ಮಂಗಳವಾರ, ಮೇ 24, 2022
21 °C

ಅಮ್ಮಾ ಎಂಬ ಆರ್ತನಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ತಂಗಡಿ: ~ಗುಂಡು ದೇಹ ಹೊಕ್ಕ ತಕ್ಷಣ ಮಹಾದೇವ ಮಾನೆ ಎರಡು ಬಾರಿ `ಅಮ್ಮಾ~ ಎಂದು ಆರ್ತನಾದ ಹೊರಡಿಸಿದರು. ಸ್ವಲ್ಪ ದೂರದಲ್ಲೇ ಇದ್ದ ನನಗೆ ಸಂದಿಗ್ಧ ಪರಿಸ್ಥಿತಿ. ಎದುರಿನಲ್ಲಿ ನಕ್ಸಲರ ಆರ್ಭಟ. ಮತ್ತೊಂದು ಕಡೆಯಲ್ಲಿ ಒಂದೂವರೆ ವರ್ಷದಿಂದ ಜತೆಗಿದ್ದ ಸಿಬ್ಬಂದಿಯ ಜೀವನ್ಮರಣ ಹೋರಾಟ. ಗುಂಡು ಹಾರಿಸುತ್ತಲೇ ಮಾನೆ ಸಮೀಪಕ್ಕೆ ಧಾವಿಸಿ ಎರಡು ಬಾರಿ ದೇಹ ಸವರಿದೆ. ಎದುರಿನಿಂದ ಗುಂಡಿನ ದಾಳಿ ಜೋರಾಗಿತ್ತು.ಉಳಿದವರ ರಕ್ಷಣೆ, ನಕ್ಸಲರ ದಮನದ ನಿಟ್ಟಿನಲ್ಲಿ ಮಾನೆ ಅವರನ್ನು ಬಿಟ್ಟು ಪ್ರತಿ ದಾಳಿ ನಡೆಸುವುದು ಅನಿವಾರ್ಯವಾಯಿತು. ಮುನ್ನುಗ್ಗಿ ದಾಳಿ ನಡೆಸಿದೆ. ಇಡೀ ತಂಡದ ದಾಳಿಯಿಂದಾಗಿ ನಕ್ಸಲರು ಪರಾರಿಯಾದರು. ಅವರ ಚೀರಾಟವೂ ಕೇಳಿಸಿತು. ವಾಪಸ್ ಬಂದು ನೋಡಿದಾಗ ಮಾನೆ ದೇಹ ತಣ್ಣಗಾಗಿತ್ತು~.ಕಾರ್ಯಾಚರಣೆ ತಂಡದಲ್ಲಿದ್ದ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಯೊಬ್ಬರು ಗೆಳೆಯನನ್ನು ನೆನಪಿಸಿಕೊಂಡು ಕಣ್ಣೀರುಗೆರೆತ್ತಾ ಶನಿವಾರ ರಾತ್ರಿ ನಡೆದ ಘಟನೆಯನ್ನು ಬಿಚ್ಚಿಟ್ಟಾಗ ಪರಿಸರದಲ್ಲಿ ನೀರವ ಮೌನ. ಪಕ್ಕದಲ್ಲಿದ್ದ ಜತೆಗಾರರಲ್ಲೂ ಕಣ್ಣೀರಧಾರೆ.ಎಲ್ಲಿದೆ ಮಂಜಲ?


ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಕ್ಸಲ್‌ಪೀಡಿತ 11 ಗ್ರಾಮಗಳಲ್ಲಿ ನಾವೂರ ಗ್ರಾಮವೂ ಒಂದು. ತಾಲ್ಲೂಕಿನ ಕುತ್ಲೂರು ಹೊರತುಪಡಿಸಿದರೆ ನಕ್ಸಲ್ ಚಟುವಟಿಕೆ ಹೆಚ್ಚು ಇರುವ ಪ್ರದೇಶ ಈ ಗ್ರಾಮ ಎಂಬ ಕುಖ್ಯಾತಿ ಹೊಂದಿದೆ.ದುರ್ಘಟನೆ ನಡೆದ ಸ್ಥಳ ಬೆಳ್ತಂಗಡಿಯಿಂದ 15 ಕಿ.ಮೀ. ದೂರದಲ್ಲಿದೆ. ಬೆಳ್ತಂಗಡಿಯಿಂದ ಸವಣಾಲು ಗ್ರಾಮಕ್ಕೆ ಆರು ಕಿ.ಮೀ. ಅಲ್ಲಿಂದ ಸುಮಾರು 9 ಕಿ.ಮೀ. ದೂರದಲ್ಲಿರುವ ಇಂದಬೆಟ್ಟು ಗ್ರಾಮದ ನಾವೂರಿನ ಮಂಜಲದಲ್ಲಿ ಘಟನೆ ನಡೆದಿದೆ.ಮಂಜಲ ಇರುವುದು ಸವಣಾಲು ಹಾಗೂ ನಾವೂರಿನ ಗಡಿಭಾಗ. ಈ ರಸ್ತೆಯಲ್ಲಿ ಕಣ್ಣಳತೆಯಷ್ಟು ದೂರದವರೆಗೆ ಮಾತ್ರ ಡಾಂಬರೀಕರಣಗೊಂಡಿದೆ. ಇತ್ತೀಚೆಗೆ ಒಂದು ಕಿರು ಸೇತುವೆ ನಿರ್ಮಾಣವಾಗಿದೆ. ಉಳಿದ ಮಾರ್ಗ ಡಾಂಬರೀಕರಣ ಕಂಡಿಲ್ಲ. ಘಟನಾ ಸ್ಥಳದಿಂದ ಮಾರುದೂರದಲ್ಲಿ ಎರಡು ಮಲೆಕುಡಿಯ ಮನೆಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.