ಗುರುವಾರ , ಜುಲೈ 29, 2021
28 °C

ಅಪರೂಪಕ್ಕೂ ಬಾರದ ಮನಶಾಸ್ತ್ರಜ್ಞರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಬುದ್ಧಿಮಾಂದ್ಯ ಮಕ್ಕಳ ಪಾಲನಾ ಕೇಂದ್ರಕ್ಕೆ ಭೇಟಿ ನೀಡಲು ಮನಶ್ಶಾಸ್ತ್ರಜ್ಞರೇ ಇಲ್ಲ! ಪಾಲನಾ ಕೇಂದ್ರಕ್ಕೆ ದಿನಕ್ಕೊಮ್ಮೆ ಭೇಟಿ ನೀಡುವ ಮನಶ್ಶಾಸ್ತ್ರಜ್ಞರ ಮಾತು ಬಿಡಿ, ತಿಂಗಳಿಗೊಮ್ಮೆಯೂ ಭೇಟಿ ನೀಡುವವರಿಲ್ಲ.ಅನಿವಾರ್ಯವಾದರೆ ಕೇಂದ್ರದ ಸಿಬ್ಬಂದಿ ಬುದ್ಧಿಮಾಂದ್ಯ ಮಕ್ಕಳನ್ನು ಪಕ್ಕದ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಬೇಕು. ಅಂಗವಿಕಲರ ಕಲ್ಯಾಣ ಇಲಾಖೆಯ ರಾಜ್ಯ ಘಟಕದ ಆಯುಕ್ತ ಕೆ.ವಿ. ರಾಜಣ್ಣ ಅವರು ನಗರದ ಕಿದ್ವಾಯಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಬುದ್ಧಿಮಾಂದ್ಯ ಮಕ್ಕಳ ಈ ಪಾಲನಾ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದಾಗ ತಿಳಿದುಬಂದ ಅಂಶ ಇದು.ಕೇಂದ್ರದ ಸ್ವಚ್ಛತೆ ಮತ್ತು ಮಕ್ಕಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು ಪ್ರತಿ 15 ದಿನಗಳಿಗೊಮ್ಮೆ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆ ನಡೆಸುವಂತೆ ಅಂಗವಿಕಲರ ಕ್ಷೇಮಪಾಲನಾ ಅಧಿಕಾರಿ ಪಾಲಿ ಅವರಿಗೆ ತಾಕೀತು ಮಾಡಿದರು.ಕೇಂದ್ರದಲ್ಲಿ 140 ಮಕ್ಕಳನ್ನು ಇಟ್ಟುಕೊಳ್ಳಲು ಅವಕಾಶವಿದೆ, ಸದ್ಯ 69 ಮಕ್ಕಳು ಕೇಂದ್ರದಲ್ಲಿದ್ದಾರೆ. ಕೇಂದ್ರದ 28 ಸಿಬ್ಬಂದಿ ಪೈಕಿ 5 ಮಂದಿ ನಿಯೋಜನೆಯ ಮೇಲೆ ಬೇರೆಡೆ ತೆರಳಿದ್ದಾರೆ, 23 ಮಂದಿ ಕೇಂದ್ರದಲ್ಲಿ ಸದ್ಯ ಕರ್ತವ್ಯದಲ್ಲಿದ್ದಾರೆ. ಹಿಂದೆ ಇಬ್ಬರು ವೈದ್ಯರಿದ್ದರು, ಈಗ ವೈದ್ಯರೊಬ್ಬರು ದಿನಕ್ಕೊಮ್ಮೆ ಭೇಟಿ ನೀಡುತ್ತಾರೆ ಎಂದು ಕೇಂದ್ರದ ಉಸ್ತುವಾರಿ ಅಧಿಕಾರಿ ಮುಕ್ತಾ ಬಾ ತಿಳಿಸಿದರು.ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಕೆ.ವಿ. ರಾಜಣ್ಣ ಅವರು ‘ಈ ಕೇಂದ್ರದ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿದ್ದವು, ಸರ್ಕಾರ ನೀಡುತ್ತಿರುವ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂಬ ದೂರು ಕೂಡ ಇದೆ. 69 ಮಕ್ಕಳಿಗೆ 23 ಸಿಬ್ಬಂದಿ ಇದ್ದಾರೆ. 3ರಿಂದ 4 ಮಕ್ಕಳ ಜವಾಬ್ದಾರಿ ಒಬ್ಬ ಸಿಬ್ಬಂದಿಯ ಮೇಲಿರುತ್ತದೆ. ಪ್ರತಿ ಮಗುವಿಗೆ ತಿಂಗಳೊಂದಕ್ಕೆ 3,500ರಿಂದ 4,000 ರೂಪಾಯಿ ಖರ್ಚು ಮಾಡಲಾಗುತ್ತಿದೆ. ಹೀಗಿದ್ದರೂ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಈ ಕೇಂದ್ರಕ್ಕೆ ಯಾವುದೇ ರೀತಿಯಲ್ಲೂ ಅನುದಾನದ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ ಅವರು ‘ಇಲ್ಲಿನ ಸ್ವಚ್ಛತೆಯ ಮಟ್ಟ ಮತ್ತು ಮಕ್ಕಳಿಗೆ ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ತೃಪ್ತಿ ಇಲ್ಲ. ಊಟದ ಸಂದರ್ಭ ಒಮ್ಮೆ ಇಲ್ಲಿಗೆ ಭೇಟಿ ನೀಡಿ ತಪಾಸಣೆ ನಡೆಸುತ್ತೇನೆ’ ಎಂದು ಹೇಳಿದರು.‘ಇದು ಧಿಡೀರ್ ಭೇಟಿ. ಆದರೂ ಅವರಿಗೆ (ಕೇಂದ್ರದ ಸಿಬ್ಬಂದಿಗೆ) ನಾನು ಬರುವ ಬಗ್ಗೆ ಮಾಹಿತಿ ಸಿಕ್ಕಿರಬಹುದೆಂಬ ಅನುಮಾನ ಇದೆ. ಕಳೆದ 2-3 ತಿಂಗಳಿನಿಂದ ಪರಿಸ್ಥಿತಿ ಸುಧಾರಿಸಿದೆ ಎಂದು ಕೇಂದ್ರದ ಸಿಬ್ಬಂದಿ ಹೇಳುತ್ತಾರೆ’ ಎಂದರು.ಕೇಂದ್ರದ ಉಸ್ತುವಾರಿ ಅಧಿಕಾರಿ ಮುಕ್ತಾ ಬಾ ಮಾತನಾಡಿ ‘ಮಕ್ಕಳ ಹಕ್ಕುಗಳ ಆಯೋಗದವರೂ ಈ ಹಿಂದೆ ಇಲ್ಲಿಗೆ ಬಂದಿದ್ದರು. ಅವರು ಇಲ್ಲಿನ ವ್ಯವಸ್ಥೆಯ ಬಗ್ಗೆ ಯಾವುದೇ ದೂರು ಹೇಳಿಲ್ಲ. ಇಲ್ಲಿ ಯಾವ ಸಮಸ್ಯೆಯೂ ಇಲ್ಲ. ಆಹಾರದ ಗುಣಮಟ್ಟ ಕೂಡ ಚೆನ್ನಾಗಿದೆ. ಮೊದಲು ವೈದ್ಯರ ಸಮಸ್ಯೆ ಇತ್ತು, ಈಗ ಅದೂ ಪರಿಹಾರವಾಗಿದೆ’ ಎಂದರು.ಬುದ್ಧಿಮಾಂದ್ಯ ಮಕ್ಕಳ ಪಾಲನಾ ಕೇಂದ್ರದ ಪಕ್ಕದಲ್ಲಿರುವ ಪುರುಷ ಅಂಗವಿಕಲರ ಪಾಲನೆಗಾಗಿ ಇರುವ ಸಮಾಜ ಸೇವಾ ಸಂರ್ಕೀಕ್ಕೂ ಭೇಟಿ ನೀಡಿದ ಆಯುಕ್ತರು ಅಲ್ಲಿನ ಪರಿಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.‘ಅಂಗವಿಕಲರಿಗೆ ಗಾಲಿ ಕುರ್ಚಿಗಳು, ಸ್ವಚ್ಛ ವಾತಾವರಣ ಒದಗಿಸುವ ಕುರಿತು ಸರಿಯಾಗಿ ಗಮನ ಹರಿಸಿಲ್ಲ.ಇದರಿಂದ ಅಸಮಾಧಾನವಾಗಿದೆ’ ಎಂದರು. ನಗರವನ್ನು ಅಂಗವಿಕಲರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಿನ ಐದು ವರ್ಷಗಳಲ್ಲಿ 15 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.