ಗುರುವಾರ , ಏಪ್ರಿಲ್ 15, 2021
20 °C

ಅವ್ಯವಹಾರ ಸಾಬೀತಾದರೆ ಸೂಪರ್‌ಸೀಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ `ಎನ್‌ಟಿಐ ಎಂಪ್ಲಾಯಿಸ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯು ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಎಸಗಿರುವುದು ಸಾಬೀತಾದರೆ ಆ ಸೊಸೈಟಿಯನ್ನು ಸೂಪರ್‌ಸೀಡ್ ಮಾಡಲಾಗುವುದು~ ಎಂದು ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ  ವಿಧಾನಸಭೆಯಲ್ಲಿ ತಿಳಿಸಿದರು.ಕಾಂಗ್ರೆಸ್‌ನ ಕೃಷ್ಣಬೈರೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಸೊಸೈಟಿಯ ಸದಸ್ಯರಲ್ಲದವರಿಗೆ ನಿವೇಶನಗಳನ್ನು ಮಾರಾಟ ಮಾಡುವ ಮೂಲಕ ತಪ್ಪು ಮಾಡಿದ್ದರೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.ಇದಕ್ಕೂ ಮುನ್ನ ಮಾತನಾಡಿದ ಕೃಷ್ಣಬೈರೇಗೌಡ, ಎನ್‌ಟಿಐ ಸೊಸೈಟಿಗೆ ಬಡಾವಣೆ ನಿಮಾರ್ಣಕ್ಕಾಗಿ ಹೆಬ್ಬಾಳ ಸಮೀಪ 1982ರಲ್ಲಿ 210 ಎಕರೆ ಭೂಮಿಯನ್ನು ಸರ್ಕಾರ ನೀಡಿತ್ತು. ಆದರೆ 25 ವರ್ಷ ಆದರೂ ಅರ್ಹರಿಗೆ ನಿವೇಶನ ದೊರೆತಿಲ್ಲ ಎಂದು ಟೀಕಿಸಿದರು.`ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದ ಕೆಲವರು ನಿಧನರಾಗಿದ್ದಾರೆ. ಹಲವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. 180 ನಿವೇಶನಗಳನ್ನು ಸದಸ್ಯರಲ್ಲದವರಿಗೆ ಮಾರಾಟ ಮಾಡಲಾಗಿದೆ. ಅರ್ಹ ಫಲಾನುಭವಿಗಳಿಗೆ ನಿವೇಶನ ಸಿಕ್ಕಿಲ್ಲ. ಅವರು ನಿತ್ಯ ನನ್ನ ಬಳಿ ಬಂದು ಅಳಲು ತೋಡಿಕೊಳ್ಳುತ್ತಾರೆ~ ಎಂದು ಸಮಸ್ಯೆಯ ಆಳವನ್ನು ಬಿಡಿಸಿಟ್ಟರು.ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಜೂರಾತಿ ನೀಡಿದ ನಂತರ ಸೊಸೈಟಿಯು ಸದಸ್ಯರಿಗೆ ಮಾತ್ರ ನಿವೇಶನ ನೀಡಿದೆಯೋ ಅಥವಾ ಸದಸ್ಯರಲ್ಲದವರಿಗೆ ನೀಡಿದೆಯೋ ಎಂಬ ಪ್ರಶ್ನೆಗೆ ಸರ್ಕಾರ ಸ್ಪಷ್ಟ ಉತ್ತರ ನೀಡಲಿಲ್ಲ.ಕೃಷ್ಣಬೈರೇಗೌಡ ಅವರ ಆರೋಪಗಳಿಗೆ ಧ್ವನಿಗೂಡಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಿವೇಶನ ಹಂಚಿಕೆಯಲ್ಲಿನ ಲೋಪಗಳ ಬಗ್ಗೆ ತನಿಖೆ ಆಗಬೇಕು. ಬದುಕಿರುವ ಅರ್ಹ ಸದಸ್ಯರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಸಹಕಾರ ಸಚಿವರಿಗೆ ನೀರು ಕುಡಿಸಿದ ಶಾಸಕ!

25 ವರ್ಷಗಳಿಂದ ನಿವೇಶನ ಸಿಕ್ಕಿಲ್ಲ ಎಂದು ಶಾಸಕ ಕೃಷ್ಣಬೈರೇಗೌಡ ಹೇಳುತ್ತಿದ್ದಂತೆಯೇ ಆಕ್ರೋಶಗೊಂಡ ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ, 25 ವರ್ಷದಿಂದ ಏನು ಮಾಡುತ್ತಿದ್ದರು... ಯಾವ ಸರ್ಕಾರ ಇತ್ತು ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.ಇದರಿಂದ ಕೆರಳಿದ ಕೃಷ್ಣಬೈರೇಗೌಡ, `ಸಚಿವರು ಈ ರೀತಿ ಮಾತನಾಡುವುದು ಸರಿಯಲ್ಲ. ನಾನು ಸಚಿವರು ಅಥವಾ ಸರ್ಕಾರದ ವಿರುದ್ಧ ಆರೋಪ ಮಾಡಿಲ್ಲ. ಯಾರು ಮಾಡಿದರು, ಮಾಡಲಿಲ್ಲ ಎಂಬುದು ಮುಖ್ಯವಲ್ಲ. ಸಮಸ್ಯೆಗೆ ಪರಿಹಾರ ಸಿಗಬೇಕು. ನಾನು ಸುಮ್ಮನೇ ಆರೋಪ ಮಾಡುವ ವ್ಯಕ್ತಿಯಲ್ಲ, ಅಂತಹ ಹಿನ್ನೆಲೆಯಿಂದ ಬಂದಿಲ್ಲ. ನಾನು ವಯಸ್ಸಿನಲ್ಲಿ ಚಿಕ್ಕವನಿರಬಹುದು.ಆದರೆ ನಾನು ಪ್ರಸ್ತಾಪಿಸುವ ವಿಷಯ ಎಷ್ಟು ಗಂಭೀರವಾಗಿದೆ ಎಂಬುದನ್ನು ಗಮನಿಸಬೇಕು. ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಸಚಿವರು ಈ ವಿಷಯಕ್ಕೆ ರಾಜಕೀಯ ಬಣ್ಣ ಕಟ್ಟುವುದು ಸರಿಯಲ್ಲ~ ಎಂದು ತರಾಟೆಗೆ ತೆಗೆದುಕೊಂಡರು.`ಟಿ.ವಿ.ಯಲ್ಲಿ ವಾದ ಮಾಡುವ ಹಾಗೆ ಸದನದಲ್ಲಿ ವಾದಿಸಲು ಬರಬೇಡಿ. ಈಚೆಗಷ್ಟೇ ಸಚಿವರಾಗಿದ್ದೀರಿ. ಆಗಲೇ ಈ ರೀತಿ ಆಡಿದರೆ ಹೇಗೆ~ ಎಂದು ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು. ಆಗ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, `ಸಚಿವರು ಆವೇಶಕ್ಕೆ ಒಳಗಾಗುವುದು ಸರಿಯಲ್ಲ. ಸದಸ್ಯರು ಎತ್ತಿರುವ ವಿಷಯದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ~ ಎಂದು ಸಲಹೆ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.