ಶನಿವಾರ, ಜನವರಿ 18, 2020
25 °C
ವಿಜಾಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರವಚನದ ಸಾರ

ಅರಿತಿರುವುದನ್ನೇ ಹರವಬೇಕು ಅದೇ ಪ್ರವಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಿತಿರುವುದನ್ನೇ ಹರವಬೇಕು ಅದೇ ಪ್ರವಚನ

ಇಂಡಿ: ಜ್ಞಾನ ಅರಿಯಬೇಕು ಮತ್ತು ಅರಿತವರಿಂದ ಅರಿತು ಕೊಳ್ಳಬೇಕು, ಅದು ಹಾಗೆಯೇ ಹರವಬೇಕು ಆಗ ಮನಸ್ಸು ಮಧುರವಾಗುತ್ತದೆ. ಋಷಿ ಮುನಿಗಳು ತಮ್ಮ ಜೀವನದು ದ್ದಕ್ಕೂ ಇದೇ ಕೆಲಸ ಮಾಡಿದ್ದಾರೆ. ಸ್ವಚ್ಛ ಮನಸ್ಸಿನಿಂದ ನಿಸರ್ಗದ ಜೊತೆಗಿದ್ದು ಅರಿತಿದ್ದಾರೆ, ಅದನ್ನು ಶಿಷ್ಯರ ಮನಸ್ಸಿನಲ್ಲಿ ಹರವಿದ್ದಾರೆ. ಒಳ್ಳೆಯ ವಿಚಾರಗಳನ್ನು ಹರವಬೇಕು ಇದು ಅತ್ಯಂತ ಪವಿತ್ರವಾದ ಕೆಲಸ. ಪ್ರಪಂಚದಲ್ಲಿರುವವರು ಕೊನೆಯವರೆಗೆ ಕಲಿಯಲೇಬೇಕು. ಜೀವನದುದ್ದಕ್ಕೂ ವಿದ್ಯಾರ್ಥಿಗಳು ಮತ್ತು ಆಧ್ಯಾಪಕರು ಕಲಿಯೋದು ಕಲಿಸೋದು ಎರಡು ನಡೆದಿರಬೇಕು ಆಗ ಜೀವನ ಸುಂದರವಾಗುತ್ತದೆ.ಒಂದು ಹೂವು ಅರಳಿ ನಿಂತಿದೆ. ಅದರಲ್ಲಿ ಪರಿಮಳ ತುಂಬಿದೆ. ಸೊಗಸಾದ ಗಾಳಿ ಬೀಸುತ್ತಿದೆ. ಆಗ ಹೂವು ಗಾಳಿಗೆ ಹೇಳುತ್ತದೆ ಅಣ್ಣಾ ನನಗೆ ನಡೆಯಲು ಬರುವುದಿಲ್ಲ. ನನ್ನಲ್ಲಿರುವ ಒಂದಿಷ್ಟು ಪರಿಮಳವನ್ನು ದೂರ ಕೊಂಡೊಯ್ದು ಬಿಡು ಎಂದು. ಇದರಂತೆ ನಮ್ಮಲ್ಲಿರುವ ಒಳ್ಳೆಯದನ್ನು ಪ್ರಪಂಚದಲ್ಲಿ ಹರವಬೇಕು. ಬುದ್ಧ, ಬಸವ, ಅಲ್ಲಮಪ್ರಭು, ತುಕಾರಾಮರ ಮಾತುಗಳನ್ನು ಪ್ರಪಂಚದಲ್ಲಿ ಹರವಿದರೆ ನಾಲಿಗೆ ಮಂತ್ರಮಯವಾಗುತ್ತದೆ. ಸಾತ್ವಿಕತೆ ಬರುತ್ತದೆ.ಮಾನಸಿಕ ತೊಂದರೆಗಳು ಮಾಯವಾಗುತ್ತವೆ. ಒಬ್ಬ ಮಹಾನ್‌ ಋಷಿ ಹೇಳುತ್ತಾರೆ ಜಗತ್ತು ಸತ್ಯದ ವಿಸ್ತಾರ ಎಂದು ತಿಳಿದುಕೊಳ್ಳಬೇಕು. ಬೆಳಕು ಎಷ್ಟು ಅದ್ಭುತ, ಅದನ್ನು ಕೊಡುವುದರ ಹಿಂದಿರುವ ಸತ್ಯವೇ ದೇವರು.ದೀಪ ಹಚ್ಚತೇವಿ ಅದು ಕೆಲ ಹೊತ್ತಿನ ಬಳಿಕ ಆರುತ್ತದೆ. ಇದು ಭೌತಿಕ ವಾದದ್ದು, ಅದರಲ್ಲಿಯ ಎಣ್ಣಿ ಮುಗಿದರೆ ಆರುತ್ತದೆ. ಸೂರ್ಯನೂ ಕೂಡಾ ಒಂದು ದಿನ ಆರುತ್ತಾನೆ. ಅಲ್ಲಿರುವ ಹೈಡ್ರೋಜನ್‌ ಮುಗಿದರೆ ಅವನ ಆಯುಷ್ಯ ಮುಗಿಯುತ್ತದೆ. ವಿಶ್ವದ ಎಲ್ಲ ದೀಪಗಳು ಆರುತ್ತವೆ. ಸಾವಿರ ಕೋಟಿ ವರ್ಷಗಳ ಹಿಂದೆ ಉದಯಿಸಿದ ಸೂರ್ಯನೇ ಆರುತ್ತಾನೆ. ಆದರೆ ಅದರ ಹಿಂದಿರುವುದೇ ಬೆಳಕಿನ ಬೆಳಕು.ಇದು ಸ್ಥೂಲವಾದದ್ದು, ಅತ್ಯಂತ ಸೂಕ್ಷ್ಮ ಅದೇ ಬೆಳಕು. ನಿರ್ಮಲವಾದ ಬೆಳಕು. ಅದು ಯಾರೂ ಹಚ್ಚುವುದಿಲ್ಲ ಯಾರೂ ಆರಿಸುವುದಿಲ್ಲ ಅದೇ ಅದ್ಭುತ ಬೆಳಕು ಅದಕ್ಕೆ ನಾವು ದೇವರೆಂದು ಕರೆಯುತ್ತೇವೆ. ಜಗತ್ತು ಮರೆ ಯಾದರೂ ಸತ್ಯ ಮರೆಯಾಗುವುದಿಲ್ಲ ಅದೇ ದೇವರು. ಜಗತ್ತಿಗೆ ಬೆಳಕಿನಿಂದ ಕಳೆ ಬಂದಿದೆ ಅದೇ ದೇವರು.

ಪ್ರತಿಕ್ರಿಯಿಸಿ (+)