ರಾಜ್ಯದ ಶಾಸಕರು ತಾವು ಜನಪ್ರತಿನಿಧಿಗಳೆಂಬುದನ್ನು ಪ್ರಾಯಶಃ ಚುನಾಯಿತರಾದ ದಿನದಿಂದಲೇ ಮರೆತಿರುವಂತೆ ತೋರುತ್ತದೆ. ಶಾಸಕರ ಕರ್ತವ್ಯ ಜನತೆಯ ಅನುಕೂಲಕ್ಕಾಗಿ ಶಾಸನಗಳನ್ನು ರೂಪಿಸುವುದು. ಇರುವ ಶಾಸನಗಳು ಲೋಪಗಳಿಂದ ಕೂಡಿದ್ದರೆ ಅವನ್ನು ಮುಕ್ತವಾಗಿ ಚರ್ಚಿಸಿ ತಿದ್ದುಪಡಿ ತರುವುದು. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕಾನೂನು ರೂಪಿಸುವ ಪರಮಾಧಿಕಾರ ಅವರದು. ಕಾನೂನುಗಳು ಜನಪ್ರತಿನಿಧಿಗಳ ಮುಕ್ತ ಚರ್ಚೆಯ ನಂತರ ಅಂಗೀಕಾರವಾಗಬೇಕೆಂಬ ಉದ್ದೇಶದಿಂದ ವರ್ಷದಲ್ಲಿ ಕನಿಷ್ಠ 60 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯಬೇಕು ಎಂಬುದು ಅಂಗೀಕೃತ ಸಂಸದೀಯ ಪದ್ಧತಿ. ಈಗ ಅಸ್ತಿತ್ವದಲ್ಲಿರುವ ರಾಜ್ಯದ 13ನೇ ವಿಧಾನ ಸಭೆ ಇದುವರೆಗಿನ ನಾಲ್ಕು ವರ್ಷಗಳಲ್ಲಿ ಒಟ್ಟು 240 ದಿನಗಳ ಕಾಲ ಅಧಿವೇಶನ ನಡೆಸಿ ಜನಪರ ಕಾಯ್ದೆಗಳನ್ನು ರೂಪಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕಿತ್ತು. ಆದರೆ ಇದುವರೆಗೆ ಕಲಾಪ ನಡೆದಿರುವುದೇ 142 ದಿನಗಳ ಕಾಲ. ಅದರಲ್ಲಿಯೂ ಪ್ರತಿಭಟನೆ, ಸಭಾತ್ಯಾಗ, ಧರಣಿ, ಆರೋಪ- ಪ್ರತ್ಯಾರೋಪಗಳಿಂದ ಕಳೆದ ದಿನಗಳೇ ಹೆಚ್ಚು. ಈ ಅವಧಿಯಲ್ಲಿ ಜನತೆ ಎದುರಿಸಿದ ನೆರೆಹಾವಳಿ, ವಿದ್ಯುತ್ ಕೊರತೆ, ಬರ ಪರಿಸ್ಥಿತಿ ಇತ್ಯಾದಿ ಜ್ವಲಂತ ಸಮಸ್ಯೆಗಳ ನಿವಾರಣೆ ಕುರಿತಂತೆ ಅರ್ಥಪೂರ್ಣ ಚರ್ಚೆ ವಿಧಾನಮಂಡಲದಲ್ಲಿ ನಡೆದ ನಿದರ್ಶನಗಳಿಲ್ಲ.

ರಾಜ್ಯದ ಜನಪ್ರತಿನಿಧಿಗಳಿಗೆ ಸಂಬಂಧಿಸಿ ಅವರನ್ನು ಆಯ್ಕೆ ಮಾಡಿದ ಮತದಾರರು ಈ ನಾಲ್ಕು ವರ್ಷಗಳಲ್ಲಿ ಕಂಡಿದ್ದೆಲ್ಲ ಅಧಿಕಾರಕ್ಕಾಗಿ ಹೋರಾಟ, ಬಹುಮತ ಗಳಿಸಿಕೊಳ್ಳುವುದಕ್ಕಾಗಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅಣಕಿಸುವಂತೆ ನಡೆಸಿದ ಆಪರೇಷನ್ ಕಮಲದಂತಹ ಅನೈತಿಕ ತಂತ್ರಗಾರಿಕೆ. ಅಕ್ರಮ ಗಣಿಗಾರಿಕೆಯ ಮೂಲಕ ರಾಜ್ಯದ ನೈಸರ್ಗಿಕ ಸಂಪತ್ತಿನ ವ್ಯವಸ್ಥಿತ ಲೂಟಿ. ಅಧಿಕಾರ ಉಳಿಸಿಕೊಳ್ಳುವುದಕ್ಕೆ ರೆಸಾರ್ಟ್ಗಳಲ್ಲಿ ಗುಂಪು ಸೇರಿ ಹಾಕಿದ ಒತ್ತಡ ತಂತ್ರ; ಭ್ರಷ್ಟಾಚಾರ, ಅತ್ಯಾಚಾರ, ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಮೊದಲಾದ ಅಕ್ರಮ ಅವ್ಯವಹಾರಗಳ ಕಾರಣ ಹಲವು ಸಚಿವರು ರಾಜೀನಾಮೆ ನೀಡಿದ್ದಲ್ಲದೆ, ಕೆಲವರು ಜೈಲು ಸೇರುವಂತಾಗಿರುವ ಪ್ರಕರಣಗಳು. ವಿಧಾನ ಮಂಡಲ ಅಧಿವೇಶನ ಸುಸೂತ್ರವಾಗಿ ನಡೆದ ಅಪರೂಪದ ದಿನಗಳಲ್ಲಿ ಚರ್ಚೆಯಿಲ್ಲದೆ ಅಂಗೀಕರಿಸಿದ ನಿರ್ಣಯಗಳೆಂದರೆ ಸಚಿವರು, ಶಾಸಕರ ವೇತನ ಭತ್ಯೆಗಳನ್ನು ಹೆಚ್ಚಿಸಿಕೊಂಡ ಪ್ರಸ್ತಾವನೆಗಳು ಮಾತ್ರ. ವಿಧಾನಮಂಡಲದ ವಿವಿಧ ಸಮಿತಿಗಳ ಸದಸ್ಯರಾಗಿ ಶಾಸಕರಿಗೆ ಅಧ್ಯಯನದ ನೆಪದಲ್ಲಿ ದೇಶದಲ್ಲಿ ಮೂರು ಸಲ ಮತ್ತು ಒಂದು ಸಲ ವಿದೇಶ ಪ್ರವಾಸದ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಇದಕ್ಕೆ ಜನತೆಯ ತೆರಿಗೆಯ ಹಣ ವೆಚ್ಚವಾಗಿದೆ. ಇಷ್ಟು ಸಾಲದು ಎಂಬಂತೆ ತಮಗೆ ಎರಡು ಸಲ ವಿದೇಶ ಪ್ರವಾಸಕ್ಕೆ ಅವಕಾಶ ಕಲ್ಪಿಸಬೇಕು ಎಂದು ಶಾಸಕರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇದು ಅವರ ಅಧಿಕಾರಮದದ ಸಂಕೇತ. ಇದನ್ನು ಪರಿಗಣಿಸುವ ಮೊದಲು ಸರ್ಕಾರ ಶಾಸಕರು ಸ್ವದೇಶದಲ್ಲಿ ಮಾಡಿದ ಪ್ರವಾಸ ಮತ್ತು ವಿದೇಶಗಳಿಗೆ ನೀಡಿದ ಭೇಟಿಯಿಂದ ರಾಜ್ಯಕ್ಕೆ ಏನೇನು ಲಾಭವಾಗಿದೆ ಎಂಬುದರ ವಿವರವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಜನ ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವಾಗ ವಿದೇಶ ಪ್ರವಾಸಕ್ಕೆ ಅವಕಾಶ ಕೋರುವ ಮೂಲಕ ತಮ್ಮ ಅಮಾನವೀಯ ಮುಖವನ್ನು ಶಾಸಕರು ತೋರಿಸಿಕೊಂಡಿದ್ದಾರೆ. ಇದು ತಮ್ಮ ಪ್ರತಿನಿಧಿ ಎಂಥವರಿರಬೇಕು ಎಂಬ ಬಗ್ಗೆ ಮತದಾರರಿಗೆ ಪಾಠವಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.