ಬುಧವಾರ, ಮೇ 19, 2021
24 °C

ಅಬ್ಬರಿಸಿ ದುರ್ಬಲಗೊಂಡ ಮುಂಗಾರು

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಡಿಕೆಗಿಂತ ಎರಡು ದಿನ ಮುಂಚಿತವಾಗಿಯೇ ರಾಜ್ಯವನ್ನು ಪ್ರವೇಶಿಸಿ ಆಸೆ ಚಿಗುರಿಸಿದ್ದ ನೈರುತ್ಯ ಮುಂಗಾರು, ಎಂಟು ದಿನ ಕಳೆಯುವಷ್ಟರಲ್ಲಿ ಕ್ಷೀಣಗೊಂಡಿದೆ. ಕೆಆರ್‌ಎಸ್ ಅಣೆಕಟ್ಟೆಗೆ ನೀರು ತರುವ ಕೇರಳದಲ್ಲೂ ಮುಂಗಾರು ದುರ್ಬಲಗೊಂಡಿದ್ದು, ವೈನಾಡಿನ ಘಟ್ಟ ಪ್ರದೇಶದಲ್ಲಿ ಕೂಡ ಮಳೆ ಕೊರತೆ ಉಂಟಾಗಿದೆ.`ಕಳೆದ 48 ಗಂಟೆಗಳ ಅವಧಿಯಲ್ಲಿ ಮುಂಗಾರು ಕ್ಷೀಣಿಸಿದ್ದು ನಿಜ. ಆದರೆ, ಜೂನ್ ತಿಂಗಳ ಮೊದಲ ವಾರದಲ್ಲಿ ರಾಜ್ಯದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಚೆನ್ನಾಗಿ ಮಳೆ ಸುರಿದಿದೆ. ಚಾಮರಾಜನಗರ ಜಿಲ್ಲೆಯೊಂದನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 20ಕ್ಕಿಂತ ಅಧಿಕ ಮಳೆ ಬಿದ್ದಿದೆ. ರಾಜ್ಯದ ಶೇ 66ರಷ್ಟು ಕೃಷಿ ಭೂಮಿ ಈಗಾಗಲೇ ಒದ್ದೆಯಾಗಿದೆ' ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.`ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಮಳೆ ಸುರಿಯುವ ಪ್ರಮಾಣ ಹೆಚ್ಚು. ಕರಾವಳಿಯಲ್ಲಿ ಈಗಲೂ ಚೆನ್ನಾಗಿ ಮಳೆ ಸುರಿಯುತ್ತಿದೆ. ಒಳನಾಡಿನ ಉತ್ತರ ಭಾಗದಲ್ಲೂ ಮುಂಗಾರು ಮೋಡಗಳು ಹರಡಿದ್ದು ಹಲವೆಡೆ ಮಳೆ ಸುರಿದಿದೆ. ನೈರುತ್ಯ ಮುಂಗಾರು ಈಗಾಗಲೇ ಮಹಾರಾಷ್ಟ್ರ, ಸೌರಾಷ್ಟ್ರ, ಗುಜರಾತ್, ಒಡಿಶಾ, ಛತ್ತೀಸ್‌ಗಡ ಮತ್ತು ಪಶ್ಚಿಮ ಬಂಗಾಲಕ್ಕೂ ವ್ಯಾಪಿಸಿದೆ' ಎಂದು ಅವರು ಹೇಳಿದರು.`ಮೋಡಗಳ ರಚನೆ ತೀವ್ರಗೊಂಡಿದ್ದು, ಮಲಯ ಮಾರುತಗಳು ಹೆಚ್ಚಾಗಿವೆ. ಭೂಪ್ರದೇಶದತ್ತ ಕಪ್ಪು ಮೋಡಗಳು ಧಾವಿಸುತ್ತಿದ್ದು, ಮುಂದಿನ ಹತ್ತು ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಮಳೆ ಸುರಿಯಲಿದೆ. ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಇಲ್ಲ' ಎಂದು ಅವರು ಸ್ಪಷ್ಟಪಡಿಸಿದರು.ಉತ್ತಮ ಮುಂಗಾರು: `ರಾಜ್ಯದಲ್ಲಿ ಈ ಸಲ ಉತ್ತಮ ಮುಂಗಾರಿನ ಸ್ಪಷ್ಟ ಸೂಚನೆಗಳು ಲಭ್ಯವಾಗಿವೆ. ಮಳೆಗಾಲ ಆರಂಭವಾಗಿ 10 ದಿನಗಳಷ್ಟೇ ಕಳೆದಿವೆ. ನಾಲ್ಕು ದಿನ ಮಳೆ ಸುರಿಯದ ಮಾತ್ರಕ್ಕೆ ಆತಂಕಪಡುವ ಅಗತ್ಯವಿಲ್ಲ. ಕರಾವಳಿ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸೋಮವಾರವೂ ಮಳೆ ಸುರಿದಿದೆ' ಎಂದು ಅವರು ತಿಳಿಸಿದರು.`ಕೇರಳದಲ್ಲೂ ಮುಂಗಾರು ಚುರುಕುಗೊಳ್ಳಲಿದೆ ಎಂಬ ಆಶಾವಾದ ಹವಾಮಾನ ಮುನ್ಸೂಚನೆಯಿಂದ ವ್ಯಕ್ತವಾಗಿದೆ. ಕೇರಳದ ಸಮುದ್ರ ತೀರದುದ್ದಕ್ಕೂ ಮಳೆಯ ಆರ್ಭಟ ಜೋರಾಗಿದೆ. ವೈನಾಡಿನ ಘಟ್ಟ ಪ್ರದೇಶದಲ್ಲೂ ಮಳೆ ಸುರಿಯಲಿದ್ದು ಕಳವಳದ ಸನ್ನಿವೇಶ ಏನಿಲ್ಲ' ಎಂದು ಹವಾಮಾನ ಇಲಾಖೆ ವರದಿಗಳು ಸ್ಪಷ್ಟಪಡಿಸಿವೆ.`ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಸುರಿಯುವ ಶೇ 50ರಷ್ಟು ಮಳೆ ಮಾತ್ರ ಒಳನಾಡಿನಲ್ಲಿ ಆಗುತ್ತದೆ. ಅದಕ್ಕೆ ಈ ಸಲವೂ ಕೊರತೆಯಿಲ್ಲ. ಕರಾವಳಿಯಲ್ಲಂತೂ ಮುಂಗಾರಿನ ಪ್ರಭಾವ ಉತ್ಸಾಹದಾಯಕವಾಗಿದೆ' ಎಂದು ವರದಿಗಳಲ್ಲಿ ವಿವರಿಸಲಾಗಿದೆ.ಪ್ರಸಕ್ತ ಮುಂಗಾರಿನಲ್ಲಿ ರಾಜ್ಯ 80ರಿಂದ 100 ಸೆಂ.ಮೀ. (32ರಿಂದ 40 ಇಂಚು) ಮಳೆಯನ್ನು ಪಡೆಯುವ ನಿರೀಕ್ಷೆ ಇದೆ. ಕರಾವಳಿಯಲ್ಲಿ 300 ಸೆಂ.ಮೀ.ಯಷ್ಟು, ದಕ್ಷಿಣ ಒಳನಾಡಿನಲ್ಲಿ 74 ಸೆಂ.ಮೀ.ಯಷ್ಟು, ಉತ್ತರ ಒಳನಾಡಿನಲ್ಲಿ 49 ಸೆಂ.ಮೀ.ಯಷ್ಟು ಮಳೆ ಸುರಿಯುವ ಅಂದಾಜಿದೆ. ಸಮುದ್ರ ಮಟ್ಟದಿಂದ ಸಾವಿರ ಅಡಿಗಿಂತ ಎತ್ತರದಲ್ಲಿರುವ ಬೆಂಗಳೂರು ಸಹ ಒಳ್ಳೆಯ ಮಳೆ ಪಡೆಯಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.