ಗುರುವಾರ , ಫೆಬ್ರವರಿ 25, 2021
17 °C

ಅಚ್ಚರಿ ಮೂಡಿಸಿದ ಅಧಿಕಾರಿಗಳ ಹಾಜರಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಚ್ಚರಿ ಮೂಡಿಸಿದ ಅಧಿಕಾರಿಗಳ ಹಾಜರಿ...

ಭದ್ರಾವತಿ: ನಗರಸಭಾ ಸದಸ್ಯರ ಸಭೆಗೆ ಇದೇ ಪ್ರಥಮ ಬಾರಿಗೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಾಗಿ ವಿವರ ನೀಡಿದ ಘಟನೆ ಮಂಗಳವಾರದ ಸಾಮಾನ್ಯ ಸಭೆಯಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿತು.ಹಲವು ವರ್ಷಗಳಿಂದ ವಿವಿಧ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಭೆಯಲ್ಲಿ ಹಾಜರಿರುವಂತೆ ಸೂಚನೆ ಕಳುಹಿಸಿ ಎಂದು ಸದಸ್ಯರು ಮಾಡುತ್ತಿದ್ದ ಒತ್ತಾಯಕ್ಕೆ ಸ್ಪಂದಿಸಿದ ಆಯುಕ್ತರು ಈಬಾರಿ ಅವರನ್ನು ಹಾಜರಾಗುವಂತೆ  ಮಾಡುವಲ್ಲಿ ಯಶಸ್ವಿಯಾದರು.ಸಭೆಯ ವಿಚಾರ ತಿಳಿದು ಮೆಸ್ಕಾಂ, ಲೋಕೋಪಯೋಗಿ, ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗಿ ತಮ್ಮ ವ್ಯಾಪ್ತಿಯ ಕೆಲಸ ಕಾರ್ಯದ ವಿವರ ನೀಡಿದ್ದು ಸಭೆಯ ವಿಶೇಷ.ಮೆಸ್ಕಾಂ ಕಂಬಗಳು ಬೀಳುತ್ತಿವೆ ಅದರ ದುರಸ್ತಿ ನಡೆಯದೆ ನಾಗರಿಕರು ಪರದಾಟ ನಡೆಸಿದ್ದಾರೆ. ಕವಲಗುಂದಿ ಹಾಸ್ಟೆಲ್ ಮಕ್ಕಳು ಮಳೆಗಾಲದಲ್ಲಿ ತೊಂದರೆ ಎದುರಿಸುತ್ತಾರೆ. ನಗರ ವ್ಯಾಪ್ತಿಯ ರಸ್ತೆಗಳು ಹಾಳಾಗಿವೆ ದುರಸ್ತಿ ಯಾವಾಗ ಎಂಬ ಪ್ರಶ್ನೆಗಳು ಸದಸ್ಯರಾದ ಚನ್ನಪ್ಪ, ರವಿಕುಮಾರ್, ಮೋಹನ್‌ರಾವ್, ಕದಿರೇಶ್, ಕರುಣಾಮೂರ್ತಿ ಅವರಿಂದ ಎದುರಾಯಿತು.ಇದಕ್ಕೆ ಉತ್ತರ ನೀಡಿದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಸಾಕಷ್ಟು ಕೆಲಸ ಮಾಡಿದ್ದೇವೆ. ಮುಂದಿನ ಸಭೆಗೆ ಬರುವಷ್ಟರಲ್ಲಿ ಎಲ್ಲದಕ್ಕೂ ಒಂದಿಷ್ಟು ಪರಿಹಾರ ದೊರಕಿಸುತ್ತೇವೆ ಎಂಬ ಭರವಸೆ ನೀಡಿದರು.ಮೂಲ ಸೌಕರ್ಯದ ದನಿ: ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಣದೆ ಕಸದ ರಾಶಿ ಬಿದ್ದಿದೆ. ಇದನ್ನು ಸರಿ ಮಾಡುವಲ್ಲಿ ಆರೋಗ್ಯಾಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದಕ್ಕೆ ಅಧ್ಯಕ್ಷರಿಂದ ಸ್ಪಷ್ಟ ಉತ್ತರ ಬೇಕು ಎಂದು ಸದಸ್ಯ ರವಿಕುಮಾರ್ ಆಗ್ರಹಿಸಿದರು.ನ್ಯೂಟೌನ್ ಮತ್ತು ಹಳೇನಗರ ಭಾಗ ಎಂದು ವಿಂಗಡಿಸಿ ತಾರತಮ್ಯ ಧೋರಣೆ ಅನುಸರಿಸಲಾಗಿದೆ. ನ್ಯೂಟೌನ್ ಭಾಗದ ಕೆಲಸಗಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪವಿದೆ. ಇದಕ್ಕೆ ಸ್ಪಷ್ಟ ಉತ್ತರ ಬೇಕು ಎಂದು ಜೆಡಿಎಸ್ ಸದಸ್ಯರು ಆಗ್ರಹಿಸಿ ಅಧ್ಯಕ್ಷರ ಪೀಠದ ಮುಂದೆ ನಿಂತರು.ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿದ ಆಯುಕ್ತರು ಇನ್ನು 50ಮಂದಿ ಕೆಲಸಗಾರರನ್ನು ಸ್ವಚ್ಛತೆ ಕಾರ್ಯಕ್ಕೆ ತೆಗೆದುಕೊಳ್ಳುವ ಅವಕಾಶವಿದೆ. ಕೂಡಲೇ ಟೆಂಡರ್ ಕರೆದು ಇದಕ್ಕೆ ಚಾಲನೆ ನೀಡಲಾಗುವುದು ಎಂದು ಉತ್ತರಿಸಿದರು.ರೈಲ್ವೆ ಕಾಮಗಾರಿ ವಿಷಯ: ತರೀಕೆರೆ ರಸ್ತೆಯಲ್ಲಿ ಹಲವು ವರ್ಷದಿಂದ ನಡೆದಿರುವ ರೈಲ್ವೆ ಇಲಾಖೆಯ ಮೇಲು ಸೇತುವೆ ಕಾಮಗಾರಿ ಇನ್ನು ಮುಗಿದಿಲ್ಲ. ಇದರಿಂದ ನಾಗರಿಕರು, ವ್ಯಾಪಾರಸ್ಥರು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಇದನ್ನು ನಿವಾರಿಸಿ ಎಂದು ಸದಸ್ಯ ಆರ್. ಕರುಣಾಮೂರ್ತಿ ಒತ್ತಾಯಿಸಿದರು.ಇದಕ್ಕೆ ಮಾತನಾಡಿದ ಅಧ್ಯಕ್ಷ ಬಿ.ಕೆ. ಮೋಹನ್, ಕೂಡಲೇ ಸ್ಥಳ ವೀಕ್ಷಣೆ ಮಾಡಿ ಸಂಬಂಧಿಸಿದ ಇಲಾಖೆ ಜತೆ ಪತ್ರವ್ಯವಹಾರ ನಡೆಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.ಸ್ವಿಚ್ ಆಫ್ ಮಾಡೀರಿ ಜೋಕೆ: ಆರೋಗ್ಯ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇವರನ್ನು ಸಂಪರ್ಕಿಸಲು ಪ್ರಯತ್ನ ಪಟ್ಟರೆ `ಮೊಬೈಲ್ ಸ್ವಿಚ್ ಆಫ್~ ಬರುತ್ತದೆ. ಹೀಗಾಗಿ, ನೀರು, ಸ್ವಚ್ಛತೆ ವಿಚಾರಕ್ಕೆ ಪ್ರತಿನಿಧಿಗಳು ಜನರಿಂದ ಶಾಪ ಹಾಕಿಸಿಕೊಳ್ಳುವ ಸ್ಥಿತಿ ಇದೆ ಎಂದು ಸದಸ್ಯರು ದೂರಿದರು.ಇದರಿಂದ ಕೆಂಡಾಮಂಡಲವಾದ ಅಧ್ಯಕ್ಷರು ನಾಲ್ವರು ಆರೋಗ್ಯ ಅಧಿಕಾರಿಗಳನ್ನು ವೇದಿಕೆ ಮೇಲೆ ಕರೆದು `ಸ್ವಿಚ್ ಆಫ್ ಮಾಡಬೇಡಿ ಎಂದರೂ  ಮಾಡುತ್ತೀರಾ, ಸದಸ್ಯರು ನನಗೆ ಕೇಳುತ್ತಾರೆ ನೀವೇ ಉತ್ತರಿಸಿ~ ಎಂದು ಕಿಡಿಕಾರಿದರು.ಸ್ವಿಚ್ ಆಫ್ ಮಾಡಿಕೊಂಡರೆ ಕ್ರಮ ಗ್ಯಾರಂಟಿ ಎಂದು ಅಧ್ಯಕ್ಷರು ಹೇಳುತ್ತಿದ್ದಂತೆ ಸದಸ್ಯರು `ಕೆಲಸ ಮಾಡಿಲ್ಲವಲ್ಲ ಕ್ರಮ ಜರುಗಿಸಿ~ ಎಂದು ಒತ್ತಾಯಿಸಿದರು. ಈ ಹಂತದಲ್ಲಿ ಅಧಿಕಾರಿಗಳಿಗೆ ಒಂದಿಷ್ಟು ತಿಳಿ ಹೇಳಿದ ಅಧ್ಯಕ್ಷರು ಮುಂದಿನ ಸಭೆ ವೇಳೆಗೆ ಎಲ್ಲಾ ಕೆಲಸ ಮಾಡಿ ಮುಗಿಸಬೇಕು ಎಂದು ಎಚ್ಚರಿಕೆ ನೀಡಿದರು.ಈ ಎಲ್ಲಾ ಚರ್ಚೆಗಳ ನಂತರ ಸಭೆಯಲ್ಲಿ ಮಂಡಿತವಾದ 34 ವಿವಿಧ ವಿಚಾರಗಳಿಗೆ ಸದಸ್ಯರ ಒಪ್ಪಿಗೆ ಪಡೆಯಲಾಯಿತು. ಅಧ್ಯಕ್ಷ ಬಿ.ಕೆ. ಮೋಹನ್, ಉಪಾಧ್ಯಕ್ಷೆ ಶಾರದಾ ಭೀಮಾಬೋವಿ, ಆಯುಕ್ತ ರೇಣುಕಾ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.