ಭಾನುವಾರ, ಮೇ 16, 2021
26 °C
ಸ್ವಂತ ಉದ್ಯಮ

`ಅವರು' ಅಧಿಕಾರಿಯ ಬುದ್ಧಿಮಾತು ಕೇಳಿಬಿಟ್ಟಿದ್ದರೆ...

ದೀಪಕ್ ತಿಮ್ಮಯ (ಕನ್ನಡಕ್ಕೆ: ಓಂಕಾರ್) Updated:

ಅಕ್ಷರ ಗಾತ್ರ : | |

`ಅವರು' ಅಧಿಕಾರಿಯ ಬುದ್ಧಿಮಾತು ಕೇಳಿಬಿಟ್ಟಿದ್ದರೆ...

ಒಂದೆಡೆ ಹೆಣ್ಣು ಕೊಟ್ಟ ಮಾವನ ತಾಕಲಾಟ. ಇನ್ನೊಂದೆಡೆ ಕನ್ನಡಕದ ಕಣ್ಣುಗಳ ಒಳಗಿನಿಂದಲೇ ಕನಸುಗಳನ್ನು ದಾಟಿಸಲೆತ್ನಿಸುತ್ತಿದ್ದ ಅಳಿಯನ ಅಚಲ ನಿರ್ಧಾರ. ಇವರಿಬ್ಬರ ನಡುವೆ ಪ್ರವೇಶವಾಗಿದ್ದು ಪ್ರಭಾವಿ ಅಧಿಕಾರಿ. ತಮ್ಮ ಮಗಳ ಪತಿ ಇದ್ದ ಉತ್ತಮ ಕೆಲಸವನ್ನೂ ಬಿಟ್ಟು ಅಸಾಧ್ಯ ಎಂಬ ಕನಸು ಬೆನ್ನಟ್ಟುತ್ತಿದ್ದಾರೆ ಎಂಬ ಆತಂಕಕ್ಕೆ ಒಳಗಾಗಿದ್ದ ಆ ಹಿರಿಯ ಜೀವದ ಪರಿಸ್ಥಿತಿ ಎಂಥವರಿಗೂ ಅರ್ಥವಾಗುವಂತಹದ್ದೇ. ತಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿ ಅಳಿಯ ಇಲ್ಲ ಎಂದರಿತ ಮಾವನ ಗಮನ ಹರಿದಿದ್ದು ಬೆಂಗಳೂರಿನ ಮಿತ್ರನತ್ತ...

******

ಅವು 1980ರ ದಶಕದ ಆರಂಭದ ದಿನಗಳು. ಅಂದಿನ ಬೆಂಗಳೂರು ಪುರಸಭೆ ಆಯುಕ್ತರ ಕಚೇರಿಗೆ ಒಂದು ದಿನ ದಿಢೀರ್ ಎಂಬಂತೆ ಒಬ್ಬ ಅತಿಥಿಯ ಆಗಮನ. ಹಳೆಯ ದೋಸ್ತಿಯನ್ನು ಕಂಡು ಆಯುಕ್ತರಿಗೂ ಅಚ್ಚರಿ, ಸಂತಸ. ಆ ಅತಿಥಿ ಹುಬ್ಬಳ್ಳಿಯಲ್ಲಿ ವೈದ್ಯರಾಗಿ ಉತ್ತಮ ಹೆಸರು ಮಾಡಿದ್ದವರು.ಸದ್ಯ ಗಂಭೀರ ಸಮಸ್ಯೆಯೊಂದರಲ್ಲಿ ಸಿಲುಕಿದಂತಿದ್ದ ವೈದ್ಯರು, ಹಿರಿಯ ಅಧಿಕಾರಿ ಮಿತ್ರನಿಂದ ಸೂಕ್ತ ಪರಿಹಾರ ಕಂಡುಕೊಳ್ಳುವ ತವಕದಲ್ಲಿದ್ದರು. ಜನಪ್ರಿಯ ಅಧಿಕಾರಿಯಾಗಿರುವ ಮಿತ್ರ ತಮ್ಮ ತಾಕಲಾಟಕ್ಕೆ ಖಂಡಿತ ಪರಿಹಾರ ಒದಗಿಸುತ್ತಾರೆ ಎಂಬ ಆತ್ಮವಿಶ್ವಾಸ. ಮಿತ್ರನ ಸ್ಥಾನ, ಅಧಿಕಾರ, ಪ್ರಭಾವದ ಬಗ್ಗೆ ವೈದ್ಯರಿಗೆ ಚೆನ್ನಾಗಿಯೇ ಗೊತ್ತಿತ್ತು.ಇಲ್ಲಿ, ಈ ಹಿರಿಯ ವೈದ್ಯರ ಬಗೆಗೂ ಸ್ವಲ್ಪ ಹೇಳಬೇಕು. ಬಹಳ ಗೌರವಾನ್ವಿತ ಮನೆತನದ ಅವರು, ವೃತ್ತಿಯಲ್ಲೂ ಪರಿಣತರು. ಹಲವು ವರ್ಷಗಳಿಂದ ಈ ಹಿರಿಯ ಅಧಿಕಾರಿಯ ಜತೆಗೆ ಗಾಢ ಸ್ನೇಹ ಹೊಂದಿದ್ದರು. ಈ ಆಯುಕ್ತರು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಉಸ್ತುವಾರಿ ಅಧಿಕಾರಿಯಾಗಿದ್ದಾಗಿನಿಂದಲೂ ವೈದ್ಯರಿಗೆ ಪರಿಚಿತರು.ವೈದ್ಯರ ಆಗಮನದಿಂದ ಆಯುಕ್ತರಿಗೂ ಖುಷಿ. ಅದೇ ಆವೇಗದಲ್ಲಿ, ಸಮಸ್ಯೆ ಪೂರ್ಣ ತಿಳಿಯುವ ಮುನ್ನವೇ ಪರಿಹಾರ ದೊರಕಿಸಿಕೊಡಲು ನೆರವಾಗುವುದಾಗಿ ಭರವಸೆಯನ್ನೂ ನೀಡಿದರು.ಆದರೆ ವೈದ್ಯರದು ವಿಚಿತ್ರವಾದ ಸಮಸ್ಯೆ. ಅವರ ವಿದ್ಯಾವಂತ ಪುತ್ರಿ, ಪತಿ ಮತ್ತು ಇಬ್ಬರು ಮಕ್ಕಳ ಪುಟ್ಟ ಸಂಸಾರದೊಂದಿಗೆ ಸಂತೃಪ್ತ ಹಾಗೂ ನೆಮ್ಮದಿಯ ಬದುಕು ಸಾಗಿಸುತ್ತಿದ್ದರು. ಹೆಸರು ಮಾಡಿದ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಆಕೆಯ ಪತಿ ತಿಂಗಳಿಗೆ ರೂ. 10,000 ವೇತನವನ್ನೂ ಪಡೆಯುತ್ತಿದ್ದರು. ಆ ಕಾಲಕ್ಕೆ ಅದು ದೊಡ್ಡ ಮೊತ್ತದ ಸಂಬಳವೂ ಆಗಿತ್ತು.ಆದರೆ ಸಮಸ್ಯೆ ಶುರುವಾಗಿದ್ದು ಇಲ್ಲಿಯೇ. ವೈದ್ಯರ ಅಳಿಯ, ಇರುವ ಕೆಲಸವನ್ನೂ ಬಿಟ್ಟು ಸ್ವಂತದ ಒಂದು ಕಂಪೆನಿ ಆರಂಭಿಸಲು ನಿರ್ಧರಿಸಿದ್ದರು!

ಆದರೆ, ಆ ಯುವಕನಿಗೆ ಹೆಣ್ಣುಕೊಟ್ಟಿದ್ದ ಮಾವ, ಈ `ಸ್ವಂತ ಉದ್ಯಮ' ಎಂಬ ಪರಿಕಲ್ಪನೆ ಕೇಳಿ ಆಘಾತಕ್ಕೆ ಒಳಗಾಗಿದ್ದರು. ಅವರನ್ನು ಇನ್ನೂ ಅಧೀರರಾಗುವಂತೆ ಮಾಡಿದ್ದೇನೆಂದರೆ, ಮಗಳೂ ಕೂಡ ಪತಿಯ ಯೋಜನೆಯನ್ನು ಮನಃಪೂರ್ವಕವಾಗಿ ಬೆಂಬಲಿಸಲು ಮುಂದಾಗ್ದ್ದಿದ್ದುದು.ದೇಶದಲ್ಲಿನ ಕೈಗಾರಿಕೆ, ವಾಣಿಜ್ಯ ಉದ್ಯಮ ಎಂಬ ಕ್ಷೇತ್ರದ ಸ್ಥಿತಿ-ಪ್ರಗತಿ ಎಂಬುದು ಆ ದಿನಗಳಲ್ಲಿ ಅಷ್ಟಕಷ್ಟೇ ಇತ್ತು. ಜೀವನವನ್ನು ಭದ್ರಗೊಳಿಸಿಕೊಳ್ಳಲು ಮುಂದಾಗುವಂತಹ ವ್ಯಕ್ತಿಗಳಿಗೆ ಉದ್ಯಮ ಎಂಬುದು ಉತ್ತಮ ಕ್ಷೇತ್ರ ಅಲ್ಲವೇ ಅಲ್ಲ ಎಂಬುದು ಮಾವನವರ ಬಲವಾದ ನಂಬಿಕೆಯಾಗಿತ್ತು. ಆದರೆ ಪುತ್ರಿ ಹಾಗೂ ಅಳಿಯನ ಆಲೋಚನೆ ಮತ್ತು ಯೋಜನೆ ಬೇರೆ ರೀತಿಯದೇ ಆಗಿತ್ತು. ಉನ್ನತ ಶಿಕ್ಷಣ ಪಡೆದಿದ್ದ ಆ ಯುವ ದಂಪತಿಯ ಹೃದಯ ಸದಾ ಹೊಸತರತ್ತ ತುಡಿಯುತಿತ್ತು. `ಸುರಕ್ಷಿತ' ಎಂಬ ಮಿತಿಯ ಆಯ್ಕೆಗಳ ಜೀವನದ ಚೌಕಟ್ಟಿನಿಂದ ಹೊರಜಿಗಿದು ಹೊಸತಾದನ್ನೇನಾದರೂ ಸಾಧಿಸುವ ತವಕ ಅವರದಾಗಿತ್ತು. `ಸ್ವಂತ ಕಂಪೆನಿ' ಆರಂಭಿಸಿ ಅದರಲ್ಲಿ ತಮ್ಮ ಶಕ್ತಿ, ಜಾಣ್ಮೆ ಎಲ್ಲವನ್ನೂ ಒಟ್ಟುಗೂಡಿಸಿ ದುಡಿದು ವೇಗದ ಪ್ರಗತಿ ಕಾಣಲು ದಂಪತಿ ಕಾತರಿಸುತ್ತಿದ್ದರು.ಆದರೆ, ಮಾವನವರ ತಲೆಯಲ್ಲಿ, ಇದೆಲ್ಲಿಯೋ ಉದ್ಯಮಶೀಲತೆ ಎಂಬ ಪ್ರೇತ ಅಳಿಯನ ಮನಸ್ಸು ಹೊಕ್ಕಿಬಿಟ್ಟಿದೆಯಲ್ಲಾ! ಇಂಥ ಆಲೋಚನೆ ಇವರಿಬ್ಬರಿಗೂ ಯಾಕಾದರೂ ಬಂದಿತಪ್ಪಾ? ಇಬ್ಬರನ್ನೂ ಈ ಉದ್ಯಮದ ಕನಸಿನಿಂದ ಹೊರತರುವುದು ಹೇಗಪ್ಪಾ? ಎಂಬುದು ಅವರ ಪಾಲಿಗೆ ಬಿಡಿಸಲಾಗದ ಕಗ್ಗಂಟಾಗಿತ್ತು.ಏಕೆಂದರೆ, ಇಷ್ಟು ದೊಡ್ಡ ಮೊತ್ತದ ಸಂಬಳದ ಕೆಲಸ ಬಿಟ್ಟು, ಗೊತ್ತುಗುರಿ ಇಲ್ಲದಂಥ ಕಂಪೆನಿ ಆರಂಭಿಸಲು ಹೋಗಿ ಮಗಳು-ಅಳಿಯ ಇಬ್ಬರೂ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬ ಆತಂಕ ವೈದ್ಯರದ್ದಾಗಿತ್ತು. ಹಾಗಾಗಿ ಅಳಿಯನ ಪ್ರಯತ್ನವನ್ನು ಆರಂಭದಲ್ಲೇ ವಿಫಲಗೊಳಿಸಲು ಅವರು ಸೂಕ್ತ ವ್ಯಕ್ತಿಯ ನೆರವಿಗಾಗಿ ಶೋಧ ಆರಂಭಿಸಿದರು. ಆಗಲೇ ಅವರಿಗೆ ಬೆಂಗಳೂರಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಯಲ್ಲಿ ಆಯುಕ್ತರಾಗಿದ್ದ ಮಿತ್ರರು ನೆನಪಾದರು. ಆ ಅಧಿಕಾರಿ ಕೂಡ ಬೆಂಗಳೂರಿನ ಜನರ ನಡುವೆ ಪ್ರಭಾವಿ ವ್ಯಕ್ತಿ ಎಂಬುದು ವೈದ್ಯರಿಗೂ ತಿಳಿದಿತ್ತು.ಸಮಾಜದಲ್ಲಿ ದೊಡ್ಡ ವ್ಯಕ್ತಿಗಳು, ಯಶಸ್ವಿ ಉದ್ಯಮಿಗಳ ಸಂಪರ್ಕ ಹೊಂದಿದ್ದ ಆ ಆಯುಕ್ತರು ಬೆಂಗಳೂರಿನಲ್ಲಿ ಉತ್ತಮ ಹೆಸರು ಮಾಡಿದ್ದರು. ಅವರು ಹಲವು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಿದ್ದನ್ನು ವೈದ್ಯರೂ ಅರಿತಿದ್ದರು. ಅಳಿಯನ ಮನಃಪರಿವರ್ತನೆಗೆ ಇವರೇ ಸೂಕ್ತ ವ್ಯಕ್ತಿ ಎಂಬ ನಂಬಿಕೆಯೊಂದಿಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಧಾವಿಸಿದ್ದರು.ಎಲ್ಲಾ ಮಾತುಗಳನ್ನೂ ಗಮನವಿಟ್ಟು ಆಲಿಸಿದ ಆಯುಕ್ತರು, ವೈದ್ಯರ ದೊಡ್ಡ ಸಮಸ್ಯೆಯನ್ನು ಸುಲಭದಲ್ಲಿ ಪರಿಹರಿಸುವ ಭರವಸೆ ನೀಡಿದರು. ಅವರಿಗೆ ಆ ಸಂದರ್ಭದಲ್ಲಿ ಇದೊಂದು ಸಮಸ್ಯೆಯೇ ಅಲ್ಲ ಎಂದೆನಿಸಿತು!ತಮ್ಮ ಪ್ರಭಾವ ಬಳಸಿ ವೈದ್ಯರ ಅಳಿಯನ ಜತೆ ಮಾತನಾಡಿ, ಉದ್ಯಮ ಎಂಬುದರ ಒಳ-ಹೊರಗ, ಸಮಸ್ಯೆ-ಸವಾಲುಗನ್ನು ಸೂಕ್ತ ರೀತಿ ತಿಳಿಸಿಕೊಡುವುದು, ಯುವ ಉತ್ಸಾಹಿಯ ಮನದಲ್ಲಿದ್ದ ಅಪಾಯಕಾರಿ ಆಲೋಚನೆಯನ್ನು ದೂರ ಮಾಡುವುದು ಆಯುಕ್ತರ ಹೊಸ ಜವಾಬ್ದಾರಿಯಾಗಿತ್ತು.ಉತ್ತಮ ಮನೆತನದಿಂದ ಬಂದಿದ್ದ ಹಾಗೂ ದೊಡ್ಡ ಸಂಬಳದ ಉದ್ಯೋಗದಲ್ಲಿರುವ ವ್ಯಕ್ತಿ, ಗೊತ್ತುಗುರಿ ಇಲ್ಲದ ಮತ್ಯಾವುದೋ ಸಾಹಸ ಮಾಡಲು ಹೊರಟಿರುವುದು ತಪ್ಪು ಎಂಬುದು ಆಯುಕ್ತರ ಭಾವನೆಯೂ ಆಗಿತ್ತು. ಹಾಗಾಗಿಯೇ ಅವರು ತಮಗೆ ವಹಿಸಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿಕೊಡುವ ಭರವಸೆಯನ್ನೂ ಮಿತ್ರರಿಗೆ ನೀಡಿದರು. `ಆದಷ್ಟು ಬೇಗ ಅಳಿಯನನ್ನು ಕರೆದುಕೊಂಡು ಬನ್ನಿ, ಅವರೊಂದಿಗೆ ಮಾತನಾಡಲು ಕಾತರನಾಗಿದ್ದೇನೆ' ಎಂದು ಹೇಳಿ ಹಿರಿಯ ಮಿತ್ರರನ್ನು ಕಳುಹಿಸಿಕೊಟ್ಟರು.ಆಯುಕ್ತರು ಭರವಸೆ ನೀಡಿ ಹೆಚ್ಚು ದಿನವಾಗಿರಲಿಲ್ಲ. ಆಯುಕ್ತರೆದುರು ವೈದ್ಯರು ಮತ್ತೆ ಪ್ರತ್ಯಕ್ಷರಾದರು.ಈ ಬಾರಿ ಅವರ ಜತೆ ಸಾಮಾನ್ಯ ದೇಹದಾರ್ಢ್ಯದ ಒಬ್ಬ ಯುವಕನಿದ್ದ. ಆತ ಬಲು ಸಭ್ಯ ಹಾಗೂ ಶಿಸ್ತಿನ ಸ್ವಭಾವದ ವ್ಯಕ್ತಿ ಎಂಬುದು ಮೊದಲ ನೋಟಕ್ಕೇ ಆಯುಕ್ತರಿಗೂ ಮನದಟ್ಟಾಯಿತು.

ಪರಸ್ಪರ ನಮಸ್ಕಾರ ವಿನಿಮಯದ ಬಳಿಕ ಆ ಯುವಕನೊಂದಿಗೆ ಆಯುಕ್ತರು ಸಂಭಾಷಣೆ ಶುರು ಮಾಡಿದರು. ಆತನ ನೌಕರಿ ಮತ್ತಿತರ ಸಂಗತಿಗಳ ಬಗ್ಗೆ ಮೊದಲು ವಿಚಾರಿಸಿದರು. ಬಳಿಕ ಹತ್ತಾರು ಪ್ರಶ್ನೆಗಳನ್ನು ತೂರಿಬಿಟ್ಟರು.ಆಗ ತಿಳಿದುಬಂದಿದ್ದೇನೆಂದರೆ, ಯುವಕನ ಮನದಲ್ಲಿ ಅದ್ಭುತ ಎನಿಸುವಂತಹ ಕನಸುಗಳಿದ್ದವು. ಆದರೆ ಆ ಕನಸುಗಳನ್ನು ಸಾಕಾರಗೊಳಿಸಲು ಅತ್ಯಗತ್ಯವಾಗಿ ಬೇಕಾದ ಹಣದ ಕೊರತೆ ಇತ್ತು. ಜತೆಗೆ ಆ ಕನಸುಗಳೊಂದಿಗೆ ಆತನ ಸ್ನೇಹಿತರ ಆಲೋಚನೆಗಳೂ ಬೆರೆತುಕೊಂಡಿದ್ದವು. ಆ ಕನಸುಗಳನ್ನು ಸಾಕಾರಗೊಳಿಸುವುದಕ್ಕಾಗಿ ಅವರೆಲ್ಲರೂ ಕೂಡ ದೊಡ್ಡ ಸಂಬಳದ ಹಾಗೂ ಸುರಕ್ಷಿತವಾದ ಉದ್ಯೋಗವನ್ನು ಬಿಟ್ಟು ಬರಲೂ ಸಿದ್ಧರಾಗಿದ್ದರು.ಅದನ್ನೆಲ್ಲಾ ಕೇಳಿದ ಆಯುಕ್ತರು ಒಮ್ಮೆಲೇ ಗಾಬರಿಗೆ ಒಳಗಾದರು. ದೇಶದ ಮಟ್ಟಿಗೆ ಪೂರ್ಣ ಹೊಸತೇ ಆಗಿದ್ದ ಆ ಉದ್ಯಮ ಕ್ಷೇತ್ರದಲ್ಲಿ ಸ್ವಂತ ಕಂಪೆನಿ ಸ್ಥಾಪಿಸುವ ಕನಸಿನ ಬೆನ್ನಟ್ಟಿ ದೊಡ್ಡ ಪ್ರಮಾಣದ ಸಂಬಳ-ಭತ್ಯೆ ಎಲ್ಲಾ ಸಿಗುತ್ತಿರುವ ಉದ್ಯೋಗ ಬಿಟ್ಟುಬಿಡಲು ಇವರ್ಲ್ಲೆಲಾ ಏಕೆ ಯೋಚಿಸುತ್ತಿದ್ದಾರೆ ಎಂಬುದೇ ಆಯುಕ್ತರಿಗೂ ಅರ್ಥವಾಗಲಿಲ್ಲ. ಅವರೂ ವೈದ್ಯರಂತೆಯೇ ಗೊಂದಲಕ್ಕೆ ಬಿದ್ದರು. ಯುವಕ ಮತ್ತು ಆತನ ಮಿತ್ರರ `ಸ್ವಂತ ಕಂಪೆನಿ' ಕನಸಿನ ವಿಚಾರ ಅವರನ್ನು ವಿಪರೀತವಾಗಿ ಚಿಂತೆಗೀಡು ಮಾಡಿತು.ತಕ್ಷಣವೇ ಆ ಅಧಿಕಾರಿ, ಮಿತ್ರರು ಮತ್ತು ಅವರ ಅಳಿಯನಿಗೆ ಚಹಾ ಹಾಗೂ ಲಘು ಉಪಾಹಾರ ತಂದುಕೊಡುವಂತೆ ಸಿಬ್ಬಂದಿಗೆ ಸೂಚಿಸಿ ಕ್ಷಣ ಆಲೋಚನಾ ಮಗ್ನರಾದರು. ಬಿಗುವಿನಿಂದ ಕೂಡಿದ್ದ ಆ ಸಂದರ್ಭವನ್ನು  ಯುವಕನ ಮನಃಪರಿವರ್ತನೆಯ ಪೀಠಿಕೆ ಎಂಬಂತೆ ಹಾಸ್ಯದ ಮೂಲಕ ತಿಳಿಗೊಳಿಸಲು ಯತ್ನಿಸಿದರು.ಹೊಸ ಉದ್ಯಮ ಕ್ಷೇತ್ರದಲ್ಲಿರುವ ಅಪಾಯಗಳ ಬಗ್ಗೆ ವೈದ್ಯರ ಅಳಿಯನಿಗೆ ಸವಿಸ್ತರವಾಗಿ ವಿವರಿಸುತ್ತಾ ಮನಃಪರಿವರ್ತನೆ ಮಾಡಲೆತ್ನಿಸಿದರು. ಬಹಳ ಸುರಕ್ಷಿತವಾದ ಹಾಗೂ ಉತ್ತಮ ವೇತನ ತಂದುಕೊಡುತ್ತಿರುವ ಕೆಲಸ ಬಿಟ್ಟರೆ ಆಗುವ ಅನಾಹುತಗಳ ಕುರಿತೂ ಬಗೆಬಗೆಯಲ್ಲಿ ತಿಳಿಹೇಳಿದರು.`ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಉಳಿದವರಿಗೆ ಹೋಲಿಸಿದರೆ ಈಗ ಒಳ್ಳೆಯ ಉದ್ಯೋಗದಲ್ಲಿರುವ ನೀನೇ ಅದೃಷ್ಟವಂತ' ಎಂದು ಆ ಯುವಕನಿಗೆ  ಮನದಟ್ಟು ಮಾಡಲು ಪ್ರಯತ್ನಿಸಿದರು.ಮನೆ, ಮಡದಿ, ಮಕ್ಕಳು ಸೇರಿದಂತೆ ಸಂಸಾರ ಜೀವನದ ಸುರಕ್ಷತೆ ಬಗೆಗೂ ಯೋಚಿಸುವಂತೆ ಬುದ್ಧಿಮಾತು ಹೇಳಿದ ಆಯುಕ್ತರು, ಮಾತಿನ ಕೊನೆಗೆ `ಸಮಾಜದಲ್ಲಿ ತಮ್ಮದೇ ಆದ ಘನತೆ ಹೊಂದಿರುವ ಮಾವನ ಮಾತುಗಳನ್ನು ಮೀರಬೇಡ' ಎಂದೂ ಗಮನ ಸೆಳೆದರು.`ಐಎಎಸ್ ಅಧಿಕಾರಿಯಾಗಿರುವ ನನಗೆ ತಿಂಗಳಿಗೆ ಕೇವಲ ಮೂರು ಸಾವಿರ ರೂಪಾಯಿ ಸಂಬಳ ಬರುತ್ತಿದೆ. ಆದರೆ ಖಾಸಗಿ ಕಂಪೆನಿಯಲ್ಲಿದ್ದುಕೊಂಡು ನೀನು 10,000 ರೂಪಾಯಿ ಪಡೆಯುತ್ತಿರುವೆ' ಎಂದ ಅವರು ಯುವಕನ ನೌಕರಿಯ ಶ್ರೇಷ್ಠತೆ, ಘನತೆ ಬಗ್ಗೆ ಭಾರಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.

ಅಲ್ಲದೆ, ಅನುಭವದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಬಡ್ತಿ ಸಿಕ್ಕಿದರೆ ಸಂಬಳವೂ ಮತ್ತಷ್ಟು ಹೆಚ್ಚುತ್ತದೆ ಎಂಬ ಆಕರ್ಷಕವಾದ ಮಾತುಗಳನ್ನು ಹೇಳಿದರು.ಆದರೆ `ಸ್ವಂತ ಉದ್ಯಮ'ದ ಕನಸು ಕಾಣುತ್ತಿದ್ದ ವೈದ್ಯರ ಅಳಿಯನ ಮನಸ್ಸಿನ ಮೇಲೆ ಆಯುಕ್ತರ ಸುದೀರ್ಘ `ಮನಃಪರಿವರ್ತನೆ ಪಾಠ' ಯಾವುದೇ ಪರಿಣಾಮ ಬೀರಲಿಲ್ಲ. ಆತ ತಮ್ಮದೇ ಆದ ಸ್ಪಷ್ಟ ಯೋಜನೆ ಹೊಂದಿದ್ದರು, ಅದಕ್ಕೇ ಬದ್ಧರಾಗಿದ್ದರು. ಆಯುಕ್ತರ ಸಲಹೆಗಳನ್ನು ಆತ ಕಿಂಚಿತ್ತೂ ಸ್ವೀಕರಿಸುವಂತೆ ಕಾಣಲಿಲ್ಲ.ಸ್ವಂತ ಕಂಪೆನಿ ಆರಂಭಿಸುವುದು ನಿಶ್ಚಿತ ಎಂದ ಆ ಯುವಕ, ಅದು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಪ್ರಗತಿಯನ್ನೂ ಕಾಣಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.ಆ ಮಾತುಗಳನ್ನು ಕೇಳಿದ ಅಧಿಕಾರಿಯೇ ಈಗ ಗೊಂದಲಕ್ಕೆ ಬಿದ್ದರು. ತಮ್ಮ ಯಾವುದೇ ಸಲಹೆಯನ್ನೂ ವೈದ್ಯರ ಅಳಿಯ ಕೇಳುತ್ತಿಲ್ಲ ಎಂಬುದು  ಅವರಿಗೆ ಆವೇಳೆಗಾಗಲೇ ಮನದಟ್ಟಾಯಿತು. ಕನ್ನಡಕದ ಕಣ್ಣುಗಳ ಒಳಗಿನಿಂದಲೇ ಕನಸುಗಳನ್ನು ದಾಟಿಸಲೆತ್ನಿಸುತ್ತಿದ್ದ ಆ ತರುಣನಿಗೆ ಮನವರಿಕೆ ಮಾಡಿಸುವ್ಲ್ಲಲಿ ಅವರ ಯಾವುದೇ ಪ್ರಯತ್ನ ಯಶ ಕಾಣಲಿಲ್ಲ.ಕಡೆಯ ಮಾತೆಂಬಂತೆ ವೈದ್ಯರು ಕೂಡ ಅಳಿಯನ ಮನಃಪರಿವರ್ತನೆಗೆ ಯತ್ನಿಸಿದರು. ಆಯುಕ್ತರ ಬದುಕು, ದುಡಿಮೆ, ಯಶಸ್ಸಿನ ಜೀವನದ ಉದಾಹರಣೆಯನ್ನೇ ನೀಡಿದರು. ಆದರೆ ಆ ಯತ್ನವೂ ನೀರಿನಲ್ಲಿ ಮಾಡಿದ ಹೋಮದಂತೆ ವ್ಯರ್ಥವಾಯಿತು.ಹಿರಿಯ ವೈದ್ಯರು ಯಾವ ಸಮಸ್ಯೆ ಹೊತ್ತು ಬಂದಿದ್ದರೋ ಅದರೊಂದಿಗೇ ಹುಬ್ಬಳ್ಳಿಗೆ ವಾಪಸಾದರು. ಅತ್ತ ಹಿರಿಯ ಜೀವ ತಳಮಳಕ್ಕೆ ಒಳಗಾಗಿದ್ದರೆ, ತನ್ನ ನಿರ್ಧಾರಕ್ಕೇ ಅಂಟಿಕೊಂಡಿದ್ದ ಯುವಕ ಮಾತ್ರ ನೆಮ್ಮದಿಯಿಂದ ಇದ್ದರು. ಆಪ್ತಮಿತ್ರರೊಬ್ಬರ ಸಮಸ್ಯೆ ಬಗೆಹರಿಸಿಕೊಡುವ ಭರವಸೆ ನೀಡಿದ್ದ ಆ ಅನುಭವಿ ಅಧಿಕಾರಿಯೂ ಈಗ ಚಿಂತಾಕ್ರಾಂತರಾಗಿದ್ದರು.ಆ ವೈದ್ಯರ ಹೆಸರು ಡಾ. ಕುಲಕರ್ಣಿ. ಅವರ ಅಳಿಯ ಅಂದುಕೊಂಡಂತೆಯೇ ಕೆಲಸ ಬಿಟ್ಟು ಸ್ನೇಹಿತರೊಂದಿಗೆ ಸೇರಿಕೊಂಡು ಹೊಸ ಕಂಪೆನಿ ಹುಟ್ಟುಹಾಕಿಯೇ ಬಿಟ್ಟರು.ಅದು ಹೊಸ ಉದ್ಯಮ ಕ್ಷೇತ್ರ. ಹಾಗೆಯೇ, ಸಮಸ್ಯೆಗಳೂ ಹೊಸ ಬಗೆಯವೇ ಆಗಿದ್ದವು. ಜತೆಗೆ ವಿರೋಧಿಸುವವರು, ಈ ಯುವ ತಂಡದ ಮೇಲೆ ನಂಬಿಕೆ ಇಲ್ಲದವರು.... ಈ ನಕಾರಾತ್ಮಕ ಸಂಗತಿಗಳ ಮಧ್ಯೆಯೇ ಅವರು ಸ್ಥಾಪಿಸಿದ ಕಂಪೆನಿ ಹಂತ ಹಂತವಾಗಿ ಬೆಳವಣಿಗೆ ಕಾಣುತ್ತಾ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತು. ಭಾರಿ ಯಶಸ್ಸನ್ನೂ ಕಂಡಿತು. `ಸ್ವಂತ ಕಂಪೆನಿ' ಕನಸು ಕಂಡಿದ್ದ ಆ ಯುವಕ ವರ್ಷಗಳು ಉರುಳಿದಂತೆ ವಿಶ್ವದ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರೆನಿಸಿಕೊಂಡರು. ಮಾಹಿತಿ ತಂತ್ರಜ್ಞಾನ ಲೋಕದಲ್ಲಿ, ಕಂಪ್ಯೂಟರ್ ಸಾಫ್ಟ್‌ವೇರ್ ಉದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಆ ಕಂಪೆನಿಯ ಮುಖವಾಣಿ ಎನಿಸಿಕೊಂಡರು. ವಿಶ್ವವೇ ಅವರ ಸಾಧನೆಯನ್ನು ಕೊಂಡಾಡಿತು.ಚಿಂತೆಯ ಭಾರದಿಂದ ಬಳಲಿದ್ದ ಮಾವ ಕುಲಕರ್ಣಿ ಅವರೂ, ದಿನಕಳೆದಂತೆ ಅಳಿಯನ ಸಾಧನೆ ಬಗ್ಗೆ ಹೆಮ್ಮೆಪಟ್ಟರು. ಆತ ಮಿತ್ರರೊಡಗೂಡಿ ಕಟ್ಟಿದ ಕಂಪೆನಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣಲಾರಂಭಿಸಿದ್ದನ್ನು ಕಂಡು ಸಂತಸಪಟ್ಟರು.ಮಾವ ಮತ್ತು ಅವರ ಅಧಿಕಾರಿ ಮಿತ್ರರ ಬುದ್ಧಿಮಾತು ಕೇಳದೆ, ತನ್ನದೇ ಕನಸಿನ ಹಾದಿಯಲ್ಲಿ ಸಾಗಿ ಅದ್ಭುತ ಸಾಧನೆ ಮಾಡಿದ ವ್ಯಕ್ತಿಯ ಹೆಸರೇ  ಎನ್.ಆರ್.ನಾರಾಯಣ ಮೂರ್ತಿ. ಅವರೇ ಇನ್ಫೋಸಿಸ್ ಸಂಸ್ಥಾಪಕ!`ಕೈತುಂಬಾ ಸಂಬಳ ತರುವ ಕೆಲಸ ಬಿಡಬೇಡಿ' ಎಂದು ಯುವಕ ನಾರಾಯಣ ಮೂರ್ತಿ ಅವರಿಗೆ ಇನ್ನಿಲ್ಲದಂತೆ ತಿಳಿಹೇಳಿದ್ದ ಅಂದಿನ ಬೆಂಗಳೂರು ಪುರಸಭೆ ಆಯುಕ್ತರೇ ಜೆ.ಅಲೆಕ್ಸಾಂಡರ್.ನಂತರದ ವರ್ಷಗಳಲ್ಲಿ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು. ಕನಸುಗಾರ ಯುವಕನ ಸ್ವಂತ ಕಂಪೆನಿ ಬೃಹದಾಕಾರದಲ್ಲಿ ಬೆಳೆಯುತ್ತಾ ಲಕ್ಷಾಂತರ ಯುವಜನರಿಗೆ ಕೈತುಂಬಾ ಸಂಬಳ ತರುವ ಕೆಲಸ ನೀಡಿದ್ದನ್ನೂ ಕಣ್ಣಾರೆ ಕಂಡರು, ಮನಸಾರೆ ಮೆಚ್ಚಿಕೊಂಡರು.`ನಾರಾಯಣ ಮೂರ್ತಿ ಅವರ ಬೆಳವಣಿಗೆಯನ್ನು ನಾನು ದಶಕದಿಂದಲೂ ವಿಶೇಷ ಆಸಕ್ತಿ ಹಾಗೂ ಹೆಮ್ಮೆಯಿಂದ ಗಮನಿಸುತ್ತಾ ಬಂದಿದ್ದೇನೆ. ಆದರೆ ಅಂದು ಸ್ಥಳೀಯ ಸಂಸ್ಥೆಯ ಉನ್ನತ ಅಧಿಕಾರಿಯಾಗಿ ಅವರಿಗೆ ನಾನು ನೀಡಿದ್ದ ಸಲಹೆಯನ್ನು ಈಗ ನೆನಪಿಸಿಕೊಂಡರೆ ಬಹಳ ಮುಜುಗರವಾಗುತ್ತದೆ. ನಾನೊಬ್ಬ ಸಣ್ಣ ವ್ಯಕ್ತಿ ಎಂಬಂತೆ ಭಾಸವಾಗುತ್ತದೆ' ಎನ್ನುತ್ತಾ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಜೆ.ಅಲೆಕ್ಸಾಂಡರ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.