ಮಂಗಳವಾರ, ಮಾರ್ಚ್ 2, 2021
30 °C

ಅಡ್ಡಾದಿಡ್ಡಿ ಪಾರ್ಕಿಂಗ್: ಸಂಚಾರಕ್ಕೆ ತೊಡಕು

ಪ್ರಜಾವಾಣಿ ವಾರ್ತೆ/ ಉದಯ ಯು. Updated:

ಅಕ್ಷರ ಗಾತ್ರ : | |

ಅಡ್ಡಾದಿಡ್ಡಿ ಪಾರ್ಕಿಂಗ್: ಸಂಚಾರಕ್ಕೆ ತೊಡಕು

ಹಾಸನ: ಹಲವು ದಿನಗಳ ಬಳಿಕ ಮಂಗಳವಾರ ಎನ್.ಆರ್. ವೃತ್ತದಲ್ಲಿ ಬಸ್ ನಿಲುಗಡೆ ಮಾಡುತ್ತಿದ್ದ ಬಸ್ ಚಾಲಕರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ಪರ- ವಿರೋಧ ಎರಡೂ ಪ್ರತಿಕ್ರಿಯೆಗಳು ಬಂದಿವೆ. ಪೊಲೀಸರು ದಾಳಿ ಮಾಡಿದ ಮಾತ್ರಕ್ಕೆ ಎನ್. ಆರ್. ವೃತ್ತ ಸುರಕ್ಷಿತವಾಗಿದೆ ಎನ್ನುವಂತೆಯೂ ಇಲ್ಲ.ಕೆಲವು ತಿಂಗಳ ಹಿಂದೆ ಅಪಘಾತದಲ್ಲಿ ಇಬ್ಬರು ಬಲಿಯಾದಾಗ ಈ ವೃತ್ತದಲ್ಲಿ ಬಸ್ ನಿಲ್ಲದಂತೆ ಕ್ರಮ ಕೈಗೊಂಡಿದ್ದರು. ಹೊಸ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ  ನಿಲ್ಲುತ್ತಿದ್ದ ಆಟೋಗಳು, ಹಾಗೂ ಇತರ ವಾಹನಗಳನ್ನು ತೆರವು ಮಾಡಿದ್ದರು. ಆದರೆ ಈಗ ಮತ್ತೆ ಹಿಂದಿನ ಸ್ಥಿತಿಯೇ ಇದೆ. ಇದು ಒಂದು ವೃತ್ತದ ಕತೆಯಲ್ಲ.  ಹಾಸನದ ಯಾವ ಭಾಗದಲ್ಲಿ ಹೋದರೂ ಜನರು ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವುದು, ರಸ್ತೆ ಮಧ್ಯದಲ್ಲೇ ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಉಂಟು ಮಾಡುವುದು ನಡೆದೇ ಇದೆ.ಸಹ್ಯಾದ್ರಿ ಸರ್ಕಲ್, ಸ್ಲೇಟರ್ಸ್‌ ಹಾಲ್ ಸರ್ಕಲ್, ಅರಳಿಕಟ್ಟೆ ಸರ್ಕಲ್, ಬಸಟ್ಟಿಕೊಪ್ಪಲ್ ಸರ್ಕಲ್ ಮುಂತಾದ ಸರ್ಕಲ್‌ಗಳಲ್ಲಿ ಯಾವುದೇ ಕ್ಷಣದಲ್ಲಿ ದೊಡ್ಡ ಅಪಘಾತ ಸಂಭವಿಸಬಹುದಾದ ಸ್ಥಿತಿ ಇದೆ. ಸಣ್ಣಪುಟ್ಟ ಅಪಘಾತಗಳು, ಮಾತಿನ ಚಕಮಕಿ ಇಲ್ಲಿ ದಿನನಿತ್ಯ ನಡೆಯುತ್ತಿವೆ.ಇವಿಷ್ಟೇ ಅಲ್ಲ ಸರ್ಕಾರಿ ಆಸ್ಪತ್ರೆಯಿಂದ ಶಂಕರಮಠ ರಸ್ತೆಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಜನರು ಅನುಭವಿಸುತ್ತಿರುವ ಗೋಳಿನ ಬಗ್ಗೆ ಎಲ್ಲ ಪತ್ರಿಕೆಗಳು ವರದಿ ಮಾಡಿವೆ.  ಏಕಮುಖವಾಗಿದ್ದ ಶಂಕರಮಠ ರಸ್ತೆಯಲ್ಲಿ ಈಚೆಗೆ ದ್ವಿಮುಖ ಸಂಚಾರಕ್ಕೆ ಅನುಮತಿ ನೀಡಲಾಗಿದೆ.ದಿನಕ್ಕೊಂದು ಬದಿಯಲ್ಲಿ ಪಾರ್ಕಿಂಗ್ ಮಾಡಬೇಕು ಎಂಬ ಫಲಕ ಹಾಕಿದ್ದರೂ ಒಬ್ಬರೂ ಅದನ್ನು ಪಾಲಿಸುತ್ತಿಲ್ಲ. ಮುಂಜಾನೆ ಅಥವಾ ಸಂಜೆ ವೇಳೆಯಲ್ಲಿ ಈ ರಸ್ತೆಯಲ್ಲಿ ಓಡಾಡಿದವರಿಗೆ ಕಷ್ಟ ಏನೆಂಬದು ಅರ್ಥವಾಗುತ್ತದೆ.ಇತ್ತ ಎಂ.ಜಿ ರಸ್ತೆಯ ಸ್ಥಿತಿಯೂ ಹಾಗೇ ಇದೆ. ಆದಿಚುಂಚನಗಿರಿ ಮಠದ ಮುಂದಿನಿಂದ ಡೆಂಟಲ್ ಕಾಲೇಜಿನವರೆಗೆ ಓಡಾಡುವುದು ಅತ್ಯಂತ ಅಪಾಯಕಾರಿ ಎನಿಸಿದೆ. ಚತುಷ್ಪಥ ಮಾದರಿಯ ರಸ್ತೆ ಇದ್ದರೂ ಏಕಮುಖ ಸಂಚಾರವಿರುವಲ್ಲಿ ಎದುರಿನಿಂದ ವಾಹನಗಳು ಬರುತ್ತಿವೆ.

 

ವಿದ್ಯಾನಗರದಿಂದ ಮಹಿಳಾ ಕಾಲೇಜು ಮುಂದಿನ ರಸ್ತೆಗೆ ಬರುವವರು ಅನಿವಾರ್ಯವಾಗಿ ಈ ರೀತಿ ಬರಬೇಕಾಗುತ್ತಿದೆ. ರಸ್ತೆ ವಿಭಜಕವನ್ನು ಅವೈಜ್ಞಾನಿಕವಾಗಿ ತೆರೆದಿರುವುದರಿಂದ ಹೀಗಾಗುತ್ತಿದೆ. ಜಿಲ್ಲಾ ಕ್ರೀಡಾಂಗಣದಿಂದ ಎಂ.ಜಿ ರಸ್ತೆಗೆ ಈಚೆಗೆ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ. ಅಲ್ಲಿಂದ ಬರುವವರೂ ವಿರುದ್ಧ ದಿಕ್ಕಿನಲ್ಲಿ ಬರುತ್ತಾರೆ.

ವಿದ್ಯಾನಗರದಿಂದ ಮಹಿಳಾ ಪ್ರಥಮದರ್ಜೆ ಕಾಲೇಜು ಮುಂದಿನ ರಸ್ತೆಗೆ ಬರುವಲ್ಲಿ ವಾರದಲ್ಲಿ ಒಂದೆರಡು ಸಣ್ಣಪುಟ್ಟ ಅಪಘಾತಗಳಾದರೂ ಸಂಭವಿಸುತ್ತಿವೆ. ಹಲವು ಮಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಹೀಗೆ ಇಡೀ ಎಂ.ಜಿ. ರಸ್ತೆ ಅಪಾಯಕಾರಿ ಎನಿಸುವಂತಾಗಿದೆ. ಕನಿಷ್ಠ ಒಂದೆರಡು ಕಡೆಯಾದರೂ ರಸ್ತೆ ವಿಭಜಕಗಳನ್ನು ತೆರೆದು ಸರಿಯಾದ ದಿಕ್ಕಿನಲ್ಲಿ ಸಂಚರಿಸಲು ವ್ಯವಸ್ಥೆ ಕಲ್ಪಿಸದಿದ್ದರೆ ಶೀಘ್ರದಲ್ಲೇ ಈ ರಸ್ತೆಯಲ್ಲೂ ಸಾವು ನೋವು ನೋಡಬೇಕಾಗಿ ಬರಬಹುದು.ಸಂಚಾರಿ ಪೊಲೀಸರು ಎನ್.ಆರ್. ವೃತ್ತದಂತೆ ಈ ರಸ್ತೆಗಳತ್ತಲೂ ಗಮನಹರಿಸಬೇಕಾಗಿದೆ. ಜತೆಗೆ ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿ ಸಂಚಾರಕ್ಕೆ ಅಡ್ಡಿ ಉಂಟುಮಾಡುವವರ ವಿರುದ್ಧವೂ ಕ್ರಮ              ಕೈಗೊಳ್ಳಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.