ಸೋಮವಾರ, ಜನವರಿ 20, 2020
27 °C

ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಅಂಗಳಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮುಖ್ಯಮಂತ್ರಿಯಾದ ಬಳಿಕ ಡಿ.ವಿ.ಸದಾನಂದ ಗೌಡರು ಸಂಸದ ಸ್ಥಾನಕ್ಕೆ  ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಬಗ್ಗೆ ಕಳೆದ ಎರಡು ದಿನಗಳಿಂದ ಈ ಭಾಗದ ಮುಖಂಡರ ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ಅಂತಿಮವಾಗಿ ಅಭ್ಯರ್ಥಿ ಆಯ್ಕೆಯನ್ನು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಡಲು ಇಲ್ಲಿ ನಿರ್ಧರಿಸಲಾಗಿದೆ~ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ನಿಯೋಜಿತ ಉಸ್ತುವಾರಿ ಎಚ್.ಕೆ.ಪಾಟೀಲ್ ಇಲ್ಲಿ ತಿಳಿಸಿದರು.ಬ್ರಹ್ಮಗಿರಿಯ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕುರಿತು ಭಾನುವಾರ ನಡೆದ ಕಾರ್ಯಕರ್ತರ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.  `ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಡಿ.ಕೆ.ತಾರಾದೇವಿ ಸಿದ್ಧಾರ್ಥ, ಬಿ.ಎಲ್.ಶಂಕರ್, ವಿನಯಕುಮಾರ್ ಸೊರಕೆ ಹಾಗೂ ಬಿ.ಕೆ.ಹರಿಪ್ರಸಾದ್ ಅವರ ಹೆಸರಿದೆ. ಆದರೆ ಯಾರ ಹೆಸರನ್ನು ಕೂಡ ಅಂತಿಮಗೊಳಿಸಿಲ್ಲ~ ಎಂದರು.`ಈಗಾಗಲೇ ಚಿಕ್ಕಮಗಳೂರಿನಲ್ಲಿ ಕೂಡ ಈ ಬಗ್ಗೆ ಸಭೆ ನಡೆಸಿ ಕಾರ್ಯಕರ್ತರ ಮತ್ತು ಈ ಭಾಗದ ಮುಖಂಡರ ಅಭಿಪ್ರಾಯ ಹಾಗೂ ಮಾಹಿತಿ ಕಲೆಹಾಕಲಾಗಿದೆ. ಇವೆಲ್ಲವನ್ನೂ ಕ್ರೋಢೀಕರಿಸಿ ಇದೇ 24ರೊಳಗೆ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಲಿದ್ದು, ಅದನ್ನು ಹೈಕಮಾಂಡ್‌ಗೆ ಕಳುಹಿಸಲಿದ್ದಾರೆ~ ಎಂದರು.ಈ ಎರಡೂ ಜಿಲ್ಲೆಗಳಲ್ಲಿನಡೆದ ಸಭೆಗಳಲ್ಲಿ ಮುಖ್ಯವಾಗಿ ಚರ್ಚೆಯಾದಂತೆ ಪಕ್ಷದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು, ವೈಮನಸ್ಯಗಳನ್ನು ಬದಿಗೊತ್ತಿ ಅಭ್ಯರ್ಥಿ ಆಯ್ಕೆಯನ್ನು ಪಕ್ಷದ ಮುಖಂಡರ ತೀರ್ಮಾನಕ್ಕೆ ಬಿಡಬೇಕು ಎನ್ನುವ ಬಗ್ಗೆಯೂ ಚರ್ಚೆಯಾಗಿದೆ~ ಎಂದರು.ರಾಜಕೀಯ ಸ್ಥಿತಿಣ ಬದಲಾಗಿದೆ: `ಕಳೆದ 3-4 ತಿಂಗಳಲ್ಲಿ ರಾಜಕೀಯ ವಾತಾವರಣ ಬದಲಾಗಿದೆ. ಕಳೆದ 4 ವರ್ಷಗಳಲ್ಲಿ ನಡೆದ 20 ಉಪ ಚುನಾವಣೆಗಳಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿರುವುದು ಈಗ ಇತಿಹಾಸ. ಆದರೆ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಜನಸಾಮಾನ್ಯರಿಂದ ಸಾಕಷ್ಟು ದೂಷಣೆಗೆ ಒಳಗಾಗಿದೆ. ಅದರ ವರ್ಚಸ್ಸು ಕುಗ್ಗಿದೆ.ಬಳ್ಳಾರಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಠೇವಣಿ ಕಳೆದುಕೊಂಡಿದೆ~ ಎಂದು ಅವರು ವಿಶ್ಲೇಷಿಸಿದರು.

`ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಬಡವರಿಗೆ ಮೂರು ರೂಪಾಯಿಗೆ ಒಂದು ಕೆಜಿ.ಅಕ್ಕಿಯಂತೆ ಒಂದು ಪಡಿತರ ಚೀಟಿಗೆ 25-28 ಕೆ.ಜಿ.ನೀಡುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಕೇವಲ ಅದನ್ನು 16 ಕೆ.ಜಿ.ಗೆ ಇಳಿಸುವ ಮೂಲಕ ಬಡವರಿಗೆ ಅನ್ಯಾಯ ಮಾಡಿದೆ. ಇದನ್ನು ಬಡವರು ಗಮನಿಸಿದ್ದಾರೆ. ಹಾಗೆಯೇ ಎಸ್.ಎಂ.ಕೃಷ್ಣ ಕಾಲದಲ್ಲಿ 1 ಲಕ್ಷ ಮನೆ ಕಟ್ಟಿ ಕೊಡಲಾಗಿದೆ. ನೀರಾವರಿ, ವಿದ್ಯುತ್, ಶಿಕ್ಷಣ ಮತ್ತಿತರ ಯೋಜನೆಗಳನ್ನು ಸಕಾರಾತ್ಮಕವಾಗಿ ಜಾರಿಗೆ ತಂದಿತ್ತು. ಆದರೆ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಹೊರತಾಗಿ ಬೇರೇನೂ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್  ಗೆಲ್ಲುವ ವಿಶ್ವಾಸದಲ್ಲಿದೆ~ ಎಂದರು.ಸಂಸದರಾಗಿ ಡಿವಿಎಸ್ ವಿಫಲ: ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, `ಡಿ.ವಿ. ಸದಾನಂದ ಗೌಡರು ಈ ಭಾಗದ ಜನರ ನಿರೀಕ್ಷೆ  ಪೂರೈಸಿಲ್ಲ.  ಅವರ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ. ಅಲ್ಲದೇ ಅವರು ಮುಖ್ಯಮಂತ್ರಿಯಾದ ಬಳಿಕವೂ ಸರ್ಕಾರಕ್ಕೆ ಗಾಂಭೀರ್ಯ ಬಂದಿಲ್ಲ. ಸರ್ಕಾರ ನಗೆಪಾಟಲಿಗೆ ಈಡಾಗಿದೆ. ರಾಜ್ಯದ ಹಿತದೃಷ್ಟಿಯಿಂದ ಈ ಸರ್ಕಾರ ತೊಲಗಬೇಕು~ ಎಂದರು.  `ರಾಜ್ಯಸರ್ಕಾರದ ವಿಫಲತೆ ಮತ್ತು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಅನುದಾನದ ಕುರಿತಾದ ಕಿರು ಕೈಪಿಡಿ ಮಾಡಿ ಶೀಘ್ರ ಜನತೆಗೆ ಹಂಚಲಾಗುವುದು~ ಎಂದು ಅವರು ತಿಳಿಸಿದರು.ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ ಪೂಜಾರಿ, ಪ್ರಮುಖರಾದ  ಎಂ.ಎ.ಗಫೂರ್, ಜನಾರ್ದನ ತೋನ್ಸೆ, ನರಸಿಂಹ ಮೂರ್ತಿ ಇದ್ದರು. 

 

ಪ್ರತಿಕ್ರಿಯಿಸಿ (+)