ಶುಕ್ರವಾರ, ಏಪ್ರಿಲ್ 16, 2021
31 °C

ಅಣ್ಣಾ ಪಟ್ಟು: ಮಣಿದ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಸ್): ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಜನಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಅಮರಣಾಂತ ಉಪವಾಸದ ಮೂಲಕ ಹೇರಿದ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿದಿದೆ.

ಜನ ಲೋಕಪಾಲ ಮಸೂದೆ ರಚನೆಗೆ ಸಂಬಂಧಿಸಿದಂತೆ ಮುಂದಿಟ್ಟಿದ್ದ ಬೇಡಿಕೆಗಳಲ್ಲಿ ಹೆಚ್ಚಿನವುಗಳನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ನಾಲ್ಕು ದಿನಗಳಿಂದ ತಾವು ನಡೆಸುತ್ತಿದ್ದ ನಿರಶನವನ್ನು ಶನಿವಾರ ಬೆಳಿಗ್ಗೆ ಅಂತ್ಯಗೊಳಿಸುವುದಾಗಿ ಅಣ್ಣಾ ಶುಕ್ರವಾರ ರಾತ್ರಿ ಜಂತರ್ ಮಂಥರ್‌ನಲ್ಲಿ ತಮ್ಮೊಂದಿಗೆ ಸತ್ಯಾಗ್ರಹ ನಡೆಸುತ್ತಿದ್ದ ಕಾರ್ಯಕರ್ತರಿಗೆ ತಿಳಿಸಿದರು.

‘ಭಾರತೀಯರ ಜಯ’: ‘ಭ್ರಷ್ಟಾಚಾರ ನಿರ್ಮೂಲನೆಯ ನಿಟ್ಟಿನಲ್ಲಿ ಜನಲೋಕಪಾಲ ಮಸೂದೆ ರಚನೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿರುವುದು ಭಾರತೀಯರೆಲ್ಲರಿಗೂ ಜಯ ಸಿಕ್ಕಂತಾಗಿದೆ’ ಎಂದು 83 ಗಂಟೆಗಳಿಂದ ನಿರಶನ ನಡೆಸುತ್ತಿದ್ದ ಅಣ್ಣಾ ಅವರು ಸುದ್ದಿಗಾರರಿಗೆ ತಿಳಿಸಿದರು. ಶನಿವಾರ ಬೆಳಿಗ್ಗೆ ಹತ್ತೂವರೆ ಗಂಟೆಗೆ ಉಪವಾಸ ಅಂತ್ಯಗೊಳಿಸುವುದಾಗಿ ಹೇಳಿದರು.

‘ಇದು ಸಂತೋಷದ ವಿಷಯ. ಹಾಗೂ ಪ್ರಜಾಪ್ರಭುತ್ವಕ್ಕೆ ಸಂದ ಜಯವಾಗಿದೆ’ ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪರಿಣಾಮಕಾರಿ ಜನಲೋಕಪಾಲ ಮಸೂದೆ ಕರಡು ಸಿದ್ಧಪಡಿಸುವ ನಿಟ್ಟಿನಲ್ಲಿ ಹತ್ತು ಮಂದಿಯ ಜಂಟಿ ಸಮಿತಿ ರಚಿಸಲು ಅಧಿಸೂಚನೆ ಹೊರಡಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ ನಂತರ ಎರಡೂ ಕಡೆಯವರು ತಡರಾತ್ರಿ ಸಹಮತಕ್ಕೆ ಬಂದರು.

ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ಅಣ್ಣಾ ಹಜಾರೆ ಅವರು ಸಮ್ಮತಿಸಿರುವುದನ್ನು ಕೇಂದ್ರ ಸಂಧಾನಕಾರರ ತಂಡದ ಮುಖಂಡತ್ವ ವಹಿಸಿದ್ದ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಸ್ವಾಗತಿಸಿದ್ದಾರೆ. ಸರ್ಕಾರ ಹಾಗೂ ನಾಗರಿಕ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಸಮಿತಿ ರಚನೆಗೆ ಸರ್ಕಾರ ಅಧಿಸೂಚನೆ ಹೊರಡಿಸುವುದು ಬಾಕಿ ಇದೆ ಎಂದೂ ಅವರು ಹೇಳಿದರು.

ಆದರೆ ಹಜಾರೆ ಅವರ ಪರವಾಗಿ ಸಂಧಾನಕ್ಕೆ ತೆರಳಿದ್ದ ಕಿರಣ್ ಬೇಡಿ ಮತ್ತು ಸ್ವಾಮಿ ಅಗ್ನಿವೇಶ್ ಅವರು ಮಾತನಾಡಿ, ಜನಲೋಕಪಾಲ ಮಸೂದೆ ಕರಡು ಸಿದ್ಧಪಡಿಸಲು ಜಂಟಿ ಸಮಿತಿಯನ್ನು ರಚಿಸಲು ಸರ್ಕಾರ ಆದೇಶ ಹೊರಡಿಸುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಯುವುದು ಎಂದು ಸ್ಪಷ್ಟಪಡಿಸಿದರು.

ಪ್ರಣವ್ ಅಧ್ಯಕ್ಷ: ಎರಡೂ ಕಡೆಯ ಸಂಧಾನಕಾರರು ಹಲವು ಸುತ್ತಿನ ಮಾತುಕತೆಯ ನಂತರ ಒಮ್ಮತಕ್ಕೆ ಬಂದರು. ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಜಂಟಿ ಸಮಿತಿಯ ಅಧ್ಯಕ್ಷರಾಗಿರುವರು. ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ, ದೂರ ಸಂಪರ್ಕ ಸಚಿವ ಕಪಿಲ್ ಸಿಬಲ್, ಗೃಹ ಸಚಿವ ಪಿ.ಚಿದಂಬರಂ ಮತ್ತು ಜಲ ಸಂಪನ್ಮೂಲ ಸಚಿವ ಸಲ್ಮಾನ್ ಖುರ್ಷಿದ್ ಅವರು ಸಮಿತಿಯಲ್ಲಿರುವ ಇತರ ಸಚಿವರು.  

ನಾಗರಿಕರ ಸಮಾಜದ ಪರವಾಗಿ ಅಣ್ಣಾ ಹಜಾರೆ ಅವರಲ್ಲದೇ, ಖ್ಯಾತ ವಕೀಲರಾದ ಶಾಂತಿ ಭೂಷಣ್, ಪ್ರಶಾಂತ್ ಭೂಷಣ್, ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಮಾಹಿತಿ ಹಕ್ಕು ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಇರುತ್ತಾರೆ. ಶಾಂತಿ ಭೂಷಣ್ ಅವರು ಸಹ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವರು.

ಬಿರುಸಿನ ಚರ್ಚೆ: ಅಣ್ಣಾ ಮತ್ತು ಕೇಂದ್ರ ಸರ್ಕಾರದ ನಡುವಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅಣ್ಣಾ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಬೆಳಿಗ್ಗೆಯಿಂದಲೇ ಬಿರುಸಿನ ಚರ್ಚೆ ನಡೆಸಿದರು. ತಮ್ಮ ಬೇಡಿಕೆಗಳನ್ನು ಒಳಗೊಂಡ ಕರಡು ಪ್ರತಿಯನ್ನು ಪ್ರತಿನಿಧಿಗಳ ಮೂಲಕ ಅಣ್ಣಾ ಅವರು ಸರ್ಕಾರಕ್ಕೆ ತಲುಪಿಸಿದ್ದರು. ಸಚಿವ ಕಪಿಲ್ ಸಿಬಲ್ ಮತ್ತು ಹಜಾರೆ ಪರ ಪ್ರತಿನಿಧಿಗಳು ಚರ್ಚೆ ನಡೆಸಿದ ನಂತರ ಸರ್ಕಾರ ಪ್ರತಿಯಾಗಿ ಇನ್ನೊಂದು ಕರಡನ್ನು ಅಣ್ಣಾ ಅವರಿಗೆ ಕಳುಹಿಸಿತು.

ಸರ್ಕಾರದ ಕರಡು ಪತ್ರದಲ್ಲಿ ಜಂಟಿ ಸಮಿತಿಯನ್ನು ರಚಿಸುವುದೂ ಸೇರಿದಂತೆ ಪ್ರಮುಖ ಬೇಡಿಕೆಗಳಿಗೆ ಸಮ್ಮತಿ ಸೂಚಿಸಲಾಗಿತ್ತು. ಜಂಟಿ ಸಮಿತಿಯಲ್ಲಿ ಸಚಿವರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಸಮ ಪ್ರಮಾಣದಲ್ಲಿ ಇರುವುದಕ್ಕೆ ವಿರೋಧ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.

ಈ ಕರಡು ಪತ್ರಕ್ಕೆ ಅಣ್ಣಾ ಅವರು ಒಪ್ಪಿಕೊಂಡರಾದರೂ, ಜಂಟಿ ಸಮಿತಿಯಲ್ಲಿ ನಾಗರಿಕ ಸಮಾಜದ ಪರವಾಗಿ ಒಬ್ಬ ಸಹ ಅಧ್ಯಕ್ಷ ಇರಬೇಕು ಎನ್ನುವ ನಿಲುವಿಗೆ ಅಂಟಿಕೊಂಡರು. ಎರಡೂ ಕಡೆ ತಲಾ ಐವರು ಸದಸ್ಯರು ಇರಬೇಕು ಎನ್ನುವ ಬೇಡಿಕೆಗೆ ಸರ್ಕಾರ ಒಪ್ಪಿಕೊಂಡಿತು. ಜತೆಗೆ ಜಂಟಿ ಸಮಿತಿ ರಚನೆ ಕುರಿತು ತಕ್ಷಣ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎನ್ನುವ ನಿಬಂಧನೆಗೂ ಸರ್ಕಾರ ಅಸ್ತು ಎಂದಿದೆ. ಹಾಗಾಗಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲು ತಾವು ಸಮ್ಮತಿಸಿದ್ದಾಗಿ ಹಜಾರೆ ತಮ್ಮೊಂದಿಗೆ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡವರಿಗೆ     ತಿಳಿಸಿದರು.

ಜಂಟಿ ಸಮಿತಿಯಲ್ಲಿ ಪಾಲ್ಗೊಳ್ಳಲು ಅಣ್ಣಾ ಒಪ್ಪಿಕೊಂಡಿದ್ದಾರೆ. ತನ್ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತದೆ. ಕೇಂದ್ರ ಸಚಿವರೇ ಜಂಟಿ ಸಮಿತಿಯ ಅಧ್ಯಕ್ಷರಾಗುವುದರಿಂದ ಸಮಿತಿ ಶಿಫಾರಸನ್ನು ಸಂಪುಟ ಸುಲಭವಾಗಿ ಒಪ್ಪಿಕೊಳ್ಳುತ್ತದೆ ಎನ್ನುವ ಉದ್ದೇಶವಿದೆ ಎಂದರು.

ಸಚಿವರಾದ ಕಪಿಲ್ ಸಿಬಲ್, ವೀರಪ್ಪ ಮೊಯಿಲಿ ಮತ್ತು ಸಲ್ಮಾನ್ ಖುರ್ಷಿದ್ ಅವರು ಸ್ವಾಮಿ ಅಗ್ನಿವೇಶ್, ಕಿರಣ್ ಬೇಡಿ ಮತ್ತು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಮಾತುಕತೆ ಪೂರ್ಣಗೊಂಡರೂ ಸಹ, ನಂತರ ಎರಡು ಗಂಟೆಗಳ ಕಾಲ ಅಣ್ಣಾ ಅವರು ತಮ್ಮ ಪ್ರತಿನಿಧಿಗಳು ಹಾಗೂ ಸಲಹೆಗಾರರ ಜತೆ ಚರ್ಚೆ ನಡೆಸಿದರು.ಚರ್ಚೆಯಲ್ಲಿ ಹಿರಿಯ ವಕೀಲ ಶಾಂತಿ ಭೂಷಣ್ ಅವರೂ ಪಾಲ್ಗೊಂಡಿದ್ದರು.

‘ಒತ್ತಡಕ್ಕೆ ಮಣಿದಿಲ್ಲ’: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಅಣ್ಣಾ ಅವರ ನಿರಶನಕ್ಕೆ ಸರ್ಕಾರ ಮಣಿದಿಲ್ಲ. ಬದಲಾಗಿ ಸರ್ಕಾರವೂ ಸಹ ಇಂತಹ ಮಸೂದೆಯನ್ನು ಜಾರಿಗೆ ತರಲು ಚಿಂತನೆ ನಡೆಸಿತ್ತು. ಸರ್ಕಾರ ಮತ್ತು ನಾಗರಿಕ ಸಮಾಜಗಳೆರೂ ಭ್ರಷ್ಟಾಚಾರದ ವಿರುದ್ಧವೇ ಇರುವುದರಿಂದ ಇಲ್ಲಿ ಸರ್ಕಾರ ಒತ್ತಡಕ್ಕೆ ಮಣಿದಿದೆ ಎನ್ನುವುದರಲ್ಲಿ ಅರ್ಥ ಇಲ್ಲ ಎಂದು ಸಿಬಲ್ ಹೇಳಿದರು.

 ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಧಾನ ನಡೆಸುತ್ತಿದ್ದ ಸಚಿವರಿಗೆ ಹಲವು ಸಲಹೆಗಳನ್ನು ನೀಡಿದ್ದರು. ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಪರಿಹಾರ ಸೂತ್ರವನ್ನು ಕಂಡು ಹಿಡಿಯುವಂತೆ ಸಿಂಗ್ ಸೂಚಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.