ಸೋಮವಾರ, ಜೂನ್ 21, 2021
21 °C

ಅಲ್ಲಾನ ದಯೆ..

ಎಚ್.ಎಸ್. ರೋಹಿಣಿ Updated:

ಅಕ್ಷರ ಗಾತ್ರ : | |

ಅಲ್ಲಾನ ದಯೆ..

ತೆರೆಯ ಮೇಲೆ ನಗೆ ಮರೆತ ಮುಖ ಹೊತ್ತು ಅಬ್ಬರಿಸುತ್ತಿದ್ದ ಸತ್ಯಜಿತ್ ತಮ್ಮ ಬದುಕಿನ ಒಂದು ತಿರುವಿನಲ್ಲಿ ನಗೆ ನಟನಾಗಿ ಹೊರಹೊಮ್ಮಿದವರು.

 

ತಮ್ಮಳಗಿನ ಆ ನಗೆ ನಟನನ್ನು ಗುರುತಿಸಿದ್ದು ಡಾ.ರಾಜ್‌ಕುಮಾರ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವರಿಗೆ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ ತೃಪ್ತಿ ಇದೆ.ಸಿನಿಮಾಗಳಲ್ಲಿ ಉತ್ತರ ಕನ್ನಡ, ಮೈಸೂರು, ಮಂಗಳೂರು ಸೀಮೆ ಶೈಲಿಯ ಕನ್ನಡವನ್ನು ಸಲೀಸಾಗಿ ಮಾತನಾಡುವ ಅವರ ಊರು ಹುಬ್ಬಳ್ಳಿ. ಕೆಎಸ್‌ಆರ್‌ಟಿಸಿಯಲ್ಲಿ ಡ್ರೈವರ್ ಆಗಿದ್ದುಕೊಂಡು ಬಿಡುವಿನ ವೇಳೆಯಲ್ಲಿ ವೃತ್ತಿರಂಗಭೂಮಿಯಲ್ಲಿ ನಟಿಸುತ್ತಿದ್ದರು ಸತ್ಯಜಿತ್.

 

ಆಗಲೇ ತಮ್ಮ ಸಯ್ಯದ್ ನಿಜಾಮುದ್ದೀನ್ ಎಂಬ ಹೆಸರನ್ನು ಗೆಳೆಯರು ಸತ್ಯಜಿತ್ ಎಂದು ಬದಲಿಸಿದರು ಎನ್ನುತ್ತಾರೆ. ಮುಂಬೈನಲ್ಲಿ ನಾಟಕ ಪ್ರದರ್ಶನಕ್ಕೆ ಹೋಗಿದ್ದ ಅವರಿಗೆ ಹಿಂದಿಯ `ಅಂಕುಶ್~ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದಕ್ಕಿಂತ ಮೊದಲು ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರಾದರೂ ಅದರಲ್ಲಿ ಅವರಿಗೆ ಗುರುತಿಸುವಂಥ ಪಾತ್ರಗಳು ಸಿಕ್ಕಿರಲಿಲ್ಲ.ಆದರೆ ಮುಂಬೈನಲ್ಲಿ ಅವಕಾಶ ಪಡೆದುಕೊಂಡ ಸತ್ಯಜಿತ್ ಕರ್ನಾಟಕದವರು ಎಂದು ಗೊತ್ತಾದಾಗ ಕನ್ನಡ ಚಿತ್ರರಂಗದಿಂದ ಅವಕಾಶಗಳ ಮಹಾಪೂರವೇ ಹರಿದು ಬಂತು. 80ರ ದಶಕದ ಮಧ್ಯಭಾಗದಿಂದ ಇಂದಿನವರೆಗೂ ಸತ್ಯಜಿತ್‌ಗೆ ಅವಕಾಶಗಳ ಕೊರತೆ ಎದುರಾಗಿಲ್ಲ.`ಅದಕ್ಕೆಲ್ಲಾ ಅಲ್ಲಾನ ದಯೆ~ಯೇ ಕಾರಣ ಎಂದು ನಂಬುವ ಅವರು ಇಂದಿಗೂ ಕೈತುಂಬಾ ಚಿತ್ರಗಳನ್ನು ಹಿಡಿದುಕೊಂಡಿದ್ದಾರೆ. ಅವುಗಳಲ್ಲಿ `ಸಂಗೊಳ್ಳಿ ರಾಯಣ್ಣ~, `ಕಿಲಾಡಿ ಕಿಟ್ಟಿ~, `ಪಟಾಯ್ಸು~, `ವರದನಾಯಕ~ ಚಿತ್ರಗಳು ಸೇರಿವೆ. `ಅಂತಿಮ ತೀರ್ಪು~, `ಭೂಮಿ ತಾಯಾಣೆ~, `ತಾಯಿಗೊಬ್ಬ ಕರ್ಣ~, `ಅಂತಿಮತೀರ್ಪು~, `ಪದ್ಮವ್ಯೆಹ~, `ಅಜಯ್ ವಿಜಯ್~ ಮುಂತಾದ ಚಿತ್ರಗಳಲ್ಲಿ ಖಳನಾಗಿ ಮೆರೆದ ಅವರು `ಅಪ್ಪು~ ಚಿತ್ರದಿಂದ ಹಾಸ್ಯನಟನಾಗಿ ಅಡಿ ಇಟ್ಟರು.`ಸಹನಾ~ ಧಾರಾವಾಹಿಯಲ್ಲಿ ಅವರ ಭಾವನಾತ್ಮಕ ಪಾತ್ರವನ್ನು ನೋಡಿದ ಡಾ.ರಾಜ್ ಅವರನ್ನು ಮನೆಗೆ ಕರೆಸಿಕೊಂಡು ಮೆಚ್ಚುಗೆ ಸೂಸಿದರಂತೆ. ನಂತರ ಪುನೀತ್ ರಾಜ್‌ಕುಮಾರ್ ಅವರ ಮೊದಲ ಸಿನಿಮಾ `ಅಪ್ಪು~ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದರಂತೆ.ಬಳಿಕ `ಶ್ರೀರಾಮ್~, `ಆಪ್ತಮಿತ್ರ~, `ವೀರ ಕನ್ನಡಿಗ~, `ಸರದಾರ~ ಹೀಗೆ ಕಾಮಿಡಿ ಪಾತ್ರಗಳಲ್ಲಿ ಸತ್ಯಜಿತ್ ಮಿಂಚಿದರು. ಆದರೂ ಗಂಭೀರ, ನೆಗೆಟಿವ್ ಪಾತ್ರಗಳನ್ನು ಒಲ್ಲೆ ಎನ್ನದೇ ಸ್ವೀಕರಿಸಿದರು.`ಅಂತಿಮ ತೀರ್ಪು~ ಚಿತ್ರದ ಖಡಕ್ ವಿಲನ್ ಪಾತ್ರ, `ಅಭಿ~ ಚಿತ್ರದ ನಾಯಕಿಯ ತಂದೆಯ ಗಂಭೀರ ಪಾತ್ರ, `ತಾಕತ್~ ಚಿತ್ರದ ತಮ್ಮ ಡ್ರೈವರ್ ವೃತ್ತಿಯನ್ನು ನೆನಪಿಸುವ ಪಾತ್ರ ಸತ್ಯಜಿತ್‌ಗೆ ಅಚ್ಚುಮೆಚ್ಚು.ಆರಂಭದಲ್ಲಿ ವಿಲನ್ ಆಗಿ ಬಿಜಿಯಾಗಿದ್ದಾಗೊಮ್ಮೆ ನಾಯಕನಾಗುವ ಅವಕಾಶವೂ ಅವರ ಪಾಲಿಗೆ ಬಂದಿತ್ತಂತೆ. ತಮ್ಮ ಕೆಂಪು ಕಣ್ಣು, ಕಪ್ಪು ಬಣ್ಣ, ನಗೆ, ನಡೆ, ಅಜಾನುಬಾಹು ದೇಹಕ್ಕೆ ವಿಲನ್ ಪಾತ್ರವೇ ಸೂಕ್ತ. ಹೀರೋ ಪಾತ್ರ ತಮಗೆ ಹೊಂದಿಕೆಯಾಗುವುದಿಲ್ಲ ಎಂದು ನೇರವಾಗಿ ಹೇಳಿ ಕಳುಹಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ.`ನನಗೀಗ 58 ವರ್ಷ. ಈಗ ಆಕ್ಷನ್ ಮಾಡಲು ಶಕ್ತಿ ಇಲ್ಲ. ಅದಕ್ಕೆ ಕಾಮಿಡಿ ಹಳಿಗೆ ದೇವರು ನನ್ನನ್ನು ತಂದ ಎನಿಸುತ್ತದೆ. ಕಾಮಿಡಿ ಇರಲಿ, ವಿಲನ್ ಇರಲಿ ಯಾವುದೇ ಪಾತ್ರವಾದರೂ ಎಚ್ಚರಿಕೆಯಿಂದ ಮಾಡಬೇಕು~ ಎನ್ನುತ್ತಾರೆ. ಅಂದಹಾಗೆ, 2001ರಲ್ಲಿ ಕತೆ, ಚಿತ್ರಕತೆ, ಸಂಭಾಷಣೆ ಬರೆದು `ನೀ ನನ್ನ ಜೀವ~ ಎಂಬ ಸಿನಿಮಾವನ್ನೂ ಅವರು ನಿರ್ದೇಶಿಸಿದ್ದರು.`ನಿರ್ದೇಶಕನಾಗುವ ಆಸೆ ಆರಂಭದಲ್ಲಿ ಇತ್ತು. ಆದರೆ ಒಂದೊಂದು ಸಿನಿಮಾಗೆ ಆರಾರು ತಿಂಗಳು ವ್ಯಯವಾಗುತ್ತದೆ. ಅದರಿಂದ ಹೊಟ್ಟೆಪಾಡಿನ ಸಮಸ್ಯೆ ನಿವಾರಣೆ ಯಾಗುವುದಿಲ್ಲ. ಅದಕ್ಕೆ ನಟನಾಗಿಯೇ ಉಳಿಯುವ ಮನಸ್ಸು ಮಾಡಿದೆ~ ಎನ್ನುವ ಸತ್ಯಜಿತ್ ಮಗ ಆಕಾಶ್ `ತಬ್ಬಲಿ~ ಚಿತ್ರದ ನಾಯಕ. ತಾವು ಮುಸ್ಲಿಂ ಆದ ಕಾರಣ ತಮಗಾಗಿಯೇ ಕೆಲವು ಪಾತ್ರಗಳು ಹುಡುಕಿ ಬರುತ್ತವೆ ಎನ್ನುವ ಸತ್ಯಜಿತ್ ಇತ್ತೀಚಿನ ಒಂದು ಉದಾಹರಣೆ ಹೇಳುತ್ತಾರೆ. `ಕಲ್ಪನಾ ಚಿತ್ರಕ್ಕಾಗಿ ದೆವ್ವ ಬಿಡಿಸುವ ಮುಸ್ಲಿಂ ವ್ಯಕ್ತಿಯ ಪಾತ್ರವನ್ನು ನೀವೇ ಮಾಡಬೇಕು ಎಂದು ಹೇಳಿ ಕಳುಹಿಸಿದ್ದರು.ನಾನು ಕನ್ನಡ ಮೀಡಿಯಮ್ಮಿನಲ್ಲಿ ಓದಿರುವವನು. ಉರ್ದು ಓದಲು ಬರೆಯಲು ಬರುವುದಿಲ್ಲ. ಆದರೆ ಪ್ರಾರ್ಥನೆ ಮಾಡುವಾಗ ಉರ್ದು ಶ್ಲೋಕ ಹೇಳುವುದರಿಂದ ನನಗೆ ಆ ಪಾತ್ರ ಸಲೀಸಾಯಿತು. ವಿಶ್ವಾಸವಿಟ್ಟು ಪಾತ್ರ ಕೊಟ್ಟವರು ಖುಷಿ ಪಟ್ಟರು~ ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.