ಮಂಗಳವಾರ, ಮೇ 24, 2022
31 °C
ಶಿಥಿಲಗೊಳ್ಳುತ್ತಿರುವ ಸುವರ್ಣ ಮಹೋತ್ಸವ ಪೂರೈಸಿದ ಶಾಲೆ

ಅಪಾಯದ ನೆರಳಲ್ಲಿ ಮಕ್ಕಳ ಪಾಠ

ಪ್ರಜಾವಾಣಿ ವಿಶೇಷ ವರದಿ/ ಡಿ.ಪಿ. ಲೋಕೇಶ್ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ತವರು ಕ್ಷೇತ್ರ ಮಸಗೋಡು ಗ್ರಾಮದ `ತಣ್ಣೀರುಹಳ್ಳ'ದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಸಿದಿದ್ದು, ಅಪಾಯಕಾರಿಯಾಗಿದೆ. ಇದರಿಂದ ಇಲ್ಲಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರತಿದಿನ ಜೀವಭಯದಲ್ಲೇ ವಿದ್ಯಾರ್ಜನೆ ಮಾಡುವಂತಾಗಿದೆ.1958ರಲ್ಲಿ ಪ್ರಾರಂಭವಾದ ಈ ಶಾಲೆಯು ಅಕ್ಕ- ಪಕ್ಕದ ಗ್ರಾಮಗಳ ಮಕ್ಕಳ ಕಲಿಕೆಗೆ ಆಸರೆಯಾಗಿದೆ. ಕಳೆದ 5 ವರ್ಷಗಳ ಹಿಂದೆ ಸುವರ್ಣ ಮಹೋತ್ಸವ ಆಚರಿಸಿಕೊಂಡು ವಜ್ರಮಹೋತ್ಸವದೆಡೆಗೆ ಸಾಗುತ್ತಿದೆ. ಆದರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಶಾಲೆ ಕಟ್ಟಡ ದಿನೇದಿನೇ ಶಿಥಿಲಗೊಳ್ಳುತ್ತ ಸಾಗಿದೆ.ಪ್ರಸ್ತುತ ಶಾಲೆಯಲ್ಲಿ 6 ಶಿಕ್ಷಕರು ಮತ್ತು 91 ವಿದ್ಯಾರ್ಥಿಗಳು ಇದ್ದಾರೆ. ಕಳೆದ ಮೂರ‌್ನಾಲ್ಕು ವರ್ಷಗಳಿಂದ ಶಾಲಾ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದೆ. ಕೆಲವೇ ದಿನಗಳ ಹಿಂದೆ ಕಟ್ಟಡದ ಗೆದ್ದಲು ಹಿಡಿದಿತ್ತು. ಆಗ ಶಾಲೆತಲ್ಲಿನ ಮರಗಳನ್ನು ಹಾಗೂ ಹಂಚುಗಳನ್ನು ಸರಿಪಡಿಸಲಾಗಿದೆ.

ಆದರೂ ಮರಮುಟ್ಟುಗಳು, ಕಿಟಕಿ ಬಾಗಿಲುಗಳು ಮುರಿದು ಹೋಗಿವೆ. ಗೋಡೆಗಳು ಶಿಥಿಲಗೊಂಡಿವೆ. ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಮೇಲ್ಚಾವಣಿಯ ಮರಗಳು ಹಾಗೂ ಹೆಂಚುಗಳು ತರಗತಿಯ ಒಳಗಡೆ ಬೀಳುತ್ತಿವೆ. ಈಗ ಎಡೆಬಿಡದೇ ಮಳೆ ಬೀಳುತ್ತಿರುವುದರಿಂದ ಮಕ್ಕಳು, ಶಿಕ್ಷಕರಿಗೆ ಇನ್ನಷ್ಟು ತೊಂದರೆಯಾಗುತ್ತಿದೆ.ಮಳೆಯಿಂದಾಗಿ ಕೆಲವು ಕೊಠಡಿಗಳು ಕುಸಿದಿದ್ದು, ಇದರ ಅಕ್ಕ-ಪಕ್ಕದ ತರಗತಿಗಳ ಗೋಡೆಗೂ ತೊಂದರೆಯಾಗುತ್ತಿದೆ. ಅನಾಹುತ ಆಗುವ ಮುನ್ನ ಇದನ್ನು ಸರಿಪಡಿಸಲು ಹಲವಾರು ಬಾರಿ ಮೇಲಾಧಿಕಾರಿಗಳಿಗೆ ಹಾಗೂ ಜನಪ್ರತಿನಿದಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ತಮ್ಮೂರ ಶಾಲೆಯ ಬಗ್ಗೆ ಗಮನ ಹರಿಸಬೇಕಾದ ಇಲ್ಲಿನ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರು ಏನೂ ತೋಚದವರಂತೆ ಸುಮ್ಮನಿದ್ದಾರೆ.ಕಣ್ಮುಚ್ಚಿ ಕುಳಿತ ಜನಪ್ರತಿನಿಧಿಗಳು

ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಗೋಡು ಗ್ರಾಮವು ಅಬ್ಬೂರುಕಟ್ಟೆ ಜಿಲ್ಲಾ ಪಂಚಾಯಿತಿ ಕ್ಪೇತ್ರ ವ್ಯಾಪ್ತಿಗೇ ಸೇರಿದೆ. ಸದ್ಯ ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ. ಶಿವಪ್ಪ ಹಾಗೂ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜೆ.ಬಿ. ಸೋಮಯ್ಯ ಇದೇ ಕ್ಪೇತ್ರದಿಂದ ಆಯ್ಕೆಯಾಗಿದ್ದಾರೆ. ನೇರುಗಳಲೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೂಡ ಇದೇ ಊರಿನವರು. ಇವರೆಲ್ಲರೂ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಆದರೂ ಶಾಲೆಯತ್ತ ಒಮ್ಮೆಯೂ ತಿರುಗಿ ನೋಡಿಲ್ಲ!ಸರ್ಕಾರಿ ಶಾಲೆಗಳ ಉಳಿವಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಈ ಶಾಲೆಗೆ ಮಾತ್ರ ಅವುಗಳನ್ನು ಸರಿಯಾಗಿ ತಂದುಮುಟ್ಟಿಸಲು ಅಧಿಕಾರಿಗಳಾಗಲಿ, ಜನಪ್ರತಿನಿದಿಗಳಾಗಲಿ ಇದೂವರೆಗೂ ಪ್ರಯತ್ನ ಪಟ್ಟಿಲ್ಲ. ಇನ್ನು ಮುಂದಾದರೂ ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಶಾಲೆಯ ಸಮಸ್ಯೆಗಳನ್ನು ಬಗೆಹರಿಸುತ್ತಾರೆಯೇ ಎಂದು ಮುಗ್ದ ಮಕ್ಕಳು ಕಾದು ಕುಳಿತಿದ್ದಾರೆ.ಮಕ್ಕಳಿಗೆ ಅಪಾಯವಿಲ್ಲ

ದುಃಸ್ಥಿತಿಯಲ್ಲಿರುವ ಈ ಶಾಲೆಯ ಕೊಠಡಿಯಲ್ಲಿ ತರಗತಿಗಳನ್ನು ನಡೆಸುತ್ತಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಶಾಲೆಯ ಕೊಠಡಿಯನ್ನು ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಸೆಪ್ಟೆಂಬರ್ ವೇಳೆಗೆ ದುರಸ್ತಿ ಮಾಡಲಾಗುವುದು. ಸವರ್ಣ ಮಹೋತ್ಸವ ಪೂರೈಸಿದ ಶಾಲೆಯನ್ನು ಉಳಿಸಲಾಗುವುದು.

-ಬಿ. ಶಿವಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.