ಗುರುವಾರ , ಜೂನ್ 4, 2020
27 °C

ಅರೆ... ರೇ... ಇದು ಮಾಗಿದ ಮಾತು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರೆ... ರೇ... ಇದು ಮಾಗಿದ ಮಾತು!

ಐಂದ್ರಿತಾ ರೇ ಖುಷಿಯಾಗಿದ್ದಾರೆ. ಅವರು ನಾಯಕಿಯಾಗಿ ನಟಿಸಿರುವ ‘ಮನಸಿನ ಮಾತು’ ತೆರೆಕಾಣುತ್ತಿದೆ. ಈ ವರ್ಷ ಬಿಡುಗಡೆ ಆಗುತ್ತಿರುವ ಅವರ ನಟನೆಯ ಮೊದಲ ಚಿತ್ರವಿದು. ಹಾಗಾಗಿಯೇ ಖುಷಿ.‘ಮನಸಿನ ಮಾತು’ ಬಿಡುಗಡೆಯಾಗುವುದು ತಡವಾಗಿದ್ದರೂ, ಚಿತ್ರ ಚೆನ್ನಾಗಿದೆಯಂತೆ. ತೆರೆಯ ಮೇಲೆ ಅಜಯ್ ಮತ್ತು ತಮ್ಮ ಕೆಮಿಸ್ಟ್ರಿ ಬಗ್ಗೆ ತುಂಬು ಭರವಸೆ ಇಟ್ಟುಕೊಂಡಿರುವ ಐಂದ್ರಿತಾ- ‘ನಮ್ಮಿಬ್ಬರಿಗೂ ಚಿತ್ರದಲ್ಲಿ ಯಾವುದೇ ರೊಮ್ಯಾಂಟಿಕ್ ದೃಶ್ಯಗಳಿಲ್ಲ. ಆದರೂ ಪ್ರೇಕ್ಷಕರಿಗೆ ನಮ್ಮ ಜೋಡಿ ಇಷ್ಟವಾಗುತ್ತದೆ’ ಎಂದರು, ಎಂದಿನ ಚಾಕಲೇಟ್ ನಗೆ ತುಳುಕಿಸುತ್ತ.ಕಾಮಿಡಿ, ಆಕ್ಷನ್, ಸೆಂಟಿಮೆಂಟ್ ಎಲ್ಲವೂ ‘ಮನಸಿನ ಮಾತು’ ಚಿತ್ರದಲ್ಲಿದೆ ಎನ್ನುವ ಐಂದ್ರಿತಾಗೆ ಈ ಚಿತ್ರ ಗೆಲ್ಲುವ ಬಗ್ಗೆ ಅನುಮಾನ ಇದ್ದಂತಿಲ್ಲ. ಹಾಂ, ಸದ್ಯಕ್ಕೆ ಈ ಬಟ್ಟಲು ಕಂಗಳ ಚೆಲುವೆ ದಿಗಂತ್ ನಾಯಕರಾಗಿರುವ ಹೊಸ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲವಂತೆ. ಐಂದ್ರಿತಾ ನಟನೆಯ ಮತ್ತೊಂದು ಚಿತ್ರ, ಯೋಗೀಶ್ ನಾಯಕರಾಗಿರುವ ‘ಧೂಳ್’ ಇದೇ ವರ್ಷ ಬಿಡುಗಡೆಯಾಗಲಿದೆ.ಅಂದಹಾಗೆ, ಶಶಾಂಕ್ ನಿರ್ದೇಶನದ ವಿಜಯ್ ನಾಯಕರಾಗಿರುವ ‘ಜರಾಸಂಧ’ ಚಿತ್ರದಲ್ಲಿ ಐಂದ್ರಿತಾ ನಟಿಸಬೇಕಿತ್ತು. ಆ ಪಾತ್ರ ಇದೀಗ ಮತ್ತೊಬ್ಬ ನಟಿಯ ಪಾಲಾಗಿದೆ. ಈ ಬಗ್ಗೆ ಐಂದ್ರಿತಾಗೆ ವಿಷಾದವೇನೂ ಇಲ್ಲ. ‘ಜರಾಸಂಧ’ ಚಿತ್ರದ ನಾಯಕಿಯ ಪಾತ್ರದಲ್ಲಿ ಕೆಲವು ಬದಲಾವಣೆಗಳಾದ ಕಾರಣ ಈ ಚಿತ್ರದಲ್ಲಿ ನಟಿಸುವುದು ಬೇಡ ಎಂದು ಶಶಾಂಕ್ ಹೇಳಿದರಂತೆ. ಅಷ್ಟು ಮಾತ್ರವಲ್ಲ, ತಮ್ಮ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ನೀಡಿದ್ದಾರಂತೆ. ಆ ಚಿತ್ರದ ನಾಯಕ ಸುದೀಪ್. ಆ ಚಿತ್ರಕ್ಕೂ ಇನ್ನೂ ನಾಮಕರಣ ಆಗಿಲ್ಲ.ಈಚಿನ ದಿನಗಳಲ್ಲಿ ಐಂದ್ರಿತಾ ಹೆಚ್ಚು ಚಿತ್ರಗಳಲ್ಲಿ ಕಾಣಿಸುತ್ತಿಲ್ಲ. ಯಾಕೆ?

‘ಅವಕಾಶಗಳ ಬಗ್ಗೆ ನಾನೀಗ ತುಂಬಾ ಚ್ಯೂಸಿ. ಉದ್ಯಮಕ್ಕೆ ಬಂದು ಎರಡೂವರೆ ವರ್ಷವಾಯಿತು. ಅಷ್ಟೂ ದಿನವೂ ಬಿಜಿಯಾಗಿದ್ದೆ. ಎಲ್ಲಾ ಪ್ರಮುಖ ನಟರೊಂದಿಗೆ ನಟಿಸಿದೆ. ಇದೀಗ ಹೆಚ್ಚು ಸಿನಿಮಾ ಮಾಡುವುದು ಬೇಡ ಎನಿಸಿ ಚ್ಯೂಸಿಯಾಗಿದ್ದೇನೆ. ಅದಕ್ಕೇ ಬಂದ ಚಿತ್ರಗಳನ್ನೆಲ್ಲಾ ಒಪ್ಪಿಕೊಳ್ಳುತ್ತಿಲ್ಲ. ‘ವೀರಪರಂಪರೆ’ ಚಿತ್ರದಲ್ಲಿ ಅಂಬರೀಷ್, ಸುದೀಪ್ ಅವರಂಥ ದೊಡ್ಡ ನಟರೊಂದಿಗೆ ನಟಿಸಿದೆ.ಅದರಿಂದ ನನ್ನ ವೃತ್ತಿ ಬದುಕಿಗೆ ಒಳ್ಳೆಯ ತಿರುವು ಸಿಕ್ಕಿತು. ಆ ಚಿತ್ರದ ನಂತರ ತುಂಬಾ ಅವಕಾಶಗಳು ಬಂದವು. ಆದರೆ ನಾನೇ ಕಡಿಮೆ ಚಿತ್ರಗಳಲ್ಲಿ ನಟಿಸಬೇಕೆಂದು ನಿರ್ಧರಿಸಿದ್ದರಿಂದ ಸುಮ್ಮನಾದೆ. ಒಪ್ಪಿಕೊಂಡರೆ ತುಂಬಾ ಚಿತ್ರಗಳಲ್ಲಿ ನಟಿಸುತ್ತಿದ್ದೆ’ ಎಂದು ಐಂದ್ರಿತಾ ತಮ್ಮ ವೃತ್ತಿ ಬದುಕನ್ನು ವಿಶ್ಲೇಷಿಸುತ್ತಾರೆ.ಸಿನಿಮಾಗಳ ಮೂಲಕ ಸುದ್ದಿ ಮಾಡಿದಷ್ಟೇ ವಿವಾದಗಳ ಮೂಲಕವೂ ಐಂದ್ರಿತಾ ಸುದ್ದಿಯಲ್ಲಿದ್ದದ್ದು ಸರಿಯಷ್ಟೇ! ಈ ವಿವಾದಗಳ ಬಗ್ಗೆ ಮಾತನಾಡಲಿಕ್ಕೆ ಅವರಿಗೆ ಮನಸ್ಸಿಲ್ಲ. ವೃಥಾ ಮತ್ತೊಂದು ವಿವಾದ ಯಾಕೆ ಎನ್ನುವ ಧೋರಣೆ ಅವರದ್ದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.