ಬುಧವಾರ, ಜೂನ್ 16, 2021
28 °C

ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ನಗರದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ, ರಾಜಕೀಯದಲ್ಲಿ ಅಭಿವದ್ಧಿ ಇರಲಿ. ಇಲ್ಲಿನ ಶಾಸಕರು, ಪುರಸಭೆ ಅಧ್ಯಕ್ಷರು ಮತ್ತು ಆರ್ಘ್ಯಂ ಸಂಸ್ಥೆ ಒಟ್ಟಾಗಿ ಬಂದರೆ ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿಗಳ ಸಭೆ ಕರೆದು, ನೀರಿನ ಸಮಸ್ಯೆ ಇಲ್ಲದಂತೆ ಪಟ್ಟಣವನ್ನು ಅಭಿವದ್ಧಿಪಡಿಸಿ ರಾಜ್ಯದಲ್ಲಿ ಮಾದರಿ ತಾಲ್ಲೂಕನ್ನಾಗಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಕಾನೂನು ಮತ್ತು ಪೌರಾಡಳಿತ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದರು.ಪಟ್ಟಣದ ಯಾದವ ಕಲ್ಯಾಣ ಮಂಟಪದಲ್ಲಿ ಪುರಸಭೆ ಮತ್ತು ಆರ್ಘ್ಯಂ ಸಂಸ್ಥೆ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಜಲಜಾಗೃತಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ರಾಜ-ಮಹಾರಾಜರು ಸಾಲುಮರ, ಸೇದುಬಾವಿ, ಕಲ್ಯಾಣಿಗಳು ನಿರ್ಮಾಣ ಮಾಡುತ್ತಿದ್ದರು. ಈಗಿನ ರಾಜಕಾರಣಿಗಳು ಪುಷ್ಕರಣಿ, ಬಾವಿಗಳು ಮುಚ್ಚಿಹೋಗಿದ್ದರೂ ದುರಸ್ತಿ ಮುಂದಾಗುತ್ತಿಲ್ಲ.ಆರ್ಘ್ಯಂ ಸಂಸ್ಥೆ ಮುಳಬಾಗಲನ್ನು ಆಯ್ಕೆ ಮಾಡಿಕೊಂಡು ಕುಡಿಯುವ ನೀರು, ಚರಂಡಿ ಸಮುದಾಯ ಶೌಚಾಲಯ ನಿರ್ಮಾಣ ಕಾರ್ಯಗಳಿಗೆ 2 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಸಂಸ್ಥೆಯನ್ನು ಶ್ಲಾಘಿಸಿದರು.ಸೂರತ್‌ನಲ್ಲಿ ಮೂಲಸೌಲಭ್ಯ ಕೊರತೆಯಿಂದ 1994ರಲ್ಲಿ 800 ಮಂದಿ ಪ್ಲೇಗ್ ಕಾಯಿಲೆಗೆ ಬಲಿಯಾದರು. ರಾಯಚೂರು, ಗುಲ್ಬರ್ಗ ಜಿಲ್ಲೆಗಳಲ್ಲಿ ಮಹಿಳೆಯರು ಹಾವು, ಚೇಳುಗಳ ಭೀತಿಯ ಮಧ್ಯೆ ಬಯಲಿನಲ್ಲಿ ಬಹಿರ್ದೆಸೆಗೆ ಹೋಗಬೇಕಾಗಿದೆ.ಸಮುದಾಯ ಶೌಚಾಲಯವಿಲ್ಲದೆ ಸಮಾಜಕ್ಕೆ ಶಾಪ ತಟ್ಟಿದೆ. ಪಟ್ಟಣದಲ್ಲಿರುವ 27 ಕಲ್ಯಾಣಿಗಳನ್ನು ಜೀರ್ಣೋದ್ಧಾರ ಮಾಡಿ ರಸ್ತೆಗಳು, ಒಳಚರಂಡಿ ನಿರ್ಮಿಸಿ ಮಾದರಿ ತಾಲ್ಲೂಕನ್ನಾಗಿ ಮಾಡುವುದಾಗಿ ತಿಳಿಸಿದರು.

ಶಾಸಕ ಅಮರೇಶ್, ತಾಲ್ಲೂಕು ನಿರಂತರವಾಗಿ ಬರಗಾಲ ಪ್ರದೇಶ. ನಂಜುಂಡಪ್ಪ ವರದಿಯಂತೆ ಅತಿ ಹಿಂದುಳಿದ ತಾಲ್ಲೂಕಾಗಿದ್ದು, ಸಚಿವರು ಮುಳಬಾಗಲು ಪಟ್ಟಣಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಕೋರಿದರು.ಆರ್ಘ್ಯಂ ಸಂಸ್ಥೆ ಸಂಯೋಜಕಿ ಸುನೀತಾ ನಾದಮುನಿ, ನಗರದ ಒಳಭಾಗದಲ್ಲಿ ನೀರಿನ ಮೂಲಗಳು ನೈಟ್ರೇಟ್ ಮತ್ತು ಬ್ಯಾಕ್ಟೀರಿಯಾಗಳಿಂದ ಕಲುಷಿತಗೊಂಡಿವೆ. ಪಟ್ಟಣದ 4 ವಾರ್ಡ್ ಗಳಲ್ಲಿ ಸುಮಾರು 2000 ಕುಟುಂಬಗಳ ನಿರ್ಮಲ ಬಳಗ ಗುಂಪನ್ನು ರಚಿಸಿ ಮನೆ ಮನೆಗಳಿಂದ ಬೇರ್ಪಡಿಸಿದ ಕಸವನ್ನು ಸಂಗ್ರಹಿಸಲಾಗುತ್ತಿದೆ.

ಘನತ್ಯಾಜ್ಯ ಸಂಗ್ರಹ ವಿಲೇವಾರಿ, ಮಳೆ ಕೊಯ್ಲು ಕಾರ್ಯಕ್ರಮವನ್ನು ಸಂಸ್ಥೆಯಿಂದ ಮಾಡಲಾಗಿದೆ ಎಂದು ತಿಳಿಸಿದರು.ಪೊಲೀಸ್ ಕಾಲೊನಿಯಲ್ಲಿ ಪ್ರಾಯೋಗಿಕ ಘನತ್ಯಾಜ್ಯ ವಸ್ತುನಿರ್ವಹಣೆ ವೀಕ್ಷಣೆ ಹಾಗೂ ಪಟ್ಟಣದ ವಿಠ್ಠಲನಾರಾಯಣಸ್ವಾಮಿ ಪುಷ್ಕರಣಿ, ಹೊಸ ಎ.ಡಿ. ಕಾಲೊನಿಗೆ ಭೇಟಿ ನೀಡಿ ಸಚಿವರು ಪರಿಶೀಲಿಸಿದರು.ಪುರಸಭಾ ಅಧ್ಯಕ್ಷ ಡಾ.ರಹಮತ್ತುಲ್ಲಾಖಾನ್, ಸ್ಲಂ ಮೋರ್ಚಾ ಮಾಜಿ ಅಧ್ಯಕ್ಷ ವೈ.ಸುರೇಂದ್ರಗೌಡ, ಆರ್ಘ್ಯಂ ಸಂಸ್ಥೆಯ ರೋಹಿಣಿ ನೀಲಖೇಣಿ, ಮಂಜುನಾಥ್ ಪ್ರಸಾದ್,ಡಿವೈಎಸ್‌ಪಿ ಗೋವಿಂದಯ್ಯ, ಸಂಯೋಜಕರಾದ ಬೂಪಯ್ಯ, ಲಿಂಗರಾಜು, ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸಮೂರ್ತಿ, ಆರೋಗ್ಯ ನಿರೀಕ್ಷಕ ತಾಯಲೂರು ನಾಗರಾಜ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.