ಶುಕ್ರವಾರ, ಆಗಸ್ಟ್ 7, 2020
23 °C

ಅದಲು ಬದಲಿಗೆ ಕ್ಯಾಪಿಟಲ್ ಸಾಕ್ಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅದಲು ಬದಲಿಗೆ ಕ್ಯಾಪಿಟಲ್ ಸಾಕ್ಷಿ

ಬೆಂಗಳೂರು: ಹನ್ನೊಂದು ತಿಂಗಳ ಹಿಂದೆ ಹತ್ತಿರವಿದ್ದವರು ಈಗ ದೂರ ದೂರ. ಆಗ ಎದುರಾಳಿಗಳಂತಿದ್ದವರು ಈಗ ಪರಸ್ಪರ ಅಪ್ಪಿಕೊಂಡಿದ್ದಾರೆ. ಈ ಪಲ್ಲಟದ ಪರಿಣಾಮವಾಗಿ ಮುಖ್ಯಮಂತ್ರಿ ಗಾದಿಯೂ ಒಬ್ಬರಿಂದ ಮತ್ತೊಬ್ಬರಿಗೆ ವರ್ಗವಾಗುತ್ತಿದೆ. ಎಲ್ಲ ಕಾಲನ ಮಹಿಮೆ!ಇದು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿನ ಚಿತ್ರಣ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ನಿಯೋಜಿತ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಡುವಣ ಸಂಬಂಧದಲ್ಲಿ ಆಗಿರುವ ಪಲ್ಲಟದ ಫಲ. ಈ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು ಕ್ಯಾಪಿಟಲ್ ಹೋಟೆಲ್.ಲೋಕಾಯುಕ್ತ ವರದಿಯಲ್ಲಿನ ಆರೋಪದ ಮೇಲೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ 2011ರ ಜುಲೈ 31ರಂದು ರಾಜೀನಾಮೆ ನೀಡಿದರು. ಮುಖ್ಯಮಂತ್ರಿ ಹುದ್ದೆಗೆ ಆಗ ಶೆಟ್ಟರ್ ಹೆಸರು ಕೇಳಿಬಂದಿತ್ತು. ಶತಾಯಗತಾಯ ಶೆಟ್ಟರ್ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಬೇಕೆಂಬ ಹಟಕ್ಕೆ ಬಿದ್ದ ಯಡಿಯೂರಪ್ಪ, ಸದಾನಂದ ಗೌಡರ ಹೆಸರನ್ನು ದಾಳವಾಗಿ ಉರುಳಿಸಿದ್ದರು.ತಮ್ಮ ನಂಬುಗೆಯ ಗೆಳೆಯರೆಂಬ ಕಾರಣಕ್ಕೆ ಗೌಡರನ್ನು ಉತ್ತರಾಧಿಕಾರಿ ಮಾಡಲು ಯಡಿಯೂರಪ್ಪ ಎಲ್ಲ ಬಗೆಯ ಅಸ್ತ್ರಗಳನ್ನೂ ಪ್ರಯೋಗಿಸಿದ್ದರು. ರಾಜೀನಾಮೆಗೂ ಮುನ್ನವೇ ಬಲಿಜ ಜನಾಂಗದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ, `ನನ್ನ ಗೆಳೆಯ ಮುಖ್ಯಮಂತ್ರಿ ಆಗುತ್ತಾನೆ. ನಿಮ್ಮ ಎಲ್ಲ ಬೇಡಿಕೆಗಳನ್ನೂ ಈಡೇರಿಸುತ್ತಾನೆ~ ಎಂದು ಘೋಷಿಸಿದ್ದರು.ಹೆಚ್ಚಿನ ಸಂಖ್ಯೆಯ ಶಾಸಕರನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಂಡಿದ್ದ ಯಡಿಯೂರಪ್ಪ, `ಗೆಳೆಯ~ನನ್ನು ಅಧಿಕಾರದ ಗದ್ದುಗೆಗೆ ತರಲು ಕಾರ್ಯತಂತ್ರ ರೂಪಿಸಿದ್ದರು. ಲಿಂಗಾಯತ ಸಮುದಾಯದ ಶಾಸಕರು ಕೂಡ ಲಿಂಗಾಯತ ಸಮುದಾಯದವರೇ ಆದ ಶೆಟ್ಟರ್ ಅವರನ್ನು ಬೆಂಬಲಿಸದಂತೆ ಮಾಡಿದ್ದರು. ಪರಿಣಾಮವಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ನಡೆದ ರಹಸ್ಯ ಮತದಾನದಲ್ಲಿ ಶೆಟ್ಟರ್ ಸೋಲು ಕಂಡಿದ್ದರು. ಆ ಮೂಲಕ ಯಡಿಯೂರಪ್ಪ ಮೇಲುಗೈ ಸಾಧಿಸಿದ್ದರು.ಸದಾನಂದ ಗೌಡರನ್ನು ಅಧಿಕಾರಕ್ಕೆ ತಂದ ಬಳಿಕವೂ ಯಡಿಯೂರಪ್ಪ ಅವರಿಗೆ ಶೆಟ್ಟರ್ ವಿರುದ್ಧ ಕೋಪ ತಣ್ಣಗಾಗಿರಲಿಲ್ಲ. ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗದಂತೆ ತಡೆದಿದ್ದರು. ಖಾತೆಗಳ ಹಂಚಿಕೆಯಲ್ಲೂ ಅವರ ಕೈ ಮೇಲಾಗದಂತೆ ನಿಯಂತ್ರಿಸಿದ್ದರು. ಇಬ್ಬರೂ ಮತ್ತೆ ಹತ್ತಿರ ಆಗಲು ಸಾಧ್ಯವೇ ಇಲ್ಲವೇನೋ ಎಂಬ ಭಾವನೆ ಮೂಡಿತ್ತು.ಆದರೆ, ಈಗ ಎಲ್ಲವೂ ಅದಲು-ಬದಲು. ಅದೇ ಕ್ಯಾಪಿಟಲ್ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ತನ್ನೆಲ್ಲ ಶಕ್ತಿಯೊಂದಿಗೆ ಶೆಟ್ಟರ್ ಬೆನ್ನಿಗೆ ನಿಂತರು. ಒಂದೇ ಸಾಲಿನ ನಿರ್ಣಯದೊಂದಿಗೆ ಅಂದಿನ `ಗೆಳೆಯ~ನನ್ನು ಇಂದು ಅಧಿಕಾರದಿಂದ ಕೆಳಕ್ಕಿಳಿಸುವಲ್ಲಿ ಸಫಲರಾದರು. ಶಾಸಕಾಂಗ ಪಕ್ಷಕ್ಕೆ ಹೊಸ ನಾಯಕನ ಆಯ್ಕೆಯ ನಿರ್ಣಯವನ್ನು ತಾವೇ ಖುದ್ದಾಗಿ ಮಂಡಿಸಿದರು. ಈಗ ಗೌಡರು ಅವರ `ಮಿತ್ರ~ರಲ್ಲ ಎಂಬುದೇ ಇದಕ್ಕೆಲ್ಲವೂ ಕಾರಣ.ಹೊಸ `ಬಂಡಾಯಗಾರ~: ಬಿಜೆಪಿಯಲ್ಲಿ ಸದಾನಂದ ಗೌಡರ ಕುರಿತು ಇದ್ದ ಕಲ್ಪನೆಯೂ ಮಂಗಳವಾರ ಬದಲಾಯಿತು. `ನಾನು ಪಕ್ಷದ ಶಿಸ್ತಿನ ಸಿಪಾಯಿ~ ಎಂದು ಅವರೇ ಹಲವು ಬಾರಿ ಘೋಷಿಸಿಕೊಂಡಿದ್ದರು. ಅಧಿಕಾರ ತ್ಯಜಿಸುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಸಾಂಕೇತಿಕ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕವೂ ಅವರು ಅದೇ ಮಾತನಾಡಿದ್ದರು.ಆದರೆ, ಮಂಗಳವಾರ ಆಗಿದ್ದೇ ಬೇರೆ. 56 ಶಾಸಕರನ್ನು ಇರಿಸಿಕೊಂಡು ತಮ್ಮ ಅಧಿಕೃತ ನಿವಾಸದಲ್ಲಿ ಕುಳಿತ ಸದಾನಂದ ಗೌಡರು, ಬಿಜೆಪಿ ಹೈಕಮಾಂಡ್ ವಿರುದ್ಧವೇ ಸೆಡ್ಡು ಹೊಡೆದರು. ಆರು ಗಂಟೆಗಳ ಕಾಲ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೇ ಅನಿಶ್ಚಿತತೆ ಮೂಡಿಸಿದರು. ಹೈಕಮಾಂಡ್‌ನ ವೀಕ್ಷಕರು ಮುಂದಿಟ್ಟ ಸೂತ್ರಗಳನ್ನು ಖುಲ್ಲಂಖುಲ್ಲ ತಿರಸ್ಕರಿಸಿ, ಶಕ್ತಿ ಪ್ರದರ್ಶನ ನಡೆಸಿದರು. ಆಗ ಅವರು ನೋಡುಗರ ಕಣ್ಣಲ್ಲಿ `ಬಂಡಾಯಗಾರ~ನಂತೆ ಕಂಡರು. ಎಲ್ಲವೂ ಪಲ್ಲಟದ ಫಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.