ಭಾನುವಾರ, ಏಪ್ರಿಲ್ 11, 2021
27 °C

ಅವಮಾನಿಸಬೇಡಿ, ಹಾದಿ ತಪ್ಪಿಸದಂತೆ ನೋಡಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲೋಕಪಾಲ ಮಸೂದೆ ಕರಡು ಸಿದ್ಧಪಡಿಸುವ ಸಲುವಾಗಿ ರಚಿಸಲಾಗಿರುವ ಜಂಟಿ ಸಮಿತಿಯಲ್ಲಿರುವ ನಾಗರಿಕ ಸಮಾಜದ ಸದಸ್ಯರ ‘ಮಾನ ಕಳೆಯುವ’ ಆಂದೋಲನ ನಡೆಯುತ್ತಿರುವುದರಿಂದ ಬೇಸತ್ತಿರುವ ಹಿರಿಯ ಗಾಂಧೀವಾದಿ ಅಣ್ಣಾ ಹಜಾರೆ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸೋಮವಾರ ಪತ್ರ ಬರೆದಿದ್ದು, ಕಾನೂನು ರೂಪಿಸುವಾಗ ಹಾದಿ ತಪ್ಪಿಸದಂತೆ ತಮ್ಮ ಸಹೋದ್ಯೋಗಿಗಳಿಗೆ ಸಲಹೆ ನೀಡಲು ಸೂಚಿಸಿದ್ದಾರೆ.ಎರಡು ಪುಟಗಳ ಪತ್ರದಲ್ಲಿ ಅಣ್ಣಾ ಅವರು ಮಾನ ಕಳೆಯುವ ಆಂದೋಲನದಲ್ಲಿ ತೊಡಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರ ವಿರುದ್ಧ ದೂರಿದ್ದು, ಹಲವು ಸುಳ್ಳು ಆರೋಪಗಳನ್ನು ಮಾಡಿರುವ ಅವರ ಮಾತನ್ನು ತಾವು ಸಮ್ಮತಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.ಸಮಿತಿಯಲ್ಲಿರುವ ಸಚಿವರೊಬ್ಬರು ಸಹ ಇಲ್ಲಸಲ್ಲದ ಹೇಳಿಕೆ ಕೊಡುತ್ತಿದ್ದಾರೆ, ಸರ್ಕಾರದ ಒತ್ತಡಕ್ಕೆ ಮಣಿದಿರುವ ನಾಗರಿಕ ಸಮಾಜದ ಪ್ರತಿನಿಧಿಗಳು ಕಾನೂನನ್ನು ತಿಳಿಗೊಳಿಸಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ ಎಂದು ಅವರು ಪತ್ರದಲ್ಲಿ ದೂರಿದ್ದಾರೆ.ಸಮಿತಿಯ ಸಹ ಅಧ್ಯಕ್ಷ ಶಾಂತಿ ಭೂಷಣ್ ಅವರು ಶಾಮೀಲಾಗಿದ್ದಾರೆ ಎಂದು ಹೇಳಲಾದ ಸಿ.ಡಿ. ಹಗರಣದ ತೀವ್ರತೆ ಹೆಚ್ಚುತ್ತಿರುವಂತೆಯೇ ಅಣ್ಣಾ ಅವರಿಂದ ಈ ಪತ್ರ ಬಂದಿದ್ದು, ‘ಕಳೆದ ಕೆಲವು ದಿನಗಳಿಂದ ನಡೆದಿರುವ ಬೆಳವಣಿಗೆ ಕಳವಳದ ಸಂಗತಿ, ದೇಶದಲ್ಲಿರುವ ಭ್ರಷ್ಟ ಶಕ್ತಿಗಳು ಪರಿಣಾಮಕಾರಿ ಭ್ರಷ್ಟಾಚಾರ ನಿಗ್ರಹ ಕಾನೂನು ರೂಪಿಸುವ ಪ್ರಕ್ರಿಯೆಯನ್ನು ಬುಡಮೇಲುಗೊಳಿಸಲು ಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಅವರೆಲ್ಲರ ಪಿತೂರಿಗಳನ್ನು ನಾವೆಲ್ಲ ಒಟ್ಟಾಗಿ ಸೋಲಿಸಬೇಕಿದೆ’ ಎಂದು ಹೇಳಿದ್ದಾರೆ.‘ಸಮಿತಿಯಲ್ಲಿರುವ ನಾಗರಿಕ ಸಮಾಜದ ಸದಸ್ಯರಿಗೆ ಅವಮಾನ ಮಾಡುವುದು ಈ ಭ್ರಷ್ಟ ಶಕ್ತಿಗಳ ಕಾರ್ಯತಂತ್ರಗಳಲ್ಲಿ ಒಂದು. ಸಾರ್ವಜನಿಕರಿಗಾಗಿ ಕೆಲಸ ಮಾಡುವ ಜನರು ಸಾರ್ವಜನಿಕ ಪರೀಕ್ಷೆಗೂ ಒಳಗಾಗಬೇಕು ಎಂಬುದು ನನ್ನ ನಿಲುವು. ಆದರೆ ನಕಲಿ ಸಿ.ಡಿ.ಗಳಂತಹ ಸುಳ್ಳುಗಳನ್ನು ಹೆಣೆಯುತ್ತಿರುವುದನ್ನು ನೋಡಿದಾಗ ಇದು ಪ್ರಾಮಾಣಿಕ ಸಾರ್ವಜನಿಕ ಪರೀಕ್ಷೆಯ ಬದಲಿಗೆ ವರ್ಚಸ್ಸನ್ನು ಹಾಳುಮಾಡುವ ಕಾರ್ಯವಾಗಿ ಮಾತ್ರ ಕಾಣಿಸುತ್ತದೆ’ ಎಂದು ಹಜಾರೆ ವಿಷಾದ ವ್ಯಕ್ತಪಡಿಸಿದ್ದಾರೆ.‘ಇವರು ನನ್ನನ್ನೂ ಬಿಟ್ಟಿಲ್ಲ. ಸತ್ಯದ ಹಾದಿಯಲ್ಲಿ, ಸರಳ ರೀತಿಯಲ್ಲಿ ನಾನು ಬದುಕಿದ್ದರೂ ನನ್ನಲ್ಲೂ ಅವರು ಹುಳುಕು ಹುಡುಕುತ್ತಿದ್ದಾರೆ. ಆದರೆ ತೀವ್ರ ಪ್ರಯತ್ನದ ನಂತರವೂ ಅವರಿಗೆ ಏನೂ ಸಿಗುತ್ತಿಲ್ಲ. ಸಾರ್ವಜನಿಕರ ದೃಷ್ಟಿಯಲ್ಲಿ ನಾಗರಿಕ ಸಮಾಜದ ವರ್ಚಸ್ಸು ಇದರಿಂದ ಹೆಚ್ಚುತ್ತದೆ ಅಷ್ಟೇ’ ಎಂದು ಅಣ್ಣಾ ಹೇಳಿದ್ದಾರೆ.

ಅಪಪ್ರಚಾರ ಮಾಡುತ್ತಿರುವವರ ಹುನ್ನಾರವೆಲ್ಲಾ ಜನರಿಗೆ ಗೊತ್ತಿದೆ. ಪ್ರಬಲವಾದ ಭ್ರಷ್ಟಾಚಾರ  ನಿಗ್ರಹ ಕಾನೂನಿಗಾಗಿ ಇನ್ನಷ್ಟು ದಿನ ಕಾಯಲು ದೇಶ ಸಿದ್ಧವಿಲ್ಲ. ಕರಡು ಸಿದ್ಧಪಡಿಸುವ ಪ್ರಕ್ರಿಯೆಗೆ ಅಡ್ಡಿ ಉಂಟುಮಾಡಿದರೆ ಜನ ಪ್ರತಿಭಟನೆ ಹಾದಿ ತುಳಿಯುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.ನಾಗರಿಕ ಸಮಾಜದವರಿಗೆ ಒದಗಿರುವ ಇಂತಹ ಅವಮಾನ ಸರ್ಕಾರವೇ ನೇಮಿಸಿದ ಸದಸ್ಯರಿಗೇ ಒದಗಿದರೆ ಹೇಗಾದೀತು ಎಂದು ಅವರು ಪ್ರಶ್ನಿಸಿದ್ದಾರೆ.

‘ಅಧಿಕಾರದಲ್ಲಿ ಇರುವವರು ಇಂತಹ ಅಪಪ್ರಚಾರಗಳ ಬಗ್ಗೆ ಹೆಚ್ಚಾಗಿ ವಿವರಿಸಿ ಹೇಳಬೇಕಾಗುತ್ತದೆ. ಕೆಲವು ವ್ಯಕ್ತಿಗಳು ತೊಡಗಿರುವ ಕೆಸರೆರಚಾಟವನ್ನೇ ದೊಡ್ಡದು ಮಾಡಿ ಜನರ ಗಮನವನ್ನು ಲೋಕಪಾಲ ಮಸೂದೆಯಿಂದ ಬೇರೆಡೆಗೆ ತಿರುಗಿಸಲು ನಮಗೆ ಇಷ್ಟವಿಲ್ಲ’ ಎಂದು ಅಣ್ಣಾ ತಿಳಿಸಿದ್ದಾರೆ.ಪ್ರತಿಕ್ರಿಯೆಗೆ ಕಾಂಗ್ರೆಸ್ ನಕಾರ: ಹಜಾರೆ ಅವರ ಈ ಪತ್ರದ ಬಗ್ಗೆ ಪ್ರತಿಕ್ರಿಯಿಸಲು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ನಿರಾಕರಿಸಿದ್ದು, ಸಾರ್ವಜನಿಕ ಸಂಭಾಷಣೆ ಏಕ ಮುಖ ಸಂಚಾರವಾಗಬಾರದು ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.