ಬುಧವಾರ, ಜನವರಿ 22, 2020
28 °C

ಅನಾಥಪ್ರಜ್ಞೆಯಲ್ಲಿ ಅಂಗವಿಕಲನ ಬದುಕು

ಪ್ರಜಾವಾಣಿ ವಾರ್ತೆ/ ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಇಲ್ಲಿಗೆ ಸಮೀಪದ ಜಿಗೇರಿ ಗ್ರಾಮದ ಅಂಗವಿಕಲ ಯುವಕ ಮರ್ತುಜಾಸಾಬ ರಾಜೇಸಾಬ ಕುಷ್ಟಗಿಯ ಕತೆ ಮನ ಕಲಕುವಂಥದ್ದು. ‘ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ಮಾತೊಂದಿದೆ. ಆದರೆ ಜಿಗೇರಿ ಗ್ರಾಮದ ರಾಜೇಸಾಬ ಹಾಗೂ ಸಬೀರಾ ಬೇಗಂ ಎಂಬ ದಂಪತಿಗೆ ಈ ಮಾತು ಅನ್ವಯವಾದಂತೆ ಕಾಣುತ್ತಿಲ್ಲ. ತಮ್ಮ ಮಗು ಮರ್ತುಜಾಸಾಬ ಹುಟ್ಟು ಅಂಗವಿಕಲನಾಗಿದ್ದರಿಂದ ಹೆತ್ತವರು ದೂರದ ಮಂಗಳೂರಿಗೆ ಹೋಗಿ ನೆಲೆಸಿದ್ದಾರೆ. ಪಾಲಕರ ನಿರ್ದಯ ಧೋರಣೆಯಿಂದ ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಾ ಇಳಿ ವಯಸ್ಸಿನ ತಾತನ ಆಸರೆಯಲ್ಲಿ ಕರುನಾಜನಕ ಬದುಕು ಸವೇಸುತ್ತಿದ್ದಾನೆ.

ಇಪ್ಪತ್ತು ವರ್ಷಗಳ ಹಿಂದೆ ಹೆತ್ತ ಪಾಲಕರಿಂದ ತಿರಸ್ಕರಿಸಲ್ಪಟ್ಟ ಹಸುಳೆ ಮರ್ತುಜಾಬಾಬನ ಆರೈಕೆಯ ನೊಗ ಹೊತ್ತ ತಾತ ಕಾಶಿಮ್‌ಸಾಬ ಹೆತ್ತ ತಾಯಿಗಿಂತಲೂ ಮಿಗಿಲಾಗಿ ಪಾಲನೆ–ಪೋಷಣೆ ಮಾಡುತ್ತಿದ್ದಾರೆ. ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕಾಗಿ ಜೀಗೇರಿ ಗ್ರಾಮದಲ್ಲಿ ಕಮ್ಮಾರಿಕೆ ವೃತ್ತಿ ನಡೆಸುತ್ತಿರುವ ಅಜ್ಜ ಕಾಶಿಮ್‌ಸಾಬ ಕಿತ್ತು ತಿನ್ನುವ ಬಡತನದ ಮಧ್ಯೆಯೂ, ತೋಳ್ಭಲ ಕಳೆದುಕೊಂಡಿದ್ದರೂ ವಿಕಲಾಂಗ ಮೊಮ್ಮಗನನ್ನು ಅಕ್ಕರೆಯಿಂದ ನೋಡಿ­ಕೊಂಡು ಪಾಲನೆ–ಪೋಷಣೆ ಮಾಡುತ್ತಿದ್ದಾರೆ.ಸಂಕಷ್ಟಗಳ ಸರಮಾಲೆಗಳ ಮಧ್ಯೆಯೂ ಮೊಮ್ಮಗನನ್ನು ಸುಶಿಕ್ಷಿತನನ್ನಾಗಿಸುವ ಹೆಬ್ಬಯಕೆಯಿಂದ ಮೊಮ್ಮಗನನ್ನು ಹೆಗಲ ಮೇಲೆ ಹೊತ್ತು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವರೆಗೆ ಶಿಕ್ಷಣ ಕೊಡಿಸಿದ. ಬಳಿಕ ಮೊಮ್ಮಗನ ಕಲಿಕಾಸಕ್ತಿಯನ್ನು ಗಮನಿಸಿ ಜಿಗೇರಿ ಗ್ರಾಮದ ಕೂಗಳತೆ ದೂರದಲ್ಲಿರುವ ಕುಷ್ಟಗಿ ತಾಲ್ಲೂಕಿನ ಮುಗನೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ನಿತ್ಯ ಹೊತ್ಯೊಯ್ದು ಹತ್ತನೇ ತರಗತಿವರೆಗೆ ಶಿಕ್ಷಣ ಕೊಡಿಸಿದರು.ಮೊದಲೇ ಕಿತ್ತು ತಿನ್ನುವ ಬಡತನದಿಂದ ನಲುಗಿ ಹೋಗಿದ್ದ ತಾತ ಕಾಶಿಮಸಾಬಗೆ ಮೊಮ್ಮಗನಿಗೆ ಉನ್ನತ ಶಿಕ್ಷಣ ಕೊಡಿಸುವ ಹಂಬಲವಿದ್ದರೂ ಬಡತನ ಅಡ್ಡಿಯನ್ನುಂಟು ಮಾಡಿದ ಪರಿಣಾಮ ವಿಕಲಾಂಗ ಮರ್ತುಜಾಸಾಬನ ಉನ್ನತ ಶಿಕ್ಷಣದ ಕನಸು ಸಾಕಾರಗೊಳ್ಳಲಿಲ್ಲ. ಎಲ್ಲ ಯುವಕರಂತೆ ಉತ್ಸಾಹದಿಂದ ಒಂದಿಲ್ಲೊಂದು ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಮಹದಾಸೆ ಹೊಂದಿದ್ದರೂ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡ ಪರಿಣಾಮ ಇನ್ನೊಬ್ಬರ ಆಸರೆ ಅನಿವಾರ್ಯ.‘ನನಗೂ ವಯಸ್ಸಾಯಿತು. ಇಷ್ಟ ದಿವಸ ತೋಳಾಗ ಶಕ್ತಿ ಇತ್ತು ಮರ್ತುಜಾನ ಜೋಪಾನ ಮಾಡಿದೆ. ಆದ್ರ ನಾನ್‌ ಸತ್ತ ಹೋದ ಮ್ಯಾಲೆ ಮರ್ತುಜಾನ್‌ ಯಾರ್‌ ನೋಡತ್ತಾರೀ... ಹೆತ್ತವರು ಮಂಗಳೂರ ಸೇರ್ಯಾರ್‌ ನನಗ ಮರ್ತುಜಾನ್‌ ಚಿಂತಿ ನೋಡ್ರಿ ಎಪ್ಪಾ... ಎಂದು ತಾತ ಕಾಶಿಮಸಾಬ ಕಣ್ಣೀರಿಟ್ಟರು.

 

ಪ್ರತಿಕ್ರಿಯಿಸಿ (+)