ಮಂಗಳವಾರ, ಏಪ್ರಿಲ್ 20, 2021
24 °C

ಅವಿರೋಧ ಆಯ್ಕೆ ಸಂಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೆ. ರೆಹಮಾನ ಖಾನ್ ಅವರ ನಿವೃತ್ತಿಯ ನಂತರ ತೆರವಾಗಿರುವ ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಪಿ.ಜೆ. ಕುರಿಯನ್ ಅವರು ಅವಿರೋಧವಾಗಿ ಆಯ್ಕೆಯಾಗುವ ಸಂಭವ ಇದೆ.ಪ್ರಧಾನಿ ಡಾ. ಮನಮೋಹನ್ ಸಿಂಗ್ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಅರುಣ್ ಜೈಟ್ಲಿ ಕುರಿಯನ್ ಆಯ್ಕೆಗೆ ಸಹಮತ ವ್ಯಕ್ತಪಡಿಸಿರುವ ಕಾರಣ ಅವರ ಆಯ್ಕೆಯ ಹಾದಿ ಸುಗಮವಾದಂತಾಗಿದೆ. ಈ ತಿಂಗಳ 21ರಂದು ನಡೆಯುವ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿತ್ತು.ಆಡಳಿತಾರೂಢ ಯುಪಿಎ ಹಾಗೂ ವಿರೋಧ ಪಕ್ಷವಾದ ಬಿಜೆಪಿ ಪಕ್ಷಗಳು ಕುರಿಯನ್ ಪರ ಇರುವುದರಿಂದಾಗಿ ರಾಜ್ಯಸಭೆಯ ಉಪಸಭಾಪತಿ ಸ್ಥಾನದ ಅಭ್ಯರ್ಥಿಯೊಬ್ಬರು ಇದೇ ಮೊದಲ ಬಾರಿಗೆ ಅವಿರೋಧವಾಗಿ ಆಯ್ಕೆಯಾಗುವಂತಾಗಿದೆ.`ಕುರಿಯನ್ ಎಲ್ಲ ಪಕ್ಷಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಿರುವ ಒಳ್ಳೆಯ ವ್ಯಕ್ತಿಯಾಗಿರುವುದರಿಂದ ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ನಮ್ಮ ಅಭ್ಯರ್ಥಿ ಬಹುತೇಕ ಸ್ಪರ್ಧೆಗೆ ಇಳಿಯಲಾರರು~ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದರು.ಸಂಖ್ಯಾಬಲ ಇಲ್ಲದ ಪರಿಣಾಮ ಎಡ ಪಕ್ಷಗಳು ಹಾಗೂ ಇತರರು ಸಹ ಈ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ನಿಲ್ಲಿಸುವಲ್ಲಿ ಆಸಕ್ತಿ ತೋರಿಸಲಿಲ್ಲ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ಮಿತ್ರ ಪಕ್ಷ ಎನ್‌ಸಿಪಿ ನಾಯಕ ತಾರೀಕ್ ಅನ್ವರ್ ಅವರ ಹೆಸರೂ ಈ ಸ್ಥಾನಕ್ಕೆ ಕೇಳಿಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.