ಮಂಗಳವಾರ, ಏಪ್ರಿಲ್ 13, 2021
30 °C

ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಪದಕ ಅಸಾಧ್ಯ - ಅಂಜು ಜಾರ್ಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ಲಂಡನ್ ಒಲಿಂಪಿಕ್ಸ್‌ನ ಟ್ರ್ಯಾಕ್ ಹಾಗೂ ಫೀಲ್ಡ್ ವಿಭಾಗದಲ್ಲಿ ಭಾರತ ಪದಕ ಗೆಲ್ಲುವುದು ಅಸಾಧ್ಯದ ಮಾತು~ ಎಂದು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಭಾರತದ ಏಕೈಕ ಅಥ್ಲೀಟ್ ಅಂಜು ಜಾರ್ಜ್ ನುಡಿದಿದ್ದಾರೆ.`ಅಥ್ಲೀಟ್‌ಗಳ ಉತ್ಸಾಹಕ್ಕೆ ಧಕ್ಕೆಯಾಗುವ ರೀತಿಯ ಹೇಳಿಕೆ ನೀಡಲು ನಾನು ಇಷ್ಟಪಡುವುದಿಲ್ಲ. ಆದರೆ ಭಾರತದ ಅಥ್ಲೀಟ್‌ಗಳಿಗೆ ಪದಕ ಗೆಲ್ಲಲು ಯಾವುದೇ ಅವಕಾಶವಿಲ್ಲ. ಏಕೆಂದರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಹುದು ಎಂಬ ಭರವಸೆಯ ಪ್ರದರ್ಶನವನ್ನು ಈ ವರ್ಷ ಯಾವ ಅಥ್ಲೀಟ್ ಕೂಡ ನೀಡಿಲ್ಲ~ ಎಂದು ಲಾಂಗ್‌ಜಂಪ್ ಸ್ಪರ್ಧಿ ಅಂಜು ಹೇಳಿದ್ದಾರೆ.35 ವರ್ಷ ವಯಸ್ಸಿನ ಅಂಜು 2003ರ ಪ್ಯಾರಿಸ್ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಭಾರತದ ಮಟ್ಟಿಗೆ ಇದೊಂದು ಐತಿಹಾಸಿಕ ಸಾಧನೆ. ಅವರು 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ 6.83 ಮೀಟರ್ ದೂರ ಜಿಗಿದು ಆರನೇ ಸ್ಥಾನ ಪಡೆದಿದ್ದರು.`ಡಿಸ್ಕಸ್ ಥ್ರೋ ಸ್ಪರ್ಧಿಗಳಾದ ವಿಕಾಸ್ ಗೌಡ ಹಾಗೂ ಕೃಷ್ಣಾ ಪೂನಿಯಾ ಫೈನಲ್ ತಲುಪಬಹುದು. ಆದರೆ ಪದಕ ಗೆಲ್ಲಲು ಅವರು ತಮ್ಮ ವೈಯಕ್ತಿಕ ಪ್ರದರ್ಶನವನ್ನು ಮೀರಿ ನಿಲ್ಲಬೇಕು. ಪೂನಿಯಾ 65 ಮೀಟರ್‌ಗಿಂತ ಹೆಚ್ಚು ದೂರ ಡಿಸ್ಕಸ್ ಎಸೆಯಬೇಕು. ವಿಕಾಸ್ 70 ಮೀ.ಗಿಂತ ಹೆಚ್ಚು ಸಾಧನೆ ಮಾಡಬೇಕು~ ಎಂದು ಅವರು ತಿಳಿಸಿದ್ದಾರೆ.ಟ್ರಿಪಲ್ ಜಂಪ್‌ನಲ್ಲಿ ಅರ್ಹತೆ ಗಿಟ್ಟಿಸಿರುವ ಕೇರಳದ ಮಯೂಖಾ ಜಾನಿ ಬಗ್ಗೆ ಪ್ರತಿಕ್ರಿಯಿಸಿದ ಅಂಜು, `ಮಯೂಖಾ ಫೈನಲ್‌ಗೆ ಅರ್ಹತೆ ಪಡೆಯುವುದು ಕಷ್ಟ. 14.20 ಮೀ.ಸಾಧನೆ ಮಾಡಿದರೂ ಅಗ್ರ 16ರ ಪಟ್ಟಿಯಲ್ಲಿ ಸ್ಥಾನ ಪಡೆಯುವುದಿಲ್ಲ. ಅವರ ಇದುವರೆಗಿನ ಉತ್ತಮ ಸಾಧನೆ 14.11 ಮೀ. ಅಷ್ಟೆ. ತಾಂತ್ರಿಕವಾಗಿ ಅವರು ನಿಖರತೆ ಹೊಂದಿಲ್ಲ~ ಎಂದರು.ಅಂಜು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದ ಅವರು ಉತ್ತಮ ಸೌಲಭ್ಯ ದೊರೆತಿದ್ದರೆ ಇನ್ನೂ ಹೆಚ್ಚಿನ ಸಾಧನೆ ಮಾಡಬಹುದಿತ್ತು ಎಂದು ನುಡಿದರು. `ಪ್ಯಾರಿಸ್‌ನಲ್ಲಿ ಕಂಚಿನ ಪದಕ ಗೆದ್ದ ಮೇಲೆ ಹೆಚ್ಚಿನ ತರಬೇತಿಗೆಂದು ಅಮೆರಿಕಾಕ್ಕೆ ತೆರಳಲು ಬಯಸಿದ್ದೆ. ಆದರೆ ಅದಕ್ಕೆ ಬೇಕಾಗಿದ್ದ ಹಣ ಹೊಂದಿಸಲು ಎರಡು ತಿಂಗಳು ದೆಹಲಿಯಲ್ಲಿ ಅಲೆದಾಡಬೇಕಾಯಿತು. ಆ ಅನುಭವದ ಬಳಿಕ ಅಮೆರಿಕಾ ಪ್ರವಾಸವನ್ನೇ ಕೈಬಿಟ್ಟೆ~ ಎಂದರು.`2003ರ ಆ ಸಾಧನೆ ಬಳಿಕ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದೆ. ಆದರೆ ಆ ಸಮಯದಲ್ಲಿ ನಾನು ಅನಾರೋಗ್ಯಕ್ಕೆ ಒಳಗಾದೆ. ಸ್ಪರ್ಧೆಗೆ ಮುನ್ನ ಜ್ವರದಿಂದ ಬಳಲುತ್ತಿದ್ದೆ. ಹಾಗಾಗಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ. ಈ ಕಾರಣ ಒಲಿಂಪಿಕ್ಸ್ ಪದಕದ ಕನಸು ನನಸಾಗಿಯೇ ಉಳಿದಿದೆ~ ಎಂದು ಅವರು ನಿರಾಶೆ ವ್ಯಕ್ತಪಡಿಸಿದರು.ಬೆಂಗಳೂರಿನಲ್ಲಿ ನೆಲೆಸಿರುವ ಕೇರಳ ಮೂಲದ ಅಂಜು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದರು. ಆದರೆ ಆಗಲೂ ಅವರಿಗೆ ಯಶಸ್ಸು ಲಭಿಸಿರಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.