ಗುರುವಾರ , ಜನವರಿ 23, 2020
20 °C

ಅನಾರೋಗ್ಯ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಕಳೆದ ಒಂಬತ್ತು ತಿಂಗಳಿಂದ ಔಷಧಿ ಪೂರೈಕೆಯಾಗಿಲ್ಲ ಎಂಬ ಸಂಗತಿ ಆರೋಗ್ಯ ಇಲಾಖೆಯ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಇಲಾಖೆ ತನ್ನ ಆಸ್ಪತ್ರೆಗಳಿಗೆ ಬೇಕಾದ ಔಷಧಿಗಳನ್ನು ಟೆಂಡರ್ ಮೂಲಕ ಖರೀದಿಸುತ್ತದೆ. ಪ್ರಸಕ್ತ ಹಣಕಾಸು ವರ್ಷ ಮುಗಿಯಲು ಇನ್ನು ಎರಡೂವರೆ ತಿಂಗಳಷ್ಟೇ ಉಳಿದಿದೆ, ಆದರೆ, ಇದುವರೆಗೂ ಔಷಧಿ ಖರೀದಿಗೆ ಟೆಂಡರ್ ನಡೆದಿಲ್ಲವೆಂದರೆ ಈ ಲೋಪಕ್ಕೆ ಆರೋಗ್ಯ ಇಲಾಖೆಯೇ  ಕಾರಣ.

 

ಆರೋಗ್ಯ ಸಚಿವ ರಾಮದಾಸ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೇ ಇದಕ್ಕೆ ಹೊಣೆಗಾರರು. ಭ್ರಷ್ಟಾಚಾರದ ಹಗರಣಗಳು ಹಾಗೂ ಗುಂಪುಗಾರಿಕೆಯಲ್ಲೇ ಕಾಲಹರಣ ಮಾಡುತ್ತಿರುವ ಸರ್ಕಾರ, ರೋಗಿಗಳ ಬಗ್ಗೆ ತಾಳಿರುವ ಇಂಥ ನಿರ್ಲಕ್ಷ್ಯದ ಧೋರಣೆ ಅಮಾನವೀಯ ಮಾತ್ರವಲ್ಲ, ಖಂಡನೀಯ.ಆಸ್ಪತ್ರೆಗಳಲ್ಲಿ ಔಷಧಿಯೇ ಇಲ್ಲ ಎಂದಾದರೆ ಸಾವಿರಾರು ವೈದ್ಯರು, ನರ್ಸುಗಳು ಹಾಗೂ ಇತರ ಸಿಬ್ಬಂದಿಯ ಅಗತ್ಯವೇನಿದೆ? ರೋಗಿಗಳೇ ಹೊರಗಿನಿಂದ ಔಷಧಿ ಖರೀದಿಸಿ ತಂದು ಚಿಕಿತ್ಸೆ ಪಡೆಯುವಂತಹ ವ್ಯವಸ್ಥೆ ಸರ್ಕಾರಕ್ಕೆ ಗೌರವ ತರುವುದಿಲ್ಲ.

 

ಔಷಧಗಳ ಖರೀದಿಗೆ ಸರ್ಕಾರ ಮೀಸಲಿಟ್ಟ ಹಣ ಏನಾಯಿತು? ಮುಖ್ಯಮಂತ್ರಿ ಸದಾನಂದ ಗೌಡರಿಂದ ಹಿಡಿದು ಎಲ್ಲ ಸಚಿವರೂ ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವ ಪರಿಸ್ಥಿತಿ ಬೇರೆಯೇ ಇದೆ. ಆರೋಗ್ಯ ಇಲಾಖೆಯಲ್ಲಿ ಆಗಿರುವ ಈ ಲೋಪಗಳಿಗೆ ಸಚಿವ ರಾಮದಾಸ್ ಅವರೇ ಹೊಣೆ.ಕೇಂದ್ರ ಸರ್ಕಾರದ ನೆರವಿನ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ ಅಡಿಯಲ್ಲಿ ರಾಜ್ಯದ ಹಿಂದುಳಿದ ತಾಲ್ಲೂಕುಗಳಲ್ಲಿ ದೇಶಿ ವೈದ್ಯಕೀಯ ಪದ್ಧತಿಯಲ್ಲಿ ಜನರಿಗೆ ಚಿಕಿತ್ಸೆ ನೀಡಲು ನೇಮಕಗೊಂಡಿರುವ 551 ಆಯುಷ್ ವೈದ್ಯರಿಗೂ ಕಳೆದ ಹದಿನಾಲ್ಕು ತಿಂಗಳಿಂದ ಔಷಧಿ ಪೂರೈಕೆಯಾಗಿಲ್ಲ.

 

ಸಾವಿರಾರು ಬಡ ರೋಗಿಗಳಿಗೆ ಔಷಧೋಪಚಾರ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸುವ ವಿಷಯದಲ್ಲಿಯೂ ಆರೋಗ್ಯ ಸಚಿವರು ಆಸಕ್ತಿ ತೋರಿಸಿಲ್ಲ. ಅವರು ತಮ್ಮ ಜವಾಬ್ದಾರಿ ನಿರ್ವಹಿಸುವ ವಿಷಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

 

ಟೆಂಡರ್ ನಡೆದಿಲ್ಲ, ಕೇಂದ್ರ ಸರ್ಕಾರ ಅನುದಾನ ಬಿಡುಗಡೆಯಾಗಿಲ್ಲ ಎಂಬ ಸಬೂಬುಗಳನ್ನು ಹೇಳುತ್ತ ಹೀಗೆ ಕಾಲಹರಣ ಮಾಡುವುದು ತಮ್ಮನ್ನು ಆಯ್ಕೆ ಮಾಡಿದ ಜನತೆಗೆ ಎಸಗುವ ದ್ರೋಹ. ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸದ ಸಚಿವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ.ಒಂದೋ, ಸಚಿವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಇಲ್ಲವಾದರೆ ಕೆಲಸ ಮಾಡುವವರಿಗೆ ಸ್ಥಾನ ಬಿಟ್ಟು ಕೊಡಬೇಕು. ಆರೋಗ್ಯ ಇಲಾಖೆಯಂಥ ಪ್ರಮುಖ ಖಾತೆ ಹೀಗೆ ನಿಷ್ಕ್ರಿಯವಾಗುವುದನ್ನು ಮುಖ್ಯಮಂತ್ರಿಯವರು ಸುಮ್ಮನೆ ನೋಡಲಾಗದು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕು.

 

ತಕ್ಷಣವೇ ಆಸ್ಪತ್ರೆಗಳಿಗೆ ಔಷಧಿ ಪೂರೈಸಬೇಕು. ಔಷಧ ಖರೀದಿ ವಿಳಂಬಕ್ಕೆ ಏನು ಕಾರಣ ಎಂಬುದರ ಬಗ್ಗೆ ತನಿಖೆ ನಡೆಸಿ ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು.

ಪ್ರತಿಕ್ರಿಯಿಸಿ (+)