ಶುಕ್ರವಾರ, ಜನವರಿ 24, 2020
27 °C
ದೃಶ್ಯ ಕಲಾ ಕಾಲೇಜು ಜಾಗ ಕಬಳಿಕೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಅನಧಿಕೃತ ಕಾಮಗಾರಿಗೆ ಪಾಲಿಕೆ ಸಾರಥ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಧಿಕೃತ ಕಾಮಗಾರಿಗೆ ಪಾಲಿಕೆ ಸಾರಥ್ಯ!

ದಾವಣಗೆರೆ: ನಗರದ ದೃಶ್ಯಕಲಾ ಕಾಲೇಜಿನ ಜಾಗದಲ್ಲಿ ಅನಧಿಕೃತ ಕಾಮಗಾರಿ ಕೈಗೊಂಡಿರುವುದು ಮಹಾನಗರ ಪಾಲಿಕೆ!

ಕಾಲೇಜಿನ ಮೂಲೆ ನಿವೇಶನದಲ್ಲಿ ನಡೆಯುತ್ತಿದ್ದ ಅನಧಿಕೃತ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸೋಮವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಇಂತಹ ಅಘಾತಕಾರಿ ವಿಚಾರ ಬೆಳಕಿಗೆ ಬಂತು.ಕಾಮಗಾರಿ ತಡೆಯಲು ಹೋದಾಗ ವಿದ್ಯಾರ್ಥಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗುತ್ತಿಗೆದಾರ ಶಿವಕುಮಾರ್‌, ‘ನೀವು ಏನು ಕೇಳುವುದಿದ್ದರೂ ಪಾಲಿಕೆ ಎಂಜಿನಿಯರ್‌ ನಟರಾಜ್ ಹಾಗೂ ಆಯಕ್ತ ನಾರಾಯಣಪ್ಪ ಅವರನ್ನು ಕೇಳಿ. ನಾವು ಪಾಲಿಕೆಯಿಂದ ಟೆಂಡರ್‌ ಪಡೆದು ಮೆಟ್ಲಿಂಗ್‌ ಮಾಡುತ್ತಿದ್ದೇವೆ. ಕಾಮಗಾರಿಗೆ ಅಡ್ಡಿ ಮಾಡಬೇಡಿ’ ಎಂದರು.ಇದರಿಂದ ಕೆರಳಿದ ವಿದ್ಯಾರ್ಥಿಗಳು ಕಾಲೇಜಿನ ದಾಖಲೆಗಳನ್ನು ಪ್ರದರ್ಶಿಸಿ, ಇದು ಕಾಲೇಜಿನ ಜಾಗ. ವಿವಿ ಅನುಮತಿ ಇಲ್ಲದೇ ಈ ಜಾಗದಲ್ಲಿ ಅನಧಿಕೃತ ಕಾಮಗಾರಿ ಕೈಗೊಂಡಿರುವುದು ನಿಯಮ ಬಾಹಿರ. ಹಿಂದೆಯೂ ಈ ರೀತಿ ಬಲಾಢ್ಯರು ಕಾಲೇಜಿನ ಜಾಗ ಕಬಳಿಸಿದ್ದಾರೆ. ಇಂತಹ ಕಬಳಿಕೆಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆ ಜಾಗದಲ್ಲಿ ವಿಶ್ವವಿದ್ಯಾಲಯ ಹಾಸ್ಟೆಲ್‌, ಇಲ್ಲವೇ ಉದ್ಯಾನ ನಿರ್ಮಿಸಬೇಕು. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ವಿಶ್ವವಿದ್ಯಾಲಯ ಯಾವುದೇ ಕ್ರಮ ಕೈಗೊಂಡಿಲ್ಲ.  ಇನ್ನಾದರೂ ದಾವಣಗೆರೆ ವಿವಿ ಎಚ್ಚೆತ್ತುಕೊಂಡು ತಡೆಬೇಲಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸಿದರೂ, ವಿವಿ ಅಧಿಕಾರಿಗಳಾಗಲಿ, ಪಾಲಿಕೆ ಆಯುಕ್ತ, ಎಂಜಿನಿಯರ್‌ ಆಗಲಿ ಸ್ಥಳಕ್ಕೆ ಬರಲಿಲ್ಲ. ಸರ್ಕಾರದ ಜಾಗ ಯಾರ ಸ್ವತ್ತು? ಅಧಿಕಾರಿಗಳೇಕೆ ಈ ರೀತಿ ಲಾಬಿಗೆ ಮಣಿಯುತ್ತಾರೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.ಶಂಕರ್‌, ಪ್ರಮೋದ್, ಲೋಕೇಶ್‌, ಹರೀಶ್‌, ಚಂದ್ರು, ಹಾಲೇಶ್‌, ವರದರಾಜ್‌, ಸಿಂಚನಾ, ದೀಪಾ, ಕರಣ್‌, ವೀರೇಶ್‌ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಬೇಲಿಯೇ ಹೊಲ ಮೇಯ್ದ ಕತೆ...

ದೃಶ್ಯಕಲಾ ಕಾಲೇಜಿನ ಜಾಗದಲ್ಲಿ ವಿದ್ಯಾನಗರಕ್ಕೆ ಹೋಗಲು ರಸ್ತೆ ನಿರ್ಮಾಣಕ್ಕಾಗಿ ಕಾಲೇಜಿನ ಜಾಗದಲ್ಲಿ 20 ಅಡಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಯ ಜಾಗದಲ್ಲಿ 20 ಅಡಿ ಬಿಟ್ಟುಕೊಡಲು 1978ರಲ್ಲಿ ಒಪ್ಪಂದಕ್ಕೆ ಬರಲಾಗಿತ್ತು. ಅದರಂತೆ ಕಾಲೇಜಿನ 825 ಅಡಿ ರಸ್ತೆಗೆ ನೀಡಲಾಗಿದೆ. ಆದರೆ, ಒಪ್ಪಂದದಂತೆ ಖಾಸಗಿ ಸಂಸ್ಥೆ 20 ಅಡಿ ಜಾಗ ಬಿಟ್ಟಿಲ್ಲ. ಈ ಸಂಬಂಧ 1990ರಲ್ಲಿ ಸರ್ಕಾರ ಒಂದು ಆದೇಶ ಹೊರಡಿಸಿ, ಒಪ್ಪಂದದಂತೆ ಖಾಸಗಿ ಸಂಸ್ಥೆ ಜಾಗ ಬಿಟ್ಟುಕೊಡದೇ ಇರುವ ಕಾರಣ ಮತ್ತೆ ಇನ್ನಷ್ಟು ಜಾಗಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇಷ್ಟೆಲ್ಲ ಆದರೂ ಪಾಲಿಕೆ ವಿವಿ ಜಾಗದಲ್ಲೇ ಅನಧಿಕೃತ ಕಾಮಗಾರಿ ನಡೆಸುತ್ತಿದೆ.ಸರ್ಕಾರದ ಸಂಸ್ಥೆಯೇ ಈ ರೀತಿ ಸರ್ಕಾರದ ಜಾಗವನ್ನು ಕಬಳಿಸಿ, ಖಾಸಗಿ ಸಂಸ್ಥೆಗೆ ಅನುಕೂಲ ಮಾಡಿಕೊಡಲು ಹೋಗುವುದು ಎಷ್ಟು ಸರಿ. ಇದನ್ನು ಪ್ರಶ್ನಿಸಿದರೆ ಗುತ್ತಿಗೆದಾರರು ದೌರ್ಜನ್ಯ ಎಸಗುತ್ತಾರೆ.

– ವಿದ್ಯಾರ್ಥಿಗಳು, ದೃಶ್ಯ ಕಲಾ ಕಾಲೇಜು.ಬೇಲಿ ಹಾಕಿಸಲು ಕೋರಲಾಗಿದೆ

ಕಾಲೇಜಿನ ಜಾಗದಲ್ಲಿ ಅನಧಿಕೃತ ಕಾಮಗಾರಿ ನಡೆಯುತ್ತಿರುವ ಬಗ್ಗೆ ಈಗಾಗಲೇ ವಿಶ್ವವಿದ್ಯಾಲಯಕ್ಕೆ ಪತ್ರ ಬರೆಯಲಾಗಿದೆ. ಕಾಲೇಜಿನ ಜಾಗದಲ್ಲಿ ತಡೆಬೇಲಿ ನಿರ್ಮಿಸಲು ಕೋರಲಾಗಿದೆ. ಸಂಬಂಧಿಸಿದ ದಾಖಲೆ ಕಳುಹಿಸಿಕೊಟ್ಟಿದ್ದೇನೆ. ಅನಧಿಕೃತ ಕಾಮಗಾರಿ ನಿಲ್ಲಿಸಲು ಕೋರಲಾಗಿದೆ.

–ಶ್ರೀನಿವಾಸ್‌, ಸಂಯೋಜಕರು, ದೃಶ್ಯಕಲಾ ಕಾಲೇಜು.ಪಾಲಿಕೆ ಹಣ!

ಕಾಲೇಜಿನ ಮೂಲೆ ನಿವೇಶನ ದಲ್ಲಿ ನಡೆಯುತ್ತಿರುವ ಅಕ್ರಮ ಕಾಮಗಾರಿಗೆ ಪಾಲಿಕೆ ಲಕ್ಷಾಂತರ ರೂಪಾಯಿ ನೀಡಿದೆ. ನಗರದ ಬಹುತೇಕ ರಸ್ತೆಗಳು ಗುಂಡಿಬಿದ್ದು ಅಧ್ವಾನ ಎದ್ದು ಹೋಗಿದ್ದರೂ, ರಸ್ತೆ ದುರಸ್ತಿ ಮಾಡದ ಪಾಲಿಕೆ ಯಾರಿಗೋ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರದ ಹಣ ದಲ್ಲಿ ಅನಧಿಕೃತ ಕಾಮಗಾರಿ ಕೈಗೊಂಡಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

–ಶಂಕರಪ್ಪ, ನಾಗರಿಕ.

 

ಪ್ರತಿಕ್ರಿಯಿಸಿ (+)