ಗುರುವಾರ , ಮೇ 6, 2021
32 °C

ಅರಿವಿನ ದಾರಿಗೆ ಕೈಕಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಬಿಡುಗಡೆಗೆ ಇರುವುದು ಬುದ್ಧ ಎಂಬ ಅರಿವಿನ ದಾರಿ ಒಂದೆ~ ಎಂದು ಅರಿತ ನೀವು ಆ ದಾರಿಯಲ್ಲಿ ನಡೆದು, ನಡೆಯಲು ಕರೆ ಕೊಟ್ಟಿರಿ. ನೇರವಾಗಿ ನೀವು ಚಾಚಿರುವ ಕೈ, ಬಾಣದ ತುದಿಯಂತೆ ಕಾಣುವ ನಿಮ್ಮ ತೋರು ಬೆರಳನ್ನು ನೋಡುತ್ತಿದ್ದರೆ ಅರಿವಿನ ದಾರಿಗೆ ಕೈ ಕಂಬದಂತೆ ಕಾಣುತ್ತದೆ.

 

ಅಜ್ಞಾನದ, ಅಹಮ್ಮಿನ ತಲೆ ಎಂಬೊ ಗಡಿಗೆಯನ್ನು ತಟ್ಟಿ ಮಟ್ಟ ಹಾಕದೆ, ಬಗ್ಗಿಸಿ ಭುಜದ ಮೇಲೆ ಸರಿಯಾಗಿ ಕೂರಿಸದೆ ಆ ದಾರಿಯಲ್ಲಿ ನಡೆಯಲಾಗದು. ಕೈ ಕಂಬವ ಅನುಸರಿಸಿ ದಾರಿ ಹುಡುಕುವೆ.  “Many many happy returns of the day. Happy birthday to you” ಎಂದು ಹೇಳಿ ಒಂದೆರಡು ಘಳಿಗೆ ಅವರ ಚಾಚಿದ ಕೈಯಡಿಯಲ್ಲಿ ತಲೆಬಾಗಿ ಮೌನವಾಗಿ ನಿಲ್ಲಬೇಕೆಂದು ಬೆಳಗಿನ ಜಾವವೇ ಎದ್ದು ಹೊರಟೆ.ವಿಧಾನಸೌಧದ ಬಳಿ ಆಟೋ ಇಳಿದಾಗ ಇನ್ನೂ ಪೂರ್ತಿ ಬೆಳಕಾಗಿರಲಿಲ್ಲ. ಹಾಗೇ ರಸ್ತೆ ದಾಟಿ ಬಂದರೆ ಪರಮಾಶ್ಚರ್ಯ ಎದುರಲ್ಲಿ! ಪೌರ ಕಾರ್ಮಿಕ ಮಹಿಳೆಯರ ಬಹು ದೊಡ್ಡ ದಂಡೇ ಅಂಬೇಡ್ಕರ್ ಪ್ರತಿಮೆಯ ಸುತ್ತ ನೆರೆದು ಬಿಟ್ಟಿದೆ!ಪ್ರತಿಮೆಯತ್ತ ನೋಡಿದರೆ, ಮುಂದೆ ಚಾಚಿದ ಕೈಯೇ ಕಾಣುತ್ತಿಲ್ಲ. ಕಿಡಿಗೇಡಿಗಳ್ಯಾರೊ ಏನೋ ಮಾಡ್‌ಬಿಟ್ರಾ? ಎಂದು ನೋಡಿದರೆ, ನಿಜವಾಗಿಯೂ ಅಂಬೇಡ್ಕರ್ ಅವರೆ ಕೈಯನ್ನ ಬಗಲಲ್ಲಿಟ್ಟು ನಿಂತಿದ್ದಾರೆ. ಇದು ಪ್ರತಿಮೆಯಲ್ಲ. ಕಣ್ಣುಜ್ಜಿಕೊಂಡು ನೋಡಿದೆ.ಸಂಶಯವೇ ಇಲ್ಲ. ಅಲ್ಲೆ ಸಂಘದ ಜಯಮ್ಮ ಚುರುಕಾಗಿ ಓಡಾಡುತ್ತಿದ್ದಾಳೆ. ಮನುಷ್ಯರು ಎದ್ದೇಳುವ ಮೊದಲೆ ಜಗದ ಕಸವ ಗುಡಿಸಿ ಬೆಳಕಿಗೆ ದಾರಿ ಮಾಡುವ ತಾವೇ ಎಲ್ಲರಿಗಿಂತ ಮೊದಲು ಅಂಬೇಡ್ಕರ್ ಜನ್ಮ ದಿನಾಚರಣೆ ಮಾಡುವ ಕಾರ್ಯಕ್ರಮವಿರಬೇಕು.

 

ಹತ್ತಿರದಿಂದ ನೋಡಬೇಕೆನಿಸಿ ಅಂಬೇಡ್ಕರ್ ಅವರಿಗೆ ಹತ್ತಿರವಿದ್ದ, ಸೊಬಗಿನ ಹಳದಿ ಹೂಗಳನ್ನು ಮೈತುಂಬ ತುಂಬಿಕೊಂಡಿದ್ದ ಮರ ಹತ್ತಿ ಯಾರಿಗೂ ಕಾಣಿಸದ ಜಾಗದಲ್ಲಿ ಕೂತೆ. `ವ್ಯೆ~ ಚೆನ್ನಾಗಿ ಕಾಣುತ್ತಿತ್ತು. ಮತ್ತಿಕೆರೆ, ನಂದಿನಿ ಲೇಔಟ್, ಬಸವೇಶ್ವರ ನಗರ, ಇಂಡಸ್ಟ್ರಿಯಲ್ ಎಸ್ಟೇಟ್, ವಿಜಯನಗರ, ಕತ್ರಗುಪ್ಪೆ, ಇಂಡಿಯನ್ ಆಯಿಲ್... ಎಲ್ಲ ಕಡಿಂದ ಶಾರದಮ್ಮ, ಕಸ್ತೂರಿ, ಯಂಕ್ಟಮ್ಮ, ಸರಳಮ್ಮ, ಸುಶೀಲಮ್ಮ, ಪೆಂಚಾಲಮ್ಮ, ಮುನಿಯಮ್ಮ, ಭಾಗ್ಯ, ಆಂಜಿನಮ್ಮ, ಲಕ್ಷ್ಮಿ, ಸರೋಜ... ಎಲ್ಲ ಬಂದ್ ಬುಟ್ವರೆ.ಮಾಮೂಲ್ನಂಗೆ ತಲೆ ನೀಟಾಗಿ ಬಾಚ್ಕಂಡು, ಕನಕಾಂಬ್ರ ಊವ ಮುಡ್ಕಂಡು, ಬೆಳ್‌ಗಾತ್ರದ್ ಚೈನ್ ಆಕ್ಕಂಡು ಲಕ ಲಕ ಅಂತವ್ರೆ. ಯಾವಳೂ ಕಡ್ಡಿ ಪುಡಿ ವತ್ಲಸ್ಕಂಡಿಲ್ಲ.  ಇನ್ನೂ ಇನ್ನೂ ಸಾನೆ ಜನ ವನ್ನಮ್ನ ಪಸ್ರೆಗೆ ಸೇರೋ ಅಂಗೆ ಸೇರ‌್ಕಂಡವ್ರೆ. ಸಂಘದ ಗಂಡುಸ್ರು ಎಲ್ಲಾರು ಡಿಕಾವಾಗಿ ಒಂದೆ ತರ್ದ ವೈಟ್ ಶರ್ಟ್ ಆಕ್ಕಂಡು ಬಂದವ್ರೆ. ಅಗೋ ಆ ಕಡೇಲಿ... ಎಲ್ಲ ದಲಿತ ಸಂಘಟನೆಯವ್ರ ಬಂದ್ರಿಟ್ಟವ್ರೆ...ಅರರೆ , ಅತ್ ಮಕ್ನಾಗಿ ಕೆಂಬಾವುಟದವ್ರ ಬಂದ್ಬಿಟ್ಟವ್ರೆ... ಹೋ ಹೋ ಹೋ... ಮೈಳಾ ಸಂಘಟ್ನೆಯೊರೆಲ್ಲ ಸಂಘದ ಮಹಿಳೆಯವರೊಂದಿಗೆ ಸೇರೋಗವ್ರೆ... ಬಿರ‌್ಕಿಗೆಲ್ಲ ಸಿಮಿಟ್ಟಾಕಿರೋಳು ಆ ಜಯಮ್ನೆ ಇರ‌್ಬೇಕು... ಅವ್ಳ ಸಾಮಾನ್ಯವಾದೋಳಲ್ಲ ಬುಡು.~

 `ನಮ್ಕೆ ಇಂಗ್ಲಿಶು ಬರಲ್ಲ. ನಮ್ಗೆ ತಿಳ್ದಂಗೆ ಕನ್ನಡ್ದಾಗೆ ಬರ‌್ದಿದೀವಿ. ಸ್ವಲ್ಪ ಆಕಿ ಪೇಪರ‌್ನಾಗೆ ಅಂತ ಕಸ್ತೂರಿ, ಕಿೃಷ್ಣ ಇಬ್ರು ಪೇಪರ‌್ರಿನೋರ‌್ಗೆ ಟ್ಟಛಿ ್ಞಟಠಿಛಿ  ಕೊಡ್ತಾ ಅವ್ರೆ.

 

ಸ್ಟೇಜಿನ ಮೇಲೆ ಅಂಬೇಡ್ಕರ್ ಮಾತ್ರ ಕುಂತವ್ರೆ. ಕಾರ್ಯಕ್ರಮ ಏನ್ರಪ್ಪ ಅಂದ್ಕೋವಾಗ್ಗೆ ಜಯಮ್ಮ ವೋದ್ಲು ವೇದಿಕೆ ಮೇಲೆ. ಒಂದ್ ಕೈಲಿ ಮೈಕು, ಇನ್ನೊಂದ್ ಕೈಲಿ ದೀಪ್‌ಕಣಗ್ಲೆ ಗುಚ್ಚ ಇಡ್ಕಂಡಿದ್ಲು. ವೇದಿಕೆಯ ಮೇಲೆ ನಿಂತು ಭಾಷಣ ಚಚ್ಚತೊಡಗಿದಳು~. `ನಮ್ಮ ಪೋರ‌್ಕಾಮಿಕ್ರು ಬಂದುಗಳು ಪರ‌್ವಾಗಿ ಇಲ್ಲಿ ನಿಂತ್ಕಂಡಿದಿನಿ. ಮದ್ಲಿಗೆ ಭೀಮಣ್ಣ ಅಂಬೇಡ್ಕ್ರುಗೆ ಜೈ, ಇವತ್ತು ನೀವು ಉಟ್ಟಿದ ದಿನ ಸುಭಾಸಯಗಳು ಸೋಮಿ~ ಎಂದು ದೀಪಕಣಗ್ಲೆ ಹೂ ನೀಡಿದಳು. `ಎಲ್ಲ ವಾಲ್ಡೋರು ಸೇರಿ ಒಂದ್ ಕೋಟ್ ತಂದಿದೀವಿ, ಏನೋ ನಮ್ ಇಸ್ವಾಸ ಒಪ್ಸ್‌ಕ್ಕಳಿ ಸಾಮಿ~. ಹೂ ಹಾಗೂ ಕೋಟನ್ನು ಎರಡೂ ಕೈಗಳಿಂದ ತೆಗೆದುಕೊಂಡ ಭೀಮಣ್ಣ ಒಪ್ಪಿಸಿಕೊಂಡೆ ಎಂಬಂತೆ ಎದೆಗಪ್ಪಿ ಹಿಡಿದರು.ಗಣ ಗಣ ಬಿಸ್ಲು ಕಾಯೊ ತಿಂಗ್ಳಾಗೆ ಉಟ್ಟಿರೊ ನೀವು ಉರ‌್ಯ ಸೂರ್ಯ ಇದ್ದಂಗೆ. ಉಳ್ಳಿ ಕಾಳ್ನೊ, ಉಳ್ಳಿ ಅಪ್ಳಾನೊ, ಇಲ್ಲ ಬಾಡ್ನೊ, ಬೇಸ್ಗೆ ಕಾಲ್ದಾಗೆ ಕಟಕಟ ಅನ್ನಂಗೆ ವಣಿಗ್ಸಿ ಮಡಕಂಬಿಟ್ರೆ ವರ್ಸ್‌ವೆಲ್ಲೆ ಒಂದುಳ ಬಿದ್ರೆ ಕೇಳಿ. ನಮ್ಕು ಉಳ ಇಡಿದಂಗೆ ನೀವು ಇನ್ನೂ ಸ್ಯಾನೆ ಸ್ಯಾನೆ ವರ್ಸ್ ಸೂರ‌್ಯನಂಗೆ ಉರಿತಿರ‌್ಬೇಕು ಸಾಮಿ. ನಿಮ್ತುಕೆ ಬೆಳ್ ಬೆಳ್ಗೆಲೆ ಯಾಕ ಬಂದ್ವಿ ಅಂದ್ರೆ ಇವತ್ತು ನಿಮ್ದು ಉಟ್ದಬ್ಬ ಅಂತ ಸುಬಾಸಯ ಯೊಳ್ಬೇಕು, ಅಂಗೇಯ ನಮ್ ಬಂಗ ಬಡ್ತನಾನು ಯೋಳ್ಬೇಕು ಅಂತ.ನಾವೆಲ್ಲ ಬೆಂಗ್ಳೂರ್ ಮಾನಗ್ರಪಾಲ್ಕೆಲಿ ಕಾಂತ್ರಾಟ್ ಪೋರ‌್ಕಾರ್ಮಿಕ್ರಾಗಿ ಕೆಲ್ಸ ಮಾಡ್ತಿದೀವಿ. ಕೆಲ್ಸ್‌ಕೆ ಸೇರಿ 20 ವರ್ಸ್ ಆತು. ಮುನ್ನೂರುಪಾಯ್ಗೆ ಸೇರ‌್ಕಂಡಿದ್ದು ಈಗ ಎಲ್ಡ್ ಸಾವ್ರ ಬತ್ತದೆ ಸಾಮಿ. ಗ್ಲೌಸಿಲ್ಲ, ಗಂಬೂಟಿಲ್ಲ, ಮಾಸ್ಕಿಲ್ಲ, ರಜೆ ಇಲ್ಲ, ಇ.ಎಸ್.ಐ ಇಲ್ಲ. ತಳ್ಳೊ ಗಂಟೆ ಗಾಡಿ ಟೈರೋದ್ರೆ ನಾವೇ ಆಕ್ಸಕತಿವಿ, ಚಕ್ರಕ್ಕೆ ಎಣ್ಣೆ ಆಕಬೇಕು, ನಿಲ್ಸೋಕೆ ಜಾಗ ನಾವೇ ಉಡಿಕಬೇಕು. ಎಬ್ಬೆಟ್ ಒತ್ಸ್ಕಂಡು ಯೋಳ್ ಸಾವ್ರ ಚಿಲ್ರೆ ಕೊಡತಕೆ ಎಲ್ಡ್ ಸಾವ್ರ ಕೊಡಾದ್ ಬುಟ್ರೆ ಇನ್ಯಾತ್ಯಾತುದ್ರು ಕೊಡಾಕಿಲ್ಲ ಸಾಮಿ.ಕತ್ಲಿದ್ದಂಗೆ ವಂಟ್‌ಬಂದು ಕಸ ಬಾಚ್ತಿವಲ್ಲ ಅದ್ಕೆ ಬೀದಿ ನಾಯ್‌ಗೋಳು ಕಚ್ಚೋದು ಮಾಮೂಲಿ, ಮೇನ್ ರೋಡ್ ಗುಡ್ಸೋವಾಗ ಗಾಡಿಗೊಳು ವಡ್ದೋಯ್ತವೆ.ಕತ್ರಗುಪ್ಪೆ ಸರಳಮ್ಮಂಗೆ ಗಾಡಿ ವಡ್ದು ಸೊಂಟ ಮುರ‌್ಕಂಡು ಮೂಲೇಲಿ ಬಿದ್ದವ್ಳೆ. ದೀಪಾವಳಿ ದಿನ ಕಸ ಗುಡ್ಸೋವಾಗ ಟುಸ್ಸಾಗಿದ್ದ ಪಟಾಕಿ ಡಬ್ ಅಂದು ಕೂಲಿ ನಗರದ ಕೆಂಪಮ್ಮನ ಅಂಗೈ ಚರ್ಮ ಅರ್ದ ಇಂಚು ಎಗ್ರೋಗದೆ, ಮತ್ತಿಕೆರೆ ಲಕ್ಸಮ್ಮ ಗುಡ್‌ಮಾಡಿದ್ ಕಸಕ್ಕೆ ಬೆಂಕಿ ಇಕ್ಕೊವಾಗ ಸ್ಯಾಲೆ ಅತ್ಕಂಡು ಸತ್ತೋದ್ಲು.

 

ಕಾಲ್ಗೆ, ಕೈಗೆ, ಗಾಜಿನ್ ಚೂರು, ಮಳೆ, ಸೂಜಿ ಚುಚ್ಕಂಡು ಗಾಯಾ, ಕೀವು ಆಗಾದು. ಧೂಳು ದುಂಬು ಕುಡ್ದು ಕೆಮ್ಲು ಬಂದು ಸಾಯದು ಮಾಮೂಲಿ, ಬಗ್ಸಿ ಗುಡ್ಸದ್ಕೆ ಮೂಳೆ, ಕೀಲ್ಗುಳು ಇನ್ನಿಲ್ದಂಗೆ ನೋಯ್ತವೆ ಸಾಮಿ, ಕಸ ತುಂಬ್ಕಂಡು ನಂದ್ನಿ ಲೇವಟ್ ಅಪ್ ಅತ್ತೊವಷ್ಟೊತ್ಗೆ ತೊಡೆ, ಕಣ್ಕಾಲು ಪದ ಯೋಳ್ತವೆ, ಕಣ್ಕಾಲಂತು ಕಲ್ಲಾದಂಗಾಯ್ತವೆ ಸಾಮಿ. ಮನೆರ‌್ಯಾರು ಕುಡ್ಯಾಕೆ ನೀರ್ ಕೇಳಿರೆ ಕೊಡಲ್ಲ ಅದ್ಕೆ ಯಲಡ್ಕೆ, ಕಡ್ಡಿಪುಡಿ ವತ್ಲುಕ್ಕತೀವಿ. ವಂದ ಮಾಡಾಕೆ ಜಾಗಿಲ್ಲ, ಮುಟ್ಟಾದಾಗಂತು ಸ್ಯಾನೆ ಯಾತ್ನೆ. ಸತ್ ನಾರೊ ನಾಯಿ, ಬೆಕ್ಕು ಬರಿ ಕೈಲೆ ಎತ್ಕಬೇಕು. ಮೆನ ಕಸ್ದೊರಂತು ಹೇಲಿನ್ ಬಟ್ಟೆ, ಮುಟ್ಟಿನ್ ಬಟ್ಟೆ, ಅಳ್ಸಿರೋ ಊಟ, ಮಳೆ, ಗಾಜು, ಎಲ್ಲ ಒಂದ್ ಮಾಡಿ ಆಕ್ತರೆ. ಆಸ್ಪತ್ರೆ, ಮಾರ್ಕೆಟ್ ಕಸ್ವಂತು ಕೇಳ್ಲೇಬೇಡಿ.ಏರಿಯಾದಾಗೆ ಯಾರ‌್ದಾದ್ರು ಮನೇಲೊ / ಪ್ಲ್ಯಾಟ್ನಾಗೊ ಕಕ್ಕಸ್ ತೊಳ್ದ್ರೆ, ವೋಟ್ಲು ಕಸ ಬಾಚುದ್ರೆ ನಾಕ್ಕಾಸೊ, ಕಾಪಿನೊ ಸಿಗುತ್ತೆ. ಸಂಬ್ಳ ಕೇಳಿರೆ ಮನ್‌ಮನೇಲಿ ಕಲೆಟ್ಟು ಮಾಡ್ಕಂತರಲ್ಲ ಅಂತ ಯೋಳವ್ರೆ ಕಂತ್ರಾಟ್ರು. ಅಲ್ಲ ಸಾಮಿ ಅತ್ರುಪಾಯಿ ತಾಂಡ್ರೆ ಪೂರ್ತಿ ದುಡ್ಡು ನಮ್ಗೆಲ್ಲಿ ಸಿಗುತ್ತೆ ಯೋಳಿ. ಕೊಡ ಎಲ್ಡ್ ಸಾವ್ರದಾಗೆ ಏನ್ ಸಂಸಾರ ಮಾಡಕಾದಾತು ಯೋಳಿ. ಯಂಗೋ ಮಾಡಿ ಆರ‌್ಕಾಸು, ಮೂರ‌್ಕಾಸು ಸಂಪಾದ್ಸಿ ವಟ್ಟೆ ವರ‌್ಕಂತೀವಿ. ಬೆಳಿಗ್ಗೆಲಿ ವಂಟ್ ಬತ್ತೀವಿ. ಮಕ್ಳು ಸ್ಕೂಲಿಗೋದ್ವ ಬುಟ್ವಾ ನೋಡೋರು ದಿಕ್ಕಿರಲ್ಲ. ಕೇಳೋರಿಲ್ದೆ ಪೇಲಾಯ್ತವೆ ಮುಂದ್ಕೆ ಪರ‌್ಕೆ ಇಡಿತರೆ. ಕುಡ್ದು ಕಾಯ್ಲೆ ಬಿದ್ದು ಸಾಯೋ ಗಂಡ್ದಿರು... ...  ನಮ್ ಕಸ್ಟ ಕೇಳ್ಬೇಡಿ ಸಾಮಿ. ನೀನೆ ಅಂತ ಕೇಳೋರಿಲ್ಲ.ಆಂಜನಪ್ನು ಸಾಲ-ಸೋಲ ಮಾಡ್ಕಂಡು ಸಂಘ ಮಾಡ್ದ. ಕನಿಷ್ಟ ಕೂಲಿ ಬೇಕು ಅಂತ ಸ್ಯಾನೆ ವಡ್ದಾಡಿದ್ವಿ. ನಮ್ಕೆ ಚೆಕ್ನಾಗೆ ಕನಿಷ್ಟ ಕೂಲಿ, ಗ್ಲೋಸು, ಗಂಬೂಟು, ಮಾಸಿಕ್ಕು, ಕುಡ್ಯಾ ನೀರು, ಕಕ್ಕಸ್ ರೂಮು, ಎರ‌್ಗೆ ರಜೆ ಜತ್ಗೆ ಸಂಬ್ಳ, ಇಎಸ್ಸು, ಪಿಎಪ್ಪು, ಕ್ಯಾಂಟೀನು, ಕುಂತ್ಕಳ ರೂಮು, ಮಕ್ಳು ನೋಡ್ಕಳ ಜಾಗ, ಅಸ್‌ಡೆಂಟಾದ್ರೆ ದುಡ್ಡು ಇಂತದಿಲ್ಲ ಅನ್ನಂಗಿಲ್ಲ ಎಲ್ಲ ಕೊಡ್ಬೇಕು ಅಂತ ಕಾಂತ್ರಾಟ್ ರೂಲಿಸ್ಸಾಗದೆ. ದಿನಾ ಆಗ್ಬೇಕಾದ್ ಕೆಲ್ಸವಾ ಕಾಂತ್ರಾಟ್ರು ಕೊಡಾಂಗಿಲ್ಲ ಅಂತಾನೂ ಅದ್ರಾಗೆ ಬರ‌್ದದೆ.ಕೇಳೆದಷ್ಟೆ ಬಾಗ್ಯಾವು ಕಣ್ಣಾಗು ನೋಡ್ಲಿಲ್ಲ. ನಾಕ್ಸಾವ್ರದಷ್ಟು ಪರ‌್ಮೆಟ್ ಕಾರ‌್ಮಿಕ್ರು ಇದ್ರೆ, ಅದ್ಮೂರ್ ಸಾವ್ರ ಜನ ಕಾಂತ್ರಾಟ್ ಪೋರ್‌ಕಾರ‌್ಮಿಕ್ರು ಅವ್ರೆ. ನೀವೆ ಲೆಕ್ಕ ಆಕ್ಕಳಿ ಸಾಮಿ ಏಸ್ ಲೋಡ್ ಕಸ ಬೀಳುತ್ತೆ ಅಂತವ. ಮಾರ್ಕೆಟ್ ಒಂದ್ರಾಗೆ 80- 100 ಟನ್ ಕಸ ಬೀಳುತ್ತೆ ಸಾಮಿ. ಸಾಯ ಕೇಳಕೆ ಇಂತೋರತ್ರ ವೊಗಿಲ್ಲ ಅನ್ನಾಂಗಿಲ್ಲ.

ಆ ಕಾರ‌್ಮೆಡ್ ಸಾಮಿ ವೋರಾ ಮಾಡ್ಬೇಕು, ಕೇಸಾಕ್ಬೇಕು ಅಂತವ ಕಾದ್ಗ ಬರ‌್ದಿತ್ತೆ ಬರ‌್ದಿತ್ತು ಕಮ್‌ಸನ್ರುಗೆ, ಮಿನಿಟ್ರುಗುಳ್ಗೆ, ಇನ್ನು ಯಾರ‌್ಯಾರ‌್ಕೊ ಡಿಲ್ಲಿನಾಗಿರೊ ದೊರ‌್ಗುಳ್ಗು ಬರ‌್ದಿದ್ರು. ಕಟ್ಟಿದ್ರೊಂದ್ನಾಕ್ಮೂಟೆ ಆಗುತ್ತೇನೊ ಕಾಣೆ. ಆ ಮೇಡಂ ಬಂದು ಕಡ್ಡಿಪುಡಿ ತಿನ್ಬೇಡಿ, ಎಂಡ ಕುಡಿಬೇಡಿ, ಮಕ್ಳನ್ನ್ ಯಂಗಾರ ಮಾಡಿ ಅತ್ನೆ ಕ್ಲಾಸ್‌ಗಂಟ ಓದುಸ್ರಿ, ಎಣ್ ಮಕ್ಳಿಗೆ ಬೇಗ ಮದ್ವೆ ಮಾಡ್ಬೇಡಿ, ನೀವೂನು ವೋದೋದು, ಮಾತಾಡಾದು ಕಲ್ತ್‌ಕಳಿ ಅಂತಾ ಸಂಕ ಊದಿದ್ದಷ್ಟೇಯ. ನಮ್ಮರಾದ್ರು ತುಪ್ಪ ಅನ್ನ ಉಟ್ಕೊಂಡಿದ್ದೋರು, ಅದ್ಕೆ ದಮ್ಮೂ ಇಲ್ಲ, ತಾಕತ್ತೂ ಇಲ್ಲ. ಯಂಗಾರು ಆಗ್ಲಿ ಪುಸ್ತುಕ್‌ದಾಗಿರದ್ನೆಲ್ಲ ಕತೆ ಕಟ್ಟಿ ಸಂದಾಕಿ ಯೋಳ್‌ಕೊಡ್ತು. ನಿಮ್ ಕತೆನೂ ಅದೆ ಯೋಳಿದ್ದು.ಅಲ್ಲ ಸಾಮಿ ಮೋರಿ ಪಕ್ಕ ವೋಗೋವಾಗ, ಕಸ್ದ್ ಲಾರಿ ಕಂಡ್ರೆ ಮೂಗ್ ಮುಚ್ಕಂತರೆ, ಇನ್ನ ಆ ಮೋರಿ ವಳ್ಗೆ, ಕಸ್ದೊಳ್ಗೆ ಕೆಲ್ಸ ಮಾಡೋರು ಕುಡಿದೆ ಇನ್ನೇನ್ ಮಾಡ್ತರೇಳಿ.

ವೋದ್ಸು ಅಂದ್ರೆ ಎಲ್ಲಿಂದ ವೋದ್ಸನಾ? ಬೆಳ್ಕರ‌್ಯಕ್ಕೆ ಮದ್ಲೆ ವಂಟ್ ಬತ್ತೀವಿ. ಇಸ್ಕೂಲ್ಗೆ ವಾದ್ವಾ ಬುಟ್ವಾ ಅಂತ ನೋಡ್ಕಳೋರು ಯಾರು? ನಾವಂತು ಎಬ್ಬೆಟ್ಟು, ಏನ್ ವೋದ್ತವೆ ನೋಡ್ಕಳದೆಂಗೆ? ಗೊರ‌್ಮೆಟ್ ಸ್ಕೂಲಾಗೆ ದುಡ್ ಕರ್ಚಾಯ್ತದೆ. ಮದ್ವೆ ಮಾಡ್ಬೇಡ ಅಂದ್ರೆ ವಯ್ಸಿಗೆ ಬಂದಿರು ಎಣ್ ಮಕ್ಕುಳ್ನ ಮನಾಗೆ ಎಂಗ್ ಬುಟ್ ಬರ‌್ತೀರಾ ಯೋಳಿ. ಪೋಲಿ ಪಟಾಲಮ್‌ಗುಳ ಕಾಯೋರ‌್ಯಾರು? ಅಂತ ಕಟ್ಟಿ ಕಳಿಸ್ತೀವಿ.ನಮ್ ಬದ್ಕು ಅನ್ನಾದು ಮೂರಾಬಟ್ಟೆ ಆಗ್ ಬುಟ್ಟದೆ ಸಾಮಿ. ನೀವು ಪಾರಿಂಗೆಲ್ಲ ವೋಗಿ ದೊಡ್ ವೋದೆಲ್ಲ ವೋದಿ, ರಾಜ್ ಮಾರಾಜ್‌ಗೊಳ್ನೆಲ್ಲ ಕಂಡಿದೀರಿ, ಸರ್ಕಾರ‌್ದ ಸಿಮ್ಮೋಸ್ನದಾಗೆ ಕೂತಿದ್ದೋರ‌್ನೆಲ್ಲ ದಬಾಯ್ಸಿ ಕೊಡೋದು ಕೊಡ್ರಿ ನಿಮ್ಮಪ್ಪನ ಮನೆ ಗಂಟಲ್ಲ ಕೊಡೋದು ಅಂತ ಕೇಳ್ತಿದ್ರಿ.

 

ಎಣ್ಣೆಂಗ್ಸ್ರು ಅಂದ್ರೆ ಸ್ಯಾನು ಕಳ್ಳು ನಿಮ್ದು, ನಮ್ ಸಲ್ವಾಗಿ ಡೆಲ್ಲಿ ಸೀಟ್ನೆ ವಗಾಯ್ಸ ಬುಟ್ರ್ರಿ, ಇಂಗ್ಲಿಸ್ ದೊರ‌್ಗುಳು, ಡಿಲ್ಲಿ ದೊರ‌್ಗುಳು ಇಂತಿಂತೊರನ್ನಂಗಿಲ್ಲ ನಮ್ ಜನ್ಗೊಳ್ ಸಲ್ವಾಗಿ ಸ್ಯಾನೆ ವದ್ದಾಡಿದಿಯ ಸಮೆ. ನಾವು ಎಲ್ಡೊತ್ತು ಅನ್ನ ಉಣ್ಕೊಂಡು ಮನುಸ್ರಂಗೆ ನಿಸೂರಾಗಿ ಬದ್ಕು ಮಾಡಂಗಾಗ್ಬೇಕು. ವೋರಾಟ ಮಾಡೊ ಜನ್ಗುಳ್‌ನ್ನೆಲ್ಲ ನಿಮ್ ಉಟ್ದಬ್ಬ ಅಂತ ಇಲ್ಲಿ ಸೇರ‌್ಸಿದೀವಿ.

 

ಕಾಲ್ಡ್ ಮಾಡ್ಸಿ ಎಸ್ರು ಆಕ್ಸದೆ ವೋದ್ರು ಎಲ್ಲಾರೂ ಬಂದವ್ರೆ. ಮಕ್ಳೆತ್ಕಂಡ್ ಬಂದು ಮನೆ ಮುಂದೆ ಕುಂತ್ಕಂತೀವಿ ಪರ‌್ಕೆ ಸಮೇತ ಅಂತ ದಮ್ಕಿ ಆಕಿದ್ವಿ ಅನ್ನಿ. ಎಲ್ರಕು ಎನೊ ವಂತರ‌್ಕೆ ಗರ ಬಡ್ಕಂಡದೆ. ಅವ್ರೆತ್ತೊ ಅವ್ರಗ್ಯಾನೆತ್ತೊ? ಬಳೆ ಕಾಯ್ಸಿ ಚುಟ್ಕೆ ಆಕ್ತರಲ್ಲ ಮಕ್ಳಿಗೆ ಆಗ ಅಂಗೆ ಮುಟ್ಟಿ ನೋಡ್ಕಳ ಅಂತ ನಾಕ್ ಮಾತಾಡಿ ಸಾಮಿ.

 

ಸಾಲಪ್ಪ ಅಂತ ನಮ್ಮರೆ ಒಬ್ರು ಸ್ಯಾನೆ ಇಂದೆನೆ ನಮ್ಗೆ ಏನೇನ್ ಬೇಕು ಅನ್ನದೆಲ್ಲ ಕರೆಟ್ಟಾಗಿ ಬರ‌್ದು ಪುಸ್ಕ ಮಾಡಿ ಕೊಟ್ಟವ್ರೆ ಇದೆ ಇದಾನಸೋದ್ ದೊರ‌್ಗುಳ್ಗೆ. ಕೊಟ್ ಮುವತ್ ವರ್ಸಾದ್ರು ಈ ಕಲ್ ಬಿಲ್ಡಿಂಗ್ ವಳ್ಗಿರೊರು ಏನೂ ಮಾಡಿಲ್ಲ. ಅದೆಲ್ಲ ಮಾಡ್ದೆ ವೋದ್ರೆ ಸುಮ್ಕಿರಲ್ಲ ಅಂತ ತಾಕೀತ್ ಮಾಡಾಕೆ ಎದ್ರುಗಿರೊ ಕೆಂಪ್ ಬಿಲ್ಡಿಂಗೊರ‌್ಗೆ ಯೋಳಿ ಸಾಮಿ. ನೀವು ಯಂಗು ಲಾಯ್ರಿ  ವೋದಿದೀರಲ್ಲ ಸಮೆ ಅದ್ಕೆ ಕರಿ ಕೋಟ್ನೆ ತಂದ್ವಿ ಸಮೆ.ಗಲೀಜು ತೆಗ್ಯೊ ನಮ್ಮಂತ್ ಎಣ್‌ಮಕ್ಳು ಬಿಟ್ರೆ ಇನ್ಯಾರೂ ನಮ್ಮರು, ನಿಮ್ ಪೋಟೊ ಇರೊ ಲೆಟ್ರೆಡ್ಡುನ್ನ ಬಿಲ್ಕುಲ್ ಬಳ್ಸಂಗಿಲ್ಲ ಅಂತ ತಾಕೀತ್ ಮಾಡು ಸಮೆ. ಇವ್ರೆಲ್ಲ ಕಡ್ದು ಉತ್ರುಸಿರಾದು ಅಷ್ಟರಗೆ ಐತೆ. ಗುದ್ದಾಡ್ಕಂಡು ಆಳಾಗೋಗ್ಲಿ. ಆ ಗುದ್ದಾಟ್ತಾಗೆ ಎಲ್ರುನೂ ವಸಿ ವಸಿನೆ ಕಡ್ದಾಗಿದ್ರು ನಮ್ ಪಾಡು ಇಂಗೆ ಇರ‌್ತ ಇರ‌್ಲಿಲ್ಲ ಸಮೆ. ಕಕ್ಕಸ್ ಗುಂಡಿನಾಗೆ ಬಿದ್ದು ಸತ್ತಿರೋರು ಏಸ್ ಜನ ಗೊತ್ತ ಸಾಮಿ, ಕುಡ್ದು ವಟ್ಟೆ ಕಳ್ ಸುಟ್ಕಂಡು ಸಾಯೋರ‌್ಗಂತು ಲೆಕ್ವ ಇಲ್ಲ.

 

ಮಕ್ಳಿಗೆ ಇಟ್ಟು, ಬಟ್ಟೆ ವಂಚಿ ಬದ್ಕು ಮಾಡೋದ್ಕೆ ನಾವ್ ಪಡೋ ಪಾಡು ಕಾಣ್ದಿರೊ ಪರಮಾತ್ಮುನ್ಗಾರು ಮುಟ್‌ಬೋದೇನೊ ಇಲ್ಲಿರೊ ಮನುಸ್ರುಗೋಳ್ಗೆ ತಟ್ಟಲ್ಲ. ಸ್ಯಾನೆ ರೋಸೋಗದೆ ಸಮೆ ನಮ್ಕೆ. ಈ ಬಿಳೆ ಬಿಲ್ಡಿಂಗು, ಕೆಂಪ್ ಬಿಲ್ಡಿಂಗು ಸುತ್ತ ಸತ್ ನಾಯಿ, ಬೆಕ್ಕು, ತಂದ್ ಸುರೀಬೇಕು ಅಂದ್ಕಂಡಿದ್ವಿ. ಇವತ್ತು ನಿಮ್ದು ಉಟ್ದಬ್ಬ ಆಗೋ ವತ್ಗೆ ನಿಮ್ ಮ್ಯೋಲ್ನ್ ಇಸ್ವಾಸ್ಕೆ ಸುಮ್ಕಿದಿವಿ ನಿಮ್ಮಿಂದಾಗೆ ಬಚಾವಾಗವ್ರೆ. ನಮ್ ವಟ್ಟೆ ಸಂಕ್ಟ ನಿಮ್ಗೆ ಅರ್ಥ ಆಗಾದು ಅಂದ್ಕಂಡು ಬಂದ್ವಿ. ಇನ್ನೇನೂ ಎಚ್ಗೆ ಕೇಳಲ್ಲ ಅಸ್ಟೆ ಸಮೆ. ಏನಾದ್ರು ತೆಪ್ ಮಾತಾಡಿದ್ರೆ ವಟ್ಗೆ ಆಕ್ಕಳಿ ಸಮೆ~ ಎಂದು ಹೇಳಿ ಜಯಮ್ಮ ಹೋಗಿ ತನ್ನವರೊಂದಿಗೆ ಕುಳಿತುಕೊಂಡಳು.ಅಂಬೇಡ್ಕರ್ ಅವರು ತಮ್ಮ ಕೋಟು ಕಳಚಿಟ್ಟು ಪೌರ ಕಾರ್ಮಿಕರು ಕೊಟ್ಟ ಕೋಟನ್ನು ತೊಟ್ಟುಕೊಂಡು, ಅವರು ಕೊಟ್ಟ ಹೂವನ್ನು ಕೈಯಲ್ಲಿ ಹಿಡಿದು ಮಾತನಾಡತೊಡಗಿದರು. ಆಂಜನೇಯಲು ಹ್ಯಾಂಡ್ ಮೈಕ್ ಹಿಡಿದುಕೊಂಡು ನಿಂತ. ಅಂಬೇಡ್ಕರ್ ಮಾತಿಗಾರಂಭಿಸಿದರು.

 

`ನನ್ನ ಜೀವಮಾನದಲ್ಲೆ ಅತ್ಯಂತ ಅರ್ಥಪೂರ್ಣ ಜನ್ಮ ದಿನಾಚರಣೆ ಇದು. ನೀವು ಕೊಟ್ಟ ಕೊಡುಗೆ ನನಗೆ ಅಮೂಲ್ಯವಾದುದು. ನಾನೆಳೆದ ರಥವನ್ನು ಕಡು ಬಡವರಾದ ಹೆಣ್ಣು ಮಕ್ಕಳು ಮುಂದೆಳೆದು ತಂದಿರುವುದು ನನಗೆ ಹೆಮ್ಮೆ ಎನಿಸುತ್ತದೆ. ಮಹಿಳೆಯರಿಗೆ ಪ್ರತ್ಯೇಕ ಸಮಸ್ಯೆಗಳಿರುವುದರಿಂದ ಅವರೇ ಸಂಘಟಿತರಾದರೆ ಹೆಚ್ಚು ಸಮರ್ಥವಾಗಿ ಅವುಗಳನ್ನು ನಿಭಾಯಿಸಬಲ್ಲರು.ಮಹಿಳೆಯರು ಒಟ್ಟು ಸಮಾಜದ ಮುಂಚೂಣಿಗೆ ಬಂದಲ್ಲಿ ಆ ಸಮಾಜ ಬಹು ಬೇಗನೆ ಸುಧಾರಿಸುವುದು. ಮನೆಯ, ಸಂಘಟನೆಯ, ಪಕ್ಷದ ಹಾಗೂ ದೇಶದ ಆಗು-ಹೋಗುಗಳಲ್ಲಿ ಮಹಿಳೆಗೆ ಸಮರ್ಪಕವಾದ ಪ್ರಾತಿನಿಧ್ಯ ಅತ್ಯವಶ್ಯ.

 

ಸಮುದಾಯದ ಪ್ರಾತಿನಿಧ್ಯವನ್ನು ಒತ್ತಾಯ ಮಾಡುತ್ತಿರುವ ಸಂದರ್ಭದಲ್ಲಿ ಸಮುದಾಯದೊಳಗಣ ಮಹಿಳೆಯರನ್ನು ನಿರ್ಲಕ್ಷಿಸಲಾಗದು. ಗಂಭೀರವಾದ ವಿಷಯಗಳ ಬಗ್ಗೆ ಬರಿ ಪುರುಷರೇ ಚರ್ಚೆ ನಡೆಸಿದರೆ ಸಾಲದು. ಮಹಿಳೆಯರೂ ಪಾಲ್ಗೊಳ್ಳುವಂತಾಗಬೇಕು.ಆತ್ಮಘನತೆಗಾಗಿ ನಡೆಯುವ ಹೋರಾಟದಲ್ಲೂ ಮಹಿಳೆಯರು ಸಕ್ರಿಯವಾಗಿ, ಸ್ವತಂತ್ರ ವ್ಯಕ್ತಿಗಳಾಗಿ ಪಾಲ್ಗೊಳ್ಳಬೇಕೆ ಹೊರತು ಹೆಂಡತಿ, ಮಗಳೊ, ಸೊಸೆಯೊ ಆಗಿ ಅಲ್ಲ. ಇದು ಮಹಿಳೆಯರಷ್ಟೆ ಪುರುಷರ ಜವಬ್ದಾರಿಯೂ ಆಗಿದೆ.ಕೌಟುಂಬಿಕ ಹೊಣೆಗಾರಿಕೆಯನ್ನು ಮಹಿಳೆಯರಿಗೆ ಬಿಟ್ಟು ಬಿಡಬಾರದು. ಪುರುಷರೂ ಹೊಣೆ ಹೊರಬೇಕು. ಕುಟುಂಬ ಸಮುದಾಯದ ಕಣ್ಣು. ಅದು ಚೆನ್ನಾಗಿ ರೂಪುಗೊಂಡರೆ, ಉನ್ನತ ಸಮುದಾಯ, ದೇಶ ರೂಪಿತವಾಗುವುದು. ಮಕ್ಕಳನ್ನು ಹೆರುವುದಷ್ಟೆ ಅಲ್ಲದೆ ಅವರಿಗೆ ಒಳ್ಳೆ ದಿಕ್ಕನ್ನು ತೋರುವುದು ಇಬ್ಬರ ಹೊಣೆ.

 

ಗಂಡ ಹೆಂಡತಿ ಪರಸ್ಪರ ಮಿತ್ರರಂತಿರಬೇಕು. ಮನುಷ್ಯ ಗೌರವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟರೆ, ಕುಟುಂಬದ, ಸಮುದಾಯದ, ದೇಶದ ಗೌರವವನ್ನು ಎತ್ತಿಹಿಡಿಯುವುದು ಸಾಧ್ಯವಾಗುತ್ತದೆ.~  ಇಂತಹ ಪ್ರಯತ್ನದಲ್ಲಿ ಇಲ್ಲಿ ನೆರೆದಿರುವ ಸಂಗಾತಿಗಳೆಲ್ಲರೂ ನನ್ನ ಸೋದರಿಯರೊಂದಿಗೆ ಕೈ ಜೋಡಿಸಬೇಕು. ಅವರಿಗೆ ನ್ಯಾಯ ದೊರಕಿಸಲು ಹಾಗೆ ಮಾಡುವುದು ನಿಮ್ಮ ನೈತಿಕ ಹೊಣೆಯಾಗಿದೆ. ಅಲ್ಲದೆ ಅದರಲ್ಲಿಯೇ ನಿಮ್ಮ ಏಳಿಗೆ ಮತ್ತು ಆತ್ಮ ಘನತೆಯೂ ಅಡಗಿದೆ.~ಆನಂದ ತಡೆಯಲಾರದೆ ಜೋರಾಗಿ ಬಾಯಲ್ಲಿ ಎರಡು ಕೈಗಳ ಬೆರಳಿಟ್ಟು ಸೀಟಿ ಹೊಡೆದುಕೊಂಡೆ. ಹೂಮಳೆಗರೆಯಬೇಕೆನಿಸಿ ಕೊಂಬೆಯ ಮೇಲೆ ಒತ್ತಡ ಹಾಕಿ ಆಡಿಸಿದೆ. ಗಟ್ಟಿಯಾದ ಮರವಲ್ಲವಾದ್ದರಿಂದ ಲಟಕ್ಕನೆ ಮುರಿದು ಬಿತ್ತು. ಧಡಕ್ಕನೆ ಎದ್ದೆ, 5 ಗಂಟೆಯ ಅಲಾರಾಂ ಹೊಡೆದುಕೊಳ್ಳುತ್ತಿತ್ತು. `ಸುಚಿತ್ರಾ~ದಲ್ಲಿ ಅಂಬೇಡ್ಕರ್ ಮತ್ತು ಮಹಿಳೆ ಕುರಿತು ಮಾತನಾಡಬೇಕಿದ್ದರಿಂದ, 1914ರಲ್ಲಿ ಅಖಿಲ ಭಾರತ ಫೆಡರೇಷನ್‌ನಲ್ಲಿ ಆಯೋಜಿಸಲಾಗಿದ್ದ ದಲಿತ ಮಹಿಳೆಯರ ಸಮಾವೇಶದಲ್ಲಿ ಅಂಬೇಡ್ಕರ್ ಅವರು ಮಾಡಿದ ಭಾಷಣವಿದ್ದ ಪುಸ್ತಕವನ್ನು ಓದುತ್ತಾ ಮಲಗಿದ್ದು ನೆನಪಾಯ್ತು. ಅಂಬೇಡ್ಕರ್ ಪ್ರತಿಮೆಯ ಅಡಿ ಮೌನವಾಗಿ ನಿಲ್ಲುವುದನ್ನಾದರೂ ನಿಜವಾಗಿಸಬಹುದಲ್ಲ ಎಂದು ಎದ್ದೆ.

(ಪೌರಕಾರ್ಮಿಕ ಶಿಲ್ಪಕೃಪೆ: ಕನಕಾ ಮೂರ್ತಿ; ಚಿತ್ರ: ಅಲೋಕ್ ಉತ್ಸವ್)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.