ಬುಧವಾರ, ಜನವರಿ 22, 2020
25 °C
ದಲಿತರಿಗೆ ಸಾಮಾಜಿಕ ಬಹಿಷ್ಕಾರ ಪ್ರಕರಣ

ಅಪನಂಬಿಕೆ, ಆತಂಕದಲ್ಲಿ ಗದ್ಯಾಳ ಜನತೆ

ಬಸವರಾಜ್‌ ಸಂಪಳ್ಳಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪನಂಬಿಕೆ, ಆತಂಕದಲ್ಲಿ ಗದ್ಯಾಳ ಜನತೆ

ಗದ್ಯಾಳ (ಬಾಗಲಕೋಟೆ): ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿರುವ ಜಮಖಂಡಿ ತಾಲ್ಲೂಕಿನ ಈ ಗ್ರಾಮದಲ್ಲಿ ಬಹಿಷ್ಕಾರದ ಬದಲಿಗೆ ದಲಿತರು ಮತ್ತು ಸವರ್ಣೀಯರ ನಡುವೆ ಅಪನಂಬಿಕೆ, ಅಂತೆ, ಕಂತೆಗಳ ಆತಂಕ ಆವರಿಸಿದೆ.ಮಾಳಿ, ಗಾಣಿಗ, ಕುರುಬ, ಜಂಗಮ, ಮರಾಠ, ಸಮಗಾರ, ಚಲವಾದಿ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಸುಮಾರು 400 ಕುಟುಂಬಗಳಿರುವ ಪುಟ್ಟ ಹಳ್ಳಿ ಗದ್ಯಾಳ. ಜಮಖಂಡಿಯಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ತಾಲ್ಲೂಕಿನ ಕೊನೆಯ ಗ್ರಾಮ. ಈ ಊರು ಸದಾ ಬರಕ್ಕೆ ತುತ್ತಾಗುವ ಕಾರಣ ಜನ ಕೆಲಸ ಅರಸಿ ದೊಡ್ಡ ನಗರ­ಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿದೆ.ಕಾರ್ಗಿಲ್‌ ಯುದ್ಧದಲ್ಲಿ ವೀರ ಮರಣ ಹೊಂದಿದ ದಲಿತ ಸಮುದಾ­ಯಕ್ಕೆ ಸೇರಿದ ದಿಲೀಪ್‌ ಪೋತರಾಜ ಪಾರ್ಥಿವ ಶರೀರವನ್ನು ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲೇ ಸಮಾಧಿ ಮಾಡುವ ಮೂಲಕ ಗ್ರಾಮದ ಜನತೆ ಗೌರವ ಸಲ್ಲಿಸಿದ್ದಾರೆ.ಸೌಹಾರ್ದಕ್ಕೆ ಹೆಸರಾದ ಈ ಹಳ್ಳಿ­ಯಲ್ಲಿ ನಾಲ್ಕು ತಿಂಗಳ ಹಿಂದೆ ನಡೆದ ಅಹಿತ­ಕರ ಘಟನೆಯೊಂದು ಇದೀಗ ಗ್ರಾಮದ ಜನರಲ್ಲಿ ಪರಸ್ಪರ ಅಪ­ನಂಬಿಕೆ, ಅಂಜಿಕೆ, ಆತಂಕ ತಂದೊಡ್ಡಿದೆ. ಈ ಆತಂಕವನ್ನೇ ಸ್ಥಳೀಯ ರಾಜಕಾರಣಿ­ಗಳು ಮತ್ತು ಸಂಘಟನೆಗಳು ದುರುಪ­ಯೋಗ ಪಡಿಸಿಕೊಳ್ಳಲು ಹವಣಿಸುತ್ತಿರು­ವುದು ಕಂಡುಬರುತ್ತಿದೆ.ಹಳ್ಳಿಯ ಮುಖ್ಯ ರಸ್ತೆಯ ಪಕ್ಕದಲ್ಲಿ ಎರಡು ವರ್ಷಗಳ ಹಿಂದೆ ಹಾಕಿರುವ ದಲಿತ ಸಂಘರ್ಷ ಸಮಿತಿಯ ನಾಮ­ಫಲಕ­ದಲ್ಲಿ ಇದ್ದ ಡಾ. ಬಿ.ಆರ್‌. ಅಂಬೇ­ಡ್ಕರ್‌ ಭಾವಚಿತ್ರಕ್ಕೆ ಕಿಡಿಗೇಡಿಗಳು ರಾಡಿ ಹಚ್ಚಿದ್ದರಿಂದ ಇಡೀ ಗ್ರಾಮದ ಸೌಹಾ­ರ್ದಕ್ಕೆ ಧಕ್ಕೆಯಾಗಿದೆ. ಈ ಕೃತ್ಯ ಎಸಗಿ­ದ್ದಾರೆ ಎನ್ನಲಾದ ಸವರ್ಣೀಯ ಸಮು­ದಾ­ಯದ ಯುವಕರ ವಿರುದ್ಧ ಪೊಲೀ­ಸರು ಕ್ರಮ ಕೈಗೊಂಡರು ಎಂಬ ಕಾರ­ಣಕ್ಕೆ ಚಲವಾದಿ ಸಮಾಜದವರೊಂದಿಗೆ ಇತರೆ ಸಮುದಾಯವದರು ಮಾತನಾ­ಡು­ವುದನ್ನು ಬಿಟ್ಟಿದ್ದಾರೆ.ಸಮಗಾರರು ಸೇರಿದಂತೆ ಮುಸ್ಲಿ­ಮರು, ಕುರುಬರು, ಮಾಳಿ, ಗಾಣಿಗರು, ಜಂಗಮರು ಕೂಡ ಚಲವಾದಿ­ಗಳೊಂ­ದಿಗೆ ಮಾತು ಬಿಟ್ಟಿದ್ದಾರೆ. ಅಲ್ಲದೇ, ಕೃಷಿ ಕೆಲಸಕ್ಕೂ ಅವರನ್ನು ಕರೆಯುತ್ತಿಲ್ಲ. ಇದ­ರಿಂದಾಗಿ ಆತಂಕಗೊಂಡಿರುವ ಚಲ­ವಾದಿ ಸಮುದಾಯದರು ನಾಲ್ಕು ತಿಂಗ­ಳಿಂದ ಏಕಾಂಗಿಗಳಾಗಿದ್ದಾರೆ. ನ್ಯಾಯ­ಕೊಡಿಸಿ ಎಂದು ಪೊಲೀಸರಿಗೆ, ಜಿಲ್ಲಾ­ಡಳಿತಕ್ಕೆ, ಜನಪ್ರತಿನಿಧಿಗಳ ಎದುರು ಮನವಿ ಮಾಡಿ­­ದ್ದಾರೆ. ಹಲವು ಭಾರಿ ಪ್ರತಿಭಟಿಸಿ­ದ್ದಾರೆ. ಜಿಲ್ಲಾಡಳಿತವೂ ಸೌಹಾರ್ದತೆ ನಿರ್ಮಿಸುವ ಸಂಬಂಧ ನಾಲ್ಕು ಬಾರಿ ಗ್ರಾಮದಲ್ಲಿ ಸಭೆ ನಡೆಸಿ ಸೌಹಾರ್ದತೆಗೆ ಯತ್ನಿಸಿದ್ದು, ಪರಸ್ಪರ ಅಪ­ನಂ­ಬಿ­ಕೆ­ಗಳಿಂದ ಮಾತುಕತೆ ಸಾಧ್ಯವಾಗಿಲ್ಲ.‘ನಮಗೆ ಯಾವುದೇ ವೈರತ್ವವಿಲ್ಲ’

‘ನಮ್ಮ ಸಮಾಜದವರ (ಚಲವಾದಿ) ನಡುವೆ ಜಗಳವಾದರೆ ಅವರೇ (ಸವರ್ಣೀಯರು) ತೀರ್ಮಾನ ಮಾಡುತ್ತಿದ್ದರು. ಆದರೆ, ಈಗ ಬುದ್ದಿ ಹೇಳುವವರೇ ನಮ್ಮ ಮೇಲೆ ದ್ವೇಷ ಮಾಡತೊಡಗಿದ್ದಾರೆ. ಅವರ ಮೇಲೆ ನಮಗೆ ಯಾವುದೇ ವೈರತ್ವವಿಲ್ಲ. ಚುನಾವಣೆಯಲ್ಲಿ ನಾವೇ ಮುಂದೆ ನಿಂತು ವೋಟ್‌ ಹಾಕಿ ಗೆಲ್ಲಿಸಿದ್ದೇವೆ. ಇದೀಗ ಅವರೇ ನಮ್ಮ ಮೇಲೆ ಚಾಟಿ ಬೀಸುತ್ತಿದ್ದಾರೆ’

–ಆರೂಢ ಪೀರಪ್ಪ ಪೋತರಾಜ‘ಪ್ರಾಣಿಗಳನ್ನು ಕಂಡಂತೆ ವರ್ತಿಸುತ್ತಾರೆ’

‘ಹೋಟೆಲ್‌, ಅಂಗಡಿಗಳಿಗೆ ಬರಬೇಡಿ ಎಂದು ನೇರವಾಗಿ ಹೇಳುತ್ತಿಲ್ಲ. ಆದರೆ, ಅಲ್ಲಿಗೆ ಹೋದಾಗ ನಮ್ಮನ್ನು ನೋಡುವ ದೃಷ್ಟಿ ಬದಲಾಗಿದೆ. ನಮ್ಮನ್ನು ನೋಡಿದ ಕೂಡಲೇ ಪ್ರಾಣಿಗಳನ್ನು ಕಂಡಂತೆ ವರ್ತಿಸುತ್ತಾರೆ. ಸವರ್ಣೀಯರ ಜೊತೆ ಯಾವಾಗಲೂ ದ್ವೇಷ ಸಾಧಿಸಿಲ್ಲ. ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ ಮಾಡಿದ ಕಾರಣಕ್ಕೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದೆವು. ಅದನ್ನೇ ನೆಪವಾಗಿಟ್ಟುಕೊಂಡು ನಮ್ಮ ವಿರುದ್ಧ ಬಹಿಷ್ಕಾರ ಹಾಕಿದ್ದಾರೆ’

–ಶರಣಪ್ಪ ಬಸಪ್ಪ ದೊಡ್ಡಮನಿ‘ಹಳ್ಳಿಯಲ್ಲಿ ಸೌಹಾರ್ದತೆ ಇದೆ’


‘ಅಂಗಡಿ, ಹೋಟೆಲ್‌ಗೆ ಯಾರೇ ಬಂದರೂ ವಸ್ತುಗಳನ್ನು ಕೊಡುತ್ತೇವೆ. ಮಾರಾಟಕ್ಕಾಗಿಯೇ ಇಟ್ಟುಕೊಂಡಿದ್ದೇವೆ. ಯಾರಿಗೂ ನಿರಾಕರಿಸುತ್ತಿಲ್ಲ. ಚಿಕ್ಕ ಹಳ್ಳಿಯಲ್ಲಿ ವ್ಯಾಪಾರ ಆಗುವುದೇ ಕಷ್ಟ. ಅಂತಹದರಲ್ಲಿ ಪದಾರ್ಥ ಕೊಡಲ್ಲ ಅಂದರೆ ನಮಗೆ ನಷ್ಟ. ಹಳ್ಳಿಯಲ್ಲಿ ಸೌಹಾರ್ದತೆ ಇದೆ’

–ವಿಠಲ ಗಾಳಿ, ಅಂಗಡಿಯ ಮಾಲೀಕ

 

ಪ್ರತಿಕ್ರಿಯಿಸಿ (+)