ಸೋಮವಾರ, ಮೇ 17, 2021
30 °C

ಅಧಿಕಾರದ ಹಗಲುಗನಸು ಬೇಡ: ಎಂಪಿಆರ್ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: `ಕಾಂಗ್ರೆಸ್‌ಗೆ ಬನ್ನಿ-ಬದಲಾವಣೆ ತನ್ನಿ~ ಅಭಿಯಾನ ಪ್ರಾರಂಭಿಸಿರುವ ಕಾಂಗ್ರೆಸ್ ನಾಯಕರ ಸ್ಥಿತಿ ಶೋಚನೀಯವಾಗಿದೆ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.ಅಧಿಕಾರ ಕಳೆದುಕೊಂಡು ನೀರಿನಿಂದ ಹೊರತೆಗೆದ ಮೀನಿನಂತಾಗಿರುವ ಕಾಂಗ್ರೆಸ್ ನಾಯಕರು, ರಾಜ್ಯದಲ್ಲಿ ಅಧಿಕಾರ ಹಿಡಿಯುವ ಹಗಲುಗನಸು ಕಾಣುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಉತ್ತಮ ಕೆಲಸಗಳು, ಜನಪರ ಆಡಳಿತ ನೋಡಿರುವ ಜನತೆ ಯಾವುದೇ ಕಾರಣಕ್ಕೂ ಬದಲಾವಣೆ ಬಯಸುವುದಿಲ್ಲ. ಇದು ಕಾಂಗ್ರೆಸ್‌ನ ಭ್ರಮೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಟೀಕಿಸಿದರು.ತಮ್ಮದೆಲ್ಲವನ್ನೂ ದೇಶಕ್ಕಾಗಿ ಅರ್ಪಿಸಿದ ಅಂದಿನ ಕಾಂಗ್ರೆಸ್ ನಾಯಕರ ಒಂದೇ ಒಂದು ಗುಣಗಳೂ ಇಂದಿನವರಲ್ಲಿ ಇಲ್ಲ. ಇಂದಿನ ಮುಖಂಡರು ಸ್ವಾರ್ಥ ಸಾಧಕರು ಎಂದು ಹರಿಹಾಯ್ದರು.ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ನಡೆಸಿದ್ದ `ಕಾಂಗ್ರೆಸ್ ನಡಿಗೆ-ಹಳ್ಳಿ ಕಡೆಗೆ~ ಕಾರ್ಯಕ್ರಮ ಯಶಸ್ವಿಯಾಗಲಿಲ್ಲ. ಜನತೆ ಕಾಂಗ್ರೆಸ್ಸಿಗರನ್ನು ಮನೆಗೆ ಕಳುಹಿಸಿದ್ದರು. ಈಗ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂಬ ಒಂದಂಶದ ಕಾರ್ಯಕ್ರಮ ಹಾಕಿಕೊಂಡಂತಿರುವ ಕಾಂಗ್ರೆಸ್ ಮುಖಂಡರಿಗೆ ಜನತೆ ಸಕಾಲದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಇನ್ನೂ 20 ವರ್ಷಗಳ ಕಾಲ ಕಾಂಗ್ರೆಸ್‌ಗೆ ಪ್ರತಿಪಕ್ಷ ಸ್ಥಾನವೇ ಗತಿ ಎಂದರು.ಜೆಡಿಎಸ್‌ನ ಸ್ಥಿತಿ `ಆಟಕ್ಕುಂಟು ಲೆಕ್ಕಕ್ಕಿಲ್ಲ~ ಎಂಬಂತಾಗಿದೆ. ಅದು ಅತ್ತ ರಾಷ್ಟ್ರೀಯ ಪಕ್ಷವೂ ಅಲ್ಲ, ಇತ್ತ ಪ್ರಾದೇಶಿಕ ಪಕ್ಷವೂ ಅಲ್ಲ. ಆದರೆ, ಸ್ಥಾನ-ಮಾನದ ಆಸೆಗೆ ಜೋತುಬಿದ್ದವರಂತೆ ಎಚ್.ಡಿ. ದೇವೇಗೌಡ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು ಟೀಕಿಸಿದರು.ರಾಜ್ಯದಲ್ಲಿ ಬರಗಾಲದಿಂದ ಜನರು ತತ್ತರಿಸಿದ್ದು, ಕೇಂದ್ರ ಸರ್ಕಾರ ತಕ್ಷಣ ರಾಜ್ಯಕ್ಕೆ ರೂ. 5000 ಕೋಟಿ ಬಿಡುಗಡೆ ಮಾಡಬೇಕು. ಪ್ರಧಾನಿ ಡಾ.ಮನಮೋಹನ್ ಸಿಂಗ್ ಶೀಘ್ರದಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.ಕೇಂದ್ರ ಸರ್ಕಾರದಲ್ಲಿ ರಾಜ್ಯದ ನಾಲ್ಕು ಮಂದಿ ಸಚಿವರಿದ್ದಾರೆ. ರಾಜ್ಯದ ಸ್ಥಿತಿ-ಗತಿಯ ಅರಿವಿರುವ ಪ್ರಭಾವಿ ಸಂಸದರಿದ್ದಾರೆ. ಇವರೆಲ್ಲರೂ ರಾಜ್ಯಕ್ಕೆ ಬರಪರಿಹಾರ ಕಾಮಗಾರಿಗೆ ಹಣ ಬಿಡುಗಡೆ ಮಾಡಿಸಿ ತಮ್ಮ ಜವಾಬ್ದಾರಿ ಮೆರೆಯುವುದು ಬಿಟ್ಟು ಅಧಿಕಾರಕ್ಕಾಗಿ ಹಪಹಪಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎ.ಬಿ. ಹನುಮಂತಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಾಂತರಾಜ್ ಪಾಟೀಲ್ ಬಲಮುರಿ, ಪಟ್ಟಣಶೆಟ್ಟಿ ಪರಮೇಶ್ವರಪ್ಪ, ಸಣ್ಣಕ್ಕಿ ಬಸವನಗೌಡ, ಧರ್ಮಪ್ಪ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.