ಸೋಮವಾರ, ಮೇ 16, 2022
27 °C

ಅಧ್ಯಕ್ಷೆ-ಸದಸ್ಯರಿಂದಲೇ ಪುರಸಭೆಗೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ಪಟ್ಟಣದಲ್ಲಿ ಕುಡಿಯುವ ನೀರು, ವಿದ್ಯುತ್ ದೀಪ, ಹಾಗೂ ಕೊಳಚೆ ನಿರ್ವಹಣೆಯಲ್ಲಿ ಕೆಲ ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ. ಸೂಕ್ತ ಆಡಳಿತ ನಿರ್ವಹಿಸುವುದರಲ್ಲಿ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವಿಫಲವಾಗಿದ್ದಾರೆ ಎಂದು ಆರೋಪಿಸಿ ಸೋಮವಾರ ಪುರಸಭಾ ಅಧ್ಯಕ್ಷೆ ಸುಜಾತಮ್ಮ ಹಾಗೂ ಉಪಾಧ್ಯಕ್ಷ ಮಹಮದ್ ಜಾಕೀರ್ ನೇತೃತ್ವದಲ್ಲಿ ಸದಸ್ಯರು ಪಕ್ಷಾತೀತವಾಗಿ ಸೋಮವಾರ ಪುರಸಭಾ ಕಚೇರಿಗೆ ಬೀಗ –ಹಾಕಿ ಪ್ರತಿಭಟಿಸಿದರು.ಪಟ್ಟಣದ ಸಂತೆ ಮೈದಾನದಲ್ಲಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಗುತ್ತಿಗೆದಾರರ ಸೂಕ್ತ ನಿರ್ವಹಣೆಯಿಲ್ಲದೆ ಕುಡಿಯುವ ನೀರು ಮತ್ತು ಕೊಚ್ಚೆ ನೀರು ಮಿಶ್ರಗೊಂಡು ಮನೆಗೆ ಬರುತ್ತಿದೆ.ಕುಡಿಯುವ ನೀರಿನ ನಿರ್ವಹಣೆ, ವಿದ್ಯುತ್ ದೀಪಗಳ ನಿರ್ವಹಣೆಯಲ್ಲಿ ಭಾರಿ ತೊಂದರೆಯಾಗುತ್ತಿದೆ. ವಾರ್ಡ್‌ಗಳಲ್ಲಿರುವ ಸಮಸ್ಯೆ ಬಗ್ಗೆ ಮುಖ್ಯಾಧಿಕಾರಿ ಹಾಗೂ ಅಧಿಕಾರಿಗಳ ಬಳಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ ಎಂದು ಪುರಸಭಾ ಸದಸ್ಯರು ಒಕ್ಕೊರಲಿನಿಂದ ಅಧಿಕಾರಿಗಳ ವಿರುದ್ಧ ಆರೋಪಗಳ ಸುರಿಮಳೆಗೈದರು.ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ 23 ವಾರ್ಡ್‌ಗಳ ಕೊಳಚೆಯನ್ನು ರಸ್ತೆಗಳ ಮೇಲೆ ರಾಶಿ ರಾಶಿ ಹಾಕಿರುತ್ತಾರೆ. ಈ ಮೊದಲೇ ನಮ್ಮ ಮನೆಯಡಿಯಲ್ಲಿ ಪಟ್ಟಣದ 23 ವಾರ್ಡ್‌ಗಳಲ್ಲಿನ ಜನತೆಯಿಂದ ಮನೆಗಳ ನಿರ್ಮಾಣಕ್ಕೆ ಅರ್ಜಿ ಹಾಕಿಸಲಾಗಿದೆ. ಆದರೆ ಅನೇಕ ತಿಂಗಳಾದರೂ ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಸಿಲ್ಲವಾಗಿದೆ. ಈಗ ನಗರದ ಬಡ ಜನತೆಗೆ ಬಡ್ಡಿ ಸಹಾಯಧನ ಯೋಜನೆಯಡಿ ವಸತಿ ಸೌಕರ್ಯ ಪಡೆಯಲು ನೂತನವಾಗಿ ಅರ್ಜಿ ಸಲ್ಲಿಸಬೇಕಾಗಿದೆ.ಇದರಲ್ಲಿ ಲಗತ್ತಿಸಬೇಕಾದ ದಾಖಲೆಗಳಿಗೆ ಸುಮಾರು 2-3 ಸಾವಿರ ಖರ್ಚಾಗುತ್ತದೆ. ಇದರಲ್ಲಿ ಸುಮಾರು 30 ಸಾವಿರ ಡಿಪಾಸಿಟ್ ಮಾಡಬೇಕು ಎಂದು ತಿಳಿಸಲಾಗಿದೆ. ಆದರೆ ಒಪ್ಪತ್ತಿಗೆ ಅನ್ನವನ್ನು ಸಿದ್ದಪಡಿಸಿಕೊಂಡು ಜೀವನ ಸಾಗಿಸುತ್ತಿರುವ ಸಾಮಾನ್ಯ ಜನತೆಗೆ ಕಟ್ಟಲು ಸಾಧ್ಯವಾಗುವುದಿಲ್ಲ ಎಂದು ಸದಸ್ಯ ಪಿ.ಎಲ್.ಗಣೇಶ್ ಆರೋಪಿಸಿದರು.ಆರೋಪ:

ಪಟ್ಟಣದಲ್ಲಿ ಜನತೆಗೆ ಸಾಮಾನ್ಯ ಮೂಲ ಸೌಕರ್ಯಗಳನ್ನೇ ನೀಡಲು ಸಾಧ್ಯವಾಗುತ್ತಿಲ್ಲ. ವಾರ್ಡ್‌ನಲ್ಲಿರುವ ಸಮಸ್ಯೆ ಬಗ್ಗೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗೆ ತಿಳಿಸಿದರೆ ಸದಸ್ಯರ ಮಾತಿಗೆ ಕಿಂಚಿತ್ ಬೆಲೆ ಇಲ್ಲದ ರೀತಿಯಲ್ಲಿ ವರ್ತಿಸಲಾಗುತ್ತಿದೆ. ವಾರ್ಡ್‌ನಲ್ಲಿರುವ ಕುಡಿಯುವ ನೀರು, ವಿದ್ಯುತ್ ದೀಪ ಹಾಗೂ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗ್ಗೆ ವಾರಕ್ಕೊಮ್ಮೆಯಾದರೂ ಮುಖ್ಯಾಧಿಕಾರಿಗಳು ಭೇಟಿ ನೀಡುತ್ತಿಲ್ಲವಾಗಿದೆ. ಕೇವಲ ಕಚೇರಿಗೆ ಸೀಮಿತವಾದ ಮುಖ್ಯಾಧಿಕಾರಿಗಳು ಸಮಸ್ಯೆ ಬಗ್ಗೆ ಅರಿಯಲು ವಾರ್ಡ್‌ಗಳಿಗೆ ಭೇಟಿ ನೀಡಬೇಕಾಗಿದೆ. ಸೂಕ್ತ ರೀತಿಯಲ್ಲಿ ಆಡಳಿತ ನಡೆಸಿ ಇಲ್ಲವಾದರೆ ಬೇರಡೆ ವರ್ಗಾಯಿಸಿಕೊಂಡು ಹೋಗಿ ಎಂದು ಮುಖ್ಯಾಧಿಕಾರಿಗಳ ವಿರುದ್ಧ ಸದಸ್ಯ ಮಹಮದ್ ಕಲೀಮುಲ್ಲಾ ಕೆಂಡಮಂಡಲವಾದರು.ಮಧ್ಯಾಹ್ನದ ವೇಳೆಯವರೆಗೂ ಮುಂದುವರಿದ ಪ್ರತಿಭಟನಾ ಸ್ಥಳಕ್ಕೆ ವಿಷಯ ತಿಳಿದ ಕೊಡಲೇ ತಹಶೀಲ್ದಾರ್ ಟಿ.ಎ.ಹನುಮಂತರಾಯ ಭೇಟಿ ನೀಡಿದರು. ನಂತರ ಪುರಸಭಾ ಉಪಾಧ್ಯಕ್ಷರ ಕೊಠಡಿಯಲ್ಲಿ ಸಂಧಾನ ಸಭೆಯಲ್ಲಿ ಕುಡಿಯುವ ನೀರು, ವಿದ್ಯುತ್ ದೀಪ ಹಾಗೂ ತ್ಯಾಜ್ಯ ವಿಲೇವಾರಿಗಳ ಬಗ್ಗೆ ಅನೇಕ ಸಮಸ್ಯೆಗಳನ್ನು ತಹಶೀಲ್ದಾರ್ ಗಮನಕ್ಕೆ ತಂದರು.ಕುಡಿಯುವ ನೀರಿನ ಘಟಕದಲ್ಲಿ ನೀರನ್ನು ಸೂಕ್ತ ರೀತಿಯಲ್ಲಿ ಗುತ್ತಿಗೆದಾರರಿಗೆ ಆದೇಶ ನೀಡಿ ಸದಸ್ಯರ ಒಪ್ಪಿಗೆ ಮೇರೆಗೆ ಗುತ್ತಿಗೆ ರದ್ದುಗೊಳಿಸಿ ಎಂದು ಮುಖ್ಯಾಧಿಕಾರಿ ಸುಧಾಕರ್ ಅವರಿಗೆ ತಿಳಿಸಿದರು. ವಾರ್ಡ್‌ನ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆಯಲ್ಲಿ ಸಮಾಲೋಚಿಸಿ ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಸಂಧಾನ ಸಭೆಯಲ್ಲಿ ತಿಳಿಸಿದಾಗ ಸದಸ್ಯರು ಪ್ರತಿಭಟನೆಯನ್ನು ವಾಪಸ್ ಪಡೆದರು.ಪ್ರತಿಭಟನೆಯಲ್ಲಿ ಪುರಸಭಾ ಅಧ್ಯಕ್ಷೆ ಸುಜಾತಮ್ಮ, ಉಪಾಧ್ಯಕ್ಷ ಮಹಮದ್ ಜಾಕೀರ್, ಸದಸ್ಯರಾದ ಮಹಮದ್ ಎಸ್.ನೂರುಲ್ಲಾ, ಮಹಮದ್ ಜಾಕೀರ್, ಪಿ.ಎಲ್.ಗಣೇಶ್, ಕಲೀಮುಲ್ಲಾ, ಅಬ್ದುಲ್ ಮಜೀದ್, ಒಬಲೇಶು, ನರಸಿಂಹಪ್ಪ, ಶಂಕರ ಇತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.