ಮಂಗಳವಾರ, ಏಪ್ರಿಲ್ 20, 2021
32 °C

ಅರ್ಹರಿಗೆ ಸೌಲಭ್ಯ ತಲುಪಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಸರ್ಕಾರದ ಸೌಲಭ್ಯ ಅರ್ಹರಿಗೆ ಸಕಾಲದಲ್ಲಿ ತಲುಪಿಸುವಂತೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮೋಹನ್ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯಸಭೆಯಲ್ಲಿ ಅವರು ಮಾತನಾಡಿದರು.ಕೆಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವುದು, ಕುಡಿಯುವ ನೀರಿನ ಅಸಮರ್ಪಕ ವಿತರಣೆ, ಸಹಾಯಧನ ವಿತರಣೆ, ಜಾಗೃತಿ ಮತ್ತು ಪುನಶ್ಚೇತನ ಕಾರ್ಯಕ್ರಮಗಳ ಹಿನ್ನಡೆಯಾಗಿರುವ ಕುರಿತು ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಗ್ರಾಮಗಳಿಗೆ ತೆರಳಿ ರೈತರ ಅಗತ್ಯ ಪೂರೈಸಲು ಹೆಚ್ಚು ಗಮನ ನೀಡಬೇಕು. ಸರ್ಕಾರದ ಸೌಲಭ್ಯ ಕೇವಲ ಕಡತಗಳಲ್ಲಿ ಇರದೇ, ಅರ್ಹರಿಗೆ ತಲುಪುವಂತಾಗಬೇಕು ಎಂದರು.ಗಂಗಾಕಲ್ಯಾಣ ಯೋಜನೆಯ ವಿದ್ಯುತ್ ಕಾಮಗಾರಿ ವರ್ಷಗಟ್ಟಲೇ ವಿಳಂಬವಾಗಿದೆ. ಇದರಿಂದ ರೈತರು ಬೋರ್‌ವೆಲ್ ಇದ್ದರೂ, ಸಂಪರ್ಕವಿಲ್ಲದೇ ನಿರಾಸೆ ಹೊಂದಿದ್ದಾರೆ. ಸಂಪರ್ಕಕ್ಕಾಗಿ ರೈತರಿಂದ ಹಣ ವಸೂಲಿ ಮಾಡುತ್ತಿರುವ ದೂರುಗಳೂ ರೈತರಿಂದ ಬಂದಿವೆ. ಗ್ರಾಮಗಳಲ್ಲಿ ಟ್ರಾನ್ಸ್‌ಫಾರ‌್ಮರ್‌ಗಳು ಹೆಚ್ಚಾಗಿ ಸುಡುತ್ತಿದ್ದು, ಇವುಗಳ ಸರಬರಾಜಿನಲ್ಲಿ ವಿಳಂಬವಾಗುವುದರಿಂದ ಜನ ತೊಂದರೆಗೆ ಸಿಲುಕುತ್ತಿದ್ದಾರೆ. ಶಿವಗಂಗಾ ಬಳಿಯ ಕೇಶವಾಪುರದಲ್ಲಿ ವಾರಗಟ್ಟಲೆ ವಿದ್ಯುತ್ ಇರುವುದಿಲ್ಲ. ಅಧಿಕಾರಿಗಳು ರೈತರ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಸದಸ್ಯರಾದ ತಿಮ್ಮೇಶ್, ಲವಮಧು, ಓಂಕಾರಸ್ವಾಮಿ ಬೆಸ್ಕಾಂ ಎಇಇ ವಿರುದ್ಧ ಹರಿಹಾಯ್ದರು.ಸಸಿ ಬೆಳೆಸಲು ಗುಂಡಿ ತೆಗೆದು ಹಾಗೆಯೇ ಬಿಡುತ್ತಿದ್ದಾರೆ. ಇದರಿಂದ ಸರ್ಕಾರದ ಹಣ ಪೋಲಾಗುತ್ತಿದೆ. ಸಸಿ ನೆಟ್ಟು ಕೈತೊಳೆದುಕೊಳ್ಳುವುದರಿಂದ ಏನೂ ಪ್ರಯೋಜನ ಇಲ್ಲ. ಅವುಗಳಿಗೆ ನೀರು ಹಾಕಿ ಪೋಷಿಸುವಲ್ಲಿಯೂ ಇಲಾಖೆ ಕ್ರಮ ಕೈಗೊಳ್ಳಬೇಕು. ಈಗ ಬೇಸಿಗೆ ಆರಂಭವಾಗಿರುವುದರಿಂದ ಅರಣ್ಯ ಪ್ರದೇಶದಲ್ಲಿ ಸಸಿ ನೆಡುವುದನ್ನು ಬಿಟ್ಟು, ರಸ್ತೆ ಬದಿ ಮತ್ತು ಶಾಲಾ ಆವರಣದಲ್ಲಿ ಸಸಿ ನೆಡಬೇಕು. ಮಳೆಗಾಲದಲ್ಲಿ ಅರಣ್ಯ ಭಾಗದಲ್ಲಿ ಸಸಿ ಹಾಕಬೇಕು ಎಂದು ಸದಸ್ಯ ರವಿ, ಜಗದೀಶ್, ಕೃಷ್ಣಮೂರ್ತಿ, ರಾಜಶೇಖರ್ ವಲಯ ಅರಣ್ಯಾಧಿಕಾರಿ ಚಂದ್ರಪ್ಪ ಅವರಿಗೆ ಸೂಚಿಸಿದರು. ಜಲಾನಯನ ಇಲಾಖೆಯ ಕಾಮಗಾರಿಗಳು ಅರ್ಧಕ್ಕೇ ನಿಂತಿವೆ ಎಂದು ಸದಸ್ಯ ಶೇಖರ್ ಆರೋಪಿಸಿದರು.ಹಣ ಇದ್ದರೂ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಆರಂಭವಾಗಿಲ್ಲ. ನಿರ್ಮಿತಿ ಕೇಂದ್ರ ಮತ್ತು ಭೂಸೇನಾ ನಿಗಮದವರು ಅರೆಬರೆ ಕಾಮಗಾರಿ ಮಾಡಿ ನಿಲ್ಲಿಸಿದ್ದಾರೆ. ಇನ್ನು ಒಂದು ತಿಂಗಳಲ್ಲಿ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿಗಳಿಗೆ ಸರಬರಾಜು ಮಾಡಿರುವ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಕಾರ್ಯಕರ್ತೆಯರು ಮನೆಗಳಲ್ಲಿ ಅಡುಗೆ ಮಾಡಲು ಬಳಸಿಕೊಳ್ಳುತ್ತಿದ್ದು, ಇವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಸದಸ್ಯ ತಿಮ್ಮೇಶ್, ಲವಮಧು ಸಿಡಿಪಿಒ ತಿಪ್ಪಯ್ಯ ಅವರನ್ನು ಪ್ರಶ್ನಿಸಿದರು.ನಾಳೆಯೇ ಇಂತಹ ಕೇಂದ್ರಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಅಧ್ಯಕ್ಷ ಮೋಹನ್ ನಾಗರಾಜ್ ಸೂಚಿಸಿದರು.ಗುಚ್ಛ ಗ್ರಾಮಗಳನ್ನು ಆಯ್ಕೆಮಾಡುವ ವಿಷಯವನ್ನು ಸದಸ್ಯರ ಗಮನಕ್ಕೆ ತಂದಿಲ್ಲ ಎಂದು ಸದಸ್ಯೆ ಶಕುಂತಲಾ, ಪ್ರೇಮಾ ಧನಂಜಯ ದೂರಿದರು.ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಪುಟ್ಟೀಬಾಯಿ, ಇಒ ರಾಮಕುಮಾರ್, ತಾ.ಪಂ. ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.