ಬುಧವಾರ, ಮೇ 12, 2021
19 °C
ತನಿಖೆಗೆ ಯುವತಿ ಸಹಕರಿಸದಿದ್ದರೆ ಶಿಕ್ಷೆ ಕಷ್ಟ

ಅತ್ಯಾಚಾರದ ಸುತ್ತ ಅನುಮಾನಗಳ ಹುತ್ತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ಸ್ವತಃ ತಾವೇ ಯುವತಿಯನ್ನು ಆಕೆಯ ಮನೆಯ ಸಮೀಪದವರೆಗೆ ಕರೆದುಕೊಂಡು ಬಂದು ಬಿಟ್ಟು ಹೋಗಿರುವುದು ಮತ್ತು ದೂರು ನೀಡಲು ಅತ್ಯಾಚಾರಕ್ಕೊಳಗಾದ ಯುವತಿ ನಿರಾಕರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಯುವತಿಯನ್ನು ಅಪಹರಿಸಿರುವುದನ್ನು ಸ್ವತಃ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಯೇ ಗಮನಿಸಿದ್ದಾರೆ ಮತ್ತು ಅವರನ್ನು ಬೆನ್ನಟ್ಟಿ ಹಿಡಿಯಲೂ ಪ್ರಯತ್ನಿಸಿದ್ದಾರೆ. ಆದ್ದರಿಂದ ಅಪಹರಣ ನಡೆದಿರುವುದರಲ್ಲಿ ಸಂಶಯ ಇಲ್ಲ. ಅಲ್ಲಿಂದ ಪಾರಾದ ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.ಘಟನೆ 11.15ರ ಸುಮಾರಿಗೆ ನಡೆದಿದ್ದು, ವಿಷಯ ತಿಳಿದ ತಕ್ಷಣ ಪೊಲೀಸರು ಎಂಟು ತಂಡಗಳಲ್ಲಿ ಆರೋಪಿಗಳ ಪತ್ತೆಗೆ ವಿಶ್ವವಿದ್ಯಾಲಯದ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸತತವಾಗಿ ಹುಡುಕಾಡಿದ್ದಾರೆ. ಆದರೂ ಪೊಲೀಸರಿಗೆ ಅತ್ಯಾಚಾರಿಗಳು ಸಿಕ್ಕಿಲ್ಲ. ಆದರೆ ಅವರೇ ಕೃತ್ಯ ನಡೆಸಿದ ಬಳಿಕ ಯುವತಿಯನ್ನು ಮನೆಯ ಸಮೀಪದವರೆಗೂ ಬಿಟ್ಟು ಹೋಗಿದ್ದು, ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.ಅಲ್ಲದೆ ಮನೆ ತಲುಪಿದ ಯುವತಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆಕೆಯಿಂದ ಸಹಕಾರ ಸಿಕ್ಕಿಲ್ಲ ಎನ್ನಲಾಗಿದೆ. ದೂರು ನೀಡಲು ನಿರಾಕರಿಸಿದ ಯುವತಿ ಹೇಳಿಕೆ ನೀಡಿ ಅದಕ್ಕೆ ಸಹಿ ಮಾಡಲೂ ಒಪ್ಪಲಿಲ್ಲ. ಪ್ರಕರಣ ದಾಖಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದ ಕಾರಣ ಪೊಲೀಸರು ವಿಶ್ವವಿದ್ಯಾಲಯದ ಎಸ್ಟೇಟ್ ಅಧಿಕಾರಿಯಿಂದ ದೂರು ಪಡೆದು ಪ್ರಥಮ ಮಾಹಿತಿ ವರದಿ ದಾಖಲಿಸಿಕೊಂಡರು ಎಂದು ತಿಳಿದುಬಂದಿದೆ.ಯುವತಿ ಮಾನಸಿಕವಾಗಿ ಜರ್ಜರಿತಳಾಗಿದ್ದ ಕಾರಣ ಅಕೆ ದೂರು ನೀಡಲು ನಿರಾಕರಿಸಿರಬಹುದು. ಅತ್ಯಾಚಾರದಂತಹ ಕೃತ್ಯ ಎಸಗಿದಾಗ ಕೃತ್ಯ ಎಸಗಿದ ದುಷ್ಕರ್ಮಿಗಳು ತಕ್ಷಣ ಸ್ಥಳದಿಂದ ಪಾರಾಗಲು ಯತ್ನಿಸುವುದು ಸಾಮಾನ್ಯ. ಆದರೆ ಅತ್ಯಾಚಾರ ಎಸಗಿದವರು ಯುವತಿಯನ್ನು ಮನೆಯವರೆಗೆ ಬಿಟ್ಟು ಹೋಗಿದ್ದಾದರೂ ಯಾಕೆ? ಪೊಲೀಸ್ ಗಸ್ತು ಮತ್ತು ನಾಕಾಬಂದಿ ಇದ್ದರೂ ಪೊಲೀಸರ ಕಣ್ಣು ತಪ್ಪಿಸಿದ ದುಷ್ಕರ್ಮಿಗಳು ಹೇಗೆ ಮನೆಯವರೆಗೂ ಹೋದರು. ಅಲ್ಲದೆ ಅಪಹರಣವಾದ ಸಮಯ ಮತ್ತು ಯುವತಿ ಮನೆಗೆ ಮರಳಿದ ಸಮಯಕ್ಕೆ ಸುಮಾರು ಮೂರೂವರೆ ಗಂಟೆಗಳ ವ್ಯತ್ಯಾಸ ಇದೆ. ಇಷ್ಟು ಗಂಟೆಗಳ ಅಂತರದಲ್ಲಿ ಬೇರೇನು ನಡೆದಿರಬಹುದು? ಎಂಬ ಅಂಶಗಳು ಸಹ ಅನುಮಾನ ಮೂಡಿಸುವಂತಿವೆ.ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲು ಮತ್ತು ತನಿಖೆ ನಡೆಸಿ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಸಹಕಾರ ಪೊಲೀಸರಿಗೆ ಅಗತ್ಯವಾಗಿ ಬೇಕಾಗುತ್ತದೆ. ಆದರೆ ವೈದ್ಯಕೀಯ ವಿದ್ಯಾರ್ಥಿನಿ ತನಿಖೆಗೆ ಸಹಕಾರ ನೀಡದಿದ್ದರೆ ಪ್ರಕರಣವನ್ನು ತಾತ್ವಿಕ ಅಂತ್ಯ ಕಾಣಿಸುವುದು ಕಷ್ಟವಾಗಬಹುದು. ಅತ್ಯಾಚಾರಿಗಳು ಕಾನೂನಿನ ಕುಣಿಕೆಯಿಂದ ಪಾರಾಗಲು ಹೆಚ್ಚು ಅವಕಾಶ ಇರುತ್ತದೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.