ಸೋಮವಾರ, ಜನವರಿ 20, 2020
26 °C

ಅಮ್ಮ, ಹಾಡು, ಪಾಠ ಮತ್ತು ನಾನು...

ನಿರೂಪಣೆ: ಪೃಥ್ವಿರಾಜ್‌ ಎಂ.ಎಚ್‌ Updated:

ಅಕ್ಷರ ಗಾತ್ರ : | |

ಅಮ್ಮ ಚೆಂದವಾಗಿ ಜನಪದ  ಗೀತೆಗಳನ್ನು ಹಾಡುತ್ತಿದ್ದಳು ಎಂದು ಅವಳ ವಾರಿಗೆಯವರು ನನ್ನ ಮುಖ ನೋಡಿ  ಮರುಕದಿಂದ ಹೇಳುತ್ತಿದ್ದರು. ಮಧುರವಾಗಿ ಹಾಡುತ್ತಿದ್ದ ಅಮ್ಮನ ಮುಖ ಮತ್ತು ಧ್ವನಿ ಕೇಳಿರಲಿಲ್ಲ.  ನಾಲ್ಕು ವರ್ಷದವನಿದ್ದಾಗ ಅಮ್ಮ ತೀರಿಕೊಂಡಳಂತೆ. ಅವಳು ಹಾಡುತ್ತಿದ್ದಳೆಂಬ ಗುಂಗು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿತ್ತು. ಕಾಣದ ಅಮ್ಮನ, ಕೇಳದ ದನಿಯ ಬೆನ್ನತ್ತಿ ಹೊರಟೆ. ಮನೆ, ಹೊಲ, ಗದ್ದೆ, ಶಾಲೆ, ಬೀದಿ, ತಿಪ್ಪೆಗುಂಡಿ ಹೀಗೆ ಎಲ್ಲೆಂದರಲ್ಲಿ ನನ್ನಷ್ಟಕ್ಕೆ ಹಾಡುತ್ತಿದ್ದೆ.  ಅಮ್ಮ ಹಾಡುತ್ತಿದ್ದಳೆಂಬ ಆ ಗುಂಗು ಇಂದು ನನ್ನನ್ನು ಜನಪದ ಹಾಡುಗಾರನಾಗಿ ಬೆಳೆಸಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಯಲುವಗುಳಿ ನನ್ನ ಹುಟ್ಟೂರು. ಅಪ್ಪ ರೈತ. ಅಮ್ಮ ಕಾಯಿಲೆ ಬಿದ್ದು ತೀರಿಕೊಂಡಳು.ಎರಡು ವರ್ಷಗಳ ಬಳಿಕ ಅಪ್ಪ ಮರು ಮದುವೆಯಾದರು. ಅದ್ಯಾಕೋ ಅಪ್ಪನ ಜೊತೆ  ಇರುವುದು ನನಗೆ ಭಾರವಾಯಿತು. ಅಮ್ಮನ ತವರು ಮನೆ ಸೇರಿದೆ. ನನ್ನ ಸೋದರ ಮಾವ ಕೂಡ ರೈತ. ಅವರದ್ದು ಕಷ್ಟದ ಪರಿಸ್ಥಿತಿ. ಕಿತ್ತು ತಿನ್ನುವ ಬಡತನದ ಮಧ್ಯೆ ನನಗೆ ವಿದ್ಯಾಭ್ಯಾಸ ಕೊಡಿಸಿದರು.ಕಷ್ಟಪಟ್ಟು  ಓದಿ ಪ್ರಾಥಮಿಕ ಶಾಲಾ ಶಿಕ್ಷಕನಾದೆ. ಪ್ರವೃತ್ತಿಯಲ್ಲಿ ಗಾಯಕ, ಗೀತರಚನೆಕಾರ, ಸಂಗೀತ ಸಂಯೋಜಕ,  ನಿರೂಪಕನಾದೆ. ಬೆನ್ನಿಗೆ ಬಿದ್ದ ಕಷ್ಟಗಳನ್ನು ಮೆಟ್ಟಿನಿಂತು ಜೀವನದಲ್ಲಿ ಯಶಸ್ವಿಯಾಗಿದ್ದೇನೆ ಎನ್ನುವ ಸಂತೃಪ್ತಿ ಇದೆ.ಪ್ರಾಥಮಿಕ ಶಾಲೆಯಲ್ಲಿ ಓದುವಾಗ ನಮ್ಮೂರಿನವರು ನಿಮ್ಮ ಅಮ್ಮ ಚೆಂದವಾಗಿ ಹಾಡುತ್ತಿದ್ದಳು ಎನ್ನುತ್ತ  ಆಗಾಗ ಅಮ್ಮನ ನೆನಪು ತರಿಸುತ್ತಿದ್ದರು. ಆಗಂತೂ ನನಗೆ ಅಳು ಬರುತ್ತಿತ್ತು. ಆ ನೋವನ್ನು ನುಂಗಿಕೊಂಡು ಮನಸ್ಸಿಗೆ ಬಂದ ಪದಗಳು, ಎಲ್ಲೋ ಕೇಳಿಸಿಕೊಂಡ ಸೋಬಾನೆ ಹಾಡುಗಳು, ಜನಪದ ಗೀತೆಗಳನ್ನು ಗುನುಗ ತೊಡಗಿದರೆ ಮನಸ್ಸಿಗೆ ಹಿತವಾಗುತ್ತಿತ್ತು. ಪದಗಳ ಗುನುಗಿನಲ್ಲೇ ಅಮ್ಮನ ಕಂಡೆ.ಜಾತ್ರೆ ಮತ್ತು ಉತ್ಸವಗಳಲ್ಲಿ ಭಜನೆ ಪದಗಳು, ಮದುವೆ–ಮುಂಜಿಯಲ್ಲಿ ಹಾಡುತ್ತಿದ್ದ ಸೋಬಾನೆ ಪದಗಳನ್ನು ಕೇಳುತ್ತ ಬೆಳೆದೆ. ಶಾಲೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಗಣ್ಯರ ದಿನಾಚರಣೆಗಳಲ್ಲಿ ಹಾಡಿ ಬಹುಮಾನ ಪಡೆಯುತ್ತಿದ್ದೆ. ನನಗೆ ಹಾಡಲು ಉತ್ತಮ ವೇದಿಕೆ ಸಿಕ್ಕಿದ್ದು ಕಾಲೇಜಿನಲ್ಲಿ. ಸ್ವತಃ ಗೀತೆಗಳನ್ನು ಬರೆದು ರಾಗ ಸಂಯೋಜಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದೆ.ನಂತರ ರಾಜಕೀಯ ವೇದಿಕೆಗಳು, ಜಾತ್ರೆ ಹಾಗೂ ಉತ್ಸವಗಳಲ್ಲಿ  ಹಾಡುವ ಅವಕಾಶ ದೊರೆಯಿತು.  ಇತ್ತ ಗೆಳೆಯರು ಚೆನ್ನಾಗಿ ಹಾಡುತ್ತೀಯ  ಮುಂದುವರೆಸು ಎಂದು ಪ್ರೋತ್ಸಾಹ ನೀಡುತ್ತಿದ್ದರು. ಆಗ ನನ್ನಲ್ಲಿ ಹಾಡುವ ವಿಶ್ವಾಸ ಮೂಡಿತು. ಅದೇ ವೇಳೆಗೆ ಶಿಕ್ಷಕನ ಕೆಲಸ ಸಿಕ್ಕಿತ್ತು. ಶಿರಾಗೆ ತೆರಳಿ  ವೃತ್ತಿಯಲ್ಲಿ ತೊಡಗಿದರೂ ಹಾಡುವುದನ್ನು ನಿಲ್ಲಿಸಲಿಲ್ಲ.  ಶಿರಾಗೆ ಹೋಗಿದ್ದು ನನ್ನ ಜೀವನದ ದಿಕ್ಕನ್ನೇ ಬದಲಿಸಿತು. ಅಲ್ಲಿ ಭಜನೆ ಮತ್ತು ಸೋಬಾನೆ ಪದಗಳು  ಗಾಢ ಪರಿಣಾಮ ಬೀರಿದವು. ನಾನೇಕೆ ಇದೇ ಧಾಟಿಯಲ್ಲಿ ಗೀತೆಗಳನ್ನು ರಚಿಸಬಾರದು ಎಂದು ಪ್ರಯತ್ನಿಸಿದೆ. ಗೀತೆಗಳನ್ನು ಬರೆದು ರಾಗ  ಸಂಯೋಜಿಸಿದೆ. ಮೊದಲ ಪ್ರಯತ್ನವಾಗಿ ಮಧುರ ಅಲೆಗಳು ಎಂಬ ಧ್ವನಿಸುರಳಿ ಹೊರತಂದೆ. ಅದು ಯಶಸ್ವಿಯಾಯಿತು. ಲಕ್ಷಾಂತರ  ಕ್ಯಾಸೆಟ್‌ಗಳು ಮಾರಾಟವಾದವು. ಇದರಿಂದ ಸಾಕಷ್ಟು ಹಣ ಮತ್ತು ಖ್ಯಾತಿ ಲಭಿಸಿತು.ಮಧುರ ಅಲೆಗಳ ಯಶಸ್ಸಿನ ನಂತರ ಮುತ್ತಿನುಂಗುರ, ಸಪ್ತಸ್ವರ ಧ್ವನಿಸುರಳಿಗಳನ್ನು ಹೊರತಂದೆ. ಅವು  ಸಹ ಯಶಸ್ವಿಯಾಗಿ ಹಣದ ಜೊತೆಗೆ ಉತ್ತಮ ಹೆಸರು ತಂದುಕೊಟ್ಟವು. ಮುಂದೆ, ಮನೆ ಮಾತು, ತಾಯಿಯೇ ದೇವರು, ಮುತ್ತೈದೆ ಬಾಳು, ಲಗ್ನಪತ್ರಿಕೆ, ಬೆಳ್ಳಿಪಲ್ಲಕ್ಕಿ, ಮುತ್ತಿನ ಪಲ್ಲಕ್ಕಿಯಂತಹ ಜನಪ್ರಿಯ ಧ್ವನಿಸುರಳಿಗಳನ್ನು ಹೊರತಂದು ಯಶಸ್ವಿಯಾದೆ.ಈ ತನಕ ಜನಪದ ಮತ್ತು ಭಕ್ತಿಗೀತೆಗಳು ಸೇರಿದಂತೆ 60 ಧ್ವನಿ ಸುರಳಿಗಳನ್ನು ಹೊರತಂದಿದ್ದೇನೆ. ಜನಪದ ಧಾಟಿಯಲ್ಲಿ ಗೀತೆಗಳನ್ನು ರಚಿಸಿ ಅದೇ ಧಾಟಿಯಲ್ಲಿ ಸಂಗೀತ ಸಂಯೋಜಿಸಿರುವುದು ಈ  ಧ್ವನಿಸುರಳಿಗಳ ವಿಶೇಷ. ಕೈ ತುತ್ತು ತಿನ್ನಿಸಿದ್ದೆ, ಮುತ್ತಿನುಂಗುರಕ್ಕೆ ನಾರಿ, ಬಸವಣ್ಣನ ಗುಡಿಯ ಮುಂದೆ ಮತ್ತು ಗಂಡನ ಪಾದ ಪೂಜೆ ಮಾಡಬೇಕು ಎಂಬ ಗೀತೆಗಳನ್ನು ಜನ ಮೆಚ್ಚಿದರು.  ಉತ್ತರ ಕರ್ನಾಟಕದಲ್ಲಂತೂ ಭಾರಿ ಜನಪ್ರಿಯಗೊಂಡಿದ್ದವು.ಶಿಕ್ಷಕ ವೃತ್ತಿಗೆ ಎಂದೂ ಮೋಸ ಮಾಡಲಿಲ್ಲ. ಅನಗತ್ಯವಾಗಿ ರಜೆ ಹಾಕಿ ಕಾರ್ಯಕ್ರಮಗಳಿಗೆ ಹಾಡಲು ಹೋಗುತ್ತಿರಲಿಲ್ಲ. ರಜಾ ದಿನಗಳಲ್ಲಿ ಮಾತ್ರ ಸಮಾರಂಭಗಳಲ್ಲಿ ಹಾಡುತ್ತಿದ್ದೆ. ಮಕ್ಕಳಿಗೂ ಹಾಡುವುದನ್ನು ಕಲಿಸಿದೆ. ಅವರಲ್ಲಿ ಜನಪದ ಗೀತೆಗಳ ಬಗ್ಗೆ ಅಭಿರುಚಿ ಬೆಳೆಸಿದೆ. ಇದರ ಫಲವೇ ಇಂದು ಆ ಭಾಗದಲ್ಲಿ ಹಲವು ವಿದ್ಯಾರ್ಥಿಗಳು ಜನಪದ ಹಾಡುಗಳನ್ನು ಸೊಗಸಾಗಿ ಹಾಡುತ್ತಿದ್ದಾರೆ.ಶಾಲೆಯಲ್ಲಿ ಸಹೋದ್ಯೋಗಿಗಳೊಂದಿಗೆ  ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿದೆ. ಮಕ್ಕಳ ಕಲಿಕಾ ಮಟ್ಟವನ್ನು ಸುಧಾರಿಸಿದೆ, ಉತ್ತಮ ಫಲಿತಾಂಶ ಬರುವುದರ ಮೂಲಕ ನಮ್ಮ ಶಾಲೆ ಶಿರಾ ತಾಲ್ಲೂಕಿನಲ್ಲೇ ಮಾದರಿ ಶಾಲೆ ಎಂದು ಹೆಸರು ಮಾಡಿತು. ನನ್ನ ಈ ಸೇವೆಗೆ ರಾಜ್ಯ ಸರ್ಕಾರ 1998ರಲ್ಲಿ ‘ಉತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಿತು.ಈ ನಡುವೆ ಹಾಡಿನ ಸೆಳೆತ ನನ್ನನ್ನು  ಮತ್ತೆ ಮತ್ತೆ ಕಾಡಿತು. ಹಾಗಾಗಿ 2007ರಲ್ಲಿ ಸ್ವಯಂ ನಿವೃತ್ತಿ ಪಡೆದು ಪೂರ್ಣ ಪ್ರಮಾಣದ ಗಾಯಕನಾಗಿ ತೊಡಗಿಸಿಕೊಂಡೆ.ಜನಪದ ಧಾಟಿಯ ಗೀತೆಗಳ ಜೊತೆಗೆ ಹಾಸ್ಯ ಪದಗಳನ್ನು ರಚಿಸಿ ಹಾಡಿದೆ. ಧಾರವಾಡ ಎಮ್ಮಿ ಅಂತಾರೆ, ಹೆಂಡ್ತಿಗೆ ನಾನೆಂದರೆ ಬೆಲ್ಲ ಮುಂತಾದ ಗೀತೆಗಳು ಜನಪ್ರಿಯವಾದವು. ಹಾಸ್ಯ ಕಾರ್ಯಕ್ರಮಗಳಲ್ಲಿ ಹಾಸ್ಯ ಗೀತೆ ಹಾಡುವ ಅವಕಾಶಗಳು ಬಂದವು. ರಾಜ್ಯದ ಹಲವೆಡೆ ಪ್ರವಾಸ ಮಾಡಿ ವಿವಿಧ ಕಾರ್ಯಕ್ರಮ ಮತ್ತು ಸಮಾರಂಭಗಳಲ್ಲಿ ತಂಡ ಕಟ್ಟಿಕೊಂಡು ಹಾಡಿದೆ.  ಖಾಸಗಿ ಟಿ.ವಿ ವಾಹಿನಿಯೊಂದರಲ್ಲಿ ಹಾಸ್ಯ ನಿರೂಪಕನಾಗಿ ಜನರನ್ನು ನಗಿಸಿದೆ. ಎರಡು ವರ್ಷ ಶ್ರೀಮತಿ ಮತ್ತು ಶ್ರೀಮಾನ್‌ ಎಂಬ ಕಾರ್ಯಕ್ರಮ ನಡೆಸಿಕೊಟ್ಟೆ. ಇದೇ ಸಮಯದಲ್ಲಿ ಮತ್ತೊಂದು ಖಾಸಗಿ ಮನರಂಜನಾ ವಾಹಿನಿಯಲ್ಲಿ ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮದಲ್ಲಿ ಹಾಸ್ಯ ಗೀತೆಗಳನ್ನು ಹಾಡುವ ಮೂಲಕ ಹೊಸ ಪ್ರಯೋಗ ಮಾಡಿದೆ.

ಬೆಹರಿನ್, ಕತಾರ್‌, ಥೈಲ್ಯಾಂಡ್‌, ಕಾಂಬೋಡಿಯಾ, ಕೀನ್ಯಾ, ಅಬುದಾಬಿ, ಮಾಲ್ಡಿವ್ಸ್‌, ಮಾರಿಷಸ್‌, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಲ್ಲಿ ನಡೆದ ಕನ್ನಡ ಸಮೇಳನಗಳಲ್ಲಿ ಭಾಗವಹಿಸಿ ಹಾಡಿದ್ದೇನೆ.ನಾನು ಶಾಸ್ತ್ರೀಯವಾಗಿ ಸಂಗೀತ ಮತ್ತು ಹಾಡುವುದನ್ನು ಕಲಿತವನಲ್ಲ. ಹಳ್ಳಿಯಲ್ಲಿ ಹಾಡುತ್ತಿದ್ದ ಭಜನೆ ಮತ್ತು ಜನಪದ ಗೀತೆಗಳೇ ನನಗೆ ಸ್ಫೂರ್ತಿ. ಹಾಗಾಗಿ ಜನಪದ ಮತ್ತು ಭಕ್ತಿ ಗೀತೆಗಳನ್ನು ಬಿಟ್ಟು ಬೇರೆ ಹಾಡುಗಳನ್ನು ಹಾಡುವುದಿಲ್ಲ.

ಅಳಿದು ಹೋಗುತ್ತಿರುವ ಜನಪದ ಗೀತಪ್ರಕಾರವನ್ನು ಉಳಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ  ‘ಜನಮನದ ಜಾನಪದ’ ಎಂಬ ಸಂಸ್ಥೆ ಕಟ್ಟಿದ್ದೇನೆ. ಇದರ ಮುಖಾಂತರ ಇಂದಿನ ಪೀಳಿಗೆಗೆ ಜನಪದ ಹಾಡುಗಳನ್ನು ಕಲಿಸುವ ಕಾಯಕಕ್ಕೆ ಮುಂದಡಿ ಇಟ್ಟಿದ್ದೇನೆ.ಮತ್ತೊಂದು ನೋವಿನ ಸಂಗತಿ ಎಂದರೆ ಮೂಲ ಜನಪದ ಗೀತೆಗಳನ್ನು ತಿರುಚಿ, ಅಬ್ಬರದ ಸಂಗೀತ ನೀಡಿ ಮೂಲ ಪದಗಳನ್ನು ಹಾಳು ಮಾಡುತ್ತಿದ್ದಾರೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಿ ಮೂಲ ಗೀತೆಗಳನ್ನು ರಕ್ಷಿಸಬೇಕು. ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಮೂಲ ಜನಪದ ಹಾಡುಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಯೋಜನೆಯೊಂದನ್ನು  ರೂಪಿಸುತ್ತಿದ್ದೇನೆ.ಅಳಿದು ಹೋಗುತ್ತಿರುವ ಜನಪದ ಹಾಡುಗಳನ್ನು ಉಳಿಸಲು ಅಳಿಲು ಸೇವೆ ಮಾಡಲು ಸಿದ್ಧನಿದ್ದೇನೆ. ಇಂದಿನ ಯುವ ಪೀಳಿಗೆಗೆ ಪಾಶ್ಚಾತ್ಯ ಸಂಗೀತದ ಬದಲು ನಮ್ಮ ಮೂಲ ಜನಪದ ಸಂಗೀತದ ಕಡೆ ಒಲವು ಬೆಳೆಸಿಕೊಳ್ಳಬೇಕು ಎಂಬುದೇ  ನನ್ನ ಮನವಿ.

ಪ್ರತಿಕ್ರಿಯಿಸಿ (+)