ಸೋಮವಾರ, ಮೇ 23, 2022
21 °C

ಅಶ್ವಿನಿ ಎಂಬ ಪ್ರತಿಭೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆವತ್ತು ಗುರುವಾರ, ಅಕ್ಟೋಬರ್ 14. ದೇಶದ ಕ್ರೀಡಾ ಪ್ರೇಮಿಗಳನ್ನು ಸತತ 13 ದಿನಗಳ ಕಾಲ ಬೆಚ್ಚಗೆ ಮನೆಯಲ್ಲಿ ಟಿವಿ ಬಿಟ್ಟು ಕದಲದಂತೆ ಮಾಡಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದ ಅಂತಿಮ ದಿನ.            ಕ್ರೀಡಾಕೂಟದ ಆರಂಭದ ದಿನದಿಂದಲೂ ಭಾರತಕ್ಕೆ ‘ಚಿನ್ನ’ದ ಮಳೆ ಸುರಿಸಿದ್ದ ಅಥ್ಲೀಟ್‌ಗಳು ಕೊನೆಯ      ದಿನದಲ್ಲಿಯೂ ಮಳೆಯ ಅಬ್ಬರವನ್ನು ಹೆಚ್ಚಿಸುವರೇ ಎನ್ನುವ ಕಾತರ ಎಲ್ಲಾ ಕ್ರೀಡಾಭಿಮಾನಿಗಳನ್ನು ಕಾಡಿತ್ತು.ಕೊನೆಯ ದಿನವನ್ನು ಕಾತರದಿಂದ ಕಾದು ಕುಳಿತಿದ್ದ ಕ್ರೀಡಾ ಪ್ರೇಮಿಗಳಿಗೆ ಭಾರತದ ಅಥ್ಲೀಟ್‌ಗಳು ನಿರಾಸೆ ಮಾಡಲಿಲ್ಲ. ಪದಕ ಬಂದರೆ ಸಾಕು ಎನ್ನುವ ಆಸೆ ಹೊತ್ತು ಕುಳಿತಿದ್ದವರಿಗೆ ಆಶ್ಚರ್ಯವಾಗಿತ್ತು. ಆವತ್ತು ಕೇವಲ ಪದಕ ಮಾತ್ರವಲ್ಲದೇ ‘ಚಿನ್ನ’ದೊಂದಿಗೆ ಹೊಸದೊಂದು ದಾಖಲೆಯು ಸೃಷ್ಟಿಯಾಗಿತ್ತು. ಆ ದಾಖಲೆಯನ್ನು ಕರ್ನಾಟಕದ ಹುಡುಗಿ ಕೊಡಗಿನವರಾದ ಮಾಚಿಮಂಡ ಅಶ್ವಿನಿ ಪೊನ್ನಪ್ಪ ಮಾಡಿದ್ದಾರೆ ಎಂದರೆ ಕನ್ನಡಿಗರಿಗೆ ಅದೆಷ್ಟು ಸಂತೋಷವಾಗಿರಲಿಕ್ಕಿಲ್ಲ. ಅಶ್ವಿನಿ ಸಾಧನೆಗೆ ಸಾಥ್ ಕೊಟ್ಟಿದ್ದು ಆಂಧ್ರಪ್ರದೇಶದ ಹುಡುಗಿ ಜ್ವಾಲಾ ಗುಟ್ಟಾ ಎನ್ನುವುದನ್ನು ಮರೆಯುವಂತಿಲ್ಲ.ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನವಿದು. ಪದಕವನ್ನು ಮಾತ್ರ ತಂದುಕೊಡದೇ ಕ್ರೀಡಾ ಇತಿಹಾಸದಲ್ಲಿ ಚಿನ್ನದಂಥ ದಾಖಲೆಯನ್ನು ಅಶ್ವಿನಿ ಮತ್ತು ಜ್ವಾಲಾ ಗುಟ್ಟಾ ಭಾರತಕ್ಕೆ ತಂದುಕೊಟ್ಟಿದ್ದಾರೆ.ಅಶ್ವಿನಿ ಅವರ ತಂದೆ ಎಂ.ಎ. ಪೊನ್ನಪ್ಪ ಹೈದರಾಬಾದ್‌ನ ಆರ್‌ಬಿಐ ಬ್ಯಾಂಕ್‌ನಲ್ಲಿ ಮ್ಯಾನೇಜರ್, ತಾಯಿ ಕಾವೇರಿ ಪೊನ್ನಪ್ಪ ಅವರು ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಅಶ್ವಿನಿ ಪದವಿ ಶಿಕ್ಷಣವನ್ನು ಪಡೆಯಲು 2001ರಲ್ಲಿ ಹೈದರಾಬಾದ್‌ಗೆ ತೆರಳಿದರು.‘ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದರ ಜೊತೆಗೆ ಹೊಸ ದಾಖಲೆ ಸೃಷ್ಟಿಯಾಗಿದ್ದು ನನಗೆ ಸಾಕಷ್ಟು ಸಂತೋಷವನ್ನು ಉಂಟುಮಾಡಿದೆ. ನನಗಾದ ಖುಷಿಯನ್ನು ಹೇಗೆ ಹೇಳಬೇಕು ಎನ್ನುವುದು ತಿಳಿಯುತ್ತಿಲ್ಲ. ‘ಐಯಾಮ್ ರಿಯಲಿ ಸೋ ಹ್ಯಾಪಿ’ ಎಂದು ಪದಕ ಗೆದ್ದ ದಿನ ಮಂದಹಾಸದ ನಗೆ ಬೀರಿದ್ದರು ಕರ್ನಾಟಕದ ಹುಡುಗಿ ಅಶ್ವಿನಿ.‘ಕಠಿಣ ಪರಿಶ್ರಮ ಮತ್ತು ಸಕಾರಾತ್ಮಕ ಚಿಂತನೆ ನನ್ನ ಯಶಸ್ಸಿನ ಗುಟ್ಟು. ಜೊತೆಗಾರ್ತಿ ಜ್ವಾಲಾ ಗುಟ್ಟಾ   ಸದಾ ನೀಡುವ ಬೆಂಬಲದಿಂದ ನನ್ನ ಆತ್ಮವಿಶ್ವಾಸ ಹೆಚ್ಚಾಯಿತು’. ನನ್ನ ಯಶಸ್ಸಿನ ಹಿಂದೆ ಕೋಟ್ಯಂತರ ಜನರ ಪ್ರೀತಿ, ಸಹಕಾರ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಕೋಚ್ ಪ್ರಕಾಶ್ ಪಡುಕೋಣೆ ಅವರ ಉತ್ತಮ ತರಬೇತಿ ಸಿಕ್ಕಿದೆ’ ಎನ್ನುವುದನ್ನು ಹೇಳಲು ಅಶ್ವಿನಿ ಮರೆಯಲಿಲ್ಲ.ಇಂಡಿಯನ್ ಜೂನಿಯರ್ ಚಾಂಪಿಯನ್‌ಷಿಪ್, 2006ರ ಸೌತ್ ಎಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ, 2010ರ ಕಾಮನ್‌ವೆಲ್ತ್‌ನಲ್ಲಿ ಚಿನ್ನದ ಪದಕ ಸೇರಿದಂತೆ ಇತರ ಸಾಧನೆಗಳು ಅಶ್ವಿನಿ ಅವರ ಶ್ರಮ, ಪ್ರತಿಭೆಗೆ ಸಂದ ಗೌರವ.ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಬೀಗುತ್ತಿರುವ ಅಶ್ವಿನಿ ಈಗ ಸುಮ್ಮನೆ ಕುಳಿತಿಲ್ಲ. ‘ಸಾಧಕರಿಗೆ ಸಾವಿರಾರು ದಾರಿ’ ಎನ್ನುವಂತೆ ನವೆಂಬರ್ 12ರಿಂದ ಚೀನಾದ ಗ್ವಾಂಗ್‌ಜೂನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಮತ್ತೆ ‘ಚಿನ್ನ’ದ ಸಾಧನೆ ಮಾಡುವತ್ತ ಚಿತ್ತ ಹರಿಸಿದ್ದಾರೆ. ಅಶ್ವಿನಿಗೆ ಆಲ್ ದ ಬೆಸ್ಟ್. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.