ಬುಧವಾರ, ಮೇ 18, 2022
27 °C

ಅದಿರು ಸಾಗಾಣಿಕೆ: ನಿಯಮ ಮೀರಿದರೆ ದಂಡ, ಜೈಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಅದಿರನ್ನು ಸಾಗಿಸುವ ‘ಸಾಹಸ’ಕ್ಕೆ ಕೈಹಾಕುವ ಲಾರಿ ಮಾಲೀಕರು, ನಿಯಮಕ್ಕಿಂತ ಹೆಚ್ಚಿಗೆ ಅದಿರನ್ನು ಖರೀದಿ ಮಾಡುವ ಮತ್ತು ಮಾರಾಟ ಮಾಡುವವರು ಇನ್ನು ಮುಂದೆ 25ಸಾವಿರ ರೂಪಾಯಿಗಳವರೆಗೆ ದಂಡ ತೆರುವುದೂ ಅಲ್ಲದೇ, ಗರಿಷ್ಠ ಒಂದು ವರ್ಷ ಜೈಲು ಶಿಕ್ಷೆಯನ್ನೂ ಅನುಭವಿಸ      ಬೇಕಾಗಬಹುದು..!-ಇದು ಸರ್ಕಾರದಿಂದ ಹೊರಟಿರುವ ಕರಡು ನಿಯಮಗಳ ಅಧಿಸೂಚನೆಯಲ್ಲಿ ನೀಡಿರುವ ಎಚ್ಚರಿಕೆ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಕಳೆದ ತಿಂಗಳು ಅಧಿಸೂಚನೆಯನ್ನು ಪ್ರಕಟಿಸಿರುವ ಸರ್ಕಾರ, ಇದನ್ನು ಹೈಕೋರ್ಟ್‌ಗೆ ಈಗ ಸಲ್ಲಿಸಿದೆ. ಇದರಲ್ಲಿನ ನಿಯಮವನ್ನು ಅಂತಿಮಗೊಳಿಸುವ ಸಂಬಂಧ ಕೋರ್ಟ್‌ನ ಅನುಮತಿ ಕೋರಿದೆ.ಹೆಚ್ಚಿಗೆ ಅದಿರು ಸಾಗಿಸುವವರಿಗೆ ಪ್ರಥಮ ಬಾರಿಗೆ 10 ಸಾವಿರ ಹಾಗೂ ತಪ್ಪು ಪುನರಾವರ್ತನೆಗೊಂಡರೆ 25ಸಾವಿರ ರೂಪಾಯಿ ದಂಡ ಹಾಗೂ ಜೈಲು ಶಿಕ್ಷೆ ಇದ್ದರೆ, ನಿಯಮ ಮೀರಿ ಹೆಚ್ಚಿಗೆ ಅದಿರು ಮಾರಾಟ ಹಾಗೂ ಖರೀದಿ ಮಾಡುವವರಿಗೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ದೂರ ಕ್ರಮಿಸುವವರಿಗೆ, ಅದಿರು ನಿಯಮಕ್ಕೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ತೊಂದರೆ ನೀಡಿದರೆ ಅಂಥ ವಾಹನ ಮಾಲೀಕರಿಗೆ 25ಸಾವಿರ ರೂಪಾಯಿ ದಂಡ ಹಾಗೂ ಒಂದು ವರ್ಷ ಶಿಕ್ಷೆ ವಿಧಿಸುವ ಬಗ್ಗೆ ಇದರಲ್ಲಿ ಉಲ್ಲೇಖಗೊಂಡಿದೆ.ರಾಜ್ಯದ 10 ಬಂದರುಗಳಿಂದ ಅದಿರು ರಫ್ತನ್ನು ನಿಷೇಧಿಸಿ ಹಾಗೂ ರಫ್ತು ಉದ್ದೇಶಕ್ಕಾಗಿ ಅಗತ್ಯ ಇರುವ ಅದಿರು ಸಾಗಾಣಿಕೆ ಪರವಾನಗಿ ನೀಡಿಕೆಗೆ ನಿಷೇಧ ಹೇರಿ ಸರ್ಕಾರ 2010ರ ಜುಲೈನಲ್ಲಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಕಳೆದ ಅಕ್ಟೋಬರ್‌ನಲ್ಲಿ ಎತ್ತಿಹಿಡಿದಿತ್ತು. ಆದರೆ ಹೈಕೋರ್ಟ್ ಆದೇಶವನ್ನು ರದ್ದು ಮಾಡಿದ್ದ ಸುಪ್ರೀಂಕೋರ್ಟ್ ಅಕ್ರಮ ತಡೆಗಟ್ಟಲು ಸೂಕ್ತ ಮಾರ್ಗಸೂಚಿ ರೂಪಿಸಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.ಈ ನಿರ್ದೇಶನವನ್ನು ಸರ್ಕಾರ ಈಗ ಅನುಸರಿಸಿದ್ದುಮ ಕರ್ನಾಟಕ ಅದಿರು (ನಿಯಂತ್ರಣ ಮತ್ತು ಸಾಗಾಣಿಕೆ) ನಿಯಮ 2008 ಅನ್ನು ರದ್ದುಗೊಳಿಸಿದೆ. 2011ರ ಕರಡು ನಿಯಮವನ್ನು ಜಾರಿಗೆ ತಂದಿದೆ. ನಿಯಮದಲ್ಲಿ ಏನಿದೆ? ಅದಿರು ಸಾಗಾಣಿಕೆ ಬಯಸುವ ವಾಹನ ಮಾಲೀಕರು, ಅದಿರು ಸಾಗಾಣಿಕೆ ಪರವಾನಗಿ (ಎಂಡಿಪಿ) ಪಡೆದುಕೊಳ್ಳುವುದು ಕಡ್ಡಾಯ.ಇದನ್ನು ಪಡೆದುಕೊಳ್ಳುವ ಪೂರ್ವದಲ್ಲಿ ಪ್ರತಿಯೊಂದು ವಾಹನಗಳಿಗೆ ವಾಹನಗಳ ಚಲನವಲನಗಳ ಮೇಲೆ ನಿಗಾ ಇಡುವ ‘ಜಿಪಿಎಸ್’ ಉಪಕರಣಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯ100 ಕಿ.ಮೀ ವರೆಗಿನ ದೂರಕ್ಕೆ ಎಂಡಿಪಿಯನ್ನು ಒಂದು ದಿನದ ಅವಧಿಗೆ ಹಾಗೂ 500ಕಿ.ಮೀ ಕ್ಕಿಂತ ಹೆಚ್ಚಿಗೆ ಕ್ರಮಿಸಬೇಕಿದ್ದರೆ, ಈ ಅವಧಿಯನ್ನು ಗರಿಷ್ಠ 8ದಿನಗಳವರೆಗೆ ನೀಡಬೇಕು. ಗಣಿಗಾರಿಕೆ ಸ್ಥಳದಿಂದ ಅದಿರು ಸಾಗಿಸುವ ಸ್ಥಳದವರೆಗೆ ರೈಲು ಮೂಲಕ ಸಾಗಾಣಿಕೆ ಬಯಸುವವರಿಗೆ ರೇಕ್ ಒಂದಕ್ಕೆ 15 ದಿನಗಳವರೆಗೆ ಚಾಲ್ತಿಯಲ್ಲಿ ಇರುವಂತೆ ಒಂದೇ ಪರವಾನಗಿ ನೀಡಲಾಗುವುದು. ಚೆಕ್‌ಪೋಸ್ಟ್ ನಿರ್ಮಾಣ, ವಾಹನಗಳ ತಪಾಸಣೆ, ತಪ್ಪಿತಸ್ಥರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲು ಇತ್ಯಾದಿಗಳ ಬಗ್ಗೆಯೂ ಕರಡು ನಿಯಮದಲ್ಲಿ ಪ್ರಸ್ತಾಪಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.