ಗುರುವಾರ , ಜನವರಿ 23, 2020
23 °C

ಅಶ್ವಿನಿ ನಾಚಪ್ಪ ಎಟಿಎಂ ಕಾರ್ಡ್‌ ಕಳವು ಪ್ರಕರಣ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಅಥ್ಲೀಟ್‌ ಅಶ್ವಿನಿ ನಾಚಪ್ಪ ಅವರ ಎಟಿಎಂ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ಕಳವು ಮಾಡಿ ₨ 2.40 ಲಕ್ಷ ಡ್ರಾ ಮಾಡಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ಟಿ.ನರಸೀಪುರದ ರವಿ (44) ಬಂಧಿತ ಆರೋಪಿ. ಆತನಿಂದ ರೂ. 1.97 ಲಕ್ಷ ವಶಪಡಿಸಿಕೊಳ್ಳಲಾಗಿದೆ.‘ಖಾಸಗಿ ಬಸ್‌ ಏಜೆಂಟ್ ಆಗಿದ್ದ ರವಿ,  ಲಾಟರಿ ಮತ್ತು ಕುದುರೆ ಜೂಜಿನಲ್ಲಿ ಸಾಕಷ್ಟು ಹಣ ಕಳೆದಿದ್ದ. ಇದರಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೊಂಡಿದ್ದ ಆತ ಜೂಜಾಡಲು ಬೇಕಿದ್ದ ಹಣಕ್ಕಾಗಿ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ’ ಎಂದು ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಮೈಸೂರಿನಿಂದ ಆಗಾಗ್ಗೆ ನಗರಕ್ಕೆ ಬರುತ್ತಿದ್ದ ಆತ ಮೆಜೆಸ್ಟಿಕ್‌, ಗಾಂಧಿನಗರ ಸುತ್ತಮುತ್ತಲಿನ ಉದ್ಯಾನಗಳಲ್ಲಿ ಮಲಗುತ್ತಿದ್ದ. ನಗರದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳ ಸ್ಥಳ, ಸಮಯ ಮತ್ತಿತರ ವಿವರವನ್ನು ಪತ್ರಿಕೆ ಗಳಲ್ಲಿ ಓದಿ ತಿಳಿದುಕೊಳ್ಳುತ್ತಿದ್ದ. ನಂತರ ಸುಲಭ್‌ ಶೌಚಾಲಯದಲ್ಲಿ ಸ್ನಾನ ಮಾಡಿ, ಇಸ್ತ್ರಿ ಮಾಡಿದ ಬಟ್ಟೆಗಳನ್ನು ಧರಿಸಿ ಆ ಸಮಾರಂಭದ ಸ್ಥಳಗಳಿಗೆ ಅಥವಾ ಕಲ್ಯಾಣ ಮಂಟಪಗಳಿಗೆ ಹೋಗುತ್ತಿದ್ದ. ಅಲ್ಲಿ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುವ ಸೋಗಿನಲ್ಲಿ ವೇದಿಕೆಯಲ್ಲಿ ಓಡಾಡಿ ಅತಿಥಿಗಳ ಪರ್ಸ್‌, ಎಟಿಎಂ ಅಥವಾ ಕ್ರೆಡಿಟ್‌ ಕಾರ್ಡ್‌, ವಧು–ವರರಿಗೆ ಉಡುಗೊರೆ ಯಾಗಿ ಬಂದ ಹಣ ದೋಚುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.ಅಶ್ವಿನಿ ನಾಚಪ್ಪ ಅವರು ಡಿ.3ರಂದು ಜಯನಗರದ ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದಾಗ ಆರೋಪಿಯು ಅವರ ವ್ಯಾನಿಟಿ ಬ್ಯಾಗ್‌ನಿಂದ ಎಟಿಎಂ ಹಾಗೂ ಕ್ರೆಡಿಟ್‌ ಕಾರ್ಡ್‌ಗಳನ್ನು ಕಳವು ಮಾಡಿದ್ದ.

ಬಳಿಕ ಎಟಿಎಂ ಕಾರ್ಡ್‌ಗಳಿಂದ ಅದೇ ದಿನ ಬೆಳಿಗ್ಗೆ 9.45ರಿಂದ 10.15ರ ನಡುವೆ ಜಯನಗರದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕರ್ಣಾಟಕ ಬ್ಯಾಂಕ್‌, ಯೆಸ್‌ ಬ್ಯಾಂಕ್‌ ಹಾಗೂ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಘಟಕಗಳಲ್ಲಿ ಹಣ ಡ್ರಾ ಮಾಡಿಕೊಂಡಿದ್ದ. ಆ ಹಣದಲ್ಲಿ ₨ 35 ಸಾವಿರವನ್ನು ಕುದುರೆ ಜೂಜಾಡಿ ಸೋತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಒಂಬತ್ತನೇ ತರಗತಿ ಓದಿರುವ ರವಿ ಮೈಸೂರು, ನಂಜನಗೂಡು, ನಗರದ ಹೈಗ್ರೌಂಡ್ಸ್‌, ಗಿರಿನಗರ, ಸಿಲ್ವರ್‌ಜ್ಯುಬಿಲಿ ಪಾರ್ಕ್‌, ಮಲ್ಲೇಶ್ವರ, ಕಬ್ಬನ್‌ಪಾರ್ಕ್‌, ಜಯನಗರ ಠಾಣೆ ವ್ಯಾಪ್ತಿಯ ಕಲ್ಯಾಣ ಮಂಟಪಗಳು, ಪ್ರತಿಷ್ಠಿತ ಹೋಟೆಲ್‌ಗಳು, ರವೀಂದ್ರ ಕಲಾಕ್ಷೇತ್ರ, ಪುರಭವನ, ಚಿತ್ರಕಲಾ ಪರಿಷತ್, ಭಾರತೀಯ ವಿದ್ಯಾಭವನ ಮತ್ತಿತರ ಕಡೆ ಇದೇ ರೀತಿ ಅಪರಾಧ ಕೃತ್ಯಗಳನ್ನು ಎಸಗಿದ್ದ. ಆತನನ್ನು ಹೈಗ್ರೌಂಡ್ಸ್‌ ಪೊಲೀಸರು 2011ರಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.ಜಯನಗರ 4 ಹಂತದ ಪೂರ್ಣಿಮಾ ಸಮುದಾಯ ಭವನದಲ್ಲಿ ಜೂನ್‌ನಲ್ಲಿ ನಡೆದ ಮದುವೆ ಸಮಾರಂಭವೊಂದಕ್ಕೆ ಹೋಗಿದ್ದ ರವಿ, ವಧು ಮತ್ತು ವರನಿಗೆ ಬಂದಿದ್ದ ₨ 1.50 ಲಕ್ಷ ಉಡುಗೊರೆ ಹಣವನ್ನು ಕಳವು ಮಾಡಿದ್ದ. ಆರೋಪಿಯ ಅಪರಾಧ ಕೃತ್ಯಗಳ ಬಗ್ಗೆ ಆತನ ಕುಟುಂಬ ಸದಸ್ಯರಿಗೆ ಗೊತ್ತಿದೆ. ಇದರಿಂದಾಗಿ ಅವರು ಆತನನ್ನು ಮನೆಗೆ ಸೇರಿಸುತ್ತಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆರೋಪಿ ಪತ್ತೆಯಾಗಿದ್ದು ಹೇಗೆ?

ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸಂಘಟಕರು ಚಿತ್ರೀಕರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ರವಿ, ವೇದಿಕೆಯಲ್ಲಿ ಓಡಾಡಿ ಅಶ್ವಿನಿ ನಾಚಪ್ಪ ಅವರಿಗೆ ಕುರ್ಚಿ ಹಾಕಿ ಕೂರಿಸಿದ್ದ. ಆ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ಸುಳಿವು ಮತ್ತು ಹಣ ಡ್ರಾ ಮಾಡಿ­ಕೊಂಡಿದ್ದ ಎಟಿಎಂ ಘಟಕಗಳ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿಯ ತುಣಕುಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಮಾಡಿ ಮೈಸೂರಿನಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಗದು ಬಹುಮಾನ

ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ ಜಯನಗರ ಠಾಣೆ ಎಸ್‌ಐ ಈಶ್ವರಿ ಮತ್ತು ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಔರಾದಕರ್‌ ರೂ. 20 ಸಾವಿರ ನಗದು ಬಹುಮಾನ ಘೋಷಿಸಿದರು.

ಪ್ರತಿಕ್ರಿಯಿಸಿ (+)