ಭಾನುವಾರ, ಏಪ್ರಿಲ್ 18, 2021
30 °C

ಅಬ್ಬರಿಸಿದ ಮಳೆ, ತತ್ತರಿಸಿತು ಧರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪ: ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಆಶ್ಲೇಷ ಮಳೆಯಿಂದ ತುಂಗಾ ಹಾಗೂ ಅದರ ಉಪನದಿಗಳಲ್ಲಿ ಪ್ರವಾಹ ಉಂಟಾಗಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.ತಾಲ್ಲೂಕಿನ ನಾರ್ವೆ, ಬಿ.ಜಿ. ಕಟ್ಟೆ, ಆರಡಿಕೊಪ್ಪ, ಅಂಬಳಿಕೆ, ನಾಗಲಾಪುರ, ಕಾರಂಗಿಗಳಲ್ಲಿ ತುಂಗಾಪ್ರವಾಹ ರಸ್ತೆಗೆ ನುಗ್ಗಿ ಸಾರಿಗೆ ಸಂಚಾರ ನಿಂತಿದೆ.ಚಿಕ್ಕಮಗಳೂರು ರಸ್ತೆಯ ನಾರ್ವೆ ಘಾಟಿಯಲ್ಲಿ ಭೂ ಕುಸಿತ ಉಂಟಾಗಿ ರಸ್ತೆ ಸಂಪೂರ್ಣ ಬಂದಾಗಿತ್ತು.ಲೋಕೋಪಯೋಗಿ ಇಲಾಖೆ ತ್ವರಿತ  ಕಾರ್ಯಾಚರಣೆ ನಡೆಸಿ ರಸ್ತೆಗೆ ಬಿದ್ದ ಬಂಡೆ, ಮಣ್ಣನ್ನು ತೆರವುಗೊಳಿಸಿತು.

ನಾಗಲಾಪುರದಲ್ಲಿ ಹಲವು ಮನೆಗಳ ಸುತ್ತ ಪ್ರವಾಹದ ನೀರು ಆವರಿಸಿತ್ತು. ನೂರಾರು ಎಕರೆ ನಾಟಿ ಮಾಡಿದ ಗದ್ದೆಗಳು ಜಲಾವೃತಗೊಂಡಿದ್ದವು. ಅಂಬಳಿಕೆಯಲ್ಲಿ ಎ.ಪಿ.ಎಂ.ಸಿ. ಯಾರ್ಡ್ ಸೇರಿದಂತೆ ಹಲವು ವಾಣಿಜ್ಯ ಮಳಿಗೆಗಳು ಪ್ರವಾಹದಲ್ಲಿ ಮುಳುಗಿದ್ದವು. ಕಾರಂಗಿಯಲ್ಲಿ ರಸ್ತೆಗೆ ನುಗ್ಗಿದ ನೀರಿನ ಪ್ರವಾಹದಲ್ಲಿ ರಾಜ್ಯ ಸಾರಿಗೆ ಬಸ್ಸೊಂದು ಸಿಲುಕಿಕೊಂಡಿತ್ತು.ನರಸಿಪುರದಲ್ಲಿ ಒಡ್ನಾಳ್ಳದ ಪ್ರವಾಹ ರಸ್ತೆ ಮೇಲೆ ನುಗ್ಗಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಆಗುಂಬೆ, ಚಿಕ್ಕಮಗಳೂರು ಹಾಗೂ ಶೃಂಗೇರಿ ಮಾರ್ಗದ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ನಾರ್ವೆಯಲ್ಲಿ ಭತ್ತದ ಸಸಿನಾಟಿಗೆ ಸಿದ್ಧಪಡಿಸಿದ್ದ ಸಸಿಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.ಅಬ್ಬಿಗದ್ದೆ ಹಳ್ಳದಲ್ಲಿ ದರೆಕುಸಿದು ಪ್ರವಾಹದ ನೀರು ಭತ್ತದ ಗದ್ದೆಗಳ ಮೇಲೆ ಹರಿದು ಹಾನಿ ಸಂಭವಿಸಿತು. ನಾಗಲಾಪುರದ ಕುಸುಮ ಎಂಬುವರ ಮನೆ ಮೇಲೆ ಭೂಕುಸಿದು ಬಿದ್ದು ಹಾನಿ ಸಂಭವಿಸಿದೆ. ಹರಿಹರಪುರ ಜಲದುರ್ಗ ದೇವಸ್ಥಾನದ ಅಂಗಳ ಕುಸಿದು ನದಿಗೆ ಸೇರಿದೆ. ಕಳಸಾಪುರದಲ್ಲಿ ಕೆರೆತುಂಬಿ ಉಕ್ಕಿದ ಪರಿಣಾಮ ಅಡಿಕೆ ತೋಟ ಹಾಗೂರಸ್ತ್ರೆಗೆ ತೀವ್ರತರ ಹಾನಿಯುಂಟಾಗಿದೆ. ಶಾನುವಳ್ಳಿ, ಅಸಗೋಡು, ನಾಗಲಾಪುರ, ಹರಕನಮಕ್ಕಿಗಳಲ್ಲಿ ಮನೆಗಳಿಗೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ.ಗುಡ್ಡೆತೋಟ ಗ್ರಾ.ಪಂ. ಹಿಂಭಾಗದಲ್ಲಿ ಭೂಕುಸಿತ ಉಂಟಾಗಿದ್ದು ಕಾಲೊನಿ ವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಮೇಗುಂದ ಹೋಬಳಿಯ ಹಲವೆಡೆ ಭೂಕುಸಿತ ಉಂಟಾಗಿದೆ. ತಾಲ್ಲೂಕಿನಲ್ಲಿ 185 ಎಂಎಂ ದಾಖಲೆ ಮಳೆ ಸುರಿದಿದೆ. ನಾರ್ವೆ, ನಾಗಲಾಪುರಗಳಲ್ಲಿ ಅಡಿಕೆ ತೋಟಗಳಿಗೆ ಪ್ರವಾಹ ನುಗ್ಗಿ ಹಾನಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್. ಜೀವರಾಜ್, ತಹಶಿಲ್ದಾರ್ ಲಿಂಗಪ್ಪಗೌಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿನೀಡಿ ಪರೀಶೀಲಿಸಿದರು. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಪ್ರವಾಹ ವೀಕ್ಷಣೆಗೆ ಜನ ಬರುತ್ತಿದ್ದದ್ದು ಕಂಡು ಬಂತು.

ಮುಂದುವರಿದ ಮಳೆಯ ಅಬ್ಬರ: ಜನಜೀವನ ಅಸ್ತವ್ಯಸ್ತ

ಬಾಳೆಹೊನ್ನೂರು: ಮಳೆಯ ಅಬ್ಬರ ಮಂಗಳವಾರವೂ ಮುಂದುವರೆದಿದ್ದು ಬಾಳೆಹೊನ್ನೂರು ಸಸುತ್ತಮುತ್ತಲಿನ ಸಂಪೂರ್ಣ ಜನಜೀವನ ಅಸ್ತವ್ಯಸ್ತಗೊಂಡಿದೆ.ಸೋಮವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಪಟ್ಟಣದ ಕೆಳಗಿನ ಪೇಟೆಯ ಹಿಂಬಾಗದ ಅಡಿಕೆ ತೋಟ, ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ.ಬಾಳೆಹೊನ್ನೂರು ಮತ್ತು ಕಳಸ ಸಂಪರ್ಕ ಕಲ್ಪಿಸುವ  ಬೈರೆಗುಡ್ಡ ಎಂಬಲ್ಲಿ ರಸ್ತೆಯ ಮೇಲೆ ಭದ್ರಾ ನದಿಯ ನೀರು ತುಂಬಿ ಹರಿಯುತ್ತಿದ್ದು ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಹೊರನಾಡಿನಿಂದ ವಾಪಾಸ್ಸು ತೆರಳುತ್ತಿದ್ದ ನೂರಾರು ಪ್ರವಾಸಿಗರು ಬೆಳಿಗ್ಗೆಯಿಂದ ಸಂಜೆ  ಐದು ಗಂಟೆವರೆಗೆ ರಸ್ತೆ ಅಂಚಿನಲ್ಲೆ ದಿನಕಳೆಯುವಂತಾಯಿತು.ರಂಭಾಪುರಿ ಮಠ ಮತ್ತು ನರಸಿಂಹರಾಜಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ದೋಬಿ ಹಳ್ಳ ಉಕ್ಕಿ ಹರಿದ ಪರಿಣಾಮ ಹಲವು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಅಲ್ಲದೆ ಅಂಗಡಿ ಮುಂಗಟ್ಟುಗಳಿಗೆ ನೀರು ತುಂಬಿದ ಪರಿಣಾಮ ಹಾನಿ ಉಂಟಾಗಿದೆ. ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಸರಿಕಟ್ಟೆ, ಕವನಹಳ್ಳ, ಹುತ್ತಿನಗದ್ದೆ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ದಿನದೂಡುವಂತಾಗಿದೆ. ವ್ಯಾಪಕ ಮಳೆಯ ಹಿನ್ನಲೆಯಲ್ಲಿ ಪಟ್ಟಣದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ವಿವಿಧ ಕಡೆಯಿಂದ ಕಳಸ ಮತ್ತು ಕೊಪ್ಪಕ್ಕೆ ತೆರಳಲು ಆಗಮಿಸಿದ್ದ ಪ್ರಯಾಣಿಕರು ಬಸ್‌ಗಳಿಲ್ಲದೆ ಪರದಾಡುವಂತಾಯಿತು.ಜಯಪುರ ವರದಿ:  ಕೊಪ್ಪ-ಜಯಪುರ ಸಂಪರ್ಕ ಕಲ್ಪಿಸುವ ಅರ್ಡಿಕೊಪ್ಪ ಎಂಬಲ್ಲಿ ರಸ್ತೆಯ ಮೇಲೆ ನೀರು ನಿಂತ ಪರಿಣಾಮ ಬಸ್ ಸಂಚಾರ ಸೇರಿದಂತೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.