ಬುಧವಾರ, ಮಾರ್ಚ್ 3, 2021
22 °C

ಅನಘಾ ಗೀತ ಗಾಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಘಾ ಗೀತ ಗಾಯನ

ಬೆಂಗಳೂರಿನಲ್ಲಿ ಇದೀಗ ತಾನೆ  ಮಳೆಗಾಲ ಆರಂಭವಾಗಿದೆ. ವರ್ಷವಿಡೀ ದುಡಿಯುವ ಮನಸ್ಸುಗಳಿಗೆ ಶನಿವಾರ ಹಾಗೂ ಭಾನುವಾರ ನೆಮ್ಮದಿಯುಣಿಸುವ ದಿನಗಳಿದ್ದಂತೆ. ಶಾಪಿಂಗ್ ಮಾಡುವುದರಲ್ಲೋ, ಸಣ್ಣ ಪ್ರವಾಸ ಮಾಡುವುದರಲ್ಲೋ ತಮ್ಮ ವಾರದ ಆಯಾಸ ನೀಗಿಕೊಳ್ಳುವುದು ಸಹಜ.ಅದರ ಜೊತೆಗೆ ಸಂಗೀತ, ಸಾಹಿತ್ಯದ ಒಡನಾಟ ಇಟ್ಟುಕೊಂಡು ತಮ್ಮ ಸಮಯವನ್ನು ಉತ್ತಮ ರೀತಿಯಲ್ಲಿ ಕಳೆಯುವ ಅಭಿರುಚಿಯುಳ್ಳ ವರ್ಗವೂ ಈ ನಗರದಲ್ಲಿದೆ. ಇಂಥವರು ಬೆಚ್ಚಗೆ ಮನೆಯಲ್ಲೇ ಕುಳಿತು ಓದುತ್ತಲೋ ಅಥವಾ ಸಂಗೀತ ಆಸ್ವಾದಿಸಲೋ ಇಷ್ಟಪಡುತ್ತಾರೆ.ಇಂಥ ಅಭಿರುಚಿಯುಳ್ಳವರಿಗೆ ಕಳೆದ ಶನಿವಾರ ಮಲ್ಲೇಶ್ವರಂನ ಎಂ.ಇ.ಎಸ್ ಕಾಲೇಜಿನಲ್ಲಿ ಅನಘಾ ಭಟ್ ಅವರ ಸಂಗೀತದ ಮೂಲಕ ಬೆಚ್ಚನೆಯ ಸಂಗೀತ-ಸಾಂಗತ್ಯವನ್ನು ಅನುಭವಿಸಲು ಅನುವು ಮಾಡಿಕೊಟ್ಟದ್ದು ಎಂ.ಇ.ಎಸ್ ಕಲಾವೇದಿ ವೇದಿಕೆ.ಮೂಲತಃ ಕಂಪ್ಯೂಟರ್ ಎಂಜಿನಿಯರ್ ಆಗಿರುವ ಅನಘಾ, ಸುಮಾರು 12 ವರ್ಷಗಳಿಂದ ವಿದುಷಿ ಗೀತಾ ಹೆಗಡೆಯವರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸುತ್ತಿರುವ ಉದಯೋನ್ಮುಖ ಪ್ರತಿಭೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಾಲ ಪ್ರತಿಭೆ, ಕಿಶೋರ ಪ್ರತಿಭೆಗಳಂಥ ಪ್ರಶಸ್ತಿಗಳೊಂದಿಗೆ ಇನ್ನೂ ಹಲವಾರು ಪುರಸ್ಕಾರಗಳನ್ನು ಇವರು ಪಡೆದಿದ್ದಾರೆ.ಅಂದಿನ ಸಂಜೆ ಹೆಚ್ಚೂ ಕಡಿಮೆ ಮಳೆ ಜೋರಾಗಿಯೇ ಇದ್ದುದ್ದರಿಂದ ಶ್ರೋತೃಗಳ ಅಭಾವ ಕಾಣಿಸಬಹುದು ಎಂದುಕೊಂಡಿದ್ದರೂ, ಆ ಪುಟ್ಟ ಸಭಾಂಗಣದ ಮುಕ್ಕಾಲು ಭಾಗ ಸಂಗೀತ ಕೇಳಲು ಕುಳಿತಿದ್ದ ಜನರನ್ನು ನೋಡಿ ಖುಷಿಯಾಯಿತು. (ಆದರೆ ಯುವಜನತೆ ಅದರಲ್ಲಿ ಬೆರಳೆಣಿಕೆಯಷ್ಟು ಮಾತ್ರವೇ ಇದ್ದರು ಅನ್ನುವುದು ವಿಷಾದ). ಮೊದಲಿಗೆ ವಿಲಂಬಿತ್ ಖ್ಯಾಲ್‌ನಲ್ಲಿ ಮಾರು ಬಿಹಾಗ್ ರಾಗದೊಂದಿಗೆ ತಮ್ಮ ಗಾಯನ ಆರಂಭಿಸಿದರು.

ಸಮಜತ ನಾಹಿ ಮಾನನತ ನಾಹಿ ಕಾನಾನತುಮ್ಹೋರಾ ನಂದ ದುಲಾರಿ.. .. ..

ಎಂಬ ಖ್ಯಾಲ್ ಆರಂಭಿಸಿದಾಗಲೇ ಅವರ ಅದ್ಭುತ ಕಂಠದ ಹಾಗೂ ಸತತ ಸಂಗೀತಾಭ್ಯಾಸದ ಪರಿಚಯವಾಯಿತು. `ಆಯೋ ಮೋರಾರೆ ಮೋರಾಜಿಯನ ನೈನಾ ಲಗಾ ಲಗಾಯಿ~ ಎಂಬ ಚೋಟಾ ಖ್ಯಾಲ್‌ನೊಂದಿಗೆ ಮಾರು ಬಿಹಾಗ್ ರಾಗದ ಹಾಡುಗಾರಿಕೆ ಮುಗಿಸಿದರು. ಈ ರಾಗವನ್ನು ಪ್ರಸ್ತುತಪಡಿಸುವಾಗಲಂತೂ ಗುರುಮೂರ್ತಿಯವರ ತಬಲಾ ಸಾಥ್ ಎಲ್ಲರ ಮನಸೂರೆಗೊಂಡಿತ್ತು.

ಎರಡನೆಯದಾಗಿ ರಾಗೇಶ್ರೀ ರಾಗದಲ್ಲಿ,ಆಯೋರೆ ಜೀತ ಲಂಕಾ ನಗರ ಜೀತ......

ಖ್ಯಾಲನ್ನು ಉತ್ತಮವಾಗಿ ಹಾಡಿದರು. ಕೊನೆಗೆ `ಬನ ಬನ ಚಲೆ ರಾಮ ರಘು ರಾಮ~ ಎಂಬ ರಾಮ ಭಜನೆ ಹಾಗೂ ಭೈರವಿ ರಾಗದಲ್ಲಿ `ಅರಜ ಸುನೋ ಮೋರಿ~ ಎಂಬ ಇನ್ನೊಂದು ಭಜನೆಯನ್ನು ಹಾಡುವ ಮೂಲಕ ಕಾರ್ಯಕ್ರಮವನ್ನು ಅಂತ್ಯಗೊಳಿಸಿದರು. ಇಡೀ ಕಾರ್ಯಕ್ರಮ ಕೇಳಿದಾಗ ಸರ್‌ಗಮ್ ಅಥವಾ ತಾನ್ ಹಾಡುವುದಕ್ಕಿಂತ ವಿಲಂಬಿತ್ ಖ್ಯಾಲ್ ಹಾಡುಗಾರಿಕೆಯಲ್ಲಿಯೇ ಹೆಚ್ಚು  ಪ್ರಬುದ್ಧತೆ ಇದ್ದುದು ಕಂಡುಬಂದಿತು.ಇವರ ಗಾಯನಕ್ಕೆ ಗುರುಮೂರ್ತಿ ವೈದ್ಯರು ತಬಲಾ ಸಾಥ್ ನೀಡಿದರು. ಸದ್ಯಕ್ಕೆ ಬೆಂಗಳೂರಿನಲ್ಲಿ ಅತ್ಯಂತ ಬೇಡಿಕೆಯ ಕಲಾವಿದರಾದ ಇವರು ಅರಳು ಪ್ರತಿಭೆಗೆ ವೇದಿಕೆಯಲ್ಲೇ ಸಣ್ಣ ಸಣ್ಣ ಸೂಚನೆಗಳನ್ನು ನೀಡುತ್ತ ಸಾಥ್ ಮಾಡಿದ ರೀತಿ ಅಮೋಘವಾಗಿತ್ತು. ಜೊತೆಗೆ ಸತೀಶ್ ಕೊಳ್ಳಿಯವರ ಉತ್ತಮ ಹಾರ್ಮೋನಿಯಂ ಸಾಥ್ ಸಹ ಗಮನಾರ್ಹವಾಗಿತ್ತು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.