ಭಾನುವಾರ, ಜುಲೈ 25, 2021
21 °C

ಅಭಿವೃದ್ಧಿ ಯೋಜನೆ ರೂಪಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲ ಇಲಾಖೆಯ ಅಧಿಕಾರಿಗಳು ಸೇರಿ ಸಮಗ್ರ ಯೋಜನೆ ರೂಪಿಸಿ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೂಕುಗಳಲ್ಲಿರುವ ಸಮಸ್ಯೆಗಳ ಬಗ್ಗೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಹೆಚ್ಚಿನ ಅರಿವು ಇರುತ್ತದೆ. ಯೋಜನೆ ತಯಾರಿಸುವ ಸಂದರ್ಭದಲ್ಲಿ ಶಾಸಕರ ಸಲಹೆಯನ್ನೂ ಪಡೆಯಬೇಕು ಎಂದು ಸೂಚಿಸಿದರು.ಮುಂದಿನ ಸಭೆಯಲ್ಲಿ ಸಮಗ್ರ ಯೋಜನೆಯ ಬಗ್ಗೆ ತಮಗೆ ವರದಿ ಸಲ್ಲಿಸಬೇಕು. ಆ ಬಗ್ಗೆ ಸರ್ಕಾರದಿಂದ ಅನುಮೋದನೆ ನೀಡಲಾಗುವುದು ಎಂದರು.ಶಾಸಕ ಎನ್. ಚಲುವರಾಯಸ್ವಾಮಿ ಮಾತನಾಡಿ, ವಿದ್ಯುತ್ ಪರಿವರ್ತಕ (ಟಿಸಿ) ದುರಸ್ತಿ ಶೀಘ್ರ ಮಾಡದ ಕಾರಣ ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರಿಗೆ ಸಮಸ್ಯೆ ಆಗುತ್ತಿದೆ. ಶೀಘ್ರವೇ ಬದಲಾಯಿಸಬೇಕು. ಕೊಪ್ಪದಲ್ಲಿರುವ ಸಕ್ಕರೆ ಕಾರ್ಖಾನೆಗೆ ಕೂಡಲೇ ರೈತರ ಬಿಲ್ ಪಾವತಿಸುವಂತೆ ಸೂಚಿಸಬೇಕು ಎಂದರು.ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, ಸುವರ್ಣ ಗ್ರಾಮ ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಸಣ್ಣ ಗ್ರಾಮಗಳನ್ನೂ ಈ ಯೋಜನೆಯಡಿ ಸೇರಿಸಿಕೊಳ್ಳಬೇಕು. ರೈತರ ಪಂಪ್‌ಸೆಟ್‌ಗಳ ಟಿಸಿಯನ್ನು ಏಳು 7 ದಿನಗಳೊಳಗೆ, ಕುಡಿಯುವ ನೀರಿನ ಟಿಸಿಯನ್ನು 48 ಗಂಟೆಗಳೊಳಗೆ ಸೆಸ್ಕ್‌ನವರು ಸರಿಪಡಿಸಬೇಕು ಎಂದು ಆಗ್ರಹಿಸಿದರು.ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ ಮಾತನಾಡಿ, ವಸತಿ ಯೋಜನೆಗಾಗಿ ಗ್ರಾಮ ಸಭೆಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಇದಕ್ಕೆ ಅನುಮೋದನೆ ನೀಡಬೇಕು. ಕಾಯಂ ಪಡಿತರ ಚೀಟಿ ವಿತರಣೆಗಾಗಿ ಭಾವಚಿತ್ರ ಹಾಗೂ ಬಯೋಮೆಟ್ರಿಕ್ ಪಡೆಯಲಾಗುತ್ತಿದೆ. ಇದು ನಿಧಾನಗತಿಯಲ್ಲಿ ಸಾಗಿದ್ದು, ಶೀಘ್ರ ಪೂರ್ಣಗೊಳಿಸಬೇಕು ಎಂದರು.ವಿಧಾನ ಪರಿಷತ್ ಸದಸ್ಯ ರಾಮಕೃಷ್ಣ ಮಾತನಾಡಿ, ಕೊಕ್ಕರೆ ಬೆಳ್ಳೂರು ಪ್ರವಾಸಿ ತಾಣವನ್ನು ಅಭಿವೃದ್ಧಿಗೊಳಿಸಬೇಕು. ಸತ್ಯಾಗ್ರಹ ಸೌಧಕ್ಕೆ ಕಾಯಕಲ್ಪ ನೀಡಬೇಕು ಎಂದರು.ಶಾಸಕ ಡಿ.ಸಿ. ತಮ್ಮಣ್ಣ ಮಾತನಾಡಿ, ಕೆರೆಗಳಿಂದ ಹೂಳು ತೆಗೆಯುವ ಕೆಲಸವಾಗಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಶಾಶ್ವತ ಯೋಜನೆ ರೂಪಿಸಬೇಕು. ತಾಲ್ಲೂಕಿನ ನಿರಂತರ ಜ್ಯೋತಿ ಯೋಜನೆಯನ್ನು ಶೀಘ್ರವಾಗಿ ಆರಂಭಿಸಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಜಿಲ್ಲೆಯ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ಹಾಗೂ ರಸಾಯನಿಕ ಗೊಬ್ಬರ ವಿತರಿಸಬೇಕು ಎಂದರು.ಶಾಸಕ ನಾರಾಯಣಗೌಡ ಮಾತನಾಡಿ, ತಮ್ಮ ತಾಲ್ಲೂಕಿನಲ್ಲಿ 500 ರಿಂದ 600 ಜನರು ಪ್ರತಿದಿನ ತಾಲ್ಲೂಕು ಕಚೇರಿಗೆ ಅಲೆದಾಡುತ್ತಾರೆ. ಈ ಸಮಸ್ಯೆ ಸರಿಪಡಿಸಬೇಕು. ನಾಲೆಯಲ್ಲಿನ ಹೂಳು ತೆಗೆಯುವ ಕೆಲಸವಾಗಬೇಕು ಎಂದರು.ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷ ಡಾ.ಶಂಕರೇಗೌಡ, ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಮಣರೆಡ್ಡಿ, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಸಿ. ಜಯಣ್ಣ,  ಪೊಲೀಸ್ ವರಿಷ್ಠ  ಭೂಷಣ್ ಬೊರಸೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.