ಬುಧವಾರ, ಮೇ 18, 2022
23 °C

ಅಬೈಡ್ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ಬೃಹತ್ ಯೋಜನೆಗಳಲ್ಲಿ ಹಣ ತೊಡಗಿಸುವುದರ ಮೂಲಕವೇ ತಮ್ಮ ನಾಯಕತ್ವದ ಗುಣವನ್ನು ಪ್ರದರ್ಶಿಸಬಹುದು ಎಂಬ ತಪ್ಪು ಕಲ್ಪನೆ ನಮ್ಮ ರಾಜಕೀಯ ನಾಯಕರಲ್ಲಿದೆ. ಆದರೆ ಹೊಸ ಯೋಜನೆಗಳನ್ನು ಘೋಷಿಸುವುದು ಮತ್ತು ಹಣ ಖರ್ಚು ಮಾಡುವುದಕ್ಕಿಂತಲೂ ಗಂಭೀರವಾದ ಸಮಸ್ಯೆಗಳಿವೆ ಎನ್ನುವುದನ್ನು ಗಮನಿಸುವುದು ಅಗತ್ಯ.ಪ್ರಗತಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಬೆಂಗಳೂರು ವಿಪರೀತ ಎನ್ನುವಂಥ ಪರಿವರ್ತನೆ ಕಾಣುತ್ತಿದೆ. ನಮ್ಮ ನಗರ ಬದಲಾಗುತ್ತಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಜನರನ್ನು ಅಸಂತುಷ್ಟಗೊಳಿಸಿದ್ದು ಅವರ ಜೀವನಶೈಲಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ.ದುರದೃಷ್ಟವಶಾತ್ ಇಂಥ ನಿರ್ಧಾರಗಳಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಜನರು ತಿಳಿಯುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ನಮ್ಮ ಹೆಮ್ಮೆಯ ನಗರ ಶಾಶ್ವತವಾಗಿ ವಿರೂಪಗೊಳ್ಳುತ್ತದೆ. ಸ್ಯಾಂಕಿ ರಸ್ತೆ, ಕಾವೇರಿ ಜಂಕ್ಷನ್‌ನಲ್ಲಿ ಸೂಕ್ತ ಯೋಜನೆಯಿಲ್ಲದೆ ನಿರ್ಮಿಸಿರುವ ಮ್ಯಾಜಿಕ್ ಬಾಕ್ಸ್‌ಗಳು, ಚಾಲುಕ್ಯ ವೃತ್ತದಲ್ಲಿ ಜನರೇ ಬಳಸದ ಅಂಡರ್‌ಪಾಸ್ ಮತ್ತು ಕೆ.ಆರ್ ವೃತ್ತದ ಸ್ವರೂಪವೇ ಬದಲಾಗಿರುವುದು ಇದಕ್ಕೆ ಸಾಕ್ಷಿ.ಸರ್ಕಾರದ ಯೋಜನೆ ಮತ್ತು ಬಂಡವಾಳ ಹೂಡಿಕೆಯಲ್ಲಿ ಏನೇನು ತಪ್ಪುಗಳಾಗುತ್ತಿವೆ ಎನ್ನುವುದಕ್ಕೆ ಪ್ರಸ್ತಾವಿತ ಅತಿ ವೇಗದ ರೈಲು ಸಂಪರ್ಕ ಯೋಜನೆ (ಎಚ್‌ಎಸ್‌ಆರ್‌ಎಲ್) ಉತ್ತಮ ಉದಾಹರಣೆಯಾಗಿದೆ. ಮೇಲುನೋಟಕ್ಕೆ ಕಾರ್ಯಸಾಧುವಾದ ಯೋಜನೆಯಂತೆ ಭಾಸವಾಗುವ ಇದು ಆಳದಲ್ಲಿ ಅನೇಕ ನ್ಯೂನತೆಗಳನ್ನು ಹೊಂದಿದೆ.

 

ಪಾಯಿಂಟ್‌ನಿಂದ ಪಾಯಿಂಟ್‌ಗೆ ನಿಶ್ಚಿತ ಸಂಪರ್ಕ ಕಲ್ಪಿಸುತ್ತದೆ, ರಸ್ತೆ ಸಂಪರ್ಕಕ್ಕಿಂತ ವೇಗಯುಕ್ತ, ಖಾಸಗಿ ಕಂಪೆನಿ ಸೇವೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯ ಉಸ್ತುವಾರಿ ವಹಿಸುತ್ತದೆ ಇತ್ಯಾದಿ ಕೆಲವೇ ಕೆಲವು ಒಳ್ಳೆಯ ಅಂಶಗಳನ್ನು ಹೊರತು ಪಡಿಸಿದರೆ ಎಚ್‌ಎಸ್‌ಆರ್‌ಎಲ್ ಯೋಜನೆಯಿಂದ ಉಂಟಾಗಬಹುದಾದ ದುಷ್ಪರಿಣಾಮವೇ ಹೆಚ್ಚು.ಯೋಜನೆ ಕುರಿತು ಅಬೈಡ್ ವಿಸ್ತೃತವಾದ ಪರಿಶೀಲನೆ ನಡೆಸಿದಾಗ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ ಕಲ್ಪಿಸಲು ಸೂಕ್ತವಾದ ಯೋಜನೆ ಇದಲ್ಲ ಎನ್ನುವುದು ಸ್ಪಷ್ಟವಾಗಿದೆ. ಅತಿ ವೇಗದ ರೈಲು ಯೋಜನೆ ಇದಾಗಿದೆ ಎಂದು ಸಂಬಂಧಧಪಟ್ಟ ಅಧಿಕಾರಿಗಳು ಹೇಳಿಕೊಂಡರೂ ಮೆಟ್ರೋಗಿಂತ ತುಸುವೇ ವೇಗವಾಗಿ ಚಲಿಸುತ್ತದೆ ಎಂಬುದು ವಾಸ್ತವ ಸಂಗತಿ. ಕೇವಲ ಕೆಲವೇ ನಿಲ್ದಾಣಗಳನ್ನು ಹೊಂದಿರುವ ಕಾರಣಕ್ಕಾಗಿ ಜನರಲ್ಲಿ ವೇಗದ ರೈಲಿನ ಕಲ್ಪನೆಯನ್ನು ಉಂಟು ಮಾಡುತ್ತದೆ ಅಷ್ಟೆ. ಹೈಸ್ಪೀಡ್ ಎನ್ನುವ ಪದವೇ ಜನರನ್ನು ದಾರಿ ತಪ್ಪಿಸುವ ತಂತ್ರವಾಗಿ ಕಾಣಿಸುತ್ತಿದೆ.ಈಗ ನಗರಕ್ಕೆ ಕೇವಲ ಸ್ಯಾಂಕಿ ರಸ್ತೆಯಂತಹ ಒಂದು ರಸ್ತೆಯನ್ನು ಹೊರತು ಪಡಿಸಿದರೆ ಪರ್ಯಾಯ ರಸ್ತೆಗಳಿಲ್ಲ. ಬೇರೆ ನಗರಗಳಲ್ಲಿ, ನಗರದಿಂದ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಬೈಪಾಸ್ ರಸ್ತೆಗಳಿದ್ದು ಈ ಬಗ್ಗೆ ಸರ್ಕಾರ ಚಿಂತಿಸಬೇಕು ಎಂಬುದನ್ನು ಅಬೈಡ್ ತನ್ನ ಪ್ರಸ್ತಾವನೆಯಲ್ಲಿ ಶಿಫಾರಸು ಮಾಡಿದೆ. ಈ ಯೋಜನೆಯು ಪ್ರತ್ಯೇಕವಾದ ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದ ಯೋಜನೆಯಾಗಿದ್ದು, ಖಾಸಗಿ ಕಂಪೆನಿಯು ಇಡೀ ಸೇವೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯ ಉಸ್ತುವಾರಿಯನ್ನು ವಹಿಸಲಿದೆ. ಯೋಜನೆಯ ಕೊರತೆಯನ್ನು ತುಲನೆ ಮಾಡಿದರೆ;* ಯೋಜನೆ ಆರಂಭವಾದರೆ ಅದಕ್ಕಾಗಿ ಪ್ರತ್ಯೇಕ ಮೂಲಸೌಕರ್ಯ ನಿರ್ಮಾಣವಾಗಬೇಕು. ಎಲ್ಲ ಕಡೆಗಳಲ್ಲಿ ಕಾಂಕ್ರೀಟ್ ಕಂಬಗಳು ಏಳುತ್ತವೆ. ಭೂಸ್ವಾಧೀನ, ಮರಗಳ ನಾಶ ಇತ್ಯಾದಿ ಸಮಸ್ಯೆಗಳು ಶುರುವಾಗುತ್ತವೆ. ಮೆಟ್ರೊ ಯೋಜನೆಯಿಂದ ತತ್ತರಿಸಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ನಗರದ ಮೇಲೆ ಮತ್ತೊಂದು ಪ್ರಹಾರ ಆರಂಭವಾಗುತ್ತದೆ. ಇದಕ್ಕಿಂತ ಮಿಗಿಲಾಗಿ ನಗರದ ಪರಂಪರೆಯ ಸಂಕೇತವಾಗಿರುವ ಜಯಮಹಲ್ ಅರಮನೆ, ಗಾಲ್ಫ್ ಕ್ಲಬ್ ಇತ್ಯಾದಿ ಸ್ಥಳಗಳು ಸ್ವಾಧೀನವಾಗಲಿವೆ ಎಂಬ ಸುದ್ದಿ ಇದೆ.*ಯೋಜನೆಯಯ ಮೂಲಸೌಲಭ್ಯವನ್ನು ಮೆಟ್ರೊದ ಜೊತೆ ಹಂಚಿಕೊಳ್ಳುವ ಪ್ರಸ್ತಾಪ ಇಲ್ಲ. (ಈಗಾಗಲೇ ಮೆಟ್ರೊ ಯೋಜನೆಗಾಗಿ ಸರ್ಕಾರ ಸಾಕಷ್ಟು ಹಣ ಮತ್ತು ಸಂಪನ್ಮೂಲವನ್ನು ವಿನಿಯೋಗಿಸಿದೆ.)* ಎಲ್ಲ ಪ್ರಯಾಣಿಕರು ನಗರದ ಕೇಂದ್ರಭಾಗವಾಗಿರುವ ಕಬ್ಬನ್ ರಸ್ತೆಗೆ ಮೆಟ್ರೊ, ಬಸ್, ಕಾರು ಮೂಲಕ ಆಗಮಿಸಿ ಬಳಿಕ ಟರ್ಮಿನಲ್ ಬದಲಾಯಿಸಿ ವಿಮಾನನಿಲ್ದಾಣ ತಲುಪಲು ಎಚ್‌ಎಸ್‌ಆರ್‌ಎಲ್ ರೈಲನ್ನು ಹಿಡಿಯಬೇಕು.* ಎಚ್‌ಎಸ್‌ಆರ್‌ಎಲ್ ನಿಲ್ದಾಣ ನಗರದ ಕೇಂದ್ರಭಾಗದಲ್ಲಿ ತಲೆ ಎತ್ತಿದರೆ ಈ ಸ್ಥಳದಲ್ಲಿ ಮತ್ತೆ ಸಂಚಾರ ದಟ್ಟಣೆ ಹೆಚ್ಚುತ್ತದೆ. ಹಾಗಾಗಿ ನಗರದ ಹೃದಯಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಸರ್ಕಾರದ ಮೂಲ ಉದ್ದೇಶವೇ ಮರೆಯಾದಂತಾಗುತ್ತದೆ. ಅಲ್ಲದೇ ಪಾರ್ಕಿಂಗ್ ಸಮಸ್ಯೆಯೂ ತಲೆದೋರುತ್ತದೆ. ಯೋಜನೆಗಾಗಿ ಕಬ್ಬನ್ ಉದ್ಯಾನವನ್ನೇ ಪಾರ್ಕಿಂಗ್ ಪ್ರದೇಶವಾಗಿ ಬದಲಾಯಿಸುವ ಸನ್ನಿವೇಶ ಸೃಷ್ಟಿಯಾದರೂ ಅಚ್ಚರಿ ಪಡಬೇಕಿಲ್ಲ.* ಇದು ಖಾಸಗಿ ಸಹಭಾಗಿತ್ವದ ಯೋಜನೆಯಾಗಿರುವುದರಿಂದ ಸೇವೆಯೂ ದುಬಾರಿ. ಕಂಪೆನಿಯ ಏಕಸ್ವಾಮ್ಯತೆಯಿಂದಾಗಿ ಪ್ರಯಾಣ ದರ ಮನಬಂದಂತೆ ಹೆಚ್ಚಾಗಬಹುದು. ಉದಾಹರಣೆಗೆ ಖಾಸಗಿ ವಿಮಾನ ಕಂಪೆನಿಗಳು ಪ್ರಯಾಣದ ದರವನ್ನು ಮನ ಬಂದಂತೆ ಏರಿಸುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಸರ್ಕಾರವೂ ಯೋಜನೆಯಲ್ಲಿ ಸಾಕಷ್ಟು ಬಂಡವಾಳ ಹೂಡಬೇಕು. ಆ ಬಂಡವಾಳ ತೆರಿಗೆದಾರರ ಹಣವೇ ಆಗಿದೆ. ಅಲ್ಲದೇ ಅನೇಕ ಬಾರಿ ಖಾಸಗಿ ಸಹಭಾಗಿತ್ವದ ಯೋಜನೆಗಳಲ್ಲಿ ಸರ್ಕಾರದ ನಿಯಂತ್ರಣ ಸಾಧ್ಯವಾಗದೇ ಇರುವುದರಿಂದ ಖಾಸಗಿ ಸಂಸ್ಥೆಯ ಲಾಭಕೋರತನವೇ ಮೇಲುಗೈ ಸಾಧಿಸುತ್ತದೆ.ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕದ ಅಗತ್ಯವನ್ನು ತಳ್ಳಿ ಹಾಕುವುದು ಸಾಧ್ಯವೇ ಇಲ್ಲ. ಯೋಜನೆ ಕುರಿತು ಅಧ್ಯಯನ ನಡೆಸಿರುವ ಅಬೈಡ್, ಎಚ್‌ಎಸ್‌ಆರ್‌ಎಲ್‌ಗಿಂತಲೂ ಸೂಕ್ತವಾದ, ಉತ್ತಮವಾದ ರೈಲು ಸಂಪರ್ಕವನ್ನು ಶಿಫಾರಸ್ಸು ಮಾಡುತ್ತದೆ. ಅದೆಂದರೆ ಮೆಟ್ರೊ ಜಾಲವನ್ನೇ ವಿಮಾನ ನಿಲ್ದಾಣದವರೆಗೆ ವಿಸ್ತರಿಸುವುದು. ಇದರಿಂದ ಅನೇಕ ಪ್ರಯೋಜನಗಳಿದ್ದು ಮುಖ್ಯವಾಗಿ ಪ್ರತ್ಯೇಕ ಮೂಲಸೌಕರ್ಯದ ಅಗತ್ಯವಿಲ್ಲ. ನಗರದ ಕೇಂದ್ರ ಭಾಗದಲ್ಲಿ ಮತ್ತೆ ಭೂಮಿ ಕೊರೆಯುವ, ಸಂಚಾರ ಅಸ್ತವ್ಯಸ್ತಗೊಳಿಸುವ ಪ್ರಮೇಯ ಇರುವುದಿಲ್ಲ. ನಗರದ ಕೇಂದ್ರ ಭಾಗದಲ್ಲಿ ವಾಹನ ದಟ್ಟಣೆ ಹೆಚ್ಚುವುದಿಲ್ಲ. ನಗರದ ಕೇಂದ್ರ ಭಾಗಕ್ಕೆ ತೆರಳುವ ಅನಿವಾರ್ಯತೆ ಇರದೇ ಪ್ರಯಾಣಿಕರು ಯಾವುದೇ ಭಾಗದಿಂದ ವಿಮಾನನಿಲ್ದಾಣಕ್ಕೆ ನೇರವಾಗಿ ಪ್ರಯಾಣಿಸಬಹುದು.ಮೆಟ್ರೊ ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಖಾಸಗಿ- ಸರ್ಕಾರಿ ಸಹಭಾಗಿತ್ವದ ಯೋಜನೆಯಲ್ಲಿರುವ ಪ್ರಯಾಣ ದರ ಏರಿಕೆ ಭೀತಿ ಇರುವುದಿಲ್ಲ. ದೆಹಲಿ ಮೆಟ್ರೊದಲ್ಲಿರುವಂತೆ ಪ್ರಯಾಣ ದರ ಪಾರದರ್ಶಕವಾಗಿರುತ್ತದೆ.ಎಚ್‌ಎಸ್‌ಆರ್‌ಎಲ್ ಯೋಜನೆ ಬೆಂಗಳೂರಿನಲ್ಲಿ ವಿನಾಕಾರಣ ಗೊಂದಲದ ವಾತಾವರಣ ಸೃಷ್ಟಿಸಲಿದೆ. ಸಮಗ್ರ ಬೆಂಗಳೂರನ್ನು ದೂರದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಬೇಕೆಂಬ ಪರಿಜ್ಞಾನ ಸಂಬಂಧಪಟ್ಟ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ ಇಲ್ಲ. ನಾವು ಇಷ್ಟು ದಿನ ಜೀವನ ನಡೆಸಿದ, ಸದಾ ಪ್ರೀತಿಸುವ ನಗರ ಶಾಶ್ವತವಾಗಿ ಕಳೆದು ಹೋಗಬಾರದು ಎಂಬ ಕಾಳಜಿಯಿಂದಲಾದರೂ ಬೆಂಗಳೂರಿನ ನಾಗರಿಕರು ಮತ್ತು ಸರ್ಕಾರ ಎಚ್‌ಎಸ್‌ಆರ್‌ಎಲ್ ಯೋಜನೆಯನ್ನು ಶತಾಯಗತಾಯ ತಡೆಯಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.