ಬುಧವಾರ, ಏಪ್ರಿಲ್ 14, 2021
24 °C

ಅನಧಿಕೃತ ನೀರು ಬಳಕೆ ತಡೆಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿ ಅನಧಿಕೃತ ನೀರು ಪಡೆಯುವುದು ಹೆಚ್ಚಾಗಿದ್ದು, ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದೇ ಇದಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ 4-5 ದಿನದಲ್ಲಿ ಅನಧಿಕೃತವಾಗಿ ನೀರು ಪಡೆಯುವುದನ್ನು ತಡೆಯದೇ ಇದ್ದಲ್ಲಿ ರಾಯಚೂರಿಗೆ ಸಮೀಪ ಇರುವ ಏಳು ಮೈಲ್ ಕ್ರಾಸ್ ಹತ್ತಿರ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಹಾಗೂ ಜಿಲ್ಲೆಯಲ್ಲಿರುವ ಸಂಘದ ಪ್ರಮುಖರು, ಸದಸ್ಯರು ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗ ಅಂದರೆ ಮಸ್ಕಿಯಿಂದ ಮೇಲ್ಭಾಗ ಹಾಗೂ ನೀರಾವರಿ ಇಲಾಖೆ ಸಿಂಧನೂರು ವಿಭಾಗ ವ್ಯಾಪ್ತಿ ಪ್ರದೇಶದ ಕಾಲುವೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಘಾತಕಾರಿ ದೃಶ್ಯಗಳು ಕಂಡವು ಎಂದರು.ಬರಗಾಲ ಇದೆ. ಅದೃಷ್ಟವಶಾತ್ ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗಿ ಜಲಾಶಯ ತುಂಬಿದೆ. ಕಾಲುವೆಗೆ ಬಿಡಲಾಗಿದೆ. 82ನೇ ಉಪಕಾಲುವೆ 47ನೇ ಮೈಲ್‌ಗೆ ಹೋಗಿ ಶನಿವಾರ ತಮ್ಮ ತಂಡ ವೀಕ್ಷಣೆ ಮಾಡಿದೆ. ಕಾಲುವೆಗೆ ನೀರು ಬಿಡಲಾಗಿದ್ದರೂ ಸಮರ್ಪಕ ನಿರ್ವಹಣೆ ಮಾಡಬೇಕಾದ ನೀರಾವರಿ ಇಲಾಖೆ ಎಂಜಿನಿಯರ್‌ಗಳು ಕಾಲುವೆ ಮೇಲೆ ಇಲ್ಲ. ನಿರ್ವಹಣೆಯೂ ಇಲ್ಲ.  ಉಪ-ಕಾಲುವೆ ಗೇಟ್ ತೆರೆದಿವೆ. ಮನಸೋ ಇಚ್ಛೆ ನೀರು ಹರಿಯುತ್ತಿದೆ. ಮೈಲ್ 69ರಲ್ಲಿ  9.8 ಗೇಜ್ ನೀರು ಇರಬೇಕು. ಕೇವಲ 7.4 ಇತ್ತು. ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗಕ್ಕೆ ಹೋದಂತೆಲ್ಲ ಇದೇ ದೃಶ್ಯ ಕಂಡಿದೆ.  ಇದೇ ಸ್ಥಿತಿ ಮುಂದುವರಿದರೆ ಮಾನ್ವಿ ಹಾಗೂ ರಾಯಚೂರು ತಾಲ್ಲೂಕಿಗೆ ನೀರು ದೊರಕುವುದು ಕಷ್ಟ ಎಂದು ಆತಂಕ ವ್ಯಕ್ತಪಡಿದರು.ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗದಲ್ಲಿ (ಮಸ್ಕಿ ಸುತ್ತಮುತ್ತ) ಅನಧಿಕೃತವಾಗಿ ಕಾಲುವೆಯಿಂದ ನೀರು ಪಡೆದು ಬೇಸಾಯ ಮಾಡುವುದು ಈ ವರ್ಷ ಮೀತಿ ಮೀರಿದೆ. ಒಣ ಬೇಸಾಯ ಭೂಮಿಗಳೂ ಗದ್ದೆಗಳಾಗಿವೆ.ಶ್ರೀಮಂತರು ಒಣ ಭೂಮಿ ಪಡೆದು ಗದ್ದೆಗಳನ್ನಾಗಿ ಮಾಡಿದ್ದಾರೆ.  ಮುಖ್ಯ ಕಾಲುವೆ ಪಕ್ಕವೇ ಬೃಹತ್ ಕೆರೆ ಮಾಡಿ ಏರ್ ಪೈಪ್ ಮೂಲಕ ನೀರು ಪಡೆದು ಜಮೀನಿಗೆ ಬಳಸಿಕೊಳ್ಳುತ್ತಿದ್ದಾರೆ. ಕೆಲ ಕಡೆ ಬಾವಿ ಇಲ್ಲ. ಬೋರ್‌ವೆಲ್.ಆದರೆ ವಿದ್ಯುತ್ ಪರಿವರ್ತಕ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದರ ಮೂಲಕ ಅವರು ಕಾಲುವೆ ನೀರು ಪಡೆದು ಬೇಸಾಯ ಆರಂಭಿಸುತ್ತಿದ್ದಾರೆ. ಇಂಥ ಅನೇಕ ದೃಶ್ಯಗಳು ಕಣ್ಣಿಗೆ ಬಿದ್ದಿವೆ.  ಕಾಲುವೆ ಏರ್ ಪೈಪ್ ಅಳವಡಿಸಿ ನೀರು ಪಡೆಯುತ್ತಿರುವುದನ್ನು ತಕ್ಷಣ ಸಿಂಧನೂರು ತಹಸೀಲ್ದಾರ, ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ತಡೆ ಹಿಡಿಯಲಾಗಿದೆ ಎಂದು ಹೇಳಿದರು.ಇದೇ ಸ್ಥಿತಿ ಮುಂದುವರಿದರೆ ರಾಯಚೂರು ತಾಲ್ಲೂಕಿಗೆ ತುಂಗಭದ್ರಾ ಎಡದಂಡೆ ಕಾಲುವೆ ನೀರು ಸಿಗುವುದಿಲ್ಲ. ಮಾನ್ವಿ ತಾಲ್ಲೂಕಿಗೆ ಶೇ 30ರಷ್ಟು ಸಿಗಬಹುದಷ್ಟೇ. ಇದೆಲ್ಲ ಆತಂಕಕಾರಿ ಸಂಗತಿಗಳಾಗಿವೆ. ಇದನ್ನು ಹೋಗಲಾಡಿಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು. ನೀರಾವರಿ ಇಲಾಖೆ ಅಧಿಕಾರಿಗಳ  ಜಂಟಿ ಸಮಿತಿಯು ಕೂಡಲೇ ಕಾಲುವೆಯುದ್ಧಕ್ಕೂ ಭೇಟಿ ಮಾಡಿ ಪರಿಶೀಲನೆ ನಡೆಸಬೇಕು. ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ತುಂಗಭದ್ರಾ ಎಡದಂಡೆ ಕಾಲುವೆ ನೀರು ಬಳಕೆ ಬಗ್ಗೆ ಎರಡೂ ಜಿಲ್ಲೆಯ ಜಿಲ್ಲಾಧಿಕಾರಿ, ನೀರಾವರಿ ಇಲಾಖೆ ಅಧಿಕಾರಿಗಳು, ರೈತ ಪ್ರಮುಖರ ಜಂಟಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಘಟಕವು ಕಾಟಾಚಾರಕ್ಕೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಕೈ ತೊಳೆದುಕೊಂಡಿದೆ. ಕಾಲುವೆಯುದ್ದಕ್ಕೂ ಸಮರ್ಪಕ ನೀರು ನಿರ್ವಹಣೆ ಬಗ್ಗೆ ಗಮನಹರಿಸಬೇಕು. ಬರಗಾಲ ದಿನದಲ್ಲೂ ಜಲಾಶಯಕ್ಕೆ ನೀರು ಬಂದಿದೆ. ಕಾಲುವೆಯ ಮೂಲಕ ಅದರ ಸದ್ಭಳಕ್ಕೆ ಪ್ರಯತ್ನಿಸಬೇಕೇ ಹೊರತು  ನಿರ್ಲಕ್ಷ್ಯವಹಿಸಿದರೆ ಹೇಗೆ ಎಂದು ಪ್ರಶ್ನಿಸಿದರು.ಇಂಥ ಎಲ್ಲ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. 4-5 ದಿನದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸರಿಪಡಿಸದೇ ಇದ್ದಲ್ಲಿ ಭಾರಿ ಪ್ರಮಾಣದ ರೈತರೊಂದಿಗೆ ರಸ್ತೆ ನಡೆಸಲಾಗುವುದು ಎಂದು ಹೇಳಿದರು.

ಸಂಘಟನೆಯ ವೆಂಕೋಬರಾವ್, ವಿಶ್ವನಾಥ ಜೀನೂರು, ವಿರೇಶ ಕಂಬಳಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.