ಶುಕ್ರವಾರ, ಮೇ 7, 2021
21 °C
ನಗರ ಸಂಚಾರ

ಅಭಿವೃದ್ಧಿ ನಿರೀಕ್ಷೆಯಲ್ಲಿ ಪ್ರವಾಸಿ ತಾಣಗಳು

ಚಿದಂಬರಪ್ರಸಾದ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಇತಿಹಾಸದ ಗತವೈಭವವನ್ನು ಸಾರುವ ಅನೇಕ ಸಾಕ್ಷಿಗಳು ಈಗಲೂ ಜಿಲ್ಲೆಯಲ್ಲಿವೆ. ಅದರಲ್ಲಿಯೂ ಜಿಲ್ಲಾ ಕೇಂದ್ರವಾಗಿರುವ ನಗರದಲ್ಲಿ ಪುರಾತನ ಕೋಟೆ, ಬೆಟ್ಟಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ. ಹಲವು ಅರಸೊತ್ತಿಗೆಗಳು ಆಳ್ವಿಕೆ ನಡೆಸಿದ ಕುರುಹುಗಳು ಸ್ಮಾರಕಗಳಾಗಿ ನಿಂತಿವೆ. ಆದರೆ ನಗರದಲ್ಲಿರುವ ಪ್ರವಾಸಿ ತಾಣಗಳು ಮಾತ್ರ ಅಭಿವೃದ್ಧಿಯ ನಿರೀಕ್ಷೆಯಲ್ಲಿವೆ.ಕ್ರಿ.ಶ. 9 ನೇ ಶತಮಾನದಲ್ಲಿ ರಾಷ್ಟ್ರಕೂಟ ದೊರೆಗಳಿಂದ ಯಾದಗಿರಿ ಬೆಟ್ಟದ ಮೇಲೆ ಕೋಟೆ ನಿರ್ಮಾಣ ಆಗಿರುವ ಬಗ್ಗೆ ಹಲವು ಶಾಸನಗಳಿಂದ ತಿಳಿಯುತ್ತದೆ ಎಂದು ಪುರಾತತ್ವ ತಜ್ಞರು ಅಭಿಪ್ರಾಯ ಪಡುತ್ತಾರೆ.ಯಾದಗಿರಿ ಬೆಟ್ಟದ ಮೇಲಿರುವ ಮೂರು ಸುತ್ತಿನ ಕೋಟೆ, ರಾಮಲಿಂಗೇಶ್ವರ ದೇವಸ್ಥಾನ, ಇದರ ಪಕ್ಕದಲ್ಲಿಯೇ ಇರುವ ಅಕ್ಕ ತಂಗಿಯರ ಬಾವಿ, ಇಬ್ರಾಹಿಂ ಆದಿಲ್ ಷಾ ಕಾಲದ ತೋಪುಗಳು ಕೋಟೆಯ ಇತಿಹಾಸಕ್ಕೆ ಸಾಕ್ಷಿಗಳಾಗಿ ನಿಂತಿವೆ.

ಜಿಲ್ಲಾ ಕೇಂದ್ರದ ಸೌಂದರ್ಯ ಹಾಗೂ ಐತಿಹಾಸಿಕ ಮಹತ್ವವನ್ನು ಹೆಚ್ಚಿಸುವ ಸ್ಮಾರಕಗಳು ಇದೀಗ ಶಿಥಿಲಾವಸ್ಥೆಗೆ ತಲುಪುತ್ತಿವೆ. ಕೋಟೆಯಲ್ಲಿ ಅನೇಕ ಭಾಗಗಳು ಈಗಾಗಲೇ ಕುಸಿದು ಬಿದ್ದಿವೆ.ಕೋಟೆಯಲ್ಲಿ ಎರಡು ಮತ್ತು ಮೂರನೇ ಸುತ್ತಿನ ಪ್ರವೇಶ ದ್ವಾರಗಳು, ಕಾವಲುಗಾರರ ವಿಶ್ರಾಂತಿ ಕೋಣೆಗಳ ಒಳಗಿನ ಕಟ್ಟಡಗಳ ಅರ್ಧ ಭಾಗ ಕುಸಿದಿದೆ. ಉಳಿದ ಭಾಗ ಅಪಾಯದ ಮುನ್ಸೂಚನೆ ನೀಡುವಂತೆ ಭಾಸವಾಗುತ್ತಿದೆ. ನೀರಿನ ಕೊಳಗಳು ನಿರ್ವಹಣೆ ಇಲ್ಲದೇ ವಿರೂಪಗೊಂಡಿವೆ.ಅಲ್ಲಲ್ಲಿ ಹತ್ತಾರು ತೋಪುಗಳು ಕಾಣ ಸಿಗುತ್ತವೆ. ಚಿಕ್ಕ ಹಾಗೂ ದೊಡ್ಡ ಗಾತ್ರದ ತೋಪುಗಳಿದ್ದು, ಕೆಲವು ಈಗಾಗಲೇ ಮಣ್ಣಿನಡಿ ಸೇರಿವೆ. ಕೋಟೆಯೊಳಗಿನ ಅಕ್ಕ ತಂಗಿಯರ ಬಾವಿಯೂ ಹಾಳಾಗಿದೆ. ಮದ್ದುಗುಂಡು ಹಾಗೂ ಆಹಾರ ಸಂಗ್ರಹಣೆ ಉಗ್ರಾಣ, ಕೋಟೆಯ ಗೋಡೆಗಳು ಕುಸಿದು ಬೀಳುತ್ತಿವೆ.ಕೋಟೆ ಅಭಿವೃದ್ಧಿ: ಕೋಟೆಯನ್ನು ಆಕರ್ಷಕ ಪ್ರವಾಸಿ ತಾಣವನ್ನಾಗಿ ಮಾಡಲು ಈಗಾಗಲೇ ರೂ. 4 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ.ಕೋಟೆ ದುರಸ್ತಿ ಹಾಗೂ ಸಂರಕ್ಷಣೆಗಾಗಿ ಪ್ರವಾಸೋದ್ಯಮ ಇಲಾಖೆಗೆ ರೂ. 4 ಕೋಟಿ ಬಿಡುಗಡೆಯಾಗಿದೆ. ಈಗಾಗಲೇ ಕೋಟೆ ಒಳ ಭಾಗದಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆಗೆಯುವ ಕಾರ್ಯ ಮುಗಿಯುತ್ತಾ ಬಂದಿದ್ದು, ಬಿದ್ದು ಹೋಗಿರುವ ಗೋಡೆಗಳ ಪುನರ್ ನಿರ್ಮಾಣ, ಮೆಟ್ಟಿಲು ನಿರ್ಮಾಣ, ಪ್ರವೇಶ ದ್ವಾರದ ನವೀಕರಣ, ಕೊಳಗಳ ಅಭಿವೃದ್ಧಿ, ಉಗ್ರಾಣ, ತೋಪುಗಳ ಸಂರಕ್ಷಣೆ, ಬೆಳಕಿನ ವ್ಯವಸ್ಥೆ ಇತ್ಯಾದಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.ಕೋಟೆ ನವೀಕರಣ ಕಾಮಗಾರಿಯನ್ನು ರಾಯಚೂರಿನ ನಿರ್ಮಿತಿ ಕೇಂದ್ರದ ಉಸ್ತುವಾರಿಯಲ್ಲಿ ಮಾಡಲಾಗುತ್ತಿದ್ದೆ.

ಕೋಟೆ ಪಕ್ಕದಲ್ಲಿನ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಸುಂದರ ಉದ್ಯಾನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಎರಡು ವರ್ಷ ಕಳೆದರೂ ಕಾಮಗಾರಿ ಮಾತ್ರ ಅಲ್ಲಿಗೆ ನಿಂತಿದೆ. ಜಿನ್ನಪ್ಪನ ಬೆಟ್ಟ: ನಗರದಲ್ಲಿರುವ ಮತ್ತೊಂದು ಪ್ರವಾಸಿ ತಾಣ ಜಿನ್ನಪ್ಪನ ಬೆಟ್ಟ. ಪಾರ್ಶ್ವನಾಥ ತೀರ್ಥಂಕರನ ಸುಮಾರು 4 ಅಡಿ ಎತ್ತರದ ಉಬ್ಬು ಶಿಲ್ಪ ಗಮನ ಸೆಳೆಯುತ್ತದೆ.   ಗುಹಾಂತರ ಬಸದಿಯಲ್ಲಿರುವ ತೀರ್ಥಂಕರ ಶಿಲ್ಪಗಳನ್ನು ನೋಡುಗರನ್ನು ಸೆಳೆಯುತ್ತವೆ. ನಿಖರವಾಗಿ ಕಾಲ ಹೇಳಲು ಆಗುತ್ತಿಲ್ಲ. ರಾಷ್ಟ್ರಕೂಟರ ಕಾಲದಲ್ಲಿ ಈ ಜಿನ್ನಪ್ಪನ ಬೆಟ್ಟ ನಿರ್ಮಾಣ ಆಗಿರಬಹುದು ಎಂಬುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ.ಕಲ್ಲಿನಲ್ಲಿ ಆಳವಾಗಿ ಕೊರೆದಿರುವ 24 ತೀರ್ಥಂಕರರ ರೇಖಾಚಿತ್ರಗಳು ಈ ಜಿನ್ನಪ್ಪನ ಬೆಟ್ಟದಲ್ಲಿದೆ. ಇದು ಅಪರೂಪವಾಗಿದ್ದು, ಶ್ರವಣಬೆಳಗೂಳ, ಬಾದಾಮಿಗಳಲ್ಲಿ ಮಾತ್ರ ಇಂಥ ಶಿಲ್ಪಗಳು ಕಂಡು ಬರುತ್ತವೆ. ಪ್ರವೇಶ ದ್ವಾರದಲ್ಲಿ ನಿಂತಿರುವ ಪಾರ್ಶ್ವನಾಥನ ಒಂದು ಕೆತ್ತನೆ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಪದ್ಮಾವತಿಯ ಶಿಲ್ಪ, ಯಕ್ಷ-ಯಕ್ಷಿಯರ ಶಿಲ್ಪಗಳನ್ನು ಇಲ್ಲಿ ನೋಡಬಹುದಾಗಿದೆ.ಸಂರಕ್ಷಣೆ ಅಗತ್ಯ: ಕೋಟೆಯ ಜೊತೆಗೆ ನಗರದಲ್ಲಿರುವ ಜಿನ್ನಪ್ಪನ ಬೆಟ್ಟದ ಅಭಿವೃದ್ಧಿಗೂ ಸರ್ಕಾರ ವಿಶೇಷ ಗಮನ ನೀಡುವುದು ಅವಶ್ಯಕವಾಗಿದೆ ಎಂದು ಜವಳಿ ವರ್ತಕರ ಸಂಘದ ಅಧ್ಯಕ್ಷ ವಿನೋದ ಜೈನ್ ಹೇಳುತ್ತಾರೆ.ಅಪರೂಪದ 24 ತೀರ್ಥಂಕರರ ಶಿಲ್ಪಗಳನ್ನು ಹೊಂದಿರುವ ಜಿನ್ನಪ್ಪನ ಬೆಟ್ಟವೂ ಸಾಕಷ್ಟು ಮಹತ್ವವನ್ನು ಹೊಂದಿದೆ.

ಬೇರೆಲ್ಲೂ ಇಲ್ಲದ ಶಿಲ್ಪಗಳು ಈ ಬೆಟ್ಟದಲ್ಲಿರುವುದರಿಂದ ಇದರ ಸಂರಕ್ಷಣೆ ಅವಶ್ಯಕವಾಗಿದ್ದು, ಇದನ್ನು ಪ್ರವಾಸೋದ್ಯಮದ ಪಟ್ಟಿಗೆ ಸೇರಿಸಬೇಕೆಂದುಅವರು ಆಗ್ರಹಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.