ಶನಿವಾರ, ಮೇ 8, 2021
24 °C

ಅಭಿವೃದ್ಧಿ ಹಂತದಲ್ಲಿ ಎಂಐಆರ್‌ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಗ್ನಿ-5 ಖಂಡಾಂತರ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಗುರುವಾರ ಯಶಸ್ವಿಯಾಗಿದ್ದರೂ, ಅದು ಹೊತ್ತೊಯ್ಯಲಿರುವ `ಎಂಐಆರ್‌ವಿ~ (ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀಎಂಟ್ರಿ ವೆಹಿಕಲ್) ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ.ಹದಿನೇಳು ಮೀಟರ್ ಉದ್ದದ `ಅಗ್ನಿ-5~ ಕ್ಷಿಪಣಿ ಮೇಲೆ ಕೂರಿಸಲಾಗುವ `ಎಂಐಆರ್‌ವಿ~ ಸಿದ್ಧಗೊಳ್ಳಲು ಮತ್ತಷ್ಟು ಸಮಯ ಹಿಡಿಯಲಿದೆ.ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) `ಎಂಐಆರ್‌ವಿ~ ಮೇಲೆ ಕೆಲಸ ಮಾಡುತ್ತಿದೆ. ಹೆಚ್ಚು ಕಡಿಮೆ ಮುಗಿಯುವ ಹಂತದಲ್ಲಿದೆ. ಆದರೆ, ಪ್ರಯೋಗಾರ್ಥ ಪರೀಕ್ಷೆ ಯಾವಾಗ ನಡೆಸಲು ಸಾಧ್ಯ ಎಂದು ಈಗಲೇ ಹೇಳುವಂತಿಲ್ಲ~ ಎಂದು ಅಗ್ನಿ ಯೋಜನೆಯ ನಿರ್ದೇಶಕಿ ಟೆಸ್ಸಿ ಥಾಮಸ್ `ಪ್ರಜಾವಾಣಿ~ಗೆ ವೀಲ್ಹರ್ ದ್ವೀಪದಿಂದ ದೂರವಾಣಿ ಮೂಲಕ ತಿಳಿಸಿದರು.`ಎಂಐಆರ್‌ವಿ~ ಅಂದರೆ ಕ್ಷಿಪಣಿಯ ಮೇಲೆ ಕೂರಿಸುವ ವಿವಿಧ ಸಾಮರ್ಥ್ಯದ ಅಣ್ವಸ್ತ್ರ ಸಿಡಿತಲೆಗಳ ಗುಚ್ಛ. ವಿಶಾಲವಾದ ಪ್ರದೇಶದಲ್ಲಿ ವೈರಿ ಕ್ಷಿಪಣಿಗಳನ್ನು ನಾಶಪಡಿಸಲು ಇವನ್ನು ಬಳಸಲಾಗುತ್ತದೆ. ಪ್ರತಿಯೊಂದು ಸಿಡಿತಲೆಯೂ ನಿಗದಿತ ವೈರಿ ಕ್ಷಿಪಣಿಗಳನ್ನು ಧ್ವಂಸಗೊಳಿಸುತ್ತದೆ. ಆ ಮೂಲಕ ಎದುರಾಳಿ ಕ್ಷಿಪಣಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುತ್ತದೆ.ಅಮೆರಿಕದ `ಎಂಐಆರ್‌ವಿ~ಗಳು 3-12 ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ರಷ್ಯಾದ `ಎಂಐಆರ್‌ವಿ~ಗಳು 3-10 ಅಣ್ವಸ್ತ್ರ ಸಿಡಿತಲೆ ಸಾಗಿಸುತ್ತವೆ. ಆದರೆ, ಬಹಳಷ್ಟು ದೇಶಗಳು ಈ ತಂತ್ರಜ್ಞಾನ ಹೊಂದಿಲ್ಲ.`ಅಗ್ನಿ-5ರ ಕನಸನ್ನು ನನಸಾಗಿಸಿಕೊಳ್ಳಲು `ಡಿಆರ್‌ಡಿಒ~ ವಿಜ್ಞಾನಿಗಳು ಸಾಕಷ್ಟು ಹೆಣಗಬೇಕಾಯಿತು. ಇದು ಮೂರು ಹಂತದ ರಾಕೆಟ್ ಆಗಿದ್ದರಿಂದ ಕ್ಷಿಪಣಿಯನ್ನು ಅದರ ಗುರಿ ಮುಟ್ಟಿಸಲು `ಮೂರನೇ ಮೋಟಾರ್~ ಅಳವಡಿಸಬೇಕಾಯಿತು. ಕ್ಷಿಪಣಿ ಉಡಾವಣೆಗೆ ತೊಂದರೆಯಾಗದಂತೆ ಅದರ ಒಟ್ಟಾರೆ ದ್ರವ್ಯರಾಶಿಯನ್ನು ಸಮತೂಗಿಸಬೇಕಿತ್ತು~ ಎಂದೂ ಟೆಸ್ಸಿ ಥಾಮಸ್ ಹೇಳಿದರು. `ಎಂಐಆರ್‌ವಿ~ ಮೂಲಕ ತಂತ್ರಜ್ಞಾನದಲ್ಲಿ ಅಸಾಧ್ಯ ಹೆಜ್ಜೆ ಇಡಲಾಗಿದೆ. ಪ್ರತಿ ಕ್ಷಿಪಣಿಯೂ  5-8 ಸ್ವತಂತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಹುದಾಗಿದೆ ಎಂದು `ಪಾಲಿಸಿ ರೀಸರ್ಚ್ ಸೆಂಟರ್~ನ ಭರತ್ ಕಾರ್ನಾಡ್ ಶ್ಲಾಘಿಸಿದರು.ರಾಕೆಟ್ ಹಾಗೂ ಕ್ಷಿಪಣಿಯ ದ್ರವ್ಯರಾಶಿ ಕಡಿಮೆಗೊಳಿಸಿ, ಇಂಧನ ದಕ್ಷತೆ ಹೆಚ್ಚಿಸಿರುವುದು `ಡಿಆರ್‌ಡಿಒ~ ವಿಜ್ಞಾನಿಗಳ ಸಾಧನೆಯಾಗಿದೆ ಎಂದು ಬೆಂಗಳೂರಿನ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ರಾಜಾರಾಮ್ ನಾಗಪ್ಪ ಅಭಿಪ್ರಾಯ ಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.