ಗುರುವಾರ , ಮೇ 19, 2022
21 °C

ಅತ್ಯಾಚಾರ ಪ್ರಕರಣ: ಠಾಣೆಗೆ ನುಗ್ಗಿದ ಗ್ರಾಮಸ್ಥರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ತಾಲ್ಲೂಕು ಹಿರೇಶೆಲ್ಲಿಕೇರಿ ಗ್ರಾಮದ ವಿವಾಹಿತ ಮಹಿಳೆಯೊಬ್ಬರ ಮೇಲೆ ಮಂಗಳವಾರ ನಡೆದ ಅತ್ಯಾಚಾರ ಪ್ರಕರಣ ಬುಧವಾರ ಹೊಸ ತಿರುವು ಪಡೆದುಕೊಂಡಿದ್ದು ಹಿರೇಶೆಲ್ಲಿಕೇರಿ ಗ್ರಾಮದ ಸುತ್ತಮುತ್ತಲಿನ ಮಹಿಳೆಯರು ಹಾಗೂ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾದಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಇನ್ನೂ ನಾಲ್ಕು ಜನ ಆರೋಪಿಗಳು ಭಾಗಿಯಾಗಿದ್ದು ಅದರಲ್ಲಿ ಒಬ್ಬನನ್ನು ಮಾತ್ರ ಬಂಧಿಸಲಾಗಿದೆ. ಇನ್ನುಳಿದವರನ್ನು ಯಾಕೆ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆರೋಪಿಗಳನ್ನು ಬಂಧಿಸಲು ಹಿಂಜರಿಯುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ್ ಅವರಿಗೆ ಒತ್ತಾಯಿಸಿದರು.ಅತ್ಯಾಚಾರ ಪ್ರಕರಣಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ಸ್ಥಳಿಯ ಪಿಎಸ್‌ಐ ಮಂಗಳವಾರದಂದು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಬಂಧಿಸದೇ ಕಲಾದಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.ಕಲಾದಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಹಿರೇಶೆಲ್ಲಿಕೇರಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪೊಲೀಸ್ ಅಧಿಕಾರಿಗಳ ವಿರುದ್ಧ ಧಿಕ್ಕಾರ, ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ನುಗ್ಗಲು ಪ್ರಯತ್ನಿಸಿದಾಗ ಪ್ರತಿಭಟನಾಕಾರರನ್ನು ತಡೆಯಲಾಯಿತು.ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ್ ಸ್ಥಳಕ್ಕೆ ಭೇಟಿ ನೀಡಿದಾಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್‌ಪಿಯವರ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಭರವಸೆಗೆ ಒಪ್ಪದ ಗ್ರಾಮಸ್ಥರು ಪ್ರತಿಭಟನೆಯನ್ನು ಮುಂದುವರಿಸಿದರು. ಕೆಲವು ಸಮಯ ಕಲಾದಗಿ ಪೊಲೀಸ್ ಠಾಣೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಸ್ಪಿಯವರು ಭರವಸೆ ನೀಡಿದರೂ ಗ್ರಾಮಸ್ಥರು ಮಾತ್ರ ಠಾಣೆಯಿಂದ ಕಾಲ್ಕಿತ್ತಲಿಲ್ಲ. ಆರೋಪಿಗಳನ್ನು ಬಂಧಿಸಲೇಬೇಕು ಎಂದು ಪಟ್ಟುಹಿಡಿದ ಘಟನೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.