ಭಾನುವಾರ, ಜೂನ್ 7, 2020
29 °C

ಅವಳಿ ಜಿಲ್ಲೆಗೆ ಬೃಹತ್ ಉಕ್ಕು ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವಳಿ ಜಿಲ್ಲೆಗೆ ಬೃಹತ್ ಉಕ್ಕು ಘಟಕ

ವಿಜಾಪುರ: ಜಗತ್ತಿನ ಎರಡನೆಯ ಅತಿ ದೊಡ್ಡ ಉಕ್ಕು ತಯಾರಿಕಾ ಸಂಸ್ಥೆ ದಕ್ಷಿಣ ಕೊರಿಯಾದ ‘ಪಾಸ್ಕೊ’ ಸಂಸ್ಥೆಯು ಅವಳಿ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಉಕ್ಕು ಘಟಕ ಸ್ಥಾಪಿಸಲು ನಿರ್ಧರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಮುರುಗೇಶ ನಿರಾಣಿ ಹೇಳಿದರು.ಕೃಷ್ಣಾ ನದಿ ಪಕ್ಕದಲ್ಲಿ ಅಂದರೆ ವಿಜಾಪುರ ಜಿಲ್ಲೆಯ ಕೊಲ್ಹಾರ, ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ- ಹುನಗುಂದ ಮಧ್ಯದಲ್ಲಿ ಹಾಗೂ ಗದಗ ಬಳಿ ಸ್ಥಳ ಗುರುತಿಸಲಾಗಿದೆ. ಈ ಸಂಸ್ಥೆಯ ಅಧಿಕಾರಿಗಳು ಶೀಘ್ರವೇ ಸ್ಥಳ ಪರಿಶೀಲನೆ ನಡೆಸಿ ನಿವೇಶನ ಅಂತಿಮಗೊಳಿಸಲಿದ್ದಾರೆ ಎಂದು ಬುಧವಾರ ಇಲ್ಲಿ ತಿಳಿಸಿದರು.

ವಾರ್ಷಿಕ ಆರು ದಶಲಕ್ಷ ಟನ್ ಉತ್ಪಾದನಾ ಸಾಮರ್ಥ್ಯದ ಕಾರ್ಖಾನೆ ಇದಾಗಿದ್ದು, 32 ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗಲಿದೆ. ಭೂಮಿ ಖರೀದಿಗಾಗಿ ಈ ಸಂಸ್ಥೆಯವರು ಈಗಾಗಲೆ 60 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರಕ್ಕೆ ಜಮಾ ಮಾಡಿದ್ದಾರೆ ಎಂದರು.ವಿಜಾಪುರ ನಗರದಲ್ಲಿ ಎಟ್ಕೊ ಡೆನಿಮ್ ಸಿದ್ಧ ಉಡುಪು ತಯಾರಿಕಾ ಸಂಸ್ಥೆ ಕಾಮಗಾರಿ ಆರಂಭಿಸಿದ್ದು, ವರ್ಷದಲ್ಲಿ ಉತ್ಪಾದನೆ ನಡೆಸಲಿದೆ ಎಂದರು.

ಬಸವನ ಬಾಗೇವಾಡಿ ತಾಲ್ಲೂಕಿನ ಕೂಡಗಿ ಬಳಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದಿಂದ ಸ್ಥಾಪಿಸಲಾಗುತ್ತಿರುವ 4 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರಕ್ಕೆ ವಶಪಡಿಸಿಕೊಳ್ಳುವ ಭೂಮಿಯ ಪೈಕಿ ನೀರಾವರಿ ಭೂಮಿಗೆ ಎಕರೆಗೆ ರೂ. 6 ಲಕ್ಷ ಹಾಗೂ ಒಣ ಬೇಸಾಯಕ್ಕೆ 4.75 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಕೆಲ ರೈತರು ಸ್ವ-ಸಂತೋಷದಿಂದ ಭೂಮಿ ನೀಡುತ್ತಿದ್ದಾರೆ ಎಂದು ಹೇಳಿದರು.ರಾಜ್ಯದಲ್ಲಿ ಒಂದು ಲಕ್ಷ ಎಕರೆ ಭೂ ಬ್ಯಾಂಕ್ ಸ್ಥಾಪನೆ ಕಾರ್ಯ ನಡೆಯುತ್ತಿದೆ. ಭೂಮಿ ಸ್ವಾಧೀನಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಬೆಲೆ ಹೆಚ್ಚು ನೀಡಬೇಕು ಎಂಬುದಷ್ಟೇ ಅವರ ಕೋರಿಕೆಯಾಗಿದೆ. ಆದರೂ, ಕೆಲವೆಡೆ ರಾಜಕೀಯ ದುರುದ್ದೇಶದಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ಸಚಿವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.