ಮಂಗಳವಾರ, ಮೇ 17, 2022
24 °C

ಅಶೋಕ್‌ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಶೋಕ್‌ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು

ಬೆಂಗಳೂರು: ಭೂ ಹಗರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರ್.ಅಶೋಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭೂ ಮಾಲೀಕರಾದ ಶಾಮಣ್ಣ ಮತ್ತು ರಾಮಸ್ವಾಮಿ ಎಂಬುವರ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ಸಂಜೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದರು.

ಲೊಟ್ಟೆಗೊಲ್ಲಹಳ್ಳಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ರಾಜಮಹಲ್ ವಿಲಾಸ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಅಕ್ರಮವಾಗಿ ಖರೀದಿಸಿ, ನಂತರ ಅದನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಆದೇಶ ಮಾಡಿಸಿಕೊಂಡ ಆರೋಪ ಅಶೋಕ ಅವರ ಮೇಲಿದೆ. ಈ ಸಂಬಂಧ ಜಯಕುಮಾರ್ ಹಿರೇಮಠ ಎಂಬುವರು ಬುಧವಾರ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

ದೂರಿನಲ್ಲಿ ಉಲ್ಲೇಖವಾಗಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಗುರುವಾರ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದರು. ಶುಕ್ರವಾರ ಸಂಜೆಯ ವೇಳೆಗೆ ನ್ಯಾಯಾಲಯದ ಆದೇಶದ ಪ್ರತಿ ಲೋಕಾಯುಕ್ತ ಪೊಲೀಸರನ್ನು ತಲುಪಿತು. ನ್ಯಾಯಾಲಯದ ಆದೇಶವನ್ನು ಅಧ್ಯಯನ ಮಾಡಿದ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್  `ಪ್ರಥಮ ಮಾಹಿತಿ ವರದಿ~ (ಎಫ್‌ಐಆರ್)  ದಾಖಲಿಸಿದರು.

ರಾಜಮಹಲ್ ವಿಲಾಸ ಎರಡನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಸತ್ಯಾಂಶವನ್ನು ಮರೆಮಾಚಿ ಅಶೋಕ ಅವರು ಲೊಟ್ಟೆಗೊಲ್ಲಹಳ್ಳಿಯ ಸರ್ವೆ ನಂಬರ್ 10/1 ರ ಒಂಬತ್ತು ಗುಂಟೆ ಮತ್ತು 10/11 ಎಫ್‌ನ 14 ಗುಂಟೆಯನ್ನು ಖರೀದಿಸಿದ್ದರು. 2009ರಲ್ಲಿ ಅದನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿ ಆದೇಶ ಪಡೆದ ಆರೋಪ ದೂರಿನಲ್ಲಿದೆ.

ಅಶೋಕ ಅವರು ಎರಡೂ ಸ್ವತ್ತುಗಳನ್ನು ಖರೀದಿಸಿದ್ದರೂ, ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕೋರಿ ಮೂಲ ಮಾಲೀಕರಿಂದಲೇ ಅರ್ಜಿ ಸಲ್ಲಿಸಲಾಗಿತ್ತು. ಅವುಗಳ ಆಧಾರದಲ್ಲೇ ಆದೇಶವನ್ನೂ ಪ್ರಕಟಿಸಲಾಗಿತ್ತು. ಇದರ ಅಂತಿಮ ಲಾಭ ಅಶೋಕ ಅವರಿಗೆ ದೊರೆತಿದ್ದು, 30 ಕೋಟಿ ರೂಪಾಯಿಗೂ ಹೆಚ್ಚು ಲಾಭವಾಗಿತ್ತು. ಸರ್ಕಾರಕ್ಕೆ ಇಷ್ಟು ದೊಡ್ಡಮೊತ್ತದ ನಷ್ಟ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೂರು ಕಾಯ್ದೆಯಡಿ ಮೊಕದ್ದಮೆ: ನ್ಯಾಯಾಲಯದ ಆದೇಶ, ಖಾಸಗಿ ದೂರಿನ ಜೊತೆ ಸಲ್ಲಿಸಿರುವ ದಾಖಲೆಗಳನ್ನು ಆಧರಿಸಿ ಅಶೋಕ, ಯಡಿಯೂರಪ್ಪ, ಶಾಮಣ್ಣ, ರಾಮಸ್ವಾಮಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಆಸ್ತಿಗಳ ಪರಭಾರೆ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ಐಪಿಸಿ ಕಲಂ 409 (ವಿಶ್ವಾಸ ದ್ರೋಹ), 420 (ವಂಚನೆ), ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 13(1)(ಡಿ)- (ಅಧಿಕಾರ ದುರ್ಬಳಕೆ) ಹಾಗೂ ಆಸ್ತಿಗಳ ಪರಭಾರೆ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ. ಶುಕ್ರವಾರ ಸಂಜೆಯೇ ಎಫ್‌ಐಆರ್ ಪ್ರತಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಎಸ್‌ಪಿ ಶಿವಶಂಕರ್, `ನ್ಯಾಯಾಲಯದ ಆದೇಶದಂತೆ ಅಶೋಕ ಮತ್ತು ಇತರ ಮೂವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಡಿವೈಎಸ್‌ಪಿ ದರ್ಜೆ ಅಧಿಕಾರಿಯೊಬ್ಬರನ್ನು ಪ್ರಕರಣದ ತನಿಖಾಧಿಕಾರಿಯಾಗಿ ಶನಿವಾರ ನೇಮಕ ಮಾಡಲಾಗುವುದು~ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.