ಭಾನುವಾರ, ಏಪ್ರಿಲ್ 11, 2021
28 °C

ಅತ್ಯಂತ ನೋವಿನ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನನ್ನ ರಾಜಕೀಯ ಜೀವನದ ಅತ್ಯಂತ ನೋವಿನ ದಿನ ಇದು... ಅಧಿಕಾರದಿಂದ ಕೆಳಗಿಳಿಯಿರಿ ಎಂದು ನಿಮ್ಮಂಥ ನಿಷ್ಠಾವಂತರಿಗೆ ಹೇಳಬೇಕಾದ ದುಸ್ಥಿತಿ ನನ್ನ ಪಾಲಿಗೆ ಬಂದಿದೆ...~ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಆಡಿದ ಬೇಸರದ ಮಾತು ಇದು. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಬದಲಾವಣೆಗೆ ಬಿ.ಎಸ್. ಯಡಿಯೂರಪ್ಪ ಬಣ ಹೇರಿದ ಒತ್ತಡದ ಕಾರಣ ನವದೆಹಲಿಯಲ್ಲಿ ಶನಿವಾರ ಸಭೆ ಸೇರಿದ ಬಿಜೆಪಿ ಸಂಸದೀಯ ಮಂಡಳಿ, ಸದಾನಂದ ಗೌಡರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವ ನಿರ್ಧಾರ ಕೈಗೊಂಡಿತು.ಈ ವಿಚಾರ ತಿಳಿಸಲು ಸದಾನಂದ ಗೌಡರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಂಸದೀಯ ಮಂಡಳಿಯ ಅಧ್ಯಕ್ಷರೂ ಆದ ಅಡ್ವಾಣಿ, `ನೀವು ಒಳ್ಳೆಯ ಆಡಳಿತ ನೀಡಿದ್ದೀರಿ. ನೀವು ನಿಷ್ಠಾವಂತರು ಎಂಬುದು ನನಗೆ ಗೊತ್ತಿದೆ. ಆದರೆ ಲಿಂಗಾಯತ ಸಮುದಾಯದ ಮತಗಳನ್ನು ಉಳಿಸಿಕೊಳ್ಳುವ ಒಂದೇ ಕಾರಣಕ್ಕಾಗಿ ಮುಖ್ಯಮಂತ್ರಿ ಸ್ಥಾನ ಬಿಡಿ ಎಂದು ಪಕ್ಷ ನಿಮ್ಮನ್ನು ಕೇಳುತ್ತಿದೆ~ ಎಂದು ಬೇಸರದಿಂದ ಹೇಳಿದರು.`ಪಕ್ಷದ ಕರ್ನಾಟಕ ಘಟಕದಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ಗೊತ್ತಿದೆ. ಪಕ್ಷಕ್ಕೆ ನಿಮ್ಮ ನಾಯಕತ್ವ ಬೇಕು. ನಿಮ್ಮ ಸೇವೆಯನ್ನು ಪಕ್ಷ ಸೂಕ್ತವಾಗಿ ಬಳಸಿಕೊಳ್ಳಲಿದೆ. ಯಾವುದಕ್ಕೂ ಬೇಸರ ಮಾಡಿಕೊಳ್ಳಬೇಡಿ, ಎದೆಗುಂದಬೇಡಿ. ನಿಮ್ಮ ಜೊತೆ ನಾನಿರುತ್ತೇನೆ~ ಎಂದು ಸದಾನಂದ ಗೌಡರಿಗೆ ಹೇಳಿದ ಅಡ್ವಾಣಿ ಅಕ್ಷರಶಃ ಕಣ್ಣೀರು ಹಾಕಿದರು ಎಂದು ಮೂಲಗಳು ತಿಳಿಸಿವೆ.`ಸಿದ್ಧನಾಗೇ ಬಂದಿರುವೆ~: `ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಾನು ಸಿದ್ಧನಾಗಿಯೇ ಬಂದಿದ್ದೇನೆ. ಆದರೆ ಕೆಲವು ಸಂಗತಿಗಳನ್ನು ನಿಮಗೆ ತಿಳಿಸಬೇಕು. ಮುಕ್ತವಾಗಿ ಆಡಳಿತ ನಡೆಸಲು ಪಕ್ಷದ ಕೆಲವರು ಕಳೆದ 11 ತಿಂಗಳಲ್ಲಿ ಅವಕಾಶವನ್ನೇ ನೀಡಲಿಲ್ಲ~ ಎಂದು ಗೌಡರು ಅಡ್ವಾಣಿ ಅವರಿಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.