ಶನಿವಾರ, ಮೇ 8, 2021
25 °C

ಅಪೆಕ್ಸ್ ಬ್ಯಾಂಕ್: ರೈತರಿಗೆ ಶೇ 3ರ ಬಡ್ಡಿಗೆ ಸಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಉತ್ತರ ಕರ್ನಾಟಕ ಭಾಗವೂ ಸೇರಿದಂತೆ ರಾಜ್ಯದಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಸಹಕಾರಿ ಬ್ಯಾಂಕ್‌ಗಳ ಮೂಲಕ ಶೇ 3ರಷ್ಟು ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಲು ಅಪೆಕ್ಸ್ ಬ್ಯಾಂಕ್ ಮುಂದಾಗಿದೆ~ ಎಂದು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, `ರೈತರ ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹಣಕಾಸು ವರ್ಷದಲ್ಲಿ ರಾಜ್ಯದಾದ್ಯಂತ 25 ಸಾವಿರ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸುವ ಉದ್ದೇಶವನ್ನು ಬ್ಯಾಂಕ್ ಹೊಂದಿದೆ. 56 ಸಾವಿರ ಸ್ವಸಹಾಯ ಗುಂಪುಗಳಿಗೆ 750 ಕೋಟಿ ರೂಪಾಯಿ ಸಾಲ ನೀಡಲು ಚಿಂತನೆ ನಡೆಸಿದೆ~ ಎಂದರು.`ಇದೇ ಜೂನ್ ವೇಳೆಗೆ ರಾಜ್ಯದ 21 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಹಾಗೂ ಅಪೆಕ್ಸ್ ಬ್ಯಾಂಕ್ ಬೆಂಗಳೂರಿನಲ್ಲಿ ಹೊಂದಿರುವ 40 ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಬ್ಯಾಂಕ್ ಗ್ರಾಹಕರಿಗೆ ಪ್ರಯೋಜನವಾಗಲು ಹಾಗೂ ಎಲ್ಲಾ ಬ್ಯಾಂಕ್‌ಗಳೊಂದಿಗೆ ವ್ಯವಹಾರ ಸುಗಮಗೊಳಿಸಲು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯ ಅಗತ್ಯವೂ ಇದೆ~ ಎಂದು ಅವರು ಹೇಳಿದರು.`ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳುವ ಬಗ್ಗೆ ನಬಾರ್ಡ್ ಕೂಡಾ ನಿರ್ದೇಶನ ನೀಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ 4680 ಪ್ರಾಥಮಿಕ ಸಹಕಾರಿ ಬ್ಯಾಂಕ್‌ಗಳಲ್ಲೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಬ್ಯಾಂಕ್‌ನ ಜಿಲ್ಲಾ ಶಾಖೆಗಳಲ್ಲೂ ಶೀಘ್ರವೇ ಎಟಿಎಂ ನೆಲೆಗೊಳಿಸಲಾಗುವುದು~ ಎಂದರು.`ಬ್ಯಾಂಕ್‌ಗೆ 2011-12ನೇ ಸಾಲಿನಲ್ಲಿ 2,908 ಕೋಟಿ ರೂಪಾಯಿಗಳಷ್ಟು ಹೂಡಿಕೆಯಾಗಿದ್ದು, ಕಳೆದ ಸಾಲಿನ ಒಟ್ಟೂ ವ್ಯವಹಾರದಿಂದ 61.40 ಕೋಟಿ ರೂಪಾಯಿ ಲಾಭವಾಗಿದೆ. ಕಳೆದ ಸಾಲಿನಲ್ಲಿ ಶೇ. 4.31ರಷ್ಟಿದ್ದ ಬ್ಯಾಂಕ್‌ನ ಅನುತ್ಪಾದಕ ಆಸ್ತಿ ಪ್ರಮಾಣ(ಎನ್‌ಪಿಎ) ಈ ಬಾರಿ ಶೇ. 3.68ರಷ್ಟಕ್ಕೆ ತಗ್ಗಿದೆ ಎಂದು ವಿವರಿಸಿದರು.ಈ ಸಾಲಿನಲ್ಲಿ ಕೃಷಿ ಸಾಲಗಳು ಪೂರ್ಣ ಪ್ರಮಾಣದಲ್ಲಿ ಮರುಪಾವತಿ ಆಗಿದ್ದರೂ ಕೆಲವು ಸಕ್ಕರೆ ಕಾರ್ಖಾನೆಗಳ ಬಾಬ್ತು ಬಾಕಿ ಬರಬೇಕಿದೆ. ಈ ಹಣಕಾಸು ವರ್ಷದಲ್ಲಿ ರಾಜ್ಯದ ಯಾವುದೇ ಸಹಕಾರಿ ಬ್ಯಾಂಕ್‌ಗಳೂ ನಷ್ಟದಲ್ಲಿಲ್ಲದೇ ಇರುವುದು ಆಶಾದಾಯಕ ಬೆಳವಣಿಗೆ~ ಎಂದು ಅವರು ತಿಳಿಸಿದರು.`97 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಬ್ಯಾಂಕ್, ಮುಂದಿನ ಹಣಕಾಸು ವರ್ಷದಲ್ಲಿ ಠೇವಣಿ ಪ್ರಮಾಣವನ್ನು 6 ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ. ಅಲ್ಲದೆ, ಲಾಭದ ಪ್ರಮಾಣವನ್ನೂ 100 ಕೋಟಿ ರೂಪಾಯಿಗೆ ಮುಟ್ಟಿಸುವ ಗುರಿಯನ್ನೂ ಹೊಂದಿದೆ~ ಎಂದು ಅವರು ಬ್ಯಾಂಕ್ ಭವಿಷ್ಯದ ಯೋಜನೆ ವಿವರಿಸಿದರು.ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಚೊಕ್ಕ ಬಸವನಗೌಡ, ಮುಖ್ಯ ಕಾರ್ಯನಿರ್ವಣಾಧಿಕಾರಿ ಅಶ್ವತ್ಥ ನಾರಾಯಣ, ನಿರ್ದೇಶಕರಾದ ಬಸವೇಗೌಡ, ಎಂ.ಎ.ರಮೇಶ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.