ಮಂಗಳವಾರ, ಏಪ್ರಿಲ್ 13, 2021
31 °C

ಅನವಶ್ಯಕ ಅಪಸ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಕನ್ನಡ ಸಮ್ಮೇಳನ ಜಾಗತಿಕ ಮಟ್ಟದಲ್ಲಿ ಕರ್ನಾಟಕವನ್ನು ಬಿಂಬಿಸುವ ವಿಶೇಷ ಸಂದರ್ಭ. ನಾಡಿನ ಸಮಗ್ರ ಅಭಿವೃದ್ಧಿಯ ಚಿತ್ರಣವನ್ನು ದೇಶ ವಿದೇಶಗಳಿಂದ ಆಗಮಿಸುವ ಆಹ್ವಾನಿತ ಕನ್ನಡಿಗ ಸಾಧಕರ ಮುಂದೆ ನೀಡುವ ಅವಕಾಶ. ನಾಡ ಜನತೆಯ ಒಗ್ಗಟ್ಟಿನ ಪ್ರದರ್ಶನಕ್ಕೆ ಗಡಿ ಜಿಲ್ಲೆಯಾದ ಬೆಳಗಾವಿಯನ್ನು ಆಯ್ಕೆ ಮಾಡಿಕೊಂಡಿರುವುದು ಕೂಡ ಔಚಿತ್ಯಪೂರ್ಣ ನಿರ್ಧಾರ.ಸರ್ಕಾರ ಮತ್ತು ಕನ್ನಡಿಗರೆಲ್ಲ ನಮ್ಮೊಂದಿಗೆ ಇದ್ದಾರೆ ಎಂಬ ಭಾವನಾತ್ಮಕ ಸಮಾಧಾನ ಉತ್ತರ ಕರ್ನಾಟಕ ಮತ್ತು ಗಡಿಭಾಗದ ಕನ್ನಡಿಗರಲ್ಲಿ ಮೂಡಲು ಇದು ಸಹಾಯಕ. ನಾಡಿನ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ಇಂಥ ಮಹತ್ವದ ಸಮ್ಮೆಳನವನ್ನು ಉದ್ಘಾಟಿಸಲು ಕನ್ನಡಿಗ ಉದ್ಯಮಿ, ಐ.ಟಿ ಕ್ಷೇತ್ರದ ಹರಿಕಾರ ಎನ್.ಆರ್. ನಾರಾಯಣಮೂರ್ತಿ ಅವರನ್ನು ಸರ್ಕಾರ ಆಹ್ವಾನಿಸಿರುವುದು ಕೆಲವು ವಲಯಗಳಲ್ಲಿ ಅಪಸ್ವರ ಏಳಲು ಕಾರಣವಾಗಿರುವುದು ಅನವಶ್ಯಕ.ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಧನೆಗಾಗಿ ಜಗತ್ತಿನ ಗಮನವನ್ನು ಕರ್ನಾಟಕದತ್ತ ಸೆಳೆದ ನಾರಾಯಣಮೂರ್ತಿ ಅವರು ಒಂದೆರಡು ಹೇಳಿಕೆಗಳಿಗೆ ವಿರೋಧ ವ್ಯಕ್ತವಾಗಿರುವಂತಿದೆ. ಅವರು ಪ್ರತಿಪಾದಿಸಿದ ಇಂಗ್ಲಿಷ್ ಮಾಧ್ಯಮದ ಕಲಿಕೆಯನ್ನು ಒಪ್ಪಲಾಗದು.ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಎಂಬುದು ಜಗತ್ತಿನಾದ್ಯಂತ ಶಿಕ್ಷಣ ತಜ್ಞರು ಕಂಡುಕೊಂಡ ಸತ್ಯ.  ಇದು ನಮ್ಮ ನಿಲುವು ಕೂಡ. ನಾರಾಯಣಮೂರ್ತಿ ಅವರು ಕೂಡ ಈ ಬಗೆಗಿನ ತಮ್ಮ ನಿಲುವನ್ನು ಮರುಚಿಂತಿಸುವುದು ಅಪೇಕ್ಷಣೀಯ. ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸುವಂತೆ ಮಾಡಿದ ಸಲಹೆ ಇಲ್ಲಿನ ಮೂಲಸೌಕರ್ಯಗಳ ಲೋಪದಿಂದ ಬೇಸರಗೊಂಡು ವ್ಯಕ್ತಪಡಿಸಿದ ಹೇಳಿಕೆಯಷ್ಟೆ. ಈ ಸಂಗತಿಗಳು ಅವರ ಒಟ್ಟಾರೆ ಸಾಧನೆಯನ್ನು ಕಡೆಗಣಿಸುವುದಿಲ್ಲ.ಸಹಸ್ರ ಸಹಸ್ರ ಸಂಖ್ಯೆಯ ಉದ್ಯೋಗಗಳ ಸೃಷ್ಟಿ ಮತ್ತು ವರ್ಷಕ್ಕೆ ಲಕ್ಷಗಳ ಲೆಕ್ಕದಲ್ಲಿ ವೇತನದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದು  ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಧನೆ. ತಾಂತ್ರಿಕ ಪರಿಣತಿಯಷ್ಟೇ ಸಾಮಾನ್ಯ ಸಂವಹನ ಸಾಮರ್ಥ್ಯವೂ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧೆ ನಡೆಸುವುದಕ್ಕೆ ಪೂರಕ ಅರ್ಹತೆ ಎಂಬುದನ್ನು ಕೂಡ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ  ಸಾಬೀತುಪಡಿಸಿದೆ.ಕನ್ನಡನಾಡಿನ ಸಾವಿರಾರು ಅರ್ಹ ಯುವಕ ಯುವತಿಯರಿಗೆ ಉದ್ಯೋಗ ಹಾಗೂ ವಿದೇಶ ಯಾತ್ರೆಯ ಅವಕಾಶಗಳನ್ನೂ ಕಲ್ಪಿಸಿದ ಐಟಿ ಕ್ಷೇತ್ರದಲ್ಲಿ ನಾರಾಯಣಮೂರ್ತಿ ಅವರು ನಿರ್ವಿವಾದವಾಗಿ ನಾಡಿನ ಹೆಮ್ಮೆಯ ಪ್ರತಿನಿಧಿ. ಅವರ ಸಾಧನೆಯ ಕಾರಣದಿಂದಲೇ ಬೆಂಗಳೂರು ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರವಾಗಿದೆ.ಈ ದೃಷ್ಟಿಯಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಖ್ಯಾತಿ ತಂದ ನಾರಾಯಣಮೂರ್ತಿ ಅವರು ಒಬ್ಬ ಅಗ್ರಗಣ್ಯ ಕನ್ನಡಿಗರಾಗಿದ್ದು ವಿಶ್ವಕನ್ನಡ ಸಮ್ಮೇಳನಕ್ಕೆ ಚಾಲನೆ ನೀಡಲು ಅತ್ಯಂತ ಅರ್ಹರು. ವಿಶ್ವಕನ್ನಡ ಸಮ್ಮೇಳನ, ಸಾಹಿತ್ಯ ಸಮ್ಮೇಳನದಂತೆ ಸಾಂಸ್ಕೃತಿಕ ಲೋಕದ ಸಾಧನೆ ಬಿಂಬಿಸುವ ಸಮಾವೇಶವಷ್ಟೆ ಅಲ್ಲ;ಅದು  ನಾಡಿನ ಜನರ ವರ್ತಮಾನದ ಬದುಕು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿ ಪರಿಹಾರ ಮಾರ್ಗಗಳನ್ನು ಸೂಚಿಸುವ ಮಾರ್ಗದರ್ಶಿ ವೇದಿಕೆ ಕೂಡ. ಆದ್ದರಿಂದ ಸಾಹಿತ್ಯ ಮಾತ್ರವಲ್ಲದೆ, ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಆಗಿರುವ ಬೆಳವಣಿಗೆಗಳನ್ನು ವಿಶ್ವಸಮುದಾಯಕ್ಕೆ ತೆರೆದಿಡುವ ಪ್ರಯತ್ನ ಸಮ್ಮೇಳನದಲ್ಲಿ ಆಗಬೇಕು. ಅದಕ್ಕಾಗಿ, ಈ ಎಲ್ಲ ಕ್ಷೇತ್ರಗಳ ಸಾಧಕರಿಗೂ ಅವಕಾಶ ಇರುವಂತೆ ಸಮ್ಮೇಳನವನ್ನು ಸಂಘಟಿಸುತ್ತಿರುವ ಸರ್ಕಾರ ನೋಡಿಕೊಳ್ಳಬೇಕು.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.