ಭಾನುವಾರ, ನವೆಂಬರ್ 17, 2019
29 °C
ಥಳುಕು ಬಳುಕು

ಅರ್ಜುನ ಪ್ರತಿಭೆ

Published:
Updated:

ರಣಬೀರ್ ಕಪೂರ್ ಹುಟ್ಟುಹಬ್ಬದ ಪಾರ್ಟಿಗೆ ಹೋಗಿ ಬರುತ್ತಿದ್ದ ಹುಡುಗನ ಸ್ನೇಹಿತರಲ್ಲಿ ಬಹುಪಾಲು ಬಾಲಿವುಡ್‌ನವರು. ವರುಣ್ ಧವನ್, ರೋಹಿತ್ ಧವನ್ ಜೊತೆ ಆಟ ಆಡಿದ್ದಿದೆ. ಕತ್ರಿನಾ ಕೈಫ್ ಮೊದಲ ಚಿತ್ರಕ್ಕೆ ಸಹಿ ಹಾಕಿದ ಹೊತ್ತಿನಲ್ಲೂ ಐಸ್‌ಕ್ರೀಮ್ ತಿನ್ನುವಷ್ಟು ಹತ್ತಿರವಿದ್ದರು. ಯಶ್‌ರಾಜ್ ಫಿಲ್ಮ್ಸ್ ಕಚೇರಿಗೆ ಆಗಾಗ ಹೋಗುತ್ತಿದ್ದರಿಂದ ಅನುಷ್ಕಾ ಶರ್ಮ ಪರಿಚಯವೂ ಇತ್ತು. ಮಹೇಶ್ ಭಟ್ ಮಗಳು ಅಲಿಯಾ ಭಟ್ ಜೊತೆ ಒಮ್ಮೆ ಜಗಳವಾಡಿದ ನೆನಪೂ ಇದೆ.ಅರ್ಜುನ್ ಕಪೂರ್ ಹೇಳಿಕೇಳಿ ಅನಿಲ್ ಕಪೂರ್ ಸಂಬಂಧಿ. ಅವರ ತಂದೆ ಬಾಲಿವುಡ್ ಸಂಬಂಧಿ ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ಪಳಗಿದವರು. ಬಾಲ್ಯದಲ್ಲೇ ಅಪ್ಪನೊಟ್ಟಿಗೆ ವಿದೇಶಗಳನ್ನೂ ಸುತ್ತಿದ ಅನುಭವವಿದೆ. ಹಾಗಾಗಿ ಅಂಥ ಸ್ನೇಹಿತರು ಇರುವುದರಲ್ಲಿ ಅಚ್ಚರಿಯೇನೂ ಇಲ್ಲ. ಆದರೆ ಅವರು ನಟರಾಗುವ ಮುನ್ನ ಇದ್ದ ದೇಹತೂಕ ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಚಿತ್ರರಂಗಕ್ಕೆ ಕಾಲಿಡುವ ಮೊದಲು ಅವರು 140 ಕೆ.ಜಿ. ತೂಕವಿದ್ದರು. ಈಗ ಅದು 87 ಕೆ.ಜಿ.ಗೆ ಇಳಿದಿದೆ. ಐದು ವರ್ಷ ವ್ಯಾಯಾಮ ಮಾಡಿ ಬೆವರಿಳಿಸಿದ ಫಲವಿದು.`ಇಷ್ಕ್‌ಜಾದೆ' ಚಿತ್ರದಲ್ಲಿ ಉತ್ತರ ಪ್ರದೇಶದ ಹಾದಿ ತಪ್ಪಿದ ಹುಡುಗ. `ಔರಂಗಾಜೇಬ್'ನಲ್ಲಿ ಹರಿಯಾಣ್ವಿ ಪಾತ್ರ. `2 ಸ್ಟೇಟ್ಸ್'ನಲ್ಲಿ ಹೊಸತೇ ಎನ್ನುವಂಥ ಗುಣದ ವ್ಯಕ್ತಿ. ಇಂಥ ಪಾತ್ರಗಳು ಇಷ್ಟು ಬೇಗ ತಮಗೆ ಸಿಗುತ್ತವೆ ಎಂದು ಅವರು ಕನಸು ಮನಸಿನಲ್ಲೂ ಎಣಿಸಿರಲಿಲ್ಲವಂತೆ.ದೊಡ್ಡ ಮನೆಗಳ ಸ್ನೇಹಿತರಲ್ಲಿ ಒಬ್ಬ `ತಾಕತ್ತಿದ್ದರೆ ನಟನಾಗು' ಎಂದು ಒಡ್ಡಿದ ಸವಾಲನ್ನು ಸ್ವೀಕರಿಸಿ ಅರ್ಜುನ್ ಬಣ್ಣದ ಲೋಕ ಪ್ರವೇಶಿಸಿದ್ದು. ಹತ್ತಿರದ ಸಂಬಂಧಿ ಅನಿಲ್ ಕಪೂರ್ ಸ್ಟಾರ್ ಆಗಿದ್ದ ಕಾಲವನ್ನು ತುಂಬಾ ಹತ್ತಿರದಿಂದ ಕಂಡಿದ್ದ ಅರ್ಜುನ್‌ಗೆ ಈಗ ಪರಿಸ್ಥಿತಿ ಎಷ್ಟು ಬದಲಾಗಿರುವುದು ಮೊದಲ ಚಿತ್ರದ ಸಂದರ್ಭದಲ್ಲೇ ಅರಿವಿಗೆ ಬಂತು.`ಅನಿಲ್ ಅಂಕಲ್ ಜೊತೆ ನಾನು ವಿದೇಶಗಳಲ್ಲೆಲ್ಲಾ ಓಡಾಡಿದ್ದೇನೆ. ಅವರನ್ನು ದೂರದಿಂದ ನೋಡಲು ಜನ ತುದಿಗಾಲಲ್ಲಿ ನಿಲ್ಲುತ್ತಿದ್ದರು. ಆಗ ಇಷ್ಟೆಲ್ಲಾ ಮಾಧ್ಯಮಗಳಿರಲಿಲ್ಲ. ಜನರಿಗೆ ಹತ್ತು ಚಿತ್ರಗಳಲ್ಲಿ ಅಭಿನಯಿಸಿದವರೂ ಸ್ಟಾರ್‌ಗಳು. ಈಗ ಕಾಲ ಹಾಗಿಲ್ಲ. ನಾನು ಜನನಿಬಿಡ ರಸ್ತೆಯಲ್ಲೂ ಸಲೀಸಾಗಿ ನಡೆದುಕೊಂಡು ಹೋಗಬಹುದು. ನಟ ಎಂಬುದು ಗೊತ್ತಾದರೂ ದೂರದಿಂದಲೇ ನಕ್ಕು ಸಾಗುವವರೇ ಹೆಚ್ಚು. ಈಗಿನ ಕಾಲದ ನಮ್ಮಂಥ ಹುಡುಗರು ಸ್ಟಾರ್‌ಗಳಲ್ಲ, ನಟರಷ್ಟೆ. ರಣಬೀರ್ ಕಪೂರ್ ಮಾತ್ರ ನಮ್ಮ ಜಾಯಮಾನದ ಸ್ಟಾರ್. ಹೃತಿಕ್ ರೋಷನ್ ಸರ್‌ಗೆ ಮಾತ್ರ ಮೊದಲ ಚಿತ್ರದಲ್ಲೇ ಸ್ಟಾರ್‌ಗಿರಿ ಸಿಕ್ಕಿತು. ಆಮೇಲೆ ಯಾವ ನಟನಿಗೂ ಅದು ಒಲಿದಿಲ್ಲ. ಈಗ 100 ಕೋಟಿ ವ್ಯಾಪಾರ ಮಾಡಿದರಷ್ಟೇ ಸ್ಟಾರ್ ಆಗಲು ಸಾಧ್ಯ ಎಂಬ ಮಾತಿದೆ. ಅದೇನೇ ಇರಲಿ, ಸ್ಟಾರ್ ಆಗುವುದಕ್ಕಿಂತ ನಟನಾಗಿ ಅನುಭವಿಸುವ ಸಣ್ಣ ಸಣ್ಣ ಖುಷಿಗಳೇ ಮಜಾ ಕೊಡುತ್ತವೆ' ಎನ್ನುವ ಅರ್ಜುನ್ ಚಿತ್ರರಂಗಕ್ಕೆ ಬರಲು ಸಾಕಷ್ಟು ಸೈಕಲ್ ಹೊಡೆದವರು.`ಸಲಾಮ್-ಎ-ಇಷ್ಕ್' ಹಿಂದಿ ಚಿತ್ರದಲ್ಲಿ ಅವರು ಸಹಾಯಕ ನಿರ್ದೇಶಕರಾಗಿದ್ದರು. ಪ್ರಿಯಾಂಕಾ ಚೋಪ್ರಾ ವ್ಯಾನಿಟಿ ವ್ಯಾನ್ ಹತ್ತಿರ ನಿಂತು, `ಮೇಡಂ ಶಾಟ್ ರೆಡಿ' ಎಂದು ಕರೆಯುತ್ತಿದ್ದರು. ಆಮೇಲೆ `ಗುಂಡೇ' ಚಿತ್ರದಲ್ಲಿ ಪ್ರಿಯಾಂಕಾ ಜೊತೆ ನಟಿಸುವ ಅವಕಾಶ ಸಿಕ್ಕಿತು. ಆಗಲೂ `ಮೇಡಂ ಶಾಟ್ ರೆಡಿ' ಎಂದೇ ಅವರನ್ನು ಕರೆದಾಗ, ಪ್ರಿಯಾಂಕಾ ದೊಡ್ಡ ನಗುವಿನೊಟ್ಟಿಗೆ ಸೆಟ್‌ನತ್ತ ಹೆಜ್ಜೆ ಹಾಕುತ್ತಿದ್ದರು. ಅರ್ಜುನ್ ತಲೆ ನೇವರಿಸಿ, `ಚೆನ್ನಾಗಿ ಅಭಿನಯಿಸು, ಹೆದರಬೇಡ' ಎಂದು ಸ್ಫೂರ್ತಿ ತುಂಬುತ್ತಿದ್ದರು. ಪ್ರಿಯಾಂಕಾ ಅಭಿನಯಿಸುವುದನ್ನು ತನ್ಮಯರಾಗಿ ನೋಡಿ, ಅರ್ಜುನ್ ಸಾಕಷ್ಟು ಕಲಿತರು.`ಬರ್ಫಿ ಚಿತ್ರದ ಅಭಿನಯ ನೋಡಿದ ಮೇಲಂತೂ ನಾನು ಪ್ರಿಯಾಂಕಾ ಮೇಡಂ ಫ್ಯಾನ್ ಆಗಿಬಿಟ್ಟೆ. ಅಷ್ಟು ತನ್ಮಯರಾಗಿ ನಟಿಸುವುದು ಸುಲಭವಲ್ಲ. ರಣವೀರ್ ಸಿಂಗ್ ಕೂಡ ಈ ವಿಷಯದಲ್ಲಿ ನನಗೆ ಸ್ಫೂರ್ತಿ. ನಾನು ನನ್ನ ವಾರಗೆಯವರಿಂದ ಹಿಡಿದು ಹಿರಿಯರವರೆಗೆ ಹಲವರಿಂದ ಕಲಿತಿದ್ದೇನೆ. ಅಷ್ಟಾದರೂ ಸ್ಟಾರ್ ಆಗಲು ಸಾಧ್ಯವಿಲ್ಲ ಎಂಬ ಪ್ರಜ್ಞೆಯಿಂದಲೇ ಇನ್ನೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದೇನೆ'- ಇದು ಅರ್ಜುನ್ ಅಭಿನಯ ಶಾಲೆಯ ಗುಟ್ಟು.ಹಾಗಿದ್ದರೆ ಸ್ಟಾರ್ ಆಗುವುದು ಇಷ್ಟವಿಲ್ಲವೇ ಎಂದು ಕೇಳಿದರೆ, `ಇಷ್ಟವಿರುವುದಕ್ಕೇ ನಾನಿನ್ನೂ ಆಗಿಲ್ಲ ಆಗಿಲ್ಲ ಎಂದು ಪದೇಪದೇ ಹೇಳಿಕೊಳ್ಳುತ್ತಿರುವುದು' ಎಂಬ ಚಟಾಕಿ ಅವರಿಂದ ತೇಲಿಬರುತ್ತದೆ.

 

ಪ್ರತಿಕ್ರಿಯಿಸಿ (+)