ಭಾನುವಾರ, ಮಾರ್ಚ್ 7, 2021
19 °C
ಸ್ತನ್ಯಪಾನ ಸಪ್ತಾಹ ಆ.1-7

ಅಮ್ಮನ ಹಾಲು ಅಮೃತ

ಡಾ. ಕರವೀರಪ್ರಭು ಕ್ಯಾಲಕೊಂಡ Updated:

ಅಕ್ಷರ ಗಾತ್ರ : | |

ಅಮ್ಮನ ಹಾಲು ಅಮೃತ

ಮಗುವಿಗೆ ತಾಯಿಯ ಎದೆಹಾಲು ಎಲ್ಲ ಆಹಾರಕ್ಕಿಂತಲೂ ಶ್ರೇಷ್ಠ.  ಮೊಲೆಹಾಲು ಕುಡಿಸುವುದು ಸಹಜ ಪ್ರಕೃತಿ; ಇದರಲ್ಲಿ ಯಾವುದೇ ಅಡಚಣಿ, ಆತಂಕ, ಸಂಕೋಚ ಇರಬೇಕಾಗಿಲ್ಲ.  ಆದರೆ ಇತ್ತೀಚೆಗೆ ನಾಗರಿಕತೆಯ ಸೋಗಿನಲ್ಲಿ, ಜಾಹೀರಾತುಗಳ ವ್ಯಾಮೋಹದಲ್ಲಿ, ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ತಾಯಿಯ ಸೌಂದರ್ಯ ಹಾಳಾಗುವುದೆಂಬ ಭಾವನೆ ಹೆಚ್ಚಾಗುತ್ತಿದೆ. ಬದಲಿ ಹಾಲಿನ ಬಳಕೆ, ಬಾಟಲಿ ಹಾಲು ಕುಡಿಸುವುದು ಹೆಚ್ಚುತ್ತಿದೆ.  ಇದೊಂದು ಅನಾರೋಗ್ಯಕರ ಬೆಳವಣಿಗೆ; ದುರಂತವೆಂದರೂ ತಪ್ಪಾಗಲಿಕ್ಕಿಲ್ಲ.  ಇದು ಅನೇಕ ಅನಾಹುತಗಳಿಗೆ ಆಸ್ಪದ ಮಾಡಿಕೊಡುತ್ತಿದೆ. ನೈಸರ್ಗಿಕ ಕೊಡುಗೆಯನ್ನು ತ್ಯಜಿಸಿ, ಕೃತಕವಾಗಿ ರೂಪಿಸಿದ ಹಾಲನ್ನು ದೊರಕಿಸಿಕೊಳ್ಳುವುದರಲ್ಲಿ ತಮ್ಮ ಸಂಪನ್ಮೂಲಗಳನ್ನು ವ್ಯಯಿಸುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ.   ತಾಯಿಯ ಹಾಲು ಮಗುವಿಗೆ ಸರ್ವಶ್ರೇಷ್ಠ ಅಮೃತವೆಂಬುದು ವೈಜ್ಞಾನಿಕವಾಗಿ ಸಿದ್ಧವಾಗಿದೆ. ಮೊಲೆಹಾಲು ಮಗುವಿನ ವಯಸ್ಸಿಗೆ ತಕ್ಕಂತೆ ಒದಗುವುದರಿಂದ ಅದು ಆದರ್ಶವಾದ ಆಹಾರವಾಗಿದೆ.  ಈ ಹಾಲು ಎಳೆಯ ಕಂದನಿಗೆ ಸೂಕ್ತ ಆಹಾರವಾಗಿದ್ದು ಅಗತ್ಯವಾದ ಪೌಷ್ಟಿಕತೆಯನ್ನು ಪೂರೈಸುತ್ತದೆ. ಅದರಲ್ಲಿನ ಖನಿಜ ಲವಣಗಳು (ಕ್ಯಾಲ್ಸಿಯಂ, ಕಬ್ಬಿಣ ಇತ್ಯಾದಿ) ಶಿಶುವಿನ ಬೆಳವಣಿಗೆಯ ಆವಶ್ಯಕತೆಗಳನ್ನು ಪೂರೈಸಬಲ್ಲವು.ಜೀವಸತ್ವಗಳೆಲ್ಲವೂ ಹಾಲಿನಲ್ಲಿದ್ದು ಅವು ಶಿಶುವಿನ ಆರೋಗ್ಯ ಸಂವರ್ಧನೆಗೆ ಕಾರಣವಾಗಿವೆ.  ಇವೆಲ್ಲವನ್ನು ಮನಗಂಡ ಸುಶ್ರುತ, ‘ಹಾಲಿನಿಂದ ತುಂಬಿದ ನಾಲ್ಕು ಸಾಗರಗಳು ಸದಾ ನಿನ್ನ ಸ್ತನದಲ್ಲಿ ಹರಿದು, ಆದರಿಂದ ಮಗುವಿಗೆ ಶಕ್ತಿ ಸಾಮರ್ಥ್ಯ ಮತ್ತು ಬಲ ಹೆಚ್ಚಲಿ’ ಎಂದು ತಾಯಿಯನ್ನು ಹಾರೈಸಿದ್ದಾನೆ. ಹೆರಿಗೆಯಾದ ಅರ್ಧ ಘಂಟೆಯಿಂದಲೇ ನವಜಾತ ಶಿಶುವಿಗೆ ಮೊಲೆಯುಣಿಸಲು ಪ್ರಾರಂಭಿಸಬೇಕು. 

ಆಗ ಸ್ತನಗಳಿಂದ ಹಳದಿಬಣ್ಣದ ಗಿಣ್ಣು ಹಾಲು ಗಟ್ಟಿಯಾಗಿ, ಜಿಗುಟಾಗಿ, ಜಿನುಗಿ ಹೊರಬರುತ್ತದೆ.  ಇದು ಮೊದಲ ಮೂರು ದಿನ ಸ್ರವಿಸುವುದು. ಇದರಲ್ಲಿ ಪ್ರೊಟೀನ್ ವಿಪುಲವಾಗಿದ್ದು ಗ್ಲಾಬ್ಯುಲಿನ್ ಅಂಶಗಳನ್ನು ಒಳಗೊಂದಿರುತ್ತದೆ.  ಕೊಬ್ಬು ಮತ್ತು ಸಕ್ಕರೆ ಪ್ರಮಾಣ ಕಡಿಮೆ ಇರುತ್ತದೆ. ಎ ಅನ್ನಾಂಗ ಹೇರಳವಾಗಿರುತ್ತದೆ.  ಇದು ಇರುಳುಗಣ್ಣು ಹಸುಗೂಸುಗಳ ಸಮೀಪ ಸುಳಿಯದಂತೆ ಮಾಡುತ್ತದೆ. ಈ  ಗಿಣ್ಣಹಾಲು ಅನೇಕ ರೋಗಾಣುಗಳಿಂದ ಉದ್ಭವಿಸುವ ಸೋಂಕುರೋಗಗಳ ವಿರುದ್ಧ ಸೆಣಸಬಲ್ಲ ಶಕ್ತಿಯನ್ನು ತಂದುಕೊಡುತ್ತದೆ.ಅನೇಕರಲ್ಲಿ ಗಿಣ್ಣುಹಾಲಿನ ಬಗ್ಗೆ ತಪ್ಪು ತಿಳಿವಳಿಕೆಗಳಿವೆ.  ಇದು ಜಡ ಪದಾರ್ಥ, ಎಂದು ಭಾವಿಸಿ ಕೂಸಿಗೆ ಕುಡಿಸುವುದಿಲ್ಲ.  ಹಿಂಡಿ ಮೊಲೆಯಿಂದ ಹೊರತೆಗೆದು ಚೆಲ್ಲುವರು;   ಪ್ರಾರಂಭದಲ್ಲಿ ತಾಯಿಯಲ್ಲಿ ಒಂದೆರಡು ಚಮಚದಷ್ಟು ಮಾತ್ರ ಹಾಲಿನ ಪ್ರಮಾಣ ಇದ್ದರೂ ಮಗುವಿಗೆ ಆವಶ್ಯಕತೆಗೆ ಅಷ್ಟೇ ಸಾಕು.   ಶೈಶವಾವಸ್ಥೆಯ ಪ್ರಾರಂಭದಲ್ಲಿ ಮತ್ತ್ಯಾವ ವಸ್ತುವಿನ ಅಗತ್ಯವಿಲ್ಲ. ವಿನಾ ಕಾರಣ ಸಕ್ಕರೆ ನೀರು ನೀಡುವುದು ಎಂದರೆ ಅಮೃತವನ್ನು ಚೆಲ್ಲಿ ಮಗುವಿಗೆ ವಿಷವನ್ನು ಕೈಯಾರೆ ಕುಡಿಸಿದಂತೆ. ಕೆಲವರು ಜೇನುತುಪ್ಪವನ್ನು ಚೀಪಿಸುವರು; ಮತ್ತೆ ಕೆಲವರು ಔಡಲ ಎಣ್ಣೆಯನ್ನು ನೆಕ್ಕಿಸುವರು. ಇದರಿಂದ ಅನಾಹುತಗಳಿಗೆ ಆಹ್ವಾನ ನೀಡಿದಂತಾಗುಗುವುದು. ಗಿಣ್ಣುಹಾಲು ದಿನಗಳೆದಂತೆ ನೀರಾಗುತ್ತ ನವಜಾತ ಶಿಶುವಿನ ಅಪಕ್ವ ಮೂತ್ರಪಿಂಡದ ಮೇಲೆ ಹೊರೆಯನ್ನು ಹೇರುವುದಿಲ್ಲ.ಬೆಳೆಯುತ್ತಿರುವ ಮಗುವಿನ ಬೇಡಿಕೆಗಳಿಗನುಗುಣವಾಗಿ ಹೆರಿಗೆಯಾದ ಮೂರನೇ ದಿನದಿಂದ ಹಾಲು ತಯಾರಿಕೆ ತೀವ್ರಗೊಳ್ಳುತ್ತದೆ.  ಮಗು ಮೊಲೆ ಚೀಪುವುದು ಹಾಲು ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ.  ತಾಯಿಹಾಲು ಪರಿಶುದ್ಧವಾಗಿರುತ್ತದೆ.  ಮಗುವಿಗೆ ಬೇಕಾದಂತೆ ಸಮಶೀತೋಷ್ಣವಾಗಿರುತ್ತದೆ. ಬೇಕೆಂದಾಗ ಸಿಗುತ್ತದೆ. ಹಾಲು ಕುಡಿಸುವಿಕೆ ತಾಯಿ–ಮಗುವಿನ ಮಧುರ ಬಾಂಧವ್ಯ ಹೆಚ್ಚಿಸುತ್ತದೆ. ಮೊಲೆಹಾಲು ಸಿಹಿಯಾಗಿರಲು ಅದರಲ್ಲಿರುವ ಲ್ಯಾಕ್ಟೋಸ್ ಕಾರಣ. ಇದು ಮಗುವಿನ ಮೆದುಳಿನ ಬೆಳವಣಿಗೆಗೆ ಬೇಕಾಗುವ ಗ್ಯಾಲಕ್ಟೋಸನ್ನು ಹೇರಳವಾಗಿ ಪೂರೈಸುವುದು.  ಮೆದುಳಿನ ಬೆಳವಣಿಗೆ ಶಿಶುವಿನಲ್ಲಿ ಅತ್ಯಂತ ವೇಗವಾದ್ದರಿಂದ ಇದರ ಅವಶ್ಯಕತೆ ಹೆಚ್ಚು ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಎದೆಹಾಲಿನಲ್ಲಿ ಬೈಫಿಡಸ್ ಫ್ಯಾಕ್ಟರ್ ಇರುತ್ತದೆ.  ಇದು ಕಂದಮ್ಮಗಳ ಕರುಳಲ್ಲಿ ಲ್ಯಾಕ್ಟೋಬ್ಯಾಸಿಲಸ್ ಭೈಫಿಡಸ್ ಬೆಳವಣಿಗೆಯನ್ನು ಪ್ರಚೋದಿಸುತ್ತದೆ.  ಇವುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲ್ಪಟ್ಟ ಲ್ಯಾಕ್ಟಿಕ್ ಆಮ್ಲ. ಆಮ್ಲ ಕರುಳಿನಲ್ಲಿ ನೆಲೆನಿಂತಿರುವ ಅಪಾಯಕಾರಿ ಬ್ಯಾಕ್ಟೀರಿಯಾ ಇ–ಕೋಲೈ ಸಂಖ್ಯಾಭಿವೃದ್ಧಿಯನ್ನು ಹತ್ತಿಕುವುದು, ಜೊತೆಗೆ ಉಪಕಾರಿ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಪ್ರಚೋದಿಸಿ ಅವುಗಳಿಂದ ಜೀವಸತ್ವಗಳು ರೂಪಗೊಳ್ಳುವಂತೆ ಮಾಡುತ್ತದೆ.ಲ್ಯಾಕ್ಟಿಕ್ ಆಮ್ಲದ ಸಹಾಯದಿಂದ ಮಗು, ಮೂಳೆಗಳ ಬೆಳವಣಿಗೆಗೆ ಬೇಕಾದ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಲವಣಗಳನ್ನು ಹೀರಿಕೊಳ್ಳುತ್ತದೆ.  ತಾಯಿ ಹಾಲಿನಲ್ಲಿ ಅಲರ್ಜಿ ನಿರೋಧಕ ಶಕ್ತಿ ಸಹ ಇರುತ್ತದೆ. ಇದು ಹಸುಗೂಸುಗಳ ಗಜಕರ್ಣ ಆಹಾರದ ಅಲರ್ಜಿಗಳ ಹಾವಳಿಯನ್ನು ಹತ್ತಿಕ್ಕುವುದು.ತಾಯಿಹಾಲಿನಲ್ಲಿ ಐಜಿಎ, ಐಜಿಜಿ ಮತ್ತು ಐಜಿಎಮ್ ಪ್ರತಿಕಾಯಗಳು ಇರುತ್ತವೆ.  ಈ ರೋಗನಿರೋಧಕ ವಸ್ತುಗಳು ರೋಗಕಾರಕ ಸೂಕ್ಷ್ಮ ಜೀವಿಗಳಿಂದ ಬರಬಹುದಾದ ನೆಗಡಿ, ಕೆಮ್ಮು, ಪೋಲಿಯೊ, ನ್ಯೂಮೋನಿಯಾ ಬೇಧಿಗಳಿಂದ ರಕ್ಷಣೆಯನ್ನೊದರಿಸುತ್ತವೆ.  ತಾಯಿ ಅಪೌಷ್ಟಿಕತೆಯಿಂದ ತತ್ತರಿಸುತ್ತಿದ್ದರೂ, ಅವಳಿಂದ ಉತ್ಪನ್ನವಾದ ಹಾಲು ನೀರಾದರೂ ಅಮೀಬ ಜಿಯಾರ್ಡಿಯಾ ಮುಂತಾದ ಕ್ರಿಮಿಗಳನ್ನು ಅದು ಯಶಸ್ವಿಯಾಗಿ ನಾಶ ಮಾಡುತ್ತದೆ.ತಾಯಿಯ ಹಾಲು ಕುಡಿದು ಬೆಳೆದ ಮಕ್ಕಳು ಪ್ರೌಢರಾದ ಮೇಲೆ ಸಕ್ಕರೆ ಕಾಯಿಲೆ, ರಕ್ತನಾಳ ಪಡೆಸುಗಟ್ಟುವಿಕೆಗಳಿಗೆ ತುತ್ತಾಗುವುದು ಕಡಿಮೆ ಎಂದು ಅಂಕಿ–ಅಂಶಗಳು ಹೇಳುತ್ತಿವೆ. ಎದೆಹಾಲಿನಲ್ಲಿರುವ ಪ್ರೊಟೀನ್ ಹಸುವಿನ ಹಾಲಿನಲ್ಲಿರುವ ಪ್ರೊಟೀನ್‌ಗಿಂತ ಹೆಚ್ಚು ಸುಲಭವಾಗಿ ಪಚನಗೊಳ್ಳುತ್ತದೆ.  ಕೇಸಿನ್ ಪ್ರಾಮಾಣ ಹಸುವಿನ ಹಾಲಿನಲ್ಲಿ ಹೆಚ್ಚು ಇರುವುದರಿಂದ ಹಾಲು ಬೇಗ ಹೆಪ್ಪುಗಟ್ಟುತ್ತದೆ.  ಇದರಿಂದ ಮಕ್ಕಳ ಜೀರ್ಣದ ತೊಂದರೆಗಳು ಕಾಣಿಸಿಕೊಳ್ಳಬಹುದು. ತಾಯಿ ಹಾಲಿನಲ್ಲಿರುವ ಕೊಬ್ಬಿನಲ್ಲಿ ಲಿನೋಲಿಯಿಕ್ ಮೇದೋಆಮ್ಲ ಹೆಚ್ಚಿನ ಪ್ರಮಾಣದಲ್ಲಿದ್ದು, ಸುಲಭವಾಗಿ ಹೀರಲ್ಪಡುತ್ತದೆ; ಅದು ಮೆದುಳಿನ ಬೆಳವಣಿಗೆಗೆ ಸಹಾಯಕವಾಗುತ್ತದೆ. ಎದೆ ಹಾಲಿನೊಳಗೆ ನೀರಿನಲ್ಲಿ ಕರಗುವ ಸಿ ಮತ್ತು ಬಿ ಸಂಕೀರ್ಣ ಜೀವಸತ್ವಗಳು ಮತ್ತು ಕೊಬ್ಬಿನಲ್ಲಿ ಕರಗುವ ವಿಶೇಷವಾದ ಡಿ ಜೀವಸತ್ವ ಇರುತ್ತದೆ. ಇವು ಮಗುವಿನ ಸಾಮಾನ್ಯ ಬೆಳವಣಿಗೆಗೆ ಸಹಾಯಕಾರಿ.ಎದೆಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಲವಣಾಂಶಗಳು ಹಸು, ಎಮ್ಮೆ ಮತ್ತು ಡಬ್ಬಿಹಾಲು ಅಥವಾ ರಾಸಾಯನಿಕಸೂತ್ರದ ಹಾಲಿಗಿಂತ ಕಡಿಮೆ ಇದ್ದರೂ ಮಗುವಿನ ಸಂಪೂರ್ಣ ಬೆಳವಣಿಗೆಗೆ ಸಹಕಾರಿಯಾಗಿದೆ. ಮೊಲೆಹಾಲು ಕುಡಿಸುವುದರಿಂದ ತಾಯಿಯ ಗರ್ಭಕೋಶ ಬೇಗ ಸಂಕುಚಿತವಾಗುತ್ತದೆ. ಮುಂದಿನ ಗರ್ಭಧಾರಣೆ ನಿಧಾನವಾಗುತ್ತದೆ.  ಹಾಗೆಯೇ ಗರ್ಭಿಣಿಯರಿಗೆ ತೊಡೆ ಮತ್ತು ಪೃಷ್ಠ ಭಾಗದಲ್ಲಿಯ ಕೊಬ್ಬು ಹಾಲು ಕುಡಿಸುವುದರಿಂದ ಕರಗುತ್ತದೆ.ಹಾಲೂಡಿಸುವ ತಾಯಿ ಸಮತೋಲನ ಆಹಾರವನ್ನು ಸೇವಿಸಬೇಕು. ಮೊಲೆಯುಣಿಸುವ ಮತ್ತು ಹಸುಳೆಯ ಆರೈಕೆ ಮಾಡುವ ವಿಧಾನಗಳ ಬಗೆಗೆ ಸಲಹೆ ಸೂಚನೆಗಳನ್ನು ತಾಯಿಯಾಗುವವಳು ಮೊದಲೇ ಅನುಭವಸ್ಥರ ಜೊತೆಗೆ ಮಾತನಾಡಿ, ಚರ್ಚಿಸಿ ತಿಳಿದುಕೊಂಡಿರಬೇಕು. ಮಗು ಹಸಿದಾಗ ಅಳತೊಡಗುತ್ತದೆ. ಕಾರಣ ಮಗು ಹಸಿದಾಗ ಮೊಲೆಯುಣಿಸುವುದು ಅತ್ಯುತ್ತಮ ವಿಧಾನ; ಮೊಲೆಹಾಲೂಡಿಸುವುದರಿಂದ ತಾಯಿಯ ಆಕಾರ ವಿಕಾರಗೊಳ್ಳುವುದೆಂಬುದು ತಪ್ಪು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.