ಸೋಮವಾರ, ಮಾರ್ಚ್ 8, 2021
30 °C

ಅಗತ್ಯ ಬಿದ್ದರೆ ಟ್ಯಾಂಕರ್‌ ನೀರು ಪೂರೈಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಗತ್ಯ ಬಿದ್ದರೆ ಟ್ಯಾಂಕರ್‌ ನೀರು ಪೂರೈಸಿ’

ರಾಯಚೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ತುರ್ತಾಗಿ ನೀರು ಪೂರೈಕೆ ವ್ಯವಸ್ಥೆ ಮಾಡಬೇಕು. ಸದ್ಯಕ್ಕೆ ಯಾವುದೇ ಊರಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂಥ ಸ್ಥಿತಿ ಇಲ್ಲ. ಆದರೆ, ಕೆಲವೇ ದಿನಗಳಲ್ಲಿ ಇಂಥ ಪರಿಸ್ಥಿತಿಯೂ ಎದುರಾಗಬಹುದು. ಮುನ್ನೆಚ್ಚರಿಕೆವಹಿಸಬೇಕು. ಟ್ಯಾಂಕರ್ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಇ. ವೆಂಕಟಯ್ಯ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಬರಪರಿಹಾರ ಕಾರ್ಯ ಮತ್ತು ಕುಡಿಯುವ ನೀರು ಸಮಸ್ಯೆ ಕುರಿತಂತೆ ಕೈಗೊಂಡ ಕಾಮಗಾರಿ ಬಗ್ಗೆ ಈ ದಿನ ಕಂದಾಯ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಜಿಲ್ಲೆ 884 ಗ್ರಾಮ ಹಾಗೂ 600 ತಾಂಡಾ ಸೇರಿ 1,460 ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ, ನೀರು ಪೂರೈಕೆ ಕುರಿತಂತೆ ವಿವರ ಪಡೆಯಲಾಗಿದೆ ಎಂದರು.ಸದ್ಯಕ್ಕೆ ಜಿಲ್ಲೆಯಲ್ಲಿ ಟ್ಯಾಂಕರ್‌ನಿಂದ ನೀರು ಪೂರೈಸುವಷ್ಟರ ಮಟ್ಟಿಗೆ ನೀರಿನ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ನೀರಿನ ಸಮಸ್ಯೆ ಉದ್ಭವಿಸುವುದು ಉಪೇಕ್ಷಿಸುವಂತಿಲ್ಲ. ಕೆಲವೇ ದಿನಗಳಲ್ಲಿ ಈ ಸ್ಥಿತಿ ಬರಬಹುದು. ಮುನ್ನೆಚ್ಚರಿಕೆ ವಹಿಸಬೇಕು. ಹಣಕಾಸಿನ ಯಾವುದೇ ರೀತಿ ಕೊರತೆ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಯಾವ್ಯಾವ ಗ್ರಾಮ ನೀರಿನ ಸಮಸ್ಯೆ ಎದುರಿಸುತ್ತಿದೆ ಎಂಬುದನ್ನು ಗುರುತಿಸಿದರಷ್ಟೇ ಸಾಲದು. ವಾಸ್ತವ ಸ್ಥಿತಿ ಗಮನಿಸಬೇಕು. ಅಗತ್ಯ ಬಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ 44 ಕಡೆ ಅರ್ಸೆನಿಕ್ ನೀರು ಶುದ್ಧೀಕರಣ ಘಟಕ ಅಳವಡಿಕೆ ಯೋಜನೆ ಅಡಿ ಈಗ 40 ಕಡೆ ಅಳವಡಿಸಲಾಗಿದೆ. ₨2ಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಈ ಘಟಕಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆಯೇ? ಎಷ್ಟರ ಮಟ್ಟಿಗೆ ಜನರ ನೀರಿನ ಬವಣಗೆಗೆ ಅನುಕೂಲವಾಗಿದೆ ಎಂಬುದನ್ನು ಗಮನಿಸಬೇಕು. ತಾಂತ್ರಿಕ ಅಡಚಣೆ ನೀಗಿಸಬೇಕು ಎಂದು ಹೇಳಲಾಗಿದೆ ಎಂದು ತಿಳಿಸಿದರು.ಉದ್ಯೋಗ ಖಾತರಿ ಯೋಜನೆ ಅಡಿ ಜಿಲ್ಲೆಗೆ ₨ 5 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರವು ನೀಡಿದೆ. ಈಗ ಯೋಜನೆ ಅಡಿ ಕೆಲಸ ಒದಗಿಸಲು ಅವಕಾಶವಿದೆ. ಹಳ್ಳಿಗಳೇ ಇರಲಿ, ತಾಂಡಾಗಳೇ ಇರಲಿ ಯಾರಿಗೆ ಕೆಲಸದ ಅಗತ್ಯ ಇದೆಯೋ ಅಂಥವರಿಗೆ ಕೆಲಸ ನೀಡಬೇಕು. ಏಪ್ರಿಲ್ 1ರಿಂದಲೇ ಉದ್ಯೋಗ ಖಾತರಿ ಯೋಜನೆ ಅಡಿ ಕೆಲಸ ನೀಡಲು ಆದೇಶವಿದೆ. ದಿನಕ್ಕೆ ₨ 194 ಕೂಲಿ ನೀಡಬೇಕು. ಒಂದು ಕುಟುಂಬಕ್ಕೆ 150 ದಿನ ಕೆಲಸ ನೀಡಲು ಅವಕಾಶವಿದೆ.

ಇದನ್ನು ಅನುಸರಿಸಿ ಕೆಲಸ ನೀಡಬೇಕು ಎಂದು ತಿಳಿಸಲಾಗಿದೆ. ಅಲ್ಲದೇ ತಾಂತ್ರಿಕ ಮತ್ತು ಆಡಳಿತಾತ್ಮಕ ಅಡಚಣೆಯಿಂದ ₨ 70 ಲಕ್ಷ ಕೂಲಿ ಬಾಕಿ ಇದೆ. ಇದನ್ನೂ ಬೇಗ ಇತ್ಯರ್ಥಪಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.ಮೇವು ಸಮಸ್ಯೆ ಇಲ್ಲ: ಜಿಲ್ಲೆಯಲ್ಲಿ ಮೇವಿನ ಸಮಸ್ಯೆ ಇಲ್ಲ. ಜಿಲ್ಲೆಯಲ್ಲಿ ಭತ್ತ ಬೆಳೆಯುವುದರಿಂದ ಮೇವಿನ ಸಮಸ್ಯೆ ಕಡಿಮೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮೇವು ಬೀಜ ವಿತರಣೆ, ಕಿಟ್‌ ಪೂರೈಕೆಗೆ ಪಶು ಪಾಲನೆ ಇಲಾಖೆಗೆ ಸೂಚನೆ ನೀಡಲಾಗಿದೆ. ಗೋಶಾಲೆ ತೆರೆದಿಲ್ಲ ಎಂದು ಹೇಳಿದರು.₨ 3 ಕೋಟಿ 50 ಲಕ್ಷ ಭರವಸೆ:  ಜಿಲ್ಲೆಯಲ್ಲಿ ಈಚೆಗೆ ಆಲಿಕಲ್ಲು ಮಳೆ, ಗಾಳಿಗೆ ಹಾಳಾದ ತೋಟಗಾರಿಕೆ, ಕೃಷಿ ಬೆಳೆಗೆ ಪರಿಹಾರವಾಗಿ ₨ 3 ಕೋಟಿ 50 ಲಕ್ಷ ಬಿಡುಗಡೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಈ ಪರಿಹಾರದ ಮೊತ್ತವು ಬಿಡುಗಡೆಯಾದ ಬಳಿಕ ಬೆಳೆ ನಷ್ಟ ಅನುಭವಿಸಿದ ರೈತರಿಗೆ ನೀಡಲಾಗುವುದು ಎಂದು ಇ. ವೆಂಕಟಯ್ಯ ಹೇಳಿದರು.ದೇವದುರ್ಗ ತಾಲ್ಲೂಕಿನಲ್ಲಿ ಕೃಷ್ಣಾ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಣೆ ತಡೆಯಬೇಕು, ನದಿಯಲ್ಲಿ ಅಕ್ರಮವಾಗಿ ಸೇತುವೆ ನಿರ್ಮಾಣ ಮಾಡಿದ ಬಗ್ಗೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಬೇಕು. ಈ ಕುರಿತಂತೆ ಯಾದಗಿರಿ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ಈ ಅಕ್ರಮ ಮರಳು ಸಾಗಣೆ ತಡೆಯಲು ಪ್ರಯತ್ನ ಮಾಡಲಾಗುವುದು. ಕೇವಲ ಲೋಕೋಪಯೋಗಿ ಇಲಾಖೆ ಅಧಿಕಾರಿ ಸಿಬ್ಬಂದಿ ಅಷ್ಟೇ ಅಲ್ಲ. ಅಗತ್ಯ ಬಿದ್ದರೆ ಇತರೆ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕೈ ಜೋಡಿಸಿ ಈ ಅಕ್ರಮ ತಡೆಯಲು ಸೂಚನೆ ನೀಡಲಾಗುವುದು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಭತ್ತದ ಬೆಲೆ ಕುಸಿತ ಖಂಡಿರುವುದರಿಂದ  ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಭತ್ತ ಖರೀದಿ ಕೇಂದ್ರ ಚುರುಕುಗೊಳಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ವಿಷಯ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಾ ಜ್ಯೋತ್ಸ್ನಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಹಿಟ್ನಾಳ, ಜಿ.ಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.