ಸೋಮವಾರ, ಮೇ 23, 2022
21 °C

ಅದೃಷ್ಟ, ಪ್ರತಿಭೆ, ಯಶಸ್ಸಿನ ನಡುವೆ...

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

 

ಇದು ಅದೃಷ್ಟವೋ, ಪ್ರತಿಭೆಯ ಫಲವೋ ಏನೋ?ಆದರೆ ಪ್ರತಿಭೆಗಳು ತಂಡದಲ್ಲಿರುವುದರಿಂದ ನಾನು ಯಶಸ್ವಿ ನಾಯಕನಾಗಲು ಸಾಧ್ಯವಾಗಿದೆ. ಜೊತೆಗೆ ಅದೃಷ್ಟವೂ ನನ್ನ ಬೆನ್ನು ಹಿಡಿದಿದೆ ಎಂದಿದ್ದಾರೆ ಮಹೇಂದ್ರ ಸಿಂಗ್ ದೋನಿ.

ಖಂಡಿತ ಇಲ್ಲೊಬ್ಬ ಯಶಸ್ವಿ ಕೋಚ್ ಇದ್ದಾರೆ. ಚಾಣಾಕ್ಷ ನಾಯಕ ಇದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರನ ಉಪಸ್ಥಿತಿ ಇದೆ. ಚಾಂಪಿಯನ್ ಬ್ಯಾಟ್ಸ್‌ಮನ್‌ಗಳಿದ್ದಾರೆ. ಯುವ ಪ್ರತಿಭೆಗಳಿದ್ದಾರೆ.ಭಾರತ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ ಒನ್ ಎನಿಸಿಕೊಂಡು ಮುಂದುವರಿಯಲು ಇನ್ನೇನು ಬೇಕು ಹೇಳಿ? ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ಎದುರು ಇತ್ತೀಚೆಗೆ ಬಂದ ಸರಣಿ ಗೆಲುವು ಅದಕ್ಕೆ ಮತ್ತೊಂದು ಸಾಕ್ಷಿ. 30 ವರ್ಷಗಳಿಂದ ಒಂದಲ್ಲ ಒಂದು ಟೆಸ್ಟ್ ಜಯಿಸುತ್ತಾ ಬೀಗುತ್ತಿದ್ದ ಆಸ್ಟ್ರೇಲಿಯಾದವರು ಆ ಬಳಿಕ ಒಂದು ಸರಣಿಯ ಎಲ್ಲಾ ಪಂದ್ಯಗಳಲ್ಲಿ ಸೋತಿದ್ದು ಇದೇ ಮೊದಲು.ಈ ಯಶಸ್ಸಿನ ಬೆನ್ನಲ್ಲೇ ಭಾರತ ತಂಡದವರು ಮತ್ತೊಂದು ಸವಾಲಿಗೆ ಎದೆ ಕೊಡಲು ಸಜ್ಜಾಗುತ್ತಿದ್ದಾರೆ. ಗುರುವಾರ ನ್ಯೂಜಿಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿ ಶುರುವಾಗಲಿದೆ. ಆ ಬಳಿಕ ಐದು ಪಂದ್ಯಗಳ ಏಕದಿನ ಸರಣಿ ಇದೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ನಾಲ್ಕು ಪಂದ್ಯಗಳಲ್ಲಿ ಸೋತು ಬಂದಿರುವ ನ್ಯೂಜಿಲೆಂಡ್ ಟೆಸ್ಟ್‌ನಲ್ಲಿ ಅಗ್ರ ರ್ಯಾಂಕ್‌ನಲ್ಲಿರುವ ತಂಡಕ್ಕೆ ಯಾವ ರೀತಿ ಪೈಪೋಟಿ ನೀಡಬಲ್ಲದು ಎಂಬುದು ಕುತೂಹಲ ಮೂಡಿಸಿದೆ.ಏಕೆಂದರೆ ಎರಡು ವರ್ಷಗಳ ಹಿಂದೆ ನ್ಯೂಜಿಲೆಂಡ್ ನೆಲದಲ್ಲಿಯೇ ನಡೆದ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಭಾರತ ವಿಜಯದುಂಧುಬಿ ಮೊಳಗಿಸಿತ್ತು. ಆ ಸೇಡನ್ನು ತೀರಿಸಿಕೊಳ್ಳಲು ಕಿವೀಸ್ ಪಡೆ ಕಾತರದಲ್ಲಿದೆ. ಆದರೆ ಈ ತಂಡಕ್ಕೆ ಆ ತಾಕತ್ತು ಇದೆಯೇ ಎಂಬ ಪ್ರಶ್ನೆ ಮೂಡಿದೆ. ಜೊತೆಗೆ ನ್ಯೂಜಿಲೆಂಡ್ ಮೊದಲಿನಂತೆ ಬಲಿಷ್ಠ ತಂಡವಾಗಿ ಉಳಿದಿಲ್ಲ. ಭಾರತ 130 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಡೇನಿಯಲ್ ವೆಟೋರಿ ಸಾರಥ್ಯದ ನ್ಯೂಜಿಲೆಂಡ್ 78 ಪಾಯಿಂಟ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಶ್ವಶ್ರೇಷ್ಠ ಎನಿಸಿದೆ. ಸಚಿನ್, ದ್ರಾವಿಡ್, ಲಕ್ಷ್ಮಣ್ ಅವರಂಥ ಅದ್ಭುತ ಬ್ಯಾಟ್ಸ್‌ಮನ್‌ಗಳಿದ್ದಾರೆ. ವಿಶ್ವ ವಿಖ್ಯಾತ ಆರಂಭಿಕ ಜೋಡಿ ಎನಿಸಿರುವ ಸೆಹ್ವಾಗ್-ಗಂಭೀರ್ ಅವರ ಬಲವಿದೆ. ಅದೃಷ್ಟ ಹಾಗೂ ಪ್ರತಿಭಾವಂತ ನಾಯಕ ದೋನಿ ಅವರಿಗೆ ಜವಾಬ್ದಾರಿಯ ಅರಿವಿದೆ. ಪ್ರವಾಸಿ ತಂಡದವರಿಗೆ ಈಗ ಬಹುದೊಡ್ಡ ಭಯ ಸಚಿನ್. ಅದ್ಭುತ ಫಾರ್ಮ್‌ನಲ್ಲಿರುವ ಅವರು ಈಗ ತಮ್ಮ 50ನೇ ಶತಕಕ್ಕಾಗಿ ಕಾಯುತ್ತಿದ್ದಾರೆ. ಅವರು ಮಾತ್ರವಲ್ಲ; ಇಡೀ ವಿಶ್ವ ಕ್ರಿಕೆಟ್ ಆ ಸಂಭ್ರಮಕ್ಕಾಗಿ ಕಾತರದಿಂದ ಎದುರು ನೋಡುತ್ತಿದೆ. ಎಂಟು ವರ್ಷಗಳ ಬಳಿಕ ಮತ್ತೆ ಐಸಿಸಿ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿರುವ ತೆಂಡೂಲ್ಕರ್ ಈ ಸರಣಿಯಲ್ಲಿ ಮತ್ತೆಷ್ಟು ದಾಖಲೆ ನಿರ್ಮಿಸುತ್ತಾರೊ ಏನೋ?ನಿಜ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾದ ನೆಲದಲ್ಲಿ ಭಾರತಕ್ಕೆ ಇದುವರೆಗೆ ಟೆಸ್ಟ್ ಸರಣಿ ಜಯಿಸಲು ಸಾಧ್ಯವಾಗಿಲ್ಲ. ಈ ಬಗೆಗಿನ ಪ್ರಶ್ನೆಗೆ ಇದುವರೆಗೆ ಉತ್ತರವೇ ಸಿಕ್ಕಿಲ್ಲ. ಹಾಗಾಗಿಯೇ ಕೆಲವರು ಭಾರತದ ನಂಬರ್ ಒನ್ ಸ್ಥಾನವನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಟೆಸ್ಟ್ ಸರಣಿಯಲ್ಲಿ ಆಡಲು ಈ ಡಿಸೆಂಬರ್ ಅಂತ್ಯದಲ್ಲಿ ದೋನಿ ಬಳಗ ದಕ್ಷಿಣ ಆಫ್ರಿಕಾಕ್ಕೆ ತೆರಳುತ್ತಿದೆ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಮುಂಚಿತವಾಗಿಯೇ ಕೆಲ ಆಟಗಾರರನ್ನು ಕಳುಹಿಸಲು ಕೋಚ್ ಕರ್ಸ್ಟನ್ ಯೋಜನೆ ರೂಪಿಸುತ್ತಿದ್ದಾರೆ. ಅದಕ್ಕಾಗಿ ಪ್ರಮುಖ ಆಟಗಾರರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವುದಿಲ್ಲ ಎನ್ನಲಾಗುತ್ತಿದೆ.ಆದರೆ ಬೌಲಿಂಗ್ ವಿಭಾಗದಲ್ಲಿ ಭಾರತ ದುರ್ಬಲವಾಗಿದೆ ಇದನ್ನು ಒಪ್ಪಿಕೊಳ್ಳಲೇಬೇಕು. ಜಹೀರ್ ಖಾನ್‌ಗೆ ಸಮರ್ಥವಾಗಿ ಸಾಥ್ ನೀಡಬಲ್ಲ ಮತ್ತೊಬ್ಬ ವೇಗಿ ಇಲ್ಲ. ಅನಿಲ್ ಕುಂಬ್ಳೆ ಬಳಿಕ ಪಂದ್ಯ ಗೆದ್ದುಕೊಡಬಲ್ಲ ಸಮರ್ಥ ಸ್ಪಿನ್ನರ್ ಇಲ್ಲ. ಈ ಮಾತನ್ನು ನಾಯಕ ದೋನಿ ಕೂಡ ಒಪ್ಪಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.