ಶುಕ್ರವಾರ, ಫೆಬ್ರವರಿ 26, 2021
23 °C

ಅರ್ಚಕರಿಗೆ ನಿವೃತ್ತಿ ವಯಸ್ಸಿನ ಮಿತಿ ಬೇಡ- ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಚಕರಿಗೆ ನಿವೃತ್ತಿ ವಯಸ್ಸಿನ ಮಿತಿ ಬೇಡ- ಆಗ್ರಹ

ಬೆಂಗಳೂರು: `ಅರ್ಚಕರಿಗೆ ನಿವೃತ್ತಿ ವಯಸ್ಸಿನ ಮಿತಿ ನಿಗದಿ ಪಡಿಸಬಾರದು ಮತ್ತು ಅರ್ಚಕರ ನೇಮಕಾತಿಯಲ್ಲಿ ಮೀಸಲಾತಿ ಬೇಡವೇ ಬೇಡ~ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ- ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟವು ಆಗ್ರಹಿಸಿದೆ.ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರನ್ನು ಸೋಮವಾರ ಭೇಟಿ ಮಾಡಿದ ಒಕ್ಕೂಟದ ಉಪಾಧ್ಯಕ್ಷ ಎಸ್.ಆರ್.ಶೇಷಾದ್ರಿ ಭಟ್ಟರ್, ಸಂಚಾಲಕ ಬಿ.ಆರ್.ಪಟ್ಟಾಭಿರಾಮ ಭಟ್ಟರ್, ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್, ಅರ್ಚಕ ಎಸ್.ಆರ್.ವಾಸುದೇವ ಭಟ್ಟರ್ ಮೊದಲಾದವರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.ಮನವಿ ಪತ್ರದ ಮುಖ್ಯಾಂಶಗಳು: `ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆಯ ನಿಯಮಗಳಿಗೆ ಸರ್ಕಾರ ಮಾಡಿರುವ ತಿದ್ದುಪಡಿಯಲ್ಲಿನ ನ್ಯೂನತೆಗಳು ಅರ್ಚಕರಿಗೆ ಮಾರಕವಾಗಿ ಪರಿಣಮಿಸಿವೆ. 11ನೇ ನಿಯಮದ ತಿದ್ದುಪಡಿಯಲ್ಲಿ ಅರ್ಚಕರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ. ವಾಸ್ತವವಾಗಿ ಜೀವನ ಪಕ್ವವಾದಂತೆ ವೃದ್ಧಾಪ್ಯದಲ್ಲಿ ದೇವರ ಸೇವೆ ಮಾಡಲು ಇನ್ನೂ ಹೆಚ್ಚಿನ ಸಾಮರ್ಥ್ಯ, ಬೌದ್ಧಿಕ ಪರಿಪಕ್ವತೆ ಬರುತ್ತದೆ. ಆದರೆ ಆ ಹಂತದಲ್ಲೇ ನಿವೃತ್ತಿ ಹೊಂದಬೇಕೆಂದು ನಿಯಮ ಮಾಡಿರುವುದು ಎಳ್ಳಷ್ಟೂ ಸರಿಯಿಲ್ಲ~.`ಅರ್ಚಕರನ್ನು ನೇಮಕ ಮಾಡಲು ವೃಂದ ಮತ್ತು ನೇಮಕಾತಿ ನಿಯಮಾವಳಿ ರಚಿಸುವ ಮತ್ತು ಮೀಸಲು ನೀಡುವ ಪ್ರಸ್ತಾವನ್ನು ಕೈ ಬಿಡಬೇಕು. ವೈದಿಕ ವೃಂದಕ್ಕೆ ಮೀಸಲಾತಿ ನಿಯಮ ಅನ್ವಯಿಸುವುದು ಸರಿಯಿಲ್ಲ. ಮೀಸಲಾತಿಗೆ ಸೇರಿದವರು ಸಾಮಾನ್ಯವಾಗಿ ಆಹಾರದಲ್ಲಿ ವ್ಯತಿರಿಕ್ತತೆ ಹೊಂದಿರುವುದರಿಂದ ಮತ್ತು ಬಾಲ್ಯದಿಂದಲೂ ಸಂಸ್ಕಾರ ಹೊಂದಿಲ್ಲದೇ ಇರುವುದರಿಂದ ಪೂಜಾ ವಿಧಿ- ವಿಧಾನ ಸರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ.ಆಗಮ- ವೇದ ಇತ್ಯಾದಿ ಪರಂಪರೆಯನ್ನು ಅನುಸರಿಸಿಕೊಂಡು ಇದುವರೆಗೂ ವಂಶಪಾರಂಪರಿಕವಾಗಿ ನಡೆಸಿಕೊಂಡು ಬಂದಿರುವ ಪೂಜಾ ಕಾರ್ಯಕ್ಕೆ ವಿಶ್ವವಿದ್ಯಾಲಯ ನೀಡುವ ಪ್ರಮಾಣ ಪತ್ರ ಆಧರಿಸಿ ನೇಮಕ ಮಾಡಬೇಕೆನ್ನುವುದು ಹಿಂದೂ ಧಾರ್ಮಿಕ ಶಾಸ್ತ್ರಕ್ಕೆ ವಿರುದ್ಧವಾಗುವುದು~.`ಒಂದು ದೇವಾಲಯದಿಂದ ಇನ್ನೊಂದು ದೇವಾಲಯಕ್ಕೆ ಅರ್ಚಕರನ್ನು ವರ್ಗಾವಣೆ ಮಾಡುವುದು ಸಹ ಸರಿಯಲ್ಲ. ಪ್ರತಿ ದೇವಾಲಯದಲ್ಲೂ ಅದರದ್ದೇ ಆದ ಪೂಜಾ ಸಂಪ್ರದಾಯ ಇರುತ್ತದೆ. ಈ ಹಿನ್ನೆಲೆಯಲ್ಲಿ  ಅರ್ಚಕರನ್ನು ವರ್ಗಾವಣೆ ಮಾಡುವುದು ಶಾಸ್ತ್ರರೀತ್ಯ ವಿರೋಧವಾಗುತ್ತದೆ. ಹೀಗಾಗಿ ಈ ವರ್ಗಾವಣೆ ನಿಯಮ ತೆಗೆದು ಹಾಕಬೇಕು. ಈ ಎರಡೂ ಅಂಶಗಳನ್ನು ಕೈ ಬಿಟ್ಟು ಹಿಂದೂ ಧರ್ಮವನ್ನು ಉಳಿಸಬೇಕು~.`ಆರತಿ ತಟ್ಟೆಯ ದಕ್ಷಿಣೆಯು ಅರ್ಚಕನಿಗೇ ಸೇರಬೇಕೆ ಹೊರತು ದೇವಸ್ಥಾನದ ಇತರ ನೌಕರರಿಗೆಲ್ಲ ಹಂಚಬೇಕೆಂಬ ನಿಯಮ ತಪ್ಪು. ಆರತಿ ದಕ್ಷಿಣೆಯು ಅರ್ಚಕರಿಗೆ ಸಲ್ಲಬೇಕೆಂದು ಸುಪ್ರೀಂ ಮತ್ತು ಹೈಕೋರ್ಟ್‌ಗಳಲ್ಲಿಯೂ ಆದೇಶವಾಗಿದೆ. ಆರತಿ ತಟ್ಟೆ ಹಣವನ್ನು ಅರ್ಚಕನಿಗೆ ಸೇರಬೇಕೆಂಬ ಪದ್ಧತಿಯನ್ನು ಉಳಿಸಿಕೊಂಡು, ಹೊಸ ನಿಯಮವನ್ನು ರದ್ದು ಮಾಡಬೇಕು. ಪ್ರಧಾನ ಅರ್ಚಕ, ಅರ್ಚಕ, ಸಹಾಯಕ ಅರ್ಚಕರಿಗೆ ಸೂಕ್ತ ವೇತನ ಶ್ರೇಣಿ ನಿಗದಿ ಪಡಿಸಲು ನಿಯಮ 4ಕ್ಕೆ ಸೂಕ್ತ ತಿದ್ದುಪಡಿ ಮಾಡಬೇಕು~.`ದೇವಾಲಯಗಳ ಆಡಳಿತ ನೋಡಿಕೊಳ್ಳಲು ಮುಜರಾಯಿ ಇಲಾಖೆ ಇರುವುದರಿಂದ ಹೊಸದಾಗಿ ಧಾರ್ಮಿಕ ಪರಿಷತ್ ಸ್ಥಾಪಿಸುವ ಅವಶ್ಯಕತೆ ಇಲ್ಲ. ಪರಿಷತ್ ರಚಿಸುವುದರಿಂದ ದೇವಾಲಯದ ದೇವತಾ ಆರಾಧನೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ.ರಾಜಕೀಯ ಹಸ್ತಕ್ಷೇಪ, ಒಳಜಗಳಗಳಿಗೆ ಅವಕಾಶ ಕೊಡುವ ವ್ಯವಸ್ಥಾಪನಾ ಸಮಿತಿ ರಚನೆ ಪ್ರಸ್ತಾವವನ್ನೂ ಕೈಬಿಡಬೇಕು. ರಾಜ್ಯದಲ್ಲಿನ ಕೆಲವು ದೇವಾಲಯಗಳನ್ನು ಖಾಸಗೀಕರಣ ಮಾಡಿರುವುದು ತುಂಬಾ ಶೋಚನೀಯ. ಅವುಗಳ ನಿರ್ವಹಣೆಯನ್ನು ಸರ್ಕಾರವೇ ಮಾಡಬೇಕು~.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.